ಅಣ್ಣಾವ್ರ ಬಳಿಕ ಅಂಡರ್‌ವಾಟರ್‌ನಲ್ಲಿ ನಟಿ ಶ್ರುತಿ ಶೂಟಿಂಗ್; ಕೊರಗಜ್ಜ ಕ್ಲೈಮ್ಯಾಕ್ಸ್ ಬಲು ರೋಚಕ
ಕನ್ನಡ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಕೊರಗಜ್ಜ' ಈ ವರ್ಷದ ಆರಂಭದಲ್ಲಿಯೇ ರಿಲೀಸ್ ಆಗಬೇಕಿತ್ತು. 'ಕಾಂತಾರ' ಬಳಿಕ ಕರಾವಳಿ ಭಾಗದ ದೈವ 'ಕೊರಗಜ್ಜ'ನ ಮಹಿಮೆಯನ್ನು ತೆರೆಮೇಲೆ ತರುವುದಕ್ಕೆ ನಿರ್ದೇಶಕ ಸುಧೀರ್ ಅತ್ತಾವರ್ ಸಾಕಷ್ಟು ಶ್ರಮ ಪಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಲೇ ಇದೆ.
ಈ ವರ್ಷದ ಜನವರಿಯಲ್ಲಿ ರಿಲೀಸ್ ಆಗಬೇಕಿದ್ದ ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ಮತ್ತೆ ಮರು ಚಿತ್ರೀಕರಣ ಮಾಡಲಾಗುತ್ತಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ವೈಭವೀಕರಿಸುವ ಸಲುವಾಗಿ ಅಂಡರ್ ವಾಟರ್‌ನಲ್ಲಿ ಶೂಟಿಂಗ್ ಅನ್ನು ಮಾಡಲಾಗುತ್ತಿದೆ. ಸಿನಿಮಾ ಕೆಲವು ಭಾಗದ ದೃಶ್ಯಗಳನ್ನು ಪುನ: ಮತ್ತೆ ಶೂಟಿಂಗ್ ಮಾಡಲಾಗುತ್ತಿದೆ. ಕನ್ನಡ ಹಿರಿಯ ನಟಿ ಶ್ರುತಿ ಈ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.

'ಕೊರಗಜ್ಜ' ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಅನ್ನು ಕೇರಳದ ತಿರುವನಂತಪುರಂನಲ್ಲಿ ಶೂಟಿಂಗ್ ಮಾಡಲಾಗಿದೆ. ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಅವರ ಒಡೆತನದ 'ವಿಸ್ಮಯ' ಸ್ಟುಡಿಯೋದಲ್ಲಿ ಅಂಡರ್ ವಾಟರ್ ದೃಶ್ಯಗಳಿಗಾಗಿ ವಿಶೇಷ ಸೆಟ್ ನಿರ್ಮಿಸಿ, ನಟಿ ಶ್ರತಿ ಅಭಿನಯಿಸಿರುವ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ನೀರಿನ ಅಡಿಯಲ್ಲಿನ ಈ ದೃಶ್ಯಗಳನ್ನು ಖ್ಯಾತ ಮಲಯಾಳಂ ಸಿನೆಮಾಟೋಗ್ರಾಫರ್ ಮನೋಜ್ ಪಿಳ್ಳೈ ನಾಲ್ಕು ಕ್ಯಾಮರಗಳಲ್ಲಿ ಚಿತ್ರೀಕರಿಸಿದ್ದಾರೆ.
ಅಣ್ಣಾವ್ರ ಬಳಿಕ ಕನ್ನಡದ ನಟಿಯೊಬ್ಬರು ಇಂತಹ ಅಂಡರ್ ವಾಟರ್ ದೃಶ್ಯಗಳಲ್ಲಿ ಅಭಿನಯಿಸುತ್ತಿರುವುದು ಬಹುಶ:ಇದೇ ಮೊದಲು ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ದೃಶ್ಯಕ್ಕಾಗಿ ಶ್ರುತಿ ಸುಮಾರು 15 ದಿನಗಳ ಕಾಲ ತಯಾರಿ ನಡೆಸಿದ್ದರು. ಸೇಫ್ಟಿಗಾಗಿ ಸೆಟ್‌ನಲ್ಲಿ ಸ್ಕ್ಯೂಬಾ ಡೈವರ್ಸ್ ಅನ್ನು ನಿಯೋಜಿಸಲಾಗಿತ್ತು. ಜೊತೆಗೆ ಆಂಬ್ಯಲೆನ್ಸ್ ಹಾಗೂ ವೈದ್ಯರ ತಂಡ ಇತ್ತು ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಹಿರಿಯ ನಟಿ ಶ್ರುತಿ ಸುಮಾರು 30 ಅಡಿ ಎತ್ತರದಿಂದ ನೀರಿಗೆ ಜಿಗಿದು ಮತ್ತೆ ಹಾರಿ ಹೊರಬರುಬೇಕು. ಇಂತಹ ಮೈ ನವಿರೇಳಿಸುವ ಅಪಾಯಕಾರಿ ದೃಶ್ಯದಲ್ಲಿ ನಟಿ ಶ್ರುತಿ ನಟಿಸಿ ಎಲ್ಲರನ್ನು ಬೆಚ್ಚಿಬೀಳಿಸಿದ್ದಾರೆ. ಇದು 'ಕೊರಗಜ್ಜ' ಸಿನಿಮಾದಲ್ಲಿ ಮೈಜುಂ ಎನಿಸುವ ದೃಶ್ಯ ಆಗುತ್ತೆ ಎಂದು ಹೇಳಲಾಗಿದೆ.
ಇಷ್ಟೇ ಅಲ್ಲ, 'ಕೊರಗಜ್ಜ' ಸಿನಿಮಾವನ್ನು 3ಡಿಯಲ್ಲಿ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಸಿದ್ಧತೆಗಳನ್ನು ಮಾಡಿಕೊಂಡಿದೆ. ಯುಗಾದಿ ಹಬ್ಬದ ಈ ಸಂದರ್ಭದಲ್ಲಿ ಚಿತ್ರತಂಡ ಭರ್ಜರಿ ಸುದ್ದಿಯೊಂದನ್ನು ನೀಡಿದೆ. ಸಿನಿಮಾವನ್ನು ಶೂಟಿಂಗ್ ಮಾಡುವ ವೇಳೆನೇ 3ಡಿಯಲ್ಲಿ ಸಿನಿಮಾವನ್ನು ಶೂಟಿಂಗ್ ಮಾಡಲಾಗುತ್ತೆ. ಒಂದು ವೇಳೆ 2ಡಿಯಲ್ಲಿ ಚಿತ್ರೀಕರಿಸಿ ಬಳಿಕ 3ಡಿಗೆ ಕನ್ವರ್ಟ್ ಮಾಡಿದರೆ, ನಿರ್ಮಾಪಕರಿಗೆ ಹೆಚ್ಚು ಖರ್ಚಾಗುತ್ತೆ. ಆದರೂ, ಸಿನಿಮಾದ ಗುಣಮಟ್ಟ ನೋಡಿ ಅಂತಾರಾಷ್ಟ್ರೀಯ ವಿತರಣಾ ಸಂಸ್ಥೆಯೊಂದು 3ಡಿಗೆ ಕನ್ವರ್ಟ್ ಮಾಡುವುದಕ್ಕೆ ಮುಂದೆ ಬಂದಿದೆಯಂತೆ.
3ಡಿ ತಂತ್ರಜ್ಙಾನದಲ್ಲಿ ತ್ರಿವಿಕ್ರಮ ಸಿನಿಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಮೂಲಕ 'ಕೊರಗಜ್ಜ' ಸಿನಿಮಾ 2ಡಿ ಜೊತೆಗೆ 3ಡಿಯಲ್ಲೂ ಬಿಡುಗಡೆಯಾಗುತ್ತಿದೆ. ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಈ ಸಾಹಸಕ್ಕೆ ಕೈ ಹಾಕಿದ್ದು, ನಿರ್ದೇಶಕ ಸುಧೀರ್ ಅತ್ತಾವರ್ ಸಾಥ್ ನೀಡಿದ್ದಾರೆ. ಸುಮಾರು 40 ಜನರ ತಂಡ ಈಗಾಗಲೇ ಸಿನಿಮಾವನ್ನು 3ಡಿ ಮಾಡುವುದಕ್ಕೆ ಕೆಲಸ ಮಾಡುತ್ತಿದ್ದಾರೆ. ಇದೆಲ್ಲವು ಚಿತ್ರದ ಬಜೆಟನ್ನು ಮತ್ತಷ್ಟು ಹೆಚ್ಚಿಸಿದೆ. ಸುಮಾರು 12 ಕೋಟಿ ರುಪಾಯಿಯಷ್ಟು ಏರಿಕೆಯಾಗಿದೆ ಎಂದು ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಮಾಹಿತಿ ನೀಡಿದ್ದಾರೆ.


Click it and Unblock the Notifications











