"ಸೋಲಿನಿಂದ ಕಂಗೆಟ್ಟು ಜನರಿಂದ ದೂರವಾಗುವ ಜಾಯಮಾನ ನಮ್ಮದಲ್ಲ": ಸೋಲಿನ ಬಳಿಕ ನಿಖಿಲ್ ಕುಮಾರಸ್ವಾಮಿ ಪೋಸ್ಟ್
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ನಿರೀಕ್ಷೆ ಮಾಡಿದ್ದ ಕ್ಷೇತ್ರಗಳಲ್ಲಿ ನಿರೀಕ್ಷೆ ಮಾಡದ ಫಲಿತಾಂಶ ಬಂದಿದೆ. ಘಟಾನುಘಟಿ ದಿಗ್ಗಜರೇ ಚುನಾವಣೆಯಲ್ಲಿ ಸೋತು ಪರಾಭಾವಗೊಂಡಿದ್ದಾರೆ. ಇದರಲ್ಲಿ ರಾಮನಗರ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕೂಡ ಒಬ್ಬರು.
ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಮೊಮ್ಮಗ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಈ ಬಾರಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ವಿರುದ್ಧ ಸೋಲುಂಡಿದ್ದಾರೆ.

ಜೆಡಿಎಸ್‌ನ ಕ್ಷೇತ್ರ ರಾಮನಗರದಲ್ಲಿಯೇ ನಿಖಿಲ್ ಕುಮಾರಸ್ವಾಮಿ ಸೋಲುಂಡಿರೋದು ತೀವ್ರ ಮುಖಭಂಗ ಆದಂತಾಗಿದೆ. ಸುಮಾರು 10 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ನಿಖಿಲ್ ಸೋಲುಂಡಿದ್ದಾರೆ. ಫಲಿತಾಂಶ ಹೊರಬಂದು ಒಂದು ದಿನದ ಬಳಿಕ ನಿಖಿಲ್ ತಮ್ಮ ಕ್ಷೇತ್ರದ ಜನತೆಗೆ, ಬೆಂಬಲಿಗೆ ಫೇಸ್‌ಬುಕ್ ಮೂಲಕ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ.
ರಾಮನಗರ ಜನತೆಗೆ ಭಾವನಾತ್ಮಕ ಪೋಸ್ಟ್
ಕಳೆದ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ವಿರುದ್ಧ ಸೋಲುಂಡಿದ್ದರು. ಈ ಬಾರಿ ಗೆಲ್ಲಲೇ ಬೇಕು ಅಂತ ಪಣತೊಟ್ಟು ರಾಮನಗರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದರು. ಆದರೆ, ಈ ಬಾರಿ ಕೂಡ ಗೆಲ್ಲಲು ಸಾಧ್ಯವಾಗಿಲ್ಲ.
ಸೋಲಿನ ನೋವಿನಲ್ಲಿದ್ದರೂ ನಿಖಿಲ್ ಕುಮಾರಸ್ವಾಮಿ ರಾಮನಗರದ ಜನತೆಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ತಮ್ಮ ಮತದಾರರಿಗೆ, ಬೆಂಬಲಿಗರಿಗೆ ಭಾವನಾತ್ಮಕವಾಗಿ ಬರೆದು ಪೋಸ್ಟ್ ಮಾಡಿದ್ದಾರೆ. "ನಾನೆಂದೂ ನಿಮ್ಮ ಜೊತೆಯಲ್ಲಿಯೇ ಇರುತ್ತೇನೆ" ಎಂದು ಹೇಳಿದ್ದಾರೆ.
"ರಾಮನಗರದ ಮಹಾಜನತೆಗೆ ಶಿರಸಾಷ್ಟಾಂಗ ನಮನಗಳು"
ರಾಮನಗರದಲ್ಲಿ ಈ ಬಾರಿ ನಿಖಿಲ್ ಕುಮಾರಸ್ವಾಮಿ ಗೆದ್ದೇ ಗೆಲ್ಲುತ್ತಾರೆ ಎಂದು ನಂಬಲಾಗಿತ್ತು. ಅಲ್ಲದೇ ಜೆಡಿಎಸ್ ಅಭ್ಯರ್ಥಿಗಳಿಗೆ ಅನುಕೂಲ ವಾತಾವರಣವಿರೋ ಈ ಕ್ಷೇತ್ರದಲ್ಲಿ ನಿಖಿಲ್ ಸೋತಿದ್ದು ಇನ್ನೂ ಅವರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿಯೇ ನಿಖಿಲ್ ಕ್ಷೇತ್ರದ ಜನತೆಗೆ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ.
"ನನ್ನನ್ನು ಅತ್ಯಂತ ಪ್ರೀತಿಯಿಂದ ಬೆಂಬಲಿಸಿ ಆಶೀರ್ವದಿಸಿದ ರಾಮನಗರ ವಿಧಾನಸಭೆ ಕ್ಷೇತ್ರದ ಮಹಾಜನತೆಗೆ ನನ್ನ ಶಿರಸಾಷ್ಟಾಂಗ ನಮನಗಳು. ಈ ಒಂದು ಸೋಲು ನಿಮ್ಮ ಸೇವೆ ಮಾಡಬೇಕು ಎನ್ನುವ ನನ್ನ ಅದಮ್ಯ ಸಂಕಲ್ಪಕ್ಕೆ ತಡೆ ಒಡ್ಡಲಾರದು. ನಾನೆಂದೂ ನಿಮ್ಮ ಜತೆಯಲ್ಲೇ ಇರುತ್ತೇನೆ. ನಿಮಗಾಗಿ ಜೀವಿಸುತ್ತೇನೆ. ಸೋಲನ್ನು ಸಮಚಿತ್ತದಿಂದ ಸ್ವೀಕರಿಸಿ ಮುನ್ನಡೆಯುತ್ತೇನೆ." ಎಂದು ಮತದಾರರಿಗೆ ಹಾಗೂ ಬೆಂಬಲಿಗರಿಗೆ ಭರವಸೆ ನೀಡಿದ್ದಾರೆ.
"ಎಡವಿದ್ದೇನೆ, ಮತ್ತೆ ಎದ್ದು ಓಡುತ್ತೇನೆ"
ನಿಖಿಲ್ ಕುಮಾರಸ್ವಾಮಿ ತಾತ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ತಂದೆ ಎಚ್‌ಡಿ ಕುಮಾರಸ್ವಾಮಿ ಅವರಿಂದ ಸೋಲಿನ ಪಾಠ ಕಲಿದ್ದು, ಎಡವಿದಾಗ ಮತ್ತೆ ಹೇಗೆ ಎದ್ದು ನಿಂತು ಓಡಬೇಕು ಎಂಬುದನ್ನು ಕಲಿತಿದ್ದೇನೆ ಎಂದು ಹೇಳಿದ್ದಾರೆ.
"ಅದು ನಾನು ನನ್ನ ಪೂಜ್ಯ ತಾತನವರಾದ ಶ್ರೀ ಹೆಚ್.ಡಿ.ದೇವೇಗೌಡ ಸಾಹೇಬರಿಂದ, ತಂದೆ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರಿಂದ ಕಲಿತ ಪಾಠ. ಎಡವಿದ್ದೇನೆ, ಮತ್ತೆ ಎದ್ದು ಓಡುತ್ತೇನೆ. ಬಿದ್ದ ಮಗುವನ್ನು ಮೇಲೆತ್ತುವ ನಿಮ್ಮ ಪ್ರೀತಿ, ವಾತ್ಸಲ್ಯವನ್ನು ನಾನು ಬಲ್ಲೆ. ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಜಾತ್ಯತೀತ ಜನತಾದಳವನ್ನು ಹರಸಿದ ಸಾರ್ವಜನಿಕ ಬಂಧುಗಳನ್ನು ಇಲ್ಲಿ ಸ್ಮರಿಸುತ್ತೇನೆ" ಎಂದಿದ್ದು ನಿಖಿಲ್ ಪೋಸ್ಟ್ ಮಾಡಿದ್ದಾರೆ.
"ಸೋಲಿನಿಂದ ಕಂಗೆಡುವ ಜಾಯವಾನವಲ್ಲ"
ಇದೇ ಪೋಸ್ಟ್‌ನಲ್ಲಿ ಸೋಲಿನಿಂದ ಕಂಗೆಡುವವನಲ್ಲ ಎಂದು ನಿಖಿಲ್ ಹೇಳಿದ್ದಾರೆ. "ಸೋಲಿನಿಂದ ಕಂಗೆಟ್ಟು ಜನರಿಂದ ದೂರವಾಗುವ ಜಾಯಮಾನ ನಮ್ಮದಲ್ಲ. ಈ ಪರಾಜಯದಿಂದ ಪಾಠ ಕಲಿಯುತ್ತೇವೆ. ಪುನ: ಪುಟಿದೆದ್ದು ಬರುತ್ತೇವೆ. ಪ್ರತಿಯೊಬ್ಬರಿಗೂ ಪ್ರಣಾಮಗಳು" ಎಂದು ನಿಖಿಲ್ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರೂ, ನಿಖಿಲ್‌ಗೆ ಶೀಘ್ರದಲ್ಲೇ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವ ಅವಕಾಶವಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಇತ್ತ ಫೇಸ್‌ಬುಕ್‌ನಲ್ಲಿ ಅಭಿಮಾನಿಗಳು ಕೂಡ ಲೋಕಸಭೆಗೆ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ.


Click it and Unblock the Notifications











