'ಕೃಷ್ಣಂ ಪ್ರಣಯ ಸಖಿ' ಬಳಿಕ ಗಣೇಶ್ ಬಾಳಲ್ಲಿ ಮತ್ತೆ 'ಮುಂಗಾರು ಮಳೆ': ಒಂದೆರಡಲ್ಲ ಕೈಯಲ್ಲಿವೆ ಐದು ಸಿನಿಮಾಗಳು
'ಮುಂಗಾರು ಮಳೆ'ಯಿಂದ ಗೋಲ್ಡನ್ ಸ್ಟಾರ್ ಗಣೇಶ್ ತನ್ನ ವೃತ್ತಿ ಬದುಕಿನಲ್ಲಿ ಮತ್ತೆ ತಿರುಗಿ ನೋಡಲಿಲ್ಲ. ಆಗಾಗ ಏರಿಳಿತಗಳು ಇದ್ದರೂ, ಮತ್ತೆ ಸೂಪರ್ ಹಿಟ್ ಸಿನಿಮಾ ಕೊಟ್ಟು ಟ್ರ್ಯಾಕ್‌ಗೆ ಮರಳಿದ್ದು ಇದೆ. ಈಗ ಕನ್ನಡದ ಬಹುತೇಕ ಸ್ಟಾರ್‌ಗಳು ಎರಡು ವರ್ಷಕ್ಕೆ ಒಂದು ಸಿನಿಮಾ ಅನ್ನೋ ಲೆಕ್ಕಾಚಾರಕ್ಕೆ ಇಳಿದಿರಬೇಕಾದರೆ, ಗಣೇಶ್ ಮಾತ್ರ ಒಂದರ ಹಿಂದೊಂದು ಸಿನಿಮಾಗಳಿಗೆ ಸಹಿ ಹಾಕುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಸ್ಯಾಂಡಲ್‌ವುಡ್‌ನಲ್ಲಿ ಫುಲ್ ಡಿಮ್ಯಾಂಡ್‌ನಲ್ಲಿ ಇದ್ದಾರೆ.
ಕಳೆದ ವರ್ಷ ತೆರೆಕಂಡಿದ್ದ 'ಕೃಷ್ಣಂ ಪ್ರಣಯ ಸಖಿ' ಗೋಲ್ಡನ್ ಸ್ಟಾರ್ ಗಣೇಶ್‌ಗೆ ಸಕ್ಸಸ್ ತಂದು ಕೊಟ್ಟಿತ್ತು. 2024 ಕೂಡ ಕನ್ನಡ ಚಿತ್ರರಂಗಕ್ಕೆ ಕರಾಳ ವರ್ಷವೇ ಆಗಿತ್ತು. ಇನ್ನೇನು ಚಿತ್ರರಂಗವನ್ನು ಮುಚ್ಚುವುದೇ ಒಳಿತು ಎನ್ನುವಾಗಲೇ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿದ 'ಭೀಮ' ಹಾಗೂ ಗಣೇಶ್ ಸಿನಿಮಾ 'ಕೃಷ್ಣಂ ಪ್ರಣಯ ಸಖಿ' ಎರಡೂ ಸಿನಿಮಾಗಳೂ ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆದುಕೊಂಡು ಬಂದಿದ್ದವು.

ಇಲ್ಲಿಂದ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಡಿಮ್ಯಾಂಡ್ ಬಂದಿದೆ. ನಿರ್ಮಾಪಕರು ಗಣೇಶ್ ಜೊತೆ ಸಿನಿಮಾ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಸ್ಯಾಂಡಲ್‌ವುಡ್ ಸಿನಿಮಾ ಮಂದಿಯ ಪ್ರಕಾರ ಗೋಲ್ಡನ್ ಸ್ಟಾರ್ ಗಣೇಶ್ ಕೈಯಲ್ಲಿ ಈಗಾಗಲೇ ಐದು ಸಿನಿಮಾಗಳಿವೆ. ಇಷ್ಟೇ ಅಲ್ಲದೇ ಕನ್ನಡದ ಇನ್ನೂ ಕೆಲವು ನಿರ್ಮಾಪಕರು ಸಿನಿಮಾ ಮಾಡುವುದಕ್ಕೆ ಕ್ಯೂನಲ್ಲಿ ನಿಂತಿದ್ದಾರೆ ಎನ್ನಲಾಗಿದೆ. ಹಾಗಿದ್ದರೆ, ಗಣೇಶ್ ಒಪ್ಪಿಕೊಂಡಿರುವ ಆ ಐದು ಸಿನಿಮಾಗಳು ಯಾವುದು? ಯಾವಾಗ ರಿಲೀಸ್ ಆಗುತ್ತೆ? ಎನ್ನುವುದನ್ನು ತಿಳಿಯಲು ಮುಂದೆ ಓದಿ.
ಗಣೇಶ್‌ಗೆ ಡಿಮ್ಯಾಂಡ್: ಗೋಲ್ಡನ್ ಸ್ಟಾರ್ ಗಣೇಶ್‌ಗೆ ಫ್ಯಾಮಿಲಿ ಆಡಿಯನ್ಸ್ ಹೆಚ್ಚು. ಕುಟುಂಬ ಸಮೇತ ಬಂದು ಥಿಯೇಟರ್‌ನಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡುತ್ತಾರೆ. ಏನಿಲ್ಲ ಅಂದರೂ, ಗಣೇಶ್ ಸಿನಿಮಾದಲ್ಲಿ ಒಳ್ಳೆ ಹಾಡುಗಳಿಗಂತೂ ಮೋಸವಿರುವುದಿಲ್ಲ ಅನ್ನೋದು ಪ್ರೇಕ್ಷಕರಿಗೂ ಗೊತ್ತಿದೆ. 'ಕೃಷ್ಣಂ ಪ್ರಣಯ ಸಖಿ' ಸಿನಿಮಾದಲ್ಲೂ ಕೂಡ ಇದೇ ಆಗಿದ್ದು. ಈ ಸಿನಿಮಾದ ಹಾಡುಗಳು ಬಿಡುಗಡೆಗೂ ಮುನ್ನವೇ ಸೂಪರ್ ಹಿಟ್ ಆಗಿತ್ತು. ಥಿಯೇಟರ್‌ನಲ್ಲೂ ಸಿನಿಮಾ ಗೆದ್ಮೇಲೆ ಗೋಲ್ಡನ್ ಸ್ಟಾರ್‌ಗೆ ಡಿಮ್ಯಾಂಡ್ ಹೆಚ್ಚಾಗಿದೆ. ನಿರ್ಮಾಪಕರು ಗಣೇಶ್‌ಗೆ ಸಿನಿಮಾ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

ಕೈಯಲ್ಲಿರೋ ಸಿನಿಮಾಗಳ್ಯಾವುವು?: 'ಕೃಷ್ಣಂ ಪ್ರಣಯ ಸಖಿ' ಬಳಿಕ ಗಣೇಶ್ 'ಯುವರ್ಸ್ ಸಿನ್ಸಿಯರ್ಲಿ ರಾಮ್' ಸಿನಿಮಾ ಕೈಗೆತ್ತಿಕೊಂಡಿದ್ದರು. ರಮೇಶ್ ಅರವಿಂದ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದು, ಈಗಾಗಲೇ ಶೂಟಿಂಗ್ ನಡೆಯುತ್ತಿದೆ. ತೆಲುಗು ನಿರ್ಮಾಣ ಸಂಸ್ಥೆ ಗಣೇಶ್‌ಗೆ ಸಿನಿಮಾ ಮಾಡುವುದಕ್ಕೆ ರೆಡಿಯಾಗಿದೆ. ಪೀಪಲ್ ಮೀಡಿಯಾ ಫ್ಯಾಕ್ಟರ್ ನಿರ್ಮಿಸುತ್ತಿರುವ 'ಪಿನಾಕ' ಕೂಡ ಸೆಟ್ಟೇರಿದೆ. ಕೆಲವು ದಿನಗಳ ಹಿಂದಷ್ಟೇ ಅರಸು ಅಂತಾರೆ ನಿರ್ದೇಶಿಸುತ್ತಿರುವ ಸಿನಿಮಾ ಮುಹೂರ್ತ ಆಗಿದೆ. ಅಲ್ಲಿಗೆ ಮೂರು ಸಿನಿಮಾಗಳು ಸೆಟ್ಟೇರಿವೆ.
ಭರ್ಜರಿ ಚೇತನ್ ನಿರ್ದೇಶನದಲ್ಲಿ ಸಿನಿಮಾ: ಈಗಾಗಲೇ ಸೆಟ್ಟೇರಿರುವ ಮೂರು ಸಿನಿಮಾಗಳ ಜೊತೆಗೆ ಮತ್ತೊಂದು ಸಿನಿಮಾಗೂ ಸಹಿ ಹಾಕಿದ್ದಾರೆ. ನಾಲ್ಕನೇ ಸಿನಿಮಾವನ್ನು ಭರ್ಜರಿ ಚೇತನ್ ನಿರ್ದೇಶನ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಓಡಾಡುತ್ತಿದೆ. ಇದು ಗಣೇಶ್ ಹಾಗೂ ಭರ್ಜರಿ ಚೇತನ್ ಕಾಂಬಿನೇಷನ್‌ನ ಮೊದಲ ಸಿನಿಮಾ ಆಗಲಿದೆ. ಇದು ಇನ್ನೂ ಅಧಿಕೃತವಾಗಿ ಅನೌನ್ಸ್ ಆಗಿಲ್ಲ. ಇನ್ನು ಮತ್ತೊಂದು ತೆಲುಗು ಸಂಸ್ಥೆ ಐದನೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ ಅನ್ನೋದು ಗಾಂಧಿನಗರದ ಬಿಸಿಬಿಸಿ ಸುದ್ದಿ.
ವರ್ಷಕ್ಕೆ ಎರಡು ಸಿನಿಮಾ ಫಿಕ್ಸ್: 2025 ಶುರುವಾಗಿ ಆರು ತಿಂಗಳು ಆಗುತ್ತಾ ಬಂತು. ಕನ್ನಡ ಚಿತ್ರರಂಗ ಕಿಂಚಿತ್ತು ಬದಲಾವಣೆಯನ್ನು ಕಂಡಿಲ್ಲ. ಈ ವರ್ಷನಾದರೂ ಸಿನಿಮಾಗಳು ಗೆಲ್ಲುತ್ತಾವಾ? ಅನ್ನೋದು ಸದ್ಯಕ್ಕೆ ನಿರೀಕ್ಷೆಗಳಷ್ಟೇ ಆಗಿದೆ. ಮತ್ತೆ ಕನ್ನಡ ಚಿತ್ರರಂಗ ಸೋಲಿನಿಂದ ಎದ್ದು ನಿಲ್ಲುತ್ತೆ ಎನ್ನುವ ನಿರೀಕ್ಷೆಗಳೆಲ್ಲ ಸುಳ್ಳಾಗಿದೆ. ಸಾಲು ಸಾಲು ಸೋಲುಗಳ ಮಧ್ಯೆ ಕನ್ನಡದ ಸೂಪರ್‌ಸ್ಟಾರ್‌ಗಳು ಕೂಡ ನಿಧಾನ ಗತಿಯಲ್ಲಿ ಸಿನಿಮಾವನ್ನು ಮಾಡುತ್ತಿದ್ದಾರೆ. ಸಹಜವಾಗಿ ಸಿನಿಮಾ ಪ್ರಿಯರು ಪರಭಾಷೆ ಇಲ್ಲವೇ ಒಟಿಟಿ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.
ಕನ್ನಡದ ಚಿತ್ರರಂಗ ಈ ಮಟ್ಟಿಗೆ ಸೋಲನ್ನು ಕಾಣುತ್ತಿರುವುದಕ್ಕೆ ಸ್ಟಾರ್ ನಟರೇ ಕಾರಣ ಅನ್ನೋದು ಹಲವರ ಅಭಿಪ್ರಾಯ. ವರ್ಷಕ್ಕೆ ಎರಡು ಸಿನಿಮಾ ಮಾಡೋದು ಬಿಟ್ಟು, ಎರಡು ವರ್ಷಕ್ಕೆ ಒಂದು ಸಿನಿಮಾ ಅನ್ನೋ ದಾಟಿಗೆ ಬಿದ್ದಿದ್ದಾರೆ. ಇದು ಬಿಟ್ಟರೆ ಮಾತ್ರ ಕನ್ನಡ ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರು ಥಿಯೇಟರ್‌ಗೆ ಬರುತ್ತಾರೆ. ಇಲ್ಲದೇ ಹೋದರೆ, ಸ್ಯಾಂಡಲ್‌ವುಡ್ ಗತಿ ಅಷ್ಟೇ ಎನ್ನುತ್ತಿದ್ದಾರೆ. ಈ ಹೊತ್ತಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಇವರಂತೆ ಕೆಲವು ಸ್ಟಾರ್ ನಟರಾದರೂ ಮುಂದೆ ಬರುತ್ತಾರಾ? ಅನ್ನೋದು ನೋಡಬೇಕಿದೆ.


Click it and Unblock the Notifications











