"ತುಂಬಾ ಜನ ಬೆನ್ನಿಗೆ ಚೂರಿ ಹಾಕಿದ್ರು.. ಜೀ ಜೊತೆ ಕೆಲಸ ಮಾಡ್ಬೇಕಾದ್ರೆ ಹುಷಾರಾಗಿ ಮಾಡಬೇಕು"; ನಟ ಅನಿರುದ್ಧ್
ಸಾಹಸ ಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಜತ್ಕರ್ ಕೆಲವು ದಿನಗಳ ಹಿಂದೆ ವಿವಾದಕ್ಕೆ ಸಿಲುಕಿದ್ದರು. 'ಜೊತೆ ಜೊತೆಯಲಿ' ಧಾರಾವಾಹಿ ತಂಡ ಅನಿರುದ್ಧ್ ವಿರುದ್ಧ ತಿರುಗಿಬಿದ್ದಿತ್ತು. ಈ ವಿವಾದ ಕನ್ನಡ ಕಿರುತೆರೆ ಲೋಕದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಅಲ್ಲಿಂದ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳದ ನಟ ಮತ್ತೆ ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದುವೇ 'ಸೂರ್ಯವಂಶ'.
ಉದಯ ಟಿವಿಯಲ್ಲಿ ಅನಿರುದ್ಧ್ ಜತ್ಕರ್ ಹೊಸ ಧಾರಾವಾಹಿ 'ಸೂರ್ಯವಂಶ' ಆರಂಭ ಆಗುತ್ತಿದೆ. ಈ ವೇಳೆ ಫಿಲ್ಮಿಬೀಟ್‌ಗೆ ನೀಡಿದ ಸಂದರ್ಶದಲ್ಲಿ ಅನಿರುದ್ಧ್ 'ಜೊತೆ ಜೊತೆಯಲಿ' ಧಾರಾವಾಹಿ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಅಂದು ನಡೆದ ವಿವಾದಗಳ ಬಗ್ಗೆ ಮತ್ತೆ ಬೇಸರ ಹೊರ ಹಾಕಿದ್ದಾರೆ.

'ಜೊತೆ ಜೊತೆಯಲಿ' ಧಾರಾವಾಹಿ ತನಗೆ ಹೆಸರನ್ನು ಕೊಟ್ಟಿದೆ ಎಂದಿರೋ ಅನಿರುದ್ಧ್ ಹಲವು ವಿಷಯಗಳನ್ನು ಪ್ರಸ್ತಾಪ ಮಾಡಿದ್ದಾರೆ. ಧಾರಾವಾಹಿಯ ಕ್ಲೈಮ್ಯಾಕ್ಸ್‌ನಿಂದ ಹಿಡಿದು ಐದು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ವರೆಗೂ, ಸೀರಿಯಲ್‌ನಲ್ಲಿ ಬ್ಯಾನ್ ಮಾಡುವುದರಿಂದ ಹಿಡಿದು ಜೀ ಕನ್ನಡದಲ್ಲಿ ಮತ್ತೆ ಕೆಲಸ ಮಾಡುವ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಫಿಲ್ಮಿಬೀಟ್ ಜೊತೆಗಿನ ಸಂದರ್ಶನದ ಝಲಕ್ ಇಲ್ಲಿದೆ.
ವಿವಾದದಿಂದ ಹೊರಬರಲು ಸಮಯ ತೆಗೆದುಕೊಂಡಿದೆ
'ಜೊತೆ ಜೊತೆಯಲಿ' ಧಾರಾವಾಹಿ ವಿವಾದ ಕಿರುತೆರೆ ಲೋಕದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಅನಿರುದ್ಧ್ ತಮ್ಮ ಮೇಲಿನ ಆರೋಪದ ವಿರುದ್ಧ ಏಕಾಂಗಿಯಾಗಿ ಹೋರಾಟ ಮಾಡಿದ್ದರು. ಈಗ ಅದರಿಂದ ಹೊರಬಂದು ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ವೇಳೆ ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. "ಜೊತೆ ಜೊತೆಯಲಿ ವಿವಾದದಿಂದ ಹೊರಬರುವುದಕ್ಕೆ ತುಂಬಾನೇ ಸಮಯ ತೆಗೆದುಕೊಂಡಿದ್ದೇನೆ. ನಿಜ ಹೇಳಬೇಕು ಅಂದರೆ, ತುಂಬಾ ಅಂದರೆ ತುಂಬಾ ಸಮಯ ತೆಗೆದುಕೊಂಡಿದ್ದೇನೆ. ನನಗೆ ತುಂಬಾನೇ ಕಾಡುತ್ತೆ. ಯಾಕಂದ್ರೆ, ನಾನು ತುಂಬಾನೇ ಪ್ರೀತಿಸಿದ ಪಾತ್ರವದು. ಈ ಧಾರಾವಾಹಿ ನನಗೆ ತುಂಬಾನೇ ಹೆಸರು ತಂದು ಕೊಟ್ಟಿದೆ. ಆ ಧಾರಾವಾಹಿಗೆ ಹಾಗೇ ಆಗಲೇ ಬಾರದಿತ್ತು." ಎಂದು ಅನಿರುದ್ಧ್ ಬೇಸರ ಹೊರ ಹಾಕಿದ್ದಾರೆ.
"ಎದುರಿಗೆ ಬಂದ್ರೆ ಕಳ್ಳರ ಹಾಗೆ ಹೋಗ್ತಾರೆ"
"ಅವರು ನನ್ನ ಜೊತೆ ಹೇಗೆ ನಡೆದುಕೊಂಡು ಅದು ತುಂಬಾ ಮನ:ಸ್ತಾಪ ತಂದುಕೊಡ್ತು. ಅದೂ ಕೂಡ ಅವಶ್ಯಕತೆ ಇರಲಿಲ್ಲ. ಹೀಗಿದ್ರೂ ಕರೆಸಿ ನನ್ನನ್ನು ಅಂದಿದ್ದೆ. ಎರಡೇ ತಿಂಗಳಲ್ಲಿ ಧಾರಾವಾಹಿ ಮುಗಿದೇ ಹೋಗುತ್ತಿತ್ತು. ನಮ್ಮದು ಕ್ಲೈಮ್ಯಾಕ್ಸ್ ಚಿತ್ರೀಕರಣ ಕೂಡ ಆಗಿ ಹೋಗಿತ್ತು. ಇದೆಲ್ಲ ಬೇಕಿರಲಿಲ್ಲ. ಎಷ್ಟೋ ಜನ ಹೇಳಿದ್ರು. ಮತ್ತೆ ಕರೆದರೆ ವಾಪಾಸ್ ಹೋಗಬೇಡಿ ಅಂತ. ಅದು ಸಾಮಾನ್ಯ ಕೂಡ. ಅವರು ಎಲ್ಲೇ ಹೋದರೂ ಮುಖ ಕೊಟ್ಟು ಮಾತಾಡಿಸುವುದೂ ಇಲ್ಲ. ಮಾತಾಡಿಸುವುದಕ್ಕೆ ಆಗುವುದೂ ಇಲ್ಲ. ಕಳ್ಳರ ಹಾಗೆ ಹೋಗ್ತಾರೆ. ನನ್ನ ಎದುರುಗಡೆನೇ ಬರೋದಿಲ್ಲ. ಯಾಕೆ ಬರೋದಿಲ್ಲ?" ಎಂದು ಅನಿರುದ್ಧ್ ಪ್ರಶ್ನೆ ಮಾಡಿದ್ದಾರೆ.

"ಹೊರೆಸಿದ್ದೆಲ್ಲ ಚೀಪ್ ಆಪಾದನೆಗಳು"
"ಅವರು ಆಪಾದನೆ ಹೊರಿಸಿದ್ದೆಲ್ಲ ಚೀಪ್ ಆಪಾದನೆಗಳು. ಅರ್ಥವೇ ಇಲ್ಲದ ಅಪಾದನೆಗಳು ಅವು. ನನ್ನ ಪಕ್ಕದಲ್ಲಿ ಕೂತು ಹೇಳಿ, ಒಂದೊಂದಕ್ಕೆ ಉತ್ತರ ಕೊಡುತ್ತೇನೆ ಅಂತ ಹೇಳಿದ್ದೆ. ಅವರು ಬರಲೇ ಇಲ್ಲ. ಕೊನೆಗೆ ಟೆಲಿವಿಷನ್ ಅಸೋಸಿಯೇಷನ್‌ನಲ್ಲಿ ಬಂದ್ರು. ಅದು ಕೂಡ ಅಸೋಸಿಯೇಷನ್ ಅವರು ಹೇಳಿದ್ರು. ತುಂಬಾ ಸಭ್ಯತೆಯಿಂದ ನಡೆದುಕೊಂಡಿದ್ದಾರೆ. ಅವರು ಕೋರ್ಟಿಗೆ ಏನಾದರೂ ಹೋಗಿದ್ದರೆ, ಕಮ್ಮಿ ಅಂದರೂ 5 ಕೋಟಿ ರೂಪಾಯಿ ಬಿಚ್ಚಬೇಕಿತ್ತು. ಅಷ್ಟು ಇದೆಯಾ ನಿಮ್ಮ ಬಳಿ ಅಂತ ಕೇಳಿದ್ರು." ಎಂದು ಟೆಲಿವಿಷನ್ ಅಸೋಸಿಯೇಷನ್‌ನಲ್ಲಿ ನಡೆದ ಮಾತುಕತೆಯನ್ನು ರಿವೀಲ್ ಮಾಡಿದ್ದಾರೆ.
ಬ್ಯಾನ್ ಅಂದ್ರು.. ಇದ್ಯಾವ ನ್ಯಾಯ? ಯಾರು ನೀವೆಲ್ಲ?
"ನಿರ್ಮಾಪಕರ ಸಂಘದ್ದೊಂದು ದುರಂತ ಏನು ಅಂದ್ರೆ, ಬ್ಯಾನ್ ಮಾಡ್ಬೇಕು. ಮೂರು ತಿಂಗಳ ಹಿಂದಷ್ಟೇ ಹುಟ್ಟಿಕೊಂಡಿತ್ತು. ನನ್ನನ್ನು ಕರೆಸಲೇ ಇಲ್ಲ ನೀವು. ನನ್ನನ್ನು ಮಾತಾಡಿಸಲೇ ಇಲ್ಲ. ನನ್ನ ಪಾಯಿಂಟ್ ಆಫ್ ವ್ಯೂ ಕೇಳಲೇ ಇಲ್ಲ ನೀವು. ನಿರ್ಮಾಪಕ ಸಂಘವಾಗಿ ಇಬ್ಬರನ್ನೂ ಸೇರಿಸಿ, ಸರಿ ಮಾಡಿಕೊಂಡು ಹೋಗ್ರಪ್ಪ ಅಂತ ಹೇಳಬೇಕಿತ್ತು. ಅದು ಮಾಡದೇನೆ. ಬ್ಯಾನ್ ಅಂತ ಹೇಳಿದ್ರು. ಇದ್ಯಾವ ನ್ಯಾಯ? ಯಾರು ನೀವೆಲ್ಲ?" ಎಂದು ಅನಿರುದ್ಧ್ ಕಿಡಿಕಾರಿದ್ದಾರೆ.
"ಜೀ ಜೊತೆ ಹುಷಾರಾಗಿರಬೇಕು"
"ನನಗೆ ತುಂಬಾ ಜನ ಬೆನ್ನಿಗೆ ಚೂರಿ ಹಾಕಿದ್ದಾರೆ. ಅದಕ್ಕೆ ಲೆಕ್ಕವೇ ಇಲ್ಲ. ಇನ್ಮುಂದೆ ಜೀ ಜೊತೆ ಕೆಲಸ ಮಾಡುವಾಗ ತುಂಬಾನೇ ಹುಷಾರಾಗಿ ಮಾಡಬೇಕು. ಅಗ್ರಿಮೆಂಟ್‌ನಲ್ಲೇ ಎಲ್ಲಾ ಬರೆಸಿಕೊಂಡು, ಓದಿದ ಮೇಲೆ ಕೆಲಸ ಮಾಡಬೇಕು." ಎಂದು ಅನಿರುದ್ಧ್ ಮುಂದಿನ ದಿನಗಳಲ್ಲಿ ಜೀ ಕನ್ನಡದ ಜೊತೆ ಮತ್ತೆ ಕೆಲಸ ಮಾಡಿದರೆ ಹೇಗಿರಬೇಕು ಅನ್ನೋದನ್ನು ಹೇಳಿದ್ದಾರೆ. ಜೊತೆ ಜೊತೆಯಲಿ ನಿರ್ಮಾಪಕರು ಹಾಗೂ ಜೀ ಕನ್ನಡದ ಬಗ್ಗೆ ಪರೋಕ್ಷವಾಗಿ ಕಿಡಿಕಾರಿದ್ದಾರೆ.


Click it and Unblock the Notifications











