Anirudh Jatkar: 'ಜೊತೆಜೊತೆಯಲಿ' ಬಳಿಕ 'Chef ಚಿದಂಬರ'ನಾದ ಅನಿರುದ್ಧ್: ಹೊಸ ಸಿನಿಮಾಗೆ ಉಪ್ಪಿ ಸಾಥ್!
ಸಾಹಸ ಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಮತ್ತೆ ಸಿನಿಮಾಗೆ ಮರಳಿದ್ದಾರೆ. ಸತತ ಸೋಲುಗಳನ್ನು ಕಂಡಿದ್ದ ಅನಿರುದ್ಧ್ ಕಿರುತೆರೆಯಲ್ಲಿ ಮಿಂಚಿದ್ದರು. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ 'ಜೊತೆ ಜೊತೆಯಲಿ' ಧಾರಾವಾಹಿ ಹೊಸ ಇಮೇಜ್ ಕೊಟ್ಟಿತ್ತು. ಈ ಧಾರಾವಾಹಿ ಮೂಲಕ ಅನಿರುದ್ಧ್ ಮತ್ತೆ ಯಶಸ್ಸಿನ ರುಚಿ ಕಂಡಿದ್ದರು.
'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಅನಿರುದ್ಧ್ ಮತ್ತೆ ಅಭಿಮಾನಿಗಳನ್ನು ಸಂಪಾಧಿಸಿದ್ದಾರೆ. ಎಲ್ಲವೂ ಸರಿಯಾಗಿ ನಡೆಯುತ್ತಿರುವಾಗಲೇ ಅನಿರುದ್ಧ್ ಹಾಗೂ ಧಾರಾವಾಹಿ ತಂಡದ ನಡುವೆ ಕಿತ್ತಾಟ ಶುರುವಾಗಿತ್ತು. ಕಿರುತೆರೆ ನಿರ್ಮಾಪಕರು ಅನಿರುದ್ಧ್ ಅವರನ್ನು ಧಾರಾವಾಹಿಗಳಿಂದ ಬ್ಯಾನ್ ಮಾಡುವ ನಿರ್ಧಾರಕ್ಕೆ ಬಂದಿದ್ದರಾದರೂ, ಅದಕ್ಕೆ ವಿರೋಧ ವ್ಯಕ್ತವಾಗಿತ್ತು.

ನಿರ್ಮಾಪಕರ ನಡುವಿನ ವೈಮನಸ್ಸಿನ ಬೆನ್ನಲ್ಲೇ 'ಜೊತೆ ಜೊತೆಯಲಿ' ಧಾರಾವಾಹಿಯಿಂದ ಅನಿರುದ್ಧ್ ಹೊರಬಂದಿದ್ದರು. ಇದಾದ ಕೆಲವು ದಿನಗಳಲ್ಲೇ 'ಜೊತೆ ಜೊತೆಯಲಿ' ಧಾರಾವಾಹಿ ಮುಕ್ತಾಯಗೊಂಡಿತ್ತು. ಮತ್ತೆ ಧಾರಾವಾಹಿ ಕಡೆ ಮುಖ ಮಾಡಬಹುದು ಅಂದುಕೊಂಡಿದ್ದ ಅಭಿಮಾನಿಗಳಿಗೆ ಅನಿರುದ್ಧ್ ಸರ್ಪ್ರೈಸ್ ಕೊಟ್ಟಿದ್ದಾರೆ.
ಇತ್ತೀಚೆಗೆ ಅನಿರುದ್ಧ್ ತಮ್ಮ ಹೊಚ್ಚ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದರು. 'Chef ಚಿದಂಬರ' ಅನ್ನೋ ಟೈಟಲ್ ಕೂಡ ರಿವೀಲ್ ಮಾಡಿದ್ದರು. ಅದೇ ಸಿನಿಮಾಗೆ ಬೆಂಗಳೂರಿನ ಹನುಮಂತನಗರದ ಶ್ರೀರಾಮಾಂಜನೇಯ ದೇವಸ್ಥಾನದಲ್ಲಿ ಮುಹೂರ್ತ ಮಾಡಲಾಗಿದೆ. ಈ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಭಾರತಿ ವಿಷ್ಣುವರ್ಧನ್ ಸಾಥ್ ನೀಡಿದ್ರು.

'Chef ಚಿದಂಬರ' ಸಿನಿಮಾದ ಮೊದಲ ಸನ್ನಿವೇಶಕ್ಕೆ ಭಾರತಿ ವಿಷ್ಣುವರ್ಧನ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಚಾಲನೆ ನೀಡಿ ಸಿನಿಮಾ ಶುಭ ಹಾರೈಸಿದ್ರು. ಅನಿರುದ್ಧ್ ಹೀರೊ ಆಗಿ ನಟಿಸುತ್ತಿರುವ ಈ ಸಿನಿಮಾವನ್ನು ಎಂ.ಆನಂದರಾಜ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಮೊದಲ ಸನ್ನಿವೇಶಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಕ್ಲ್ಯಾಪ್ ಮಾಡಿದ್ರೆ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಕ್ಯಾಮೆರಾ ಚಾಲನೆ ಮಾಡಿದ್ರು.
"ಇದೊಂದು ಡಾರ್ಕ್ ಕಾಮಿಡಿ ಜಾನರ್ ನ ಸಿನಿಮಾ. ಅನಿರುದ್ಧ್ ಐದು ವರ್ಷಗಳ ನಂತರ ನಟಿಸುತ್ತಿರುವ ಸಿನಿಮಾವಿದು. ಇಂದಿನಿಂದ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಆರಂಭವಾಗಲಿದೆ. ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ರೆಚೆಲ್ ಡೇವಿಡ್ ನಟಿಸುತ್ತಿದ್ದಾರೆ. ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್, ರಘು ರಮಣಕೊಪ್ಪ, ಶಿವಮಣಿ ಮುಂತಾದವರು ನಟಿಸುತ್ತಿದ್ದಾರೆ." ಎಂದು ನಿರ್ದೇಶಕ ಎಂ.ಆನಂದರಾಜ್ ಹೇಳಿದ್ದಾರೆ.
'Chef ಚಿದಂಬರ' ಸಿನಿಮಾವನ್ನು ರೂಪ ಡಿ.ಎನ್ ನಿರ್ಮಾಣ ಮಾಡುತ್ತಿದ್ದಾರೆ. ಉದಯ್ ಲೀಲ ಕ್ಯಾಮರಾ, ರಿತ್ವಿಕ್ ಮುರಳಿಧರ್ ಸಂಗೀತ ನೀಡುತ್ತಿದ್ದಾರೆ. ನಿರ್ದೇಶಕರು ಹೇಳಿದ ಹಾಗೆ ಇದೊಂದು ಡಾರ್ಕ್ ಕಾಮಿಡಿ ಜಾನರ್ ನ ಚಿತ್ರ. ಕಾಮಿಡಿಯೊಂದಿಗೆ ಕೌತುಕವು ಇದೆ. ಒಂದು ಕೊಲೆಯ ಸುತ್ತ ಕಥೆ ನಡೆಯುತ್ತದೆ. ನಾನು ಶೆಫ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ . ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ." ಎಂದು ನಟ ಅನಿರುದ್ಧ್ ಹೇಳಿದ್ದಾರೆ.
ಕಳೆದ ತಿಂಗಳು ಮೈಸೂರಿನಲ್ಲಿ ಡಾ ವಿಷ್ಣುವರ್ಧನ್ ಸ್ಮಾರಕದ ಬಳಿ ಸ್ಕ್ರಿಪ್ಟ್ ಪೂಜೆ ಮಾಡಲಾಗಿತ್ತು. ಭಾರತಿ ವಿಷ್ಣುವರ್ಧನ್ ಅಂದು ಚಿತ್ರತಂಡಕ್ಕೆ ಆಗಮಿಸಿ ಆಶೀರ್ವಾದ ಮಾಡಿದ್ದರು. ಸಿನಿಮಾದ ಪೋಸ್ಟರ್ ಅನ್ನು ಕಿಚ್ಚ ಸುದೀಪ್ ರಿಲೀಸ್ ಮಾಡಿಕೊಟ್ಟಿದ್ದರು.
ನಟ ಅನಿರುದ್ಧ್ ಜೊತೆ ನಾಯಕಿರಾಗಿ ನಿಧಿ ಸುಬ್ಬಯ್ಯ, ರೆಚೆಲ್ ಡೇವಿಡ್ ನಟಿಸಿದ್ದಾರೆ. "ಈ ಸ್ಥಳಕ್ಕೆ ಬಂದಾಗ ನಮ್ಮ ಯಜಮಾನರ 'ಯಜಮಾನ' ಸಿನಿಮಾದ ಮುಹೂರ್ತ ಸಮಾರಂಭ ನೆನಪಾಯಿತು. ಆ ಚಿತ್ರದ ಮುಹೂರ್ತ ಕೂಡ ಇಲ್ಲೇ ನಡೆದಿತ್ತು. ಈ ಚಿತ್ರಕ್ಕೂ ಒಳ್ಳೆಯದಾಗಲಿ" ಎಂದು ಭಾರತಿ ವಿಷ್ಣುವರ್ಧನ್ ಹಾರೈಸಿದರು.


Click it and Unblock the Notifications











