ರಾಜ್‌ಕುಮಾರ್, ಅಪ್ಪು ಬಳಿಕ ನಂದಿನಿ ಬ್ರ್ಯಾಂಡ್‌ಗೆ ರಾಯಬಾರಿಯಾದ ಶಿವಣ್ಣ:KMF ಅಭಿನಂದನೆ!
ಇತ್ತೀಚೆಗೆ ನಂದಿನಿ ಹಾಲು ಹಾಗೂ ಅದರ ಉತ್ಪನ್ನಗಳು ಹೆಚ್ಚು ಚರ್ಚೆಯಲ್ಲಿದೆ. ಕರ್ನಾಟಕದ ಹೆಮ್ಮೆ ನಂದಿನಿ ಬ್ರ್ಯಾಂಡ್ ಅನ್ನು ಅಮೂಲ್ ಜೊತೆ ವಿಲೀನಗೊಳಿಸುವ ಬಗ್ಗೆ ವಿವಾದ ಎದ್ದಿತ್ತು. ಬಳಿಕ ಇದನ್ನು ಕೈ ಬಿಡಲಾಗಿತ್ತು. ಈ ಬೆನ್ನಲ್ಲೇ ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ನಂದಿನಿ ಉತ್ಪನ್ನಗಳ ಆಮದಿಗೆ ಕಡಿವಾಣ ಹಾಕುವ ಹುನ್ನಾರವೂ ನಡೆದಿತ್ತು.
ಅಮೂಲ್ ಬಿಟ್ಟರೆ ದೇಶಾದ್ಯಂತ ಅತೀ ಹೆಚ್ವು ಹಾಲನ್ನು ಜನರಿಗೆ ನೀಡುವ ಸಂಸ್ಥೆಯೇ ಕೆಎಂಎಫ್. ಇದೂವರೆಗೂ ಕರ್ನಾಟಕದಲ್ಲಿ ಹೈನುಗಾರಿ ಸಮೃದ್ಧವಾಗಿರುವುದಕ್ಕೆ ಕಾರಣವೇ ಕೆಎಂಎಫ್‌ನ ನಂದಿನಿ ಹಾಗೂ ಅದರ ಉತ್ಪನ್ನಗಳು. ಇಷ್ಟು ದಿನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಂದಿನಿ ಉತ್ಪನ್ನಗಳಿಗೆ ರಾಯಬಾರಿಯಾಗಿದ್ದರು. ನಂದಿನಿ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಿದ್ದರು.

ಅಪ್ಪು ಅಗಲಿದ ಬಳಿಕ ನಂದಿನಿಗೆ ರಾಯಬಾರಿ ಯಾರಾಗುತ್ತಾರೆ? ಅನ್ನೋ ಪ್ರಶ್ನೆ ಎದ್ದಿತ್ತು. ಆ ಬೆನ್ನಲ್ಲೇ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರನ್ನು ಭೇಟಿ ಮಾಡಿ, ರಾಯಬಾರಿಯಾಗುವಂತೆ ಕೋರಿದ್ದರು. ಅದಕ್ಕೆ ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ನಂದಿನಿ ಉತ್ಪನ್ನಗಳಿಗೆ ಶಿವಣ್ಣ ರಾಯಬಾರಿ
ಇಂದು (ಆಗಸ್ಟ್ 1) ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಕೆ.ಜಗದೀಶ್ ಸೆಂಚುರಿ ಸ್ಟಾರ್ ಡಾ||ಶಿವರಾಜ್‌ಕುಮಾರ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಶಿವಣ್ಣನ ಬಳಿ ನಂದಿನಿ ಉತ್ಪನ್ನಗಳಿಗೆ ರಾಯಬಾರಿಯಾಗುವಂತೆ ಮನವಿಯನ್ನು ಮಾಡಿಕೊಂಡಿದ್ದರು. ಅದರಂತೆಯೇ ಕರ್ನಾಟಕ ರಾಜ್ಯದ ಹೆಮ್ಮೆಯ ಬ್ರಾಂಡ್ 'ನಂದಿನಿ'ಯ ರಾಯಭಾರಿಯಾಗಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಪ್ರಚಾರವನ್ನು ಮಾಡಲು ಒಪ್ಪಿಗೆ ನೀಡಿದ್ದಾರೆ.
ಶಿವಣ್ಣನಿಗೆ ಕೆಎಂಎಫ್ ಅಭಿನಂದನೆ
ಕೆಎಂಎಫ್‌ನ ನಂದಿನಿ ಹಾಲು ಹಾಗೂ ಉತ್ಪನ್ನಗಳನ್ನು ಪ್ರಚಾರ ಮಾಡುವುದಕ್ಕೆ ಶಿವಣ್ಣ ಒಪ್ಪಿದ್ದಕ್ಕೆ ಒಕ್ಕೂಟ ಅಭಿನಂದನೆಗಳನ್ನು ಸಲ್ಲಿಸಿದೆ. "ಡಾ|| ಶಿವರಾಜ್ ಕುಮಾರ್ ಅವರಿಗೆ ಕರುನಾಡಿನ ಸಮಸ್ತ ರೈತ ಬಾಂಧವರ ಪರವಾಗಿ ಹಾಗೂ ಕರ್ನಾಟಕ ಹಾಲು ಮಹಾಮಂಡಳದ ಪರವಾಗಿ ಹೃತ್ಫೂರ್ವಕ ಅಭಿನಂದನೆಗಳು" ಎಂದು ಕೆಎಂಎಫ್ ಹೇಳಿದೆ. ಈ ಸಂಬಂಧ ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಕೆ.ಜಗದೀಶ್ ಖುದ್ದಾಗಿ ಶಿವಣ್ಣನನ್ನು ಭೇಟಿ ಮಾಡಿ,ಹೂಗುಚ್ಚ ನೀಡಿದ ಅಭಿನಂದಿಸಿದ್ದಾರೆ.

ಕೆಎಂಎಫ್ ರಾಯಬಾರಿಯಾಗಿದ್ದ ಅಪ್ಪು
ಈ ಹಿಂದೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ 'ನಂದಿನಿ' ಬ್ರ್ಯಾಂಡ್‌ನ ರಾಯಬಾರಿಯಾಗಿದ್ದರು. 2009ರಿಂದ ಅವರು ಅಗಲುವವರೆಗೂ ನಂದಿನಿ ಉತ್ಪನ್ನಗಳ ಪ್ರಚಾರ ಮಾಡಿದ್ದರು. ರೈತರಿಗೆ ನೆರವು ನೀಡುವುದಕ್ಕಾಗಿ ಅಪ್ಪು ಹಣವನ್ನೇ ಪಡೆಯದೆ ನಂದಿನಿ ಉತ್ಪನ್ನಗಳ ರಾಯಬಾರಿಯಾಗುವುದಕ್ಕೆ ಒಪ್ಪಿದ್ದರು. ಅಪ್ಪು ಅಗಲಿದ ಬಳಿಕ ಈಗ ಶಿವಣ್ಣ ಆ ಕೆಲಸಕ್ಕೆ ಮುಂದಾಗಿದ್ದಾರೆ.
ಅಣ್ಣಾವ್ರು ಕೂಡ ನಂದಿನಿ ರಾಯಬಾರಿ
ಪುನೀತ್ ರಾಜ್‌ಕುಮಾರ್ ಅಷ್ಟೇ ಅಲ್ಲ. ಡಾ.ರಾಜ್‌ಕುಮಾರ್ ಕೂಡ ನಂದಿನಿ ಹಾಲಿಗೆ ರಾಯಬಾರಿಯಾಗಿ ಸೇವೆ ಸಲ್ಲಿಸಿದ್ದರು. 1996ರಲ್ಲಿ ಅಣ್ಣಾವ್ರು ರಾಯಬಾರಿಯಾಗಿ ಪ್ರಚಾರ ಮಾಡಿದ್ದರು. ಹಿಂದಿನಿಂದಲೂ ದೊಡ್ಮನೆ ದೊಡ್ಡ ಸ್ಟಾರ್‌ಗಳೆಲ್ಲರೂ ನಂದಿನಿ ಉತ್ಪನ್ನಗಳಿಗೆ ರಾಯಬಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಮೂಲಕ ರಾಜ್ಯದ ರೈತರಿಗೆ ನೆರವಾಗಿದ್ದಾರೆ. ಅವರ ಆರ್ಥಿಕ ಸಬಲೀಕರಣಕ್ಕೆ ಪರೋಕ್ಷವಾಗಿ ಸಹಾಯ ಮಾಡಿದ್ದಾರೆ.


Click it and Unblock the Notifications











