ಮತ್ತೆ ಖಾಕಿ ತೊಟ್ಟ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹುಟ್ಟುಹಬ್ಬ ಬಂತು ಅಂದರೆ ಮುಗೀತು. ಸಾಲು ಸಾಲು ಸಿನಿಮಾಗಳು ಘೋಷಣೆ ಆಗುತ್ತವೆ. ಕ್ಯೂನಲ್ಲಿ ನಿಂತಿರುವ ನಿರ್ಮಾಪಕರಿಗೆಲ್ಲ ಗ್ರೀನ್ ಸಿಗ್ನಲ್ ಸಿಕ್ಕಿಬಿಡುತ್ತೆ. ಇನ್ನೊಂದು ಕಡೆ ವಯಸ್ಸು 63 ಆದರೂ, ಶಿವಣ್ಣನಿಗೆ ಇನ್ನೂ ಡಿಮ್ಯಾಂಡ್ ಕಮ್ಮಿ ಆಗಿಲ್ಲ. ನಿರ್ಮಾಪಕ ಇವರೊಂದಿಗೆ ಸಿನಿಮಾ ಮಾಡುವುದಕ್ಕೆ ಮುಗಿಬೀಳುತ್ತಿದ್ದಾರೆ. ಹೀಗಾಗಿ ಈ ಬಾರಿ ಹುಟ್ಟುಹಬ್ಬದಲ್ಲೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಅನೌನ್ಸ್ ಆಗಿವೆ.
ಶಿವಣ್ಣ ಖಾಕಿ ತೊಟ್ಟು ತೆರೆಮೇಲೆ ಕಾಣಿಸಿಕೊಂಡಿದ್ದು ಕೆಲವೇ ಸಿನಿಮಾಗಳು. ಆದರೆ, ಆ ಸಿನಿಮಾಗಳಿಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಅವರ ಅಭಿಮಾನಿಗಳಿಗೆ ಶಿವಣ್ಣ ಹೀಗೆ ವಿಭಿನ್ನ ಪಾತ್ರಗಳನ್ನು ಮಾಡಬೇಕು ಎಂಬ ಆಸೆ. ಅವರ ಆಸೆಯನ್ನು ಈಡೇರಿಸುವುದಕ್ಕೆ ಶಿವರಾಜ್‌ಕುಮಾರ್ ಮತ್ತೊಮ್ಮೆ ಖಾಕಿ ಲುಕ್ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಈ ಬಾರಿ ಬರ್ತ್‌ಡೇಗೆ ಅನೌನ್ಸ್ ಆದ ಸಿನಿಮಾಗಳಲ್ಲಿ ಅದೂ ಕೂಡ ಒಂದು.

ಅಂದ್ಹಾಗೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿರುವ ಶಿವರಾಜ್‌ಕುಮಾರ್ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಬರ್ತ್‌ಡೇ ಹಿನ್ನೆಲೆಯಲ್ಲಿ ಶಿವಣ್ಣನ ಈ ಸಿನಿಮಾವನ್ನು ಅನೌನ್ಸ್ ಮಾಡಲಾಗಿದೆ. ಆದರೆ, ಸಿನಿಮಾ ಯಾವಾಗ ಸೆಟ್ಟೇರುತ್ತೆ? ಯಾವಾಗ ರಿಲೀಸ್ ಆಗುತ್ತೆ? ಶಿವಣ್ಣ ಜೊತೆ ಯಾವೆಲ್ಲ ಸ್ಟಾರ್‌ಗಳು ಇರುತ್ತಾರೆ? ಅನ್ನೋ ಮಾಹಿತಿ ಮುಂದಿನ ದಿನಗಳಲ್ಲಿ ಗೊತ್ತಾಗಬಹುದು.
ಇದೊಂದು ಮರ್ಡರ್ ಮಿಸ್ಟ್ರಿ ಶೈಲಿಯ ಕಥೆ ಎಂದು ಸಿನಿಮಾ ತಂಡ ಹೇಳಿಕೊಂಡಿದೆ. ಈ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಬಿಗ್ ಬಜೆಟ್ ಸಿನಿಮಾ ಆಗಿದ್ದು, ಮತ್ತೆ ಖಾಕಿ ತೊಟ್ಟ ಶಿವಣ್ಣನನ್ನು ತೆರೆಮೇಲೆ ನೋಡಬಹುದಾಗಿದೆ. ಬಾಲಾಜಿ ಮಾಧವನ್ ಎಂಬುವವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಶಿವಣ್ಣನ ಈ ಸಿನಿಮಾದ ಟೈಟಲ್ ಅನ್ನು ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಲಿರುವ ಮುಹೂರ್ತ ಕಾರ್ಯಕ್ರಮದಲ್ಲಿ ಅಧಿಕೃತ ಶೀರ್ಷಿಕೆ ಘೋಷಣೆ ಮಾಡಲಾಗುತ್ತಿದೆ. ಆದರೆ, ಯಾವಾಗ ಮುಹೂರ್ತ? ಸ್ಟಾರ್ ಕಾಸ್ಟ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. 'ಶ್ರಿತಿಕ್ ಮೋಷನ್ ಪಿಕ್ಚರ್ಸ್' ಈ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಮುಂದೆ ಬಂದಿದೆ. ಸಾಗರ್ ಶಾ, ಕೃಷ್ಣಕುಮಾರ್ ಬಿ ಮತ್ತು ಸೂರಜ್ ಶರ್ಮಾ ಈ ಸಿನಿಮಾ ನಿರ್ಮಾಣಕ್ಕೆ ಹಣ ಹಾಕುತ್ತಿದ್ದಾರೆ.
ಇನ್ನು ಈ ಸಿನಿಮಾ ಇದೇ ವರ್ಷದ ಕೊನೆಯಲ್ಲಿ ಆರಂಭ ಆಗುವ ಸಾಧ್ಯತೆಯಿದೆ. ಮುಂದಿನ ವರ್ಷದ ಕೊನೆಯಲ್ಲಿ ಸಿನಿಮಾ ರಿಲೀಸ್ ಆದರೂ ಆಗಬಹುದು. ಸದ್ಯ ಶಿವರಾಜ್‌ಕುಮಾರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಯ ಚಿತ್ರರಂಗದಿಂದಲೂ ಬೇಡಿಕೆ ಇರುವುದರಿಂದ ಶಿವಣ್ಣ ಯಾವ ಸಿನಿಮಾಗೆ ಯಾವಾಗ ಡೇಟ್ ಕೊಟ್ಟಿದ್ದಾರೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ.
ಗೀತಾ ಶಿವರಾಜ್‌ಕುಮಾರ್ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗಾಗಲೇ 'A ಫಾರ್ ಆನಂದ್' ಸಿನಿಮಾ ಕೂಡ ಘೋಷಣೆಯಾಗಿದೆ. ಆದರೆ, ಅದು ಯಾವಾಗ ಆರಂಭ ಆಗುತ್ತೋ ಗೊತ್ತಿಲ್ಲ. ಬರ್ತ್‌ಡೇ ದಿನವೇ ಪತ್ನಿಗೆ ಟೈಮ್ ಕೊಡುವಂತೆ ಕೇಳಿಕೊಂಡಿದ್ದೇನೆ ಎಂದು ಹೇಳಿದ್ದರು. 45 ಸಿನಿಮಾ ರಿಲೀಸ್ ಬಳಿಕ ಶಿವಣ್ಣ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುವ ಸಾಧ್ಯತೆಯಿದೆ.


Click it and Unblock the Notifications











