ತುಮಕೂರಿನಲ್ಲಿ "ರಾಧಾ ರಾಧಾ" ಎಂದ 'ಬೃಂದಾವಿಹಾರಿ' ತಂಡ; ಸಿನಿಮಾ ಫ್ಯಾನ್ಸ್‌ಗೆ ಅರ್ಪಿಸಿದ ಗೋಲ್ಡನ್ ಸ್ಟಾರ್
ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಎರಡು ದಶಕಗಳಾಗಿವೆ. ಈ ಸಂಭ್ರಮದಲ್ಲಿ ಇರುವಾಗಲೇ ಅವರ ಇನ್ನೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. 'ಕೃಷ್ಣಂ ಪ್ರಣಯ ಸಖಿ' ಅಂತಹ ಯಶಸ್ವಿ ಸಿನಿಮಾದ ಬಳಿಕ ಮತ್ತೆ ಅದೇ ತಂಡ ಇನ್ನೊಂದು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುವುದಕ್ಕೆ ರೆಡಿಯಾಗಿದೆ. ಅದುವೇ 'ಬೃಂದಾವಿಹಾರಿ'.
'ಕೃಷ್ಣಂ ಪ್ರಣಯ ಸಖಿ'ಯಂತೆಯೇ 'ಬೃಂದಾವಿಹಾರಿ' ಸಿನಿಮಾದ ಹಾಡುಗಳು ಕೂಡ ಸಿನಿಪ್ರಿಯರನ್ನು ಸೆಳೆಯುತ್ತಿವೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಕೇಳುಗರಿಗೆ ಇಷ್ಟ ಆಗುತ್ತಿವೆ. ಮಲಯಾಳಂ, ತೆಲುಗು ಸಿನಿಮಾಗಳಿಗೆ ಸಂಗೀತ ನೀಡಿರುವ ಹೇಶಮ್ ಅಬ್ದುಲ್ ವಹಾಬ್ ಈ ಸಿನಿಮಾಗೆ ಟ್ಯೂನ್ ಹಾಕಿದ್ದಾರೆ. ಮೆಲೋಡಿ ಹಾಡುಗಳಿಗೆ ಹೆಸರಾಗಿರುವ ಹೇಶಮ್ ಅಬ್ದುಲ್ ವಹಾಬ್ ಇಲ್ಲೂ ಉತ್ತಮ ಹಾಡುಗಳನ್ನು ನೀಡಿದ್ದಾರೆ.

ಈ ಸಿನಿಮಾ ಎರಡನೇ ಹಾಡು "ರಾಧಾ ರಾಧಾ"ವನ್ನು ಚಿತ್ರತಂಡ ತುಮಕೂರಿನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಗಣೇಶ್‌ಗೂ ತುಮಕೂರಿಗೂ ಬಿಡಲಾರದ ನಂಟಿದೆ. ಸಿನಿಮಾರಂಗಕ್ಕೆ ಕಾಲಿಡುವುದಕ್ಕೂ ಮುನ್ನ ತುಮಕೂರಿಗೆ ಬಂದು ಹೋಗಿ ಮಾಡುತ್ತಿದ್ದರು. ಹೀಗಾಗಿ 'ಬೃಂದಾವಿಹಾರಿ' ಸಿನಿಮಾದ 2ನೇ ಹಾಡನ್ನು ಇಲ್ಲಿಯೇ ಬಿಡುಗಡೆ ಮಾಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ, ಈ ಸಿನಿಮಾ ಬಗ್ಗೆ, 20 ವರ್ಷಗಳ ಸಿನಿಮಾ ಜರ್ನಿ ಬಗ್ಗೆ ಗೋಲ್ಡನ್ ಸ್ಟಾರ್ ಗಣೇಶ್ ಏನಂದ್ರು? ತಿಳಿಯುವುದಕ್ಕೆ ಮುಂದೆ ಓದಿ.
'ಬೃಂದಾವಿಹಾರಿ' ಸಿನಿಮಾವನ್ನು ಸಮೃದ್ಧಿ ಮಂಜುನಾಥ್ ನಿರ್ಮಾಣ ಮಾಡಿದ್ದಾರೆ. ಇದು ಅವರ ಸಂಸ್ಥೆಯಲ್ಲಿ ಮೂಡಿ ಬಂದಿರುವ ನಾಲ್ಕನೇ ಸಿನಿಮಾ. ಹಾಗೇ 'ಕೃಷ್ಣಂ ಪ್ರಣಯ ಸಖಿ' ಅಂತಹ ಹಿಟ್ ಸಿನಿಮಾ ಕೊಟ್ಟ ಶ್ರೀನಿವಾಸ್ ರಾಜು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಹೀಗಾಗಿ ಗಣೇಶ್ ಹಾಗೂ ಶ್ರೀನಿವಾಸ್ ರಾಜು ಕಾಂಬಿನೇಷನ್ ಮತ್ತೆ ಪ್ರೇಕ್ಷಕರನ್ನು ಥಿಯೇಟರ್ ಕಡೆಗೆ ಕರೆದುಕೊಂಡು ಬರುವುದಕ್ಕೆ ಸಿದ್ಧವಾಗಿ ನಿಂತಿದೆ.
'ಕೃಷ್ಣಂ ಪ್ರಣಯ ಸಖಿ' ಸಿನಿಮಾದ ಜನಪ್ರಿಯ ಗೀತೆ ದ್ವಾರಪ ಹಾಡಿಗೆ ಸಾಹಿತ್ಯ ಬರೆದಿದ್ದ ಡಾ.ವಿ.ನಾಗೇಂದ್ರ ಪ್ರಸಾದ್ 'ಬೃಂದಾವಿಹಾರಿ' ತಂಡದ "ರಾಧಾ ರಾಧಾ" ಹಾಡಿಗೆ ಪದಗಳನ್ನು ಪೋಣಿಸಿದ್ದಾರೆ. ಹೀಗಾಗಿ ಈ ಮೂವರ ಕಾಂಬಿನೇಷನ್ ಮತ್ತೆ ಸಂಗೀತ ಪ್ರಿಯರನ್ನು ಸೆಳೆಯುವುದಕ್ಕೆ ಹೊರಟಿದೆ. ಹೇಶಮ್ ಅಬ್ದುಲ್ ವಹಾಬ್ ಟ್ಯೂನ್ ಹಾಕಿರುವ ಈ ಹಾಡಿಗೆ ಸಿದ್ ಶ್ರೀರಾಮ್ ಹಾಗೂ ಚಿನ್ಮಯಿ ಧ್ವನಿಯಾಗಿದ್ದಾರೆ.

'ಬೃಂದಾವಿಹಾರಿ' ಸಿನಿಮಾಗೆ ಗೋಲ್ಡನ್ ಸ್ಟಾರ್ ನಾಯಕನಾಗಿದ್ದರೆ, ದೇವಿಕಾ ಭಟ್ ನಾಯಕಿ. ಅಂದ್ಹಾಗೆ ದೇವಿಕಾಗೆ ಇದು ಚೊಚ್ಚಲ ಸಿನಿಮಾ. ಸಿನಿಮಾ ರಿಲೀಸ್ ಎದುರು ನೋಡುತ್ತಿದ್ದಾರೆ. "ರಾಧಾ ರಾಧಾ" ಹಾಡುಗಳಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ದೇವಿಕಾ ಭಟ್ ಜೋಡಿ ಕ್ಯೂಟ್ ಆಗಿ ಕಾಣಿಸುತ್ತಿದೆ. ತುಮಕೂರಿನಲ್ಲಿ ಈ ಹಾಡನ್ನು ರಿಲೀಸ್ ಮಾಡಿದ ಬಳಿಕ ಗಣೇಶ್ ಸಿನಿಮಾ ಬಗ್ಗೆ, ತನ್ನ 20 ವರ್ಷಗಳ ಜರ್ನಿ ಬಗ್ಗೆ ಮಾತಾಡಿದ್ದಾರೆ.
"ನನಗೂ, ತುಮಕೂರಿಗೂ ಹತ್ತಿರದ ನಂಟು. ನಾನು ಓದಿದ್ದು ನೆಲಮಂಗಲದಲ್ಲಿ. ಹೀಗಾಗಿ ಆಗಾಗ ತುಮಕೂರಿಗೆ ಬರುತ್ತಿದ್ದೆ. ಈಗ ನನ್ನ ಅಭಿನಯದ ಬೃಂದಾವಿಹಾರಿ ಸಿನಿಮಾದ 2ನೇ ಹಾಡು ತುಮಕೂರಿನಲ್ಲಿ ಬಿಡುಗಡೆಯಾಗಿದ್ದು ಬಹಳ ಖುಷಿಯಾಗಿದೆ. ಇದೇ ವೇಳೆ ನಾನು ನಾಯಕನಾಗಿ ಇಪ್ಪತ್ತು ವರ್ಷಗಳಾಗಿದೆ. ಈ ಸಂದರ್ಭದಲ್ಲಿ ನನ್ನ ಯಶಸ್ಸನ್ನು ಅಭಿಮಾನಿಗಳಿಗೆ ಅರ್ಪಿಸುತ್ತೇನೆ. ಅವರಿಂದಲೇ ಇದು ಸಾಧ್ಯವಾಗಿದ್ದು, ಇದೇ ಸಂದರ್ಭದಲ್ಲಿ ನನ್ನ ಎಲ್ಲಾ ಸಿನಿಮಾದ ನಿರ್ಮಾಪಕರಿಗೆ, ನಿರ್ದೇಶಕರಿಗೆ ಹಾಗೂ ತಂತ್ರಜ್ಞರಿಗೆ ಧನ್ಯವಾದ ತಿಳಿಸುತ್ತೇನೆ" ಎಂದು ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಗಣೇಶ್ "ಕಾಮಿಡಿ ಟೈಮ್ ಕಾರ್ಯಕ್ರಮವೇ ನನ್ನನ್ನು ಚಿತ್ರರಂಗಕ್ಕೆ ಕರೆತಂದಿದ್ದು. ಬೃಂದಾ ವಿಹಾರಿ ಸಿನಿಮಾದ ಮೊದಲ ಹಾಡು ರಾಮ ರಾಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಈಗ ಬಿಡುಗಡೆಯಾಗಿರುವ ರಾಧಾ ರಾಧಾ ಹಾಡು ಸಹ ಎಲ್ಲರಿಗೂ ಮೆಚ್ಚುಗೆಯಾಗಲಿದೆ" ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಇದೇ ವೇಳೆ "ಬೃಂದಾ ವಿಹಾರಿ ಸಿನಿಮಾದಲ್ಲಿ ಏಳು ಹಾಡುಗಳಿವೆ. ಇಂದು ಎರಡನೇ ಹಾಡು ಬಿಡುಗಡೆಯಾಗಿದೆ. ಈ ವೇಳೆ ನಾನು ನಿರ್ಮಾಪಕ ಸಮೃದ್ಧಿ ಮಂಜುನಾಥ್, ನಾಯಕ ಗಣೇಶ್ ಹಾಗೂ ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ನವಾಬ್ ಅವರಿಗೆ ಧನ್ಯವಾದ ಹೇಳುತ್ತೇನೆ. ಉಳಿದ ಹಾಡುಗಳು ಸಹ ಸುಮಧುರವಾಗಿದೆ. ಸದ್ಯದಲ್ಲೇ ರಿಲೀಸ್ ಆಗುತ್ತೆ" ಎಂದು ನಿರ್ದೇಶಕ ಶ್ರೀನಿವಾಸರಾಜು ಹೇಳಿದ್ದಾರೆ.


Click it and Unblock the Notifications
