'ಕೃಷ್ಣಂ ಪ್ರಣಯ ಸಖಿ' 100 ದಿನ ಪೂರೈಸಿದ ಬೆನ್ನಲ್ಲೇ ಹೊಸ ಸಿನಿಮಾಗೆ ಗಣೇಶ್ ಗ್ರೀನ್ ಸಿಗ್ನಲ್; ಡೈರೆಕ್ಟರ್ ಯಾರು?
ಗೋಲ್ಡನ್ ಸ್ಟಾರ್ ಗಣೇಶ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. 'ಕೃಷ್ಣಂ ಪ್ರಣಯ ಸಖಿ' ನಿರೀಕ್ಷೆ ಮಾಡಿದ್ದಕ್ಕಿಂತಲೂ ಅದ್ಭುತ ಯಶಸ್ಸು ಕಂಡಿದೆ. ಇತ್ತೀಚೆಗಷ್ಟೇ ಈ ಸಿನಿಮಾ 100 ದಿನಗಳನ್ನು ಪೂರೈಸಿದೆ. ಸಿನಿಮಾ ಎರಡು ವಾರ ಥಿಯೇಟರ್‌ನಲ್ಲಿ ಉತ್ತಮ ಪ್ರದರ್ಶನ ಕಂಡರೆ ಸಾಕು ಅಂತಿರೋ ಕಾಲದಲ್ಲಿ ಗಣೇಶ್ ಸಿನಿಮಾ ಶತದಿನಗಳನ್ನು ಪೂರೈಸಿದೆ.
'ಕೃಷ್ಣಂ ಪ್ರಣಯ ಸಖಿ' ಥಿಯೇಟರ್‌ನಲ್ಲಷ್ಟೇ ಅಲ್ಲ ಓಟಿಟಿಯಲ್ಲೂ ಮೋಡಿ ಮಾಡಿತ್ತು. ಇದೇ ಖುಷಿಯಲ್ಲಿ ಗಣೇಶ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ತೆಲುಗಿನ ಜನಪ್ರಿಯ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದೆ. ಗೋಲ್ಡನ್ ಸ್ಟಾರ್ ಗಣೇಶ್‌ಗಾಗಿ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಉತ್ಸಾಹ ತೋರಿಸಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿಯ ನಿರ್ಮಿಸುತ್ತಿರುವ 49ನೇ ಸಿನಿಮಾಗೆ ಗಣೇಶ್ ನಾಯಕನಾಗಿದ್ದಾರೆ.

ತೆಲುಗಿನ ನಿರ್ಮಾಣ ಸಂಸ್ಥೆ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದು ಒಂದ್ಕಡೆಯಾದರೆ, ಇನ್ನೊಂದು ಕಡೆ ಗಣೇಶ್ ಕೂಡ ಟಾಲಿವುಡ್‌ಗೆ ಎಂಟ್ರಿ ಕೊಡುವ ಸಾಧ್ಯತೆಯಿದೆ. ಅಂದರೆ, ಈ ಸಿನಿಮಾ ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲಿಯೂ ನಿರ್ಮಾಣ ಆದರೂ ಅಚ್ಚರಿ ಪಡೆಬೇಕಿಲ್ಲ. ತೆಲುಗು ಸಿನಿಮಾಗಳನ್ನು ನಿರ್ಮಿಸುವ ಪೀಪಲ್ ಮೀಡಿಯಾ ಫ್ಯಾಕ್ಟರಿ ಮುಂದಿನ ದಿನಗಳಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡುವ ಆಲೋಚನೆ ಇಟ್ಟುಕೊಂಡಿದೆ.
ಪೀಪಲ್ ಮೀಡಿಯಾ ಫ್ಯಾಕ್ಟರಿ ಈಗಾಗಲೇ ತೆಲುಗಿನಲ್ಲಿ ಸಕ್ಸಸ್‌ಫುಲ್ ಸಿನಿಮಾಗಳನ್ನು ನಿರ್ಮಾಣ ಮಾಡಿದೆ. 'ಕಾರ್ತಿಕೇಯ 2', 'ವೆಂಕಿ ಮಾಮಾ', 'ಓ ಬೇಬಿ', 'ಧಮಾಕಾ' ಹಾಗೂ 'ನ್ಯೂ-ಸೆನ್ಸ್' ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಟಾಲಿವುಡ್‌ನಲ್ಲಿ ತನ್ನದೇ ಕೊಡುಗೆಯನ್ನು ನೀಡಿರುವ ಈ ಸಂಸ್ಥೆ ಈಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಸಿನಿಪ್ರಿಯರಿಗೆ ಖುಷಿಕೊಟ್ಟಿದೆ. ಅದೂ ಗಣೇಶ್ ಸಿನಿಮಾ ಮೂಲಕವೇ ಸ್ಯಾಂಡಲ್‌ವುಡ್ ಪ್ರವೇಶ ಮಾಡುತ್ತಿರೋದು ಅವರ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ.
ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯ ಮಾಲೀಕ ಟಿಜಿ ವಿಶ್ವ ಪ್ರಸಾದ್ ಒಳ್ಳೆಯ ಕಥೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅದೇ ಫಾರ್ಮೂಲವನ್ನು ಇಟ್ಟುಕೊಂಡು ಕನ್ನಡಕ್ಕೂ ಬಂದಿದ್ದಾರೆ. ಹೀಗಾಗಿ ಮುಂದಿ ದಿನಗಳಲ್ಲಿ ವಿಶ್ವ ಮಟ್ಟದಲ್ಲಿ ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಮನ್ನಣೆ ಸಿಗಬಹುದು. ಗೋಲ್ಡನ್ ಸ್ಟಾರ್ ಗಣೇಶ್ 49ನೇ ಸಿನಿಮಾವನ್ನು ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಲಿದ್ದಾರೆ.
ಈ ಸಿನಿಮಾಗೆ ಖ್ಯಾತ ನೃತ್ಯ ನಿರ್ದೇಶಕ ಧನಂಜಯ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ಧನಂಜಯ್ ಸಕಲ ಸಿದ್ದತೆಗಳನ್ನು ಮಾಡಿಕೊಂಡು ಅಖಾಡಕ್ಕೆ ಇಳಿಯುತ್ತಿದ್ದಾರೆ. ಸದ್ಯ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಗಣೇಶ್ ಹಾಗೂ ಪೀಪಲ್ ಮೀಡಿಯಾ ಫ್ಯಾಕ್ಟರಿ ಬಗ್ಗೆ ಮಾತ್ರ ಮಾಹಿತಿ ಹಂಚಿಕೊಂಡಿದ್ದು, ಮುಂದಿನ ದಿನಗಳಲ್ಲಿ ಸಿನಿಮಾದ ಟೈಟಲ್‌ನಿಂದ ಹಿಡಿದು ತಾಂತ್ರಿಕ ವರ್ಗದ ಬಗ್ಗೆ ಮಾಹಿತಿ ಸಿಗಬಹುದು.
'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಯಶಸ್ಸಿನ ಬೆನ್ನಲ್ಲೇ 'ಯುವರ್ಸ್ ಸಿನ್ಸಿಯರ್ಲಿ ರಾಮ್'ನಲ್ಲಿ ನಟಿಸುತ್ತಿದ್ದಾರೆ. ಗಣೇಶ್ ಜೊತೆಗೆ ರಮೇಶ್ ಅರವಿಂದ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ವಿಖ್ಯಾತ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಮುಗಿಯುತ್ತಿದ್ದಂತೆ ಹೊಸ ಸಿನಿಮಾದ ಚಿತ್ರೀಕರಣ ಆರಂಭ ಆಗಬಹುದು. ಸದ್ಯ ಆ ಬಗ್ಗೆ ಚಿತ್ರತಂಡ ಇನ್ನೂ ಮಾಹಿತಿಯನ್ನು ಹಂಚಿಕೊಂಡಿಲ್ಲ. ಒಟ್ನಲ್ಲಿ 2025 ಕನ್ನಡದಲ್ಲಿ ಒಳ್ಳೊಳ್ಳೆ ಸಿನಿಮಾಗಳು ರಿಲೀಸ್ ಆಗಬಹುದು.


Click it and Unblock the Notifications











