"ಶ್ರೀರಾಮ ಮಂದಿರ ಉದ್ಘಾಟನೆ ನನಗೆ ಆಧ್ಯಾತ್ಮ.. ರಾಜಕೀಯವಲ್ಲ";ಕಬಾಲಿ ಡೈರೆಕ್ಟರ್‌ಗೆ ರಜನಿ ತಿರುಗೇಟು
ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಜನವರಿ 22ರಂದು ವಿಜೃಂಭಣೆಯಿಂದ ನೆರವೇರಿದೆ. ಪ್ರಧಾನಿ ನರೇಂದ್ರ ಮೋದಿ ಮುಂದಾಳತ್ವದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಆದರೆ, ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಬಳಿಕ ಕೆಲವರು ಟೀಕೆ ಮಾಡುತ್ತಿದ್ದಾರೆ ಮಾಡುತ್ತಿದ್ದಾರೆ. ಕನ್ನಡ ನಟರಾದ ಕಿಶೋರ್, ಚೇತನ್, ಶ್ರುತಿ ಹರಿಹರನ್ ವಿರೋಧ ವ್ಯಕ್ತ ಪಡಿಸಿದ್ದರು.
ಹಾಗೇ ರಜನಿಕಾಂತ್ ನಟಿಸಿದ 'ಕಬಾಲಿ', 'ಕಾಲ'ದಂತಹ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದ ಪಾ.ರಂಜಿತ್ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಇದೇ ವೇಳೆ ಅಯೋಧ್ಯೆ ಶ್ರೀರಾಮ ಮಂದಿರದ ಬಗ್ಗೆ ಸೂಪರ್‌ಸ್ಟಾರ್ ರಜನಿಕಾಂತ್ ಕೊಟ್ಟ ಹೇಳಿಕೆ ಬಗ್ಗೆನೂ ವಿರೋಧ ವ್ಯಕ್ತಪಡಿಸಿದ್ದರು.

"ರಾಮ ಮಂದಿರಕ್ಕೆ ಹೋಗುವುದು ಅವರ (ರಜನಿಕಾಂತ್) ಆಯ್ಕೆ. ಆದರೆ, 500 ವರ್ಷಗಳ ಸಮಸ್ಯೆಗೆ ಸಿಕ್ಕ ಪರಿಹಾರ ಎಂದು ರಜನಿಕಾಂತ್ ಹೇಳಿದ್ದಾರೆ. ನಾನು ಇದರ ಹಿಂದಿರುವ ರಾಜಕೀಯವನ್ನು ಪ್ರಶ್ನೆ ಮಾಡಬೇಕು. ಅವರು ಸರಿ ಅಥವಾ ತಪ್ಪು ಅನ್ನುವ ಅನ್ನುವ ಅವರ ಅಭಿಪ್ರಾಯವನ್ನು ನಾನು ಟೀಕಿಸುತ್ತೇನೆ." ಎಂದು ಪಾ.ರಂಜಿತ್ ಹೇಳಿದ್ದರು.
ನಿನ್ನೆಯಿಂದ (ಜನವರಿ 23) ರಜನಿಕಾಂತ್ ವಿರುದ್ಧ ಪಾ.ರಂಜಿತ್ ಟೀಕಿಸಿದ್ದರ ಬಗ್ಗೆ ಚರ್ಚೆಯಾಗುತ್ತಿತ್ತು. ಈ ಬೆನ್ನಲ್ಲೇ ರಜನಿಕಾಂತ್ ಕೂಡ ಮುಖ್ಯ ಅತಿಥಿಯಾಗಿ ಶ್ರೀರಾಮ ಮಂದಿರ ಉದ್ಘಾಟನೆಗೆ ಅಯೋಧ್ಯೆಗೆ ತೆರಳಿದ್ದರು. ಅಲ್ಲಿಂದ ಹಿಂತಿರುಗುತ್ತಿದ್ದಂತೆ ರಜನಿಕಾಂತ್‌ಗೆ ರಾಮ ಮಂದಿರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರ ಬಗ್ಗೆ ಪ್ರಶ್ನೆ ಮಾಡಿದ್ದರು.

ಈ ವೇಳೆ ಸೂಪರ್‌ಸ್ಟಾರ್ ರಜನಿಕಾಂತ್, "ನನಗೆ ತುಂಬಾ ಒಳ್ಳೆಯ ದರ್ಶನ ಸಿಕ್ಕಿದೆ. ರಾಮ ಮಂದಿರ ಓಪನ್ ಆಗುತ್ತಿದ್ದಂತೆ ದರ್ಶನ ಪಡೆದ ಮೊದಲ 150 ಮಂದಿಯಲ್ಲಿ ನಾನು ಒಬ್ಬ. ಇದು ನನಗೆ ತುಂಬಾನೇ ಸಂತೋಷ ಕೊಟ್ಟಿದೆ. ನನಗೆ ಇದು ಆಧ್ಯಾತ್ಮ.. ರಾಜಕೀಯ ಅಲ್ಲ. ಪ್ರತಿಯೊಬ್ಬರಲ್ಲೂ ವಿಭಿನ್ನ ಅಭಿಪ್ರಾಯವಿರುತ್ತೆ. ಇದು ಯಾವುದೇ ಸಮಯದಲ್ಲೂ ಹೊಂದಾಣಿಕೆಯಾಗುವುದಿಲ್ಲ." ಎಂದು ರಜನಿಕಾಂತ್ ಪ್ರತಿಕ್ರಿಯೆ ನೀಡಿದ್ದರು.
ಇದೇ ವೇಳೆ ಸೋಶಿಯಲ್ ಮೀಡಿಯಾದಲ್ಲಿ ರಜನಿಕಾಂತ್, ಅಯೋಧ್ಯೆ ಶ್ರೀರಾಮ ಮಂದಿರ ಮೇಲ್ವಿಚಾರಕರ ಜೊತೆ ನಡೆಸುತ್ತಿರುವ ಸಂಭಾಷಣೆಯ ವಿಡಿಯೋ ಹರಿದಾಡಿತ್ತು. ರಜನಿ ತಮ್ಮ ಮಾಜಿ ಅಳಿಯ ಧನುಷ್‌ನಿಗೆ ಆಸನ ನೀಡುವಂತೆ ಮೇಲ್ವಿಚಾರಕರ ಜೊತೆ ವಾದಕ್ಕೆ ಬಿದ್ದಿದ್ದರು ಎಂದು ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ರಜನಿಕಾಂತ್ "ಅಂತಹದ್ದೇನೂ ನಡೆದಿಲ್ಲ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ವೇಳೆ ಸೂಪರ್‌ಸ್ಟಾರ್ ರಜನಿಕಾಂತ್ ಜೊತೆಗೆ ಅಮಿತಾಭ್ ಬಚ್ಚನ್, ರಣ್‌ಬೀರ್ ಕಪೂರ್, ಆಲಿಯಾ ಭಟ್, ವಿಕ್ಕಿ ಕೌಶಲ್, ಕತ್ರಿನಾ ಕೈಫ್, ಕನ್ನಡದ ನಟರಾದ ರಿಷಬ್ ಶೆಟ್ಟಿ, ನಿಖಿಲ್ ಕುಮಾರ್ ಕೂಡ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಸಾಕಷ್ಟು ಮಂದಿ ಹರ್ಷ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಭಾರತೀಯ ಸಂವಿಧಾನದ ಪೀಠಿಕೆಯನ್ನು ಹಂಚಿಕೊಂಡು ವಿರೋಧವನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications











