Srinidhi Shetty: ಕೊನೆಗೂ ಅನೌನ್ಸ್ ಆಯ್ತು ಶ್ರೀನಿಧಿ ಶೆಟ್ಟಿ ಹೊಸ ಸಿನಿಮಾ.. ಕನ್ನಡ ಅಲ್ಲ ತೆಲುಗು 'ತೆಲುಸು ಕದಾ'
ಒಂದ್ಕಡೆ ಯಶ್.. ಇನ್ನೊಂದು ಕಡೆ ಶ್ರೀನಿಧಿ ಶೆಟ್ಟಿ. 'ಕೆಜಿಎಫ್ ಚಾಪ್ಟರ್ 2' ಸಿನಿಮಾ ಬಳಿಕ ಇಬ್ಬರೂ ಸೈಲೆಂಟ್ ಆಗಿದ್ದರು. ಸಿನಿಮಾ ರಿಲೀಸ್ ಆಗಿ ಒಂದೂವರೆ ವರ್ಷ ಆಗಿದ್ದರೂ ಇಬ್ಬರೂ ಹೊಸ ಪ್ರಾಜೆಕ್ಟ್ ಅನ್ನು ಅನೌನ್ಸ್ ಮಾಡಿರಲಿಲ್ಲ. ಕೊನೆಗೂ ಶ್ರೀನಿಧಿ ಶೆಟ್ಟಿ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ.
'ಕೆಜಿಎಫ್ ಚಾಪ್ಟರ್ 2' ಅಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾದಲ್ಲಿ ನಟಿಸಿದರೂ ಶ್ರೀನಿಧಿ ಶೆಟ್ಟಿ ಹೊಸ ಸಿನಿಮಾ ಯಾಕೆ ಅನೌನ್ಸ್ ಮಾಡುತ್ತಿಲ್ಲವೆಂದು ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದರು. ಇಷ್ಟು ದಿನ ಸೈಲೆಂಟ್ ಆಗಿದ್ದ ಶ್ರೀನಿಧಿ ಶೆಟ್ಟಿ ಮೊದಲ ತೆಲುಗು ಸಿನಿಮಾ ಅನೌನ್ಸ್ ಮಾಡಿದ್ದಾರೆ.

'ಕೆಜಿಎಫ್ 2' ರಿಲೀಸ್‌ಗೂ ಮುನ್ನವೇ ಮೊದಲ ತಮಿಳು ಸಿನಿಮಾಗೆ ಬಣ್ಣ ಹಚ್ಚಿದ್ದರು. ತಮಿಳು ನಟ ಚಿಯಾನ್ ವಿಕ್ರಮ್ ಅಭಿನಯದ 'ಕೋಬ್ರಾ' ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ ನಟಿಸಿದ್ದರು. ಆದರೆ, 'ಕೋಬ್ರಾ' ಹೇಳಿಕೊಳ್ಳುವಂತಹ ಜಾದು ಮಾಡಲಿಲ್ಲ. ಆದರೆ, 'ಕೆಜಿಎಫ್ ಚಾಪ್ಟರ್ 2' ರಿಲೀಸ್ ಆದ ಬಳಿಕ ತೆರೆಕಂಡರೂ ಮೋಡಿ ಮಾಡಲೇ ಇಲ್ಲ. ಈ ಕಾರಣಕ್ಕೆ ಒಳ್ಳೆ ಕಥೆ ಸಿಗುವವರೆಗೂ ಕಾದು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಶ್ರೀನಿಧಿ ಶೆಟ್ಟಿ ಮೊದಲ ತೆಲುಗು ಸಿನಿಮಾ
ಶ್ರೀನಿಧಿ ಶೆಟ್ಟಿ ಮೊದಲ ತೆಲುಗು ಸಿನಿಮಾ ಅನೌನ್ಸ್ ಆಗಿದೆ. ಅದುವೇ 'ತೆಲುಸು ಕದಾ'. ಕಾಸ್ಟ್ಯೂಮ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದ ನೀರಜ್ ಕೋನಾ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಕೊನೆಗೂ ಯಶ್‌ಗೂ ಮುನ್ನ ಶ್ರೀನಿಧಿ ಶೆಟ್ಟಿಯೇ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದು, ಅವರ ಫ್ಯಾನ್ಸ್‌ಗೆ ಖುಷಿಕೊಟ್ಟಿದೆ.
ನವೆಂಬರ್‌ನಿಂದ ಶೂಟಿಂಗ್ ಶುರು
'ತೆಲುಸು ಕದಾ' ಸಿನಿಮಾ ಮೂಲಕ ನಟಿ ಶ್ರೀನಿಧಿ ಶೆಟ್ಟಿ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಟಾಲಿವುಡ್‌ನ ಫೇಮಸ್ ತಂತ್ರಜ್ಞರೇ ಈ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ. ಎಸ್ ಥಮನ್ ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಕ್ಯಾಮರಾಮ್ಯಾನ್ ಆಗಿ ಯುವರಾಜ್ ಆಯ್ಕೆ ಆಗಿದ್ದಾರೆ. ಶ್ರೀಕರ್ ಪ್ರಸಾದ್ ಎಡಿಟಿಂಗ್ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಚಿತ್ರತಂಡ ನವೆಂಬರ್‌ನಿಂದ ಆರಂಭಿಸಲು ಮುಂದಾಗಿದೆ.

ಒಂದೂವರೆ ವರ್ಷ ತೆಗೆದುಕೊಂಡಿದ್ದೇಕೆ?
ಹೊಸ ಸಿನಿಮಾ ಅನೌನ್ಸ್ ಆಗಿದ್ದೇನೋ ನಿಜ. ಆದರೆ, ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಡುವುದಕ್ಕೆ ಒಂದೂವರೆ ವರ್ಷ ತೆಗೆದುಕೊಂಡಿದ್ದೇಕೆ? ಅನ್ನೋ ಪ್ರಶ್ನೆಗೆ ಈ ಸಿನಿಮಾ ಮೂಲಕ ಉತ್ತರ ಕೊಟ್ಟಿದ್ದಾರೆ. " ನನ್ನ ವೃತ್ತಿ ಬದುಕಿಗೆ ಒಂದೊಳ್ಳೆ ಸ್ಟಾರ್ಟ್ ಸಿಕ್ಕಿದ್ದರೂ, ಆತುರಕ್ಕೆ ಬೀಳಬಾರದು ಅನ್ನೋದನ್ನು ಗಮನದಲ್ಲಿ ಇಟ್ಟುಕೊಂಡಿದ್ದೇನೆ. ಒಳ್ಳೆ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದೆ. ಹಲವು ಅವಕಾಶಗಳು ಬಂದಿತ್ತು. ಆದರೆ, ಈ ಪ್ರಾಜೆಕ್ಟ್ ಸರಿಯಾದದ್ದು ಎಂದು ನಿರ್ಧರಿಸಿದೆ" ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
ತೆಲುಗಿಗೆ ಮತ್ತೊಬ್ಬ ಕನ್ನಡತಿ ಶ್ರೀನಿಧಿ
ತೆಲುಗು ಚಿತ್ರರಂಗಕ್ಕೆ ಕನ್ನಡದ ಹಲವು ನಟಿಯರು ಎಂಟ್ರಿ ಕೊಟ್ಟಿದ್ದಾರೆ. ಅವರಿಗೆ ಯಶಸ್ಸು ಕೂಡ ಸಿಕ್ಕಿದೆ. ರಶ್ಮಿಕಾ ಮಂದಣ್ಣ, ನೇಹಾ ಶೆಟ್ಟಿ, ಶ್ರೀಲೀಲಾ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಕನ್ನಡದ ನಟಿಯರಿಗೆಲ್ಲ ಯಶಸ್ಸು ಕೂಡ ಸಿಕ್ಕಿದೆ. ಈಗಾಗಲೇ ಕೆಜಿಎಫ್ ಡಬ್ ಸಿನಿಮಾ ಮೂಲಕ ತೆಲುಗು ಮಂದಿಗೆ ಪರಿಚಯವಿದ್ದರೂ, ಇದೇ ಮೊದಲ ಬಾರಿಗೆ ಟಾಲಿವುಡ್‌ಗೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











