ಜೈಲಿನಿಂದ ದರ್ಶನ್ ರಿಲೀಸ್ ಬೆನ್ನಲ್ಲೇ ಎಮೋಷನಲ್ ಪೋಸ್ಟ್ ಹಂಚಿಕೊಂಡ ಪುತ್ರ ವಿನೀಶ್
ಬಳ್ಳಾರಿ ಜೈಲಿನಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಯಾಗಿದ್ದಾರೆ. ದರ್ಶನ್ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಸಂಭ್ರಮ ಮುಗಿಲು ಮುಟ್ಟಿದೆ. ಬೆಂಗಳೂರಿ ಕಡೆ ಪಯಣ ಬೆಳೆಸಿದ ದಾರಿಯಲ್ಲೆಲ್ಲ ದರ್ಶನ್ ಫ್ಯಾನ್ಸ್ ಸೆಲೆಬ್ರೆಷನ್ ಮಾಡುತ್ತಿದ್ದಾರೆ. ದರ್ಶನ್ ಕಾರನ್ನು ಫಾಲೋ ಮಾಡುತ್ತಿದ್ದಾರೆ.
ಸುಮಾರು 131 ದಿನಗಳ ಬಳಿಕ ಜೈಲಿನಿಂದ ದರ್ಶನ್ ಹೊರ ಬಂದಿರುವ ಬಗ್ಗೆ ಸ್ಯಾಂಡಲ್‌ವುಡ್‌ನ ಸೆಲೆಬ್ರೆಟಿಗಳು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳಲ್ಲಿ ಎಷ್ಟು ಖುಷಿ ಇದೆಯೋ ಅಷ್ಟೇ ಖುಷಿ ಅವರ ಕುಟುಂಬದಲ್ಲೂ ಮನೆ ಮಾಡಿದೆ. ದರ್ಶನ್‌ಗೆ ಜಾಮೀನು ಸಿಗುತ್ತಿದ್ದಂತೆ ಪತ್ನಿ ವಿಜಯಲಕ್ಷ್ಮಿ ಕೂಡ ದೇವರ ದರ್ಶನ ಮಾಡಿ ಬಂದಿದ್ದಾರೆ. ಇದೇ ಖುಷಿಯಲ್ಲಿ ಪುತ್ರ ವಿನೀಶ್ ಕೂಡ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ದರ್ಶನ್ ಬಳ್ಳಾರಿ ಜೈಲಿನಲ್ಲಿ ಇರುವಾಗ ಪುತ್ರ ವಿನೀಶ್ ತಂದೆಯನ್ನು ನೋಡುವುದಕ್ಕೆ ಆಗಮಿಸಿದ್ದರು. ತಾಯಿ ವಿಜಯಲಕ್ಷ್ಮಿ ಅವರೊಂದಿಗೆ ಬಂದು ತಂದೆಯನ್ನು ಮಾತಾಡಿಸಿಕೊಂಡು ಧೈರ್ಯ ತುಂಬಿ ಹೋಗಿದ್ದರು. ಈಗ ದರ್ಶನ್ ಹೊರ ಬರುತ್ತಿದ್ದಂತೆ ತಮ್ಮದೇ ಸ್ಟೈಲ್‌ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಆರೋಪದಡಿ ದರ್ಶನ್ ಬಂಧಿಸಿದಾಗ ನೆಗೆಟಿವ್ ಕಾಮೆಂಟ್‌ಗಳು ಬಂದಿದ್ದವು. ದರ್ಶನ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ವಿನೀಶ್ ತೂಗುದೀಪ ಭಾವನಾತ್ಮಕವಾಗಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಆ ಬಳಿಕ ಮತ್ತೆ ಎಂದು ತಂದೆಯ ಬಗ್ಗೆ ಪ್ರತಿಕ್ರಿಯೆಯನ್ನು ನೀಡುವುದಕ್ಕೆ ಹೋಗಿರಲಿಲ್ಲ. ಅದು ಬಿಟ್ಟರೆ, ಇಂದೇ ಖುಷಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ವಿನೀಶ್ ತೂಗುದೀಪ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಎಮೋಜಿಯೊಂದನ್ನು ಹಂಚಿಕೊಂಡಿದ್ದಾರೆ. ಕಿರೀಟವನ್ನು ಹೋಲುವ ಈ ಎಮೋಜಿ ಮೂಲಕ ಪ್ರತಿಕ್ರಿಯೆ ನೀಡಿದ್ದು, ಅಪ್ಪನ ಆಗಮನದಿಂದ ಸಂತಸದಲ್ಲಿ ಕಿಂಗ್ ಫೀಲಿಂಗ್‌ನಲ್ಲಿದ್ದಾರೆ ಅಂತ ಗೆಸ್ ಮಾಡಬಹುದು. ತಂದೆ ಜೈಲಿನಿಂದ ಹೊರ ಬಂದ ಖುಷಿಯಲ್ಲಿ ಪುತ್ರನಿದ್ದು, ಅವರ ಅಭಿಮಾನಿಗಳು ಕೂಡ ಈ ಇನ್‌ಸ್ಟೋರಿಯನ್ನು ಹಂಚಿಕೊಳ್ಳುತ್ತಿದ್ದಾರೆ.
ಇನ್ನು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ವಿಚಾರಣಾಧೀನ ಖೈದಿಯಾಗಿದ್ದ ದರ್ಶನ್ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಲ್ಲಿ ದರ್ಶನ್ ಪರವಾಗಿ ಹಿರಿಯ ವಕೀಲರಾದ ಸಿ ವಿ ನಾಗೇಶ್ ಹಾಗೂ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಪ್ರತಿವಾದವನ್ನು ಮಂಡಿಸಿದ್ದರು. ಇಲ್ಲಿ ದರ್ಶನ್‌ಗೆ ಜಾಮೀನು ಸಿಕ್ಕಿರಲಿಲ್ಲ. ಈ ವೇಳೆ ಪೊಲೀಸರು ನಡೆಸಿದ ತನಿಖೆಯೇ ಸರಿಯಿಲ್ಲ ಎಂದು ಸಿ ವಿ ನಾಗೇಶ್ ವಾದ ಮಂಡಿಸಿದ್ದರು. ಅದರ ಹೊರತಾಗಿಯೂ ಜಾಮೀನು ಸಿಕ್ಕಿರಲಿಲ್ಲ.
ಆ ಬಳಿಕ ದರ್ಶನ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಬಾರಿ ದರ್ಶನ್ ಆರೋಗ್ಯ ಸಮಸ್ಯೆಯನ್ನು ಮುಂದಿಟ್ಟುಕೊಂಡು ಜಾಮೀನು ಕೇಳಿದ್ದರು. ದರ್ಶನ್ ಪರ ವಕೀಲರಾದ ಸಿ ವಿ ನಾಗೇಶ್ ಅವರು ಕೂಡ ಇದೇ ಬೇಸಿಸ್ ಮೇಲೆ ವಾದವನ್ನು ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು 6 ವಾರಗಳ ಕಾಲ ಮಧ್ಯಂತರ ಜಾಮೀನನ್ನು ಮಂಜೂರು ಮಾಡಿದ್ದಾರೆ. ಇದೇ ವೇಳೆ ಹಲವು ಷರತ್ತುಗಳನ್ನು ವಿಧಿಸಿದ್ದು, ದಿನಕರ್ ಹಾಗೂ ಧನ್ವೀರ್ ಶೂರಿಟಿ ನೀಡಿದ್ದಾರೆ.
ದಸರಾ ಹಬ್ಬಕ್ಕೆ ದರ್ಶನ್‌ಗೆ ಜಾಮೀನು ಸಿಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆ ವೇಳೆ ಸಾಧ್ಯವಾಗಿರಲಿಲ್ಲ. ಈಗ ದೀಪಾವಳಿ ಹಬ್ಬಕ್ಕೆ ಒಂದು ದಿನ ಮುನ್ನ ದರ್ಶನ್‌ಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಆದರೆ, ಇದು ಕೇವಲ ಆರು ವಾರಗಳಿಗಷ್ಟೇ ಆಗಿದೆ. ಸದ್ಯ ದೀಪಾವಳಿ ಹಬ್ಬವನ್ನು ಪುತ್ರ ವಿನೀಶ್ ಅವರೊಂದಿಗೆ ಆಚರಣೆ ಮಾಡಿಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ದರ್ಶನ್ ತನ್ನ ಅನಾರೋಗ್ಯದ ಬಗ್ಗೆ ವರದಿಯನ್ನು ಕೋರ್ಟ್‌ಗೆ ಸಲ್ಲಿಸಬೇಕಿದೆ.


Click it and Unblock the Notifications











