Prakash Raj: 'ಚಂದ್ರಯಾನ 3' ಸಕ್ಸಸ್.. "ಮನುಕುಲದ ಹೆಮ್ಮೆಯ ಕ್ಷಣಗಳಿವು" ಎಂದು ಇಸ್ರೋಗೆ ಶುಭ ಕೋರಿದ ಪ್ರಕಾಶ್ ರಾಜ್!
ಭಾರತದ ಪ್ರಯತ್ನಕ್ಕೆ ಫಲಕೊಟ್ಟಿದೆ. ಭಾರತದ ವಿಜ್ಞಾನಿಗಳ ಶ್ರಮ ಈ ಬಾರಿ ಕೈ ಹಿಡಿದಿದೆ. 'ಚಂದ್ರಯಾನ 3' ಯಶಸ್ವಿಯಾಗಿದೆ. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಯಾವುದೇ ತೊಂದರೆ ಇಲ್ಲದೆಯೇ ಲ್ಯಾಂಡ್ ಆಗಿದೆ. ಈ ಸಾಹಸಕ್ಕೆ ವಿಶ್ವದಾದ್ಯಂತ ಭಾರತೀಯರು ಮುಕ್ತ ಕಂಠದಿಂದ ಹೊಗಳಿದ್ದಾರೆ.
ಅತೀ ಕಡಿಮೆ ವೆಚ್ಚದಲ್ಲಿ ಭಾರತ 'ಚಂದ್ರಯಾನ 3' ಮಿಷನ್ ಅನ್ನು ಯಶಸ್ವಿಗೊಳಿಸಿದೆ. ಈ ಮೂಲಕ ಚಂದ್ರ ಮೇಲ್ಮೈ ಅನ್ನು ರೋವರ್ ಅಧ್ಯಯನ ಮಾಡಲಿದೆ. ಇಸ್ರೋ ವಿಜ್ಞಾನಿಗಳ ಈ ಸಾಹಸಕ್ಕೆ ವಿಶ್ವದಾದ್ಯಂತ ವಿಜ್ಞಾನಿಗಳು ಪ್ರಶಂಸೆಯ ಸುರಿಮಳೆಯನ್ನೇ ಸುರಿಸಿದ್ದಾರೆ.

ಆದರೆ, ವಿಕ್ರಮ್ ಲ್ಯಾಂಡರ್ ಚಂದ್ರ ಮೇಲ್ಮೈ ಮೇಲೆ ಇಳಿಯುವುದಕ್ಕೂ ಮುನ್ನ ಪ್ರಕಾಶ್ ರಾಜ್ ಮಾಡಿದ ಒಂದು ಟ್ವೀಟ್ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ದೇಶಾದ್ಯಂತ ಪ್ರಕಾಶ್ ರಾಜ್ ಟ್ವೀಟ್‌ಗೆ ವಿರೋಧ ವ್ಯಕ್ತವಾಗಿತ್ತು. ಚಾಯ್‌ವಾಲನ ಕಾರ್ಟೂನ್ ಫೋಟೊ ಹಾಕಿ 'ಚಂದ್ರಯಾನ 3' ಬಗ್ಗೆ ಪ್ರಕಾಶ್ ಟ್ವೀಟ್ ಮಾಡಿದ್ದರು. ಇದು ಭಾರತದ ವಿಜ್ಞಾನಿಗೆ ಮಾಡಿದ ಅವಮಾನ ಎಂದು ನೆಟ್ಟಿಗರು ಕಿಡಿಕಾರಿದ್ದರು. ರಾಜಕೀಯ ವಲಯದಲ್ಲೂ ಇದು ಸಿಕ್ಕಾಪಟ್ಟೆ ಚರ್ಚೆಯಾಗಿತ್ತು.
ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಪ್ರಕಾಶ್ ಮತ್ತೊಂದು ಟ್ವೀಟ್ ಮೂಲಕ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದರು. "ಗೋದಿ ಮೀಡಿಯಾದವರಿಗೆ ಹಾಗೂ ಅನಕ್ಷರಸ್ಥ ಟ್ರೋಲಿಗರಿಗೆ ತಿಳಿದಿರೋದು ಒಬ್ಬ ಚಾಯ್‌ವಾಲ. 1960ರ ಕಾಲದಿಂದಲೂ ಸ್ಫೂರ್ತಿಯಾಗಿರುವ ಮಲಯಾಳಿ ಚಾಯ್‌ವಾಲ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದೇನೆ. ತಿಳಿದುಕೊಳ್ಳುವ ಮನಸ್ಸಿದ್ದರೆ ಓದಿ" ಚಾಯ್‌ವಾಲ ಬಗ್ಗೆ ಇರುವ ಅಸಲಿ ಜೋಕ್‌ನ ಲಿಂಕ್ ಶೇರ್ ಮಾಡಿದ್ದರು.
ಇಸ್ರೋಗೆ ಶುಭ ಕೋರಿದ ಪ್ರಕಾಶ್ ರಾಜ್
ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಲೇ ಇತ್ತು. ಈಗ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಆಗುತ್ತಿದ್ದಂತೆ ಪ್ರಕಾಶ್ ರಾಜ್ ಟ್ವೀಟ್ ಮೂಲಕ ಇಸ್ರೋ ವಿಜ್ಞಾನಿಗಳಿಗೆ ಶುಭಕೋರಿದ್ದಾರೆ.
"ಭಾರತದ.. ಮನುಕುಲದ ಹೆಮ್ಮೆಯ ಕ್ಷಣಗಳಿವು .. ಧನ್ಯವಾದಗಳು #ISRO #Chandrayaan3 #VikramLander ಮತ್ತು ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ .. ವಿಶಾಲ ವಿಶ್ವದ ಇನ್ನಷ್ಟು ವಿಸ್ಮಯಗಳನ್ನು ಅರಿಯಲು.. ಸಂಭ್ರಮಿಸಲು .. ಇದು ದಾರಿಯಾಗಲಿ. #justasking" ಎಂದು ಟ್ವೀಟ್ ಮಾಡಿದ್ದಾರೆ.
ನೆಟ್ಟಿಗರು ತಿರುಗೇಟು
ಪ್ರಕಾಶ್ ರಾಜ್ 'ಚಂದ್ರಯಾನ 3' ಯಶಸ್ಸಿನ ಬಗ್ಗೆ ಟ್ವೀಟ್ ಮಾಡಿದ್ದಕ್ಕೆ ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ. "ನೀವು ಇಲ್ಲಿ ಬ್ರೌನಿ ಪಾಯಿಂಟ್‌ಗಳನ್ನು ಗೆಲ್ಲಲು ಪ್ರಯತ್ನಿಸಬೇಡಿ ಪ್ರಕಾಶ್. ಪ್ರತಿಬಾರಿ ಚಂದ್ರಯಾನದ ಬಗ್ಗೆ ಟ್ವೀಟ್ ಮಾಡಿದಾಗಲೂ ನಾನು ನಿಮಗೆ ನಿಮ್ಮ ಟ್ವೀಟ್ ಅನ್ನು ನೆನಪಿಸುತ್ತೇನೆ" ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
ಹಾಗೇ "ನಿಮಗೂ ಅಭಿನಂದನೆಗಳು.. ನಮ್ಮ ಚಾಯ್‌ವಾಲಾ ಮತ್ತು ನಮ್ಮ ವಿಜ್ಞಾನಿಗಳು ಇಂದು ಇತಿಹಾಸವನ್ನು ಸೃಷ್ಟಿಸಿದ್ದಾರೆ ಮತ್ತು ಎಲ್ಲಾ ದ್ವೇಷಿಗಳಿಗೆ ಸಂದೇಶವನ್ನು ನೀಡಿದ್ದಾರೆ. ಎಲ್ಲಾ ಶಾಪಗಳು ಮತ್ತು ಜೋಕ್‌ಗಳನ್ನು ವರವಾಗಿ ಪರಿವರ್ತಿಸುವ #newindia ಇದು!" ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ದೂರು
'ಚಂದ್ರಯಾನ 3' ಉಡಾವಣೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಪ್ರಕಾಶ್ ರಾಜ್ ವಿರುದ್ಧ ಜನರು ಆಕ್ರೋಶಗೊಂಡಿದ್ದರು. ಈ ಸಂಬಂಧ ಕೆಲ ಹಿಂದುತ್ವ ಕಾರ್ಯಕರ್ತರು ಭಾಗಲಕೋಟೆ ಜಿಲ್ಲೆಯ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕಾಶ್ ರಾಜ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಹುಭಾಷಾ ನಟನ ಹೇಳಿಕೆಯನ್ನು ಪರಿಶೀಲಿಸುತ್ತಿದ್ದಾರೆ. ಇಂತಹ ವಿವಾದದ ಮಧ್ಯೆನೇ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದಿದೆ. ಈ ಮೂಲಕ ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶ ಹಾಗೂ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆದ ಮೊದಲ ದೇಶ ಎನಿಸಿಕೊಂಡಿದೆ.


Click it and Unblock the Notifications











