ಮಜಾ ಟಾಕೀಸ್ ಮುಗಿಯುತ್ತಿದ್ದಂತೆ ಸಿನಿಮಾ ಕಡೆ ವಾಲಿದ ಸೃಜನ್ ಲೋಕೇಶ್
ಮಾತಿನ ಮಲ್ಲ ಸೃಜನ್ ಲೋಕೇಶ್ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದರು. ಅವರದ್ದೇ ನಿರ್ಮಾಣ ಸಂಸ್ಥೆಯಿಂದ ಮೂಡಿ ಬರುತ್ತಿದ್ದ ಮಜಾ ಟಾಕೀಸ್ ಮೂಲಕ ಸೃಜನ್ ಲೋಕೇಶ್ ವೀಕ್ಷಕರನ್ನು ರಂಜಿಸುತ್ತಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ಈ ಶೋ ಕೆಲವೇ ದಿನಗಳ ಹಿಂದಷ್ಟೇ ಮುಗಿದಿದೆ. ಇಷ್ಟು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಿದ್ದ ಸೃಜನ್ ಲೋಕೇಶ್ ಶೋ ಮುಗಿಯುತ್ತಿದ್ದಂತೆ ಸಿನಿಮಾ ಕಡೆ ಮುಖ ಮಾಡಿದ್ದಾರೆ.
ಮಜಾ ಟಾಕೀಸ್ ಆರಂಭ ಆಗುವುದಕ್ಕೂ ಮುನ್ನ ಸೃಜನ್ ಲೋಕೇಶ್ ನಿರ್ದೇಶನಕ್ಕೆ ಇಳಿದಿದ್ದರು. ಟಿವಿ ಶೋ ಮುಗಿಯುತ್ತಿದ್ದಂತೆ ಸೃಜನ್ ಲೋಕೇಶ್ ಮತ್ತೆ ಆ ಸಿನಿಮಾ ಕೆಲಸ ಕಡೆಗೆ ಮುಖ ಮಾಡಿದ್ದಾರೆ. ಅಂದ್ಹಾಗೆ ಆ ಸಿನಿಮಾದ ಹೆಸರು 'GST'. ಈ ಸಿನಿಮಾದ ಈಗ ಬಿಡುಗಡೆಗೆ ಸಿದ್ಧವಾಗಿದೆ. 'ಮಜಾ ಟಾಕೀಸ್' ಮೂಡ್‌ನಲ್ಲಿಯೇ ಈ ಸಿನಿಮಾವನ್ನೂ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಹಲವು ಯಶಸ್ವಿ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಸಂದೇಶ ನಾಗರಾಜ್ 'GST'ಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಅವರ ಪುತ್ರ ಸಂದೇಶ್ ಎನ್ ನಿರ್ಮಾಣ ಮಾಡಿದ್ದು, ಇತ್ತೀಚೆಗೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಈ ಸಿನಿಮಾವನ್ನು ನೋಡಿ U/A ಸರ್ಟಿಫಿಕೇಟ್ ಅನ್ನು ನೀಡಿದೆ. ಈ ಮೂಲಕ ಚಿತ್ರತಂಡ ಬಿಡುಗಡೆಗೆ ಸಕಲ ತಯಾರಿಗಳನ್ನು ಮಾಡಿಕೊಂಡಿದೆ.
'GST' ಸೃಜನ್ ಲೋಕೇಶ್ ನಿರ್ದೇಶಿಸುತ್ತಿರುವ ಚೊಚ್ಚಲ ಸಿನಿಮಾ. ಈ ಸಿನಿಮಾ ಹಲವು ವಿಶೇಷತೆಗಳನ್ನು ಹೊತ್ತು ಪ್ರೇಕ್ಷಕರನ್ನು ರಂಜಿಸುವುದಕ್ಕೆ ಬರುತ್ತಿದೆ. ಈ ಚಿತ್ರದಲ್ಲಿ ನಿರ್ಮಾಪಕ ಸಂದೇಶ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಪಾತ್ರವೇನು ಅನ್ನೋದನ್ನು ನಿರ್ದೇಶಕ ಸೃಜನ್ ಲೋಕೇಶ್ ರಹಸ್ಯವಾಗಿಟ್ಟಿದ್ದಾರೆ. ಪ್ರಚಾರ ಶುರು ಮಾಡುತ್ತಿದ್ದಂತೆ ಒಂದೊಂದೆ ಗುಟ್ಟು ರಿವೀಲ್ ಆಗುವ ಸಾಧ್ಯತೆಯಿದೆ.
ಇನ್ನು ಈ ಸಿನಿಮಾದಲ್ಲಿ ಹಿರಿಯ ನಟಿ ಗಿರಿಜಾ ಲೋಕೇಶ್, ಸೃಜನ್ ಲೋಕೇಶ್ ಹಾಗೂ ಸೃಜನ್ ಅವರ ಪುತ್ರ ಸುಕೃತ್ ನಟಿಸಿದ್ದಾರೆ. ಈ ಮೂಲಕ ಅಜ್ಜಿ, ಮಗ ಹಾಗೂ ಮೊಮ್ಮಗ ಮೂರು ಜನ ಒಂದೇ ಸಿನಿಮಾ ನಟಿಸಿದಂತಾಗಿದೆ. ಜಿಎಸ್‌ಟಿ ಸಿನಿಮಾದಲ್ಲಿ ಈ ಮೂವರನ್ನೂ ಒಟ್ಟಿಗೆ ತೆರೆಯ ಮೇಲೆ ನೋಡಬಹುದು. ತಮ್ಮ ನಿರ್ದೇಶನದ ಮೊದಲ ಸಿನಿಮಾದಲ್ಲಿಯೇ ಸೃಜನ್ ತಮ್ಮ ತಾಯಿ ಹಾಗೂ ಮಗನಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಮನೊರಂಜನೆಯೇ ಪ್ರಧಾನ ಅಂಶವಗಿರುವ 'GST' ಸಿನಿಮಾಗೆ 'ಘೋಸ್ಟ್ ಇನ್ ಟ್ರಬಲ್' ಎಂಬ ಸಬ್ ಟೈಟಲ್ ಇಟ್ಟಿದ್ದು, ಸಿನಿಮಾ ವಿಭಿನ್ನವಾಗಿರುತ್ತೆ ಎನ್ನುವುದನ್ನು ನಿರೀಕ್ಷೆ ಮಾಡಬಹುದು.
ಸೃಜನ್ ಲೋಕೇಶ್ ಜೊತೆ ನಾಯಕಿಯಾಗಿ ರಜನಿ ಭಾರದ್ವಾಜ್ ನಟಿಸಿದ್ದಾರೆ. ಇವರಿಬ್ಬರೊಂದಿಗೆ ಪ್ರಮೋದ್ ಶೆಟ್ಟಿ, ಗಿರಿಜಾ ಲೋಕೇಶ್, ಶೋಭ್ ರಾಜ್, ಶರತ್ ಲೋಹಿತಾಶ್ವ, ನಿವೇದಿತಾ, ಅರವಿಂದ್ ರಾವ್, ತಬಲ ನಾಣಿ, ರವಿಶಂಕರ್ ಗೌಡ, ವಿನೋದ್ ಗೊಬ್ಬರಗಾಲ, ಮಾಸ್ಟರ್ ಸುಕೃತ್ ಸೇರಿದಂತೆ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಚಂದನ್ ಶೆಟ್ಟಿ ಸಂಗೀತ ನಿರ್ದೇಶಿಸಿದರೆ, ಗುಂಡ್ಲುಪೇಟೆ ಸುರೇಶ್ ಕ್ಯಾಮರಾ ವರ್ಕ್ ಈ ಸಿನಿಮಾದಲ್ಲಿದೆ. ರಾಜಶೇಖರ್ ಸಂಭಾಷಣೆ, ತೇಜಸ್ವಿ ಕೆ. ನಾಗ್ ಈ ಸಿನಿಮಾಗೆ ಸಹ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











