ನಮ್ಮ ಯಜಮಾನ್ರು ಅಭಿನಯದಲ್ಲಿ ಬಹಳ ತೂಕವಿದೆ: ಹಂಸಲೇಖ ಕೊಟ್ಟ ಅಂಕವೆಷ್ಟು?
ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ದೃಶ್ಯ 2 ರಾಜ್ಯಾದ್ಯಂತ ತೆರೆಕಂಡಿದೆ. ಕ್ರೇಜಿ ಮಾಮನ ಈ ವಿನೂತನ ಸಿನಿಮಾಗಳ ಪಟ್ಟಿಯಲ್ಲಿ ದೃಶ್ಯ 2 ಹೊಸದಾಗಿ ಸೇರ್ಪಡೆಯಾಗಿದೆ. ವರ್ಷದ ಕೊನೆಯಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿ ಬಿಡುಗಡೆಯಾಗುತ್ತಿರುವ ಈ ಸಿನಿಮಾ ಪ್ರೇಕ್ಷಕರಿಗೆ ಟ್ಚಿಸ್ಟ್ ಅಂಡ್ ಟರ್ನ್ ಮೂಲಕ ಕಿಕ್ ಕೊಡಲಿದೆ. ಮೋಹನ್ ಲಾಲ್ ನಟಿಸಿದ ಮಲಯಾಳಂ ಸಿನಿಮಾ 'ದೃಶ್ಯ 2' ರಿಮೇಕ್ ಆಗಿದ್ದರೂ ಕನ್ನಡಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲಾಗಿದೆ.
ದೃಶ್ಯ ಸಿನಿಮಾ ಬಿಡುಗಡೆಗೂ ಮುನ್ನ ಕ್ರೇಜಿಸ್ಟಾರ್ ಕನ್ನಡ ಚಿತ್ರರಂಗಕ್ಕೆ 'ದೃಶ್ಯ 2' ಸಿನಿಮಾವನ್ನು ತೋರಿಸಿದ್ದರು. ರವಿಚಂದ್ರನ್ ಅವರ ಕ್ರೇಜಿ ಸಿನಿಮಾ ನೋಡಲು ಬಹುತೇಕ ಕನ್ನಡ ಚಿತ್ರರಂಗ ಓಡೋಡಿ ಬಂದಿತ್ತು. ಅದರಲ್ಲೂ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ದೃಶ್ಯ 2 ಸಿನಿಮಾ ನೋಡಿ ಅವರ ಯಜಮಾನ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಹಾಡಿ ಹೊಗಳಿದ್ದಾರೆ.

ರವಿಚಂದ್ರನ್ ಕೌಟುಂಬಿಕ ಸಿನಿಮಾಗಳ ವಿಜಯೋತ್ಸವ
"ಒಂದು ವಿಶೇಷವಾದ ದೃಶ್ಯವನ್ನು ನೋಡಿದ್ವಿ ಅದು ಏನು ಅಂದರೆ, ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತೆರೆಮೇಲೆ ವಿಭಿನ್ನವಾಗಿ ಕಾಣಿಸಿಕೊಳ್ಳಲು ಶುರುವಾದಲ್ಲಿಂದ ಫ್ಯಾಮಿಲಿ ಸಂಬಂಧಿತ ಕಥೆಗಳು ವಿಜಯೋತ್ಸವವನ್ನು ಆಚರಿಸುತ್ತಿವೆ. ಅವರು ಮಾಡಿದ ಕುಟುಂಬದ ಎಲ್ಲಾ ಚಿತ್ರಗಳೂ ಈಗ ಕುಟುಂಬವನ್ನ, ಕುಟುಂಬದ ವರ್ಗವನ್ನು ಸಂತೋಷ ಪಡಿಸುತ್ತಿವೆ." ಎಂದು ರವಿಚಂದ್ರನ್ ಅವರ ಸಿನಿಮಾ ಬಗ್ಗೆ ಹಂಸಲೇಖ ಮಾತಾಡಿದ್ದಾರೆ.

'ದೃಶ್ಯ 2' ಸಿನಿಮಾ ವಿಮರ್ಶೆ ಮಾಡಿದ ಹಂಸಲೇಖ
"ಈಗಾಗಲೇ ದೃಶ್ಯ 1 ಅನ್ನು ನೋಡಿ ಸಂತೋಷ ಪಟ್ಟ ಜನ ನಾವು. ಆ ಚಿತ್ರದಲ್ಲಿ ಒಂದು ಕುಟುಂಬಕ್ಕೆ ಆಗುವ ಅನ್ಯಾಯವನ್ನು, ಅನ್ಯಾಯಕ್ಕೆ ನ್ಯಾಯ ಸಲ್ಲಿಸಿಕೊಳ್ಳುವ ಬುದ್ಧಿವಂತಿಕೆಯನ್ನ ದೃಶ್ಯ 1 ರಲ್ಲಿ ನೋಡಿದ್ದೇವೆ ನಾವು. ಬಹಳ ಕುತೂಹಲವನ್ನು ಕೆರಳಿಸಿದಂತಹ ಚಿತ್ರ ಅದು. ದೃಶ್ಯ 2 ಕನ್ನಡದಲ್ಲಿ ಬರುತ್ತಿದೆ ಎಂದಾಗ ಬಹಳ ಕುತೂಹಲದಿಂದ ಕುತೂಹಲವನ್ನು ಎರಡು ಮಾಡಿಕೊಂಡು ಕಾದಿದ್ದೆವು. ಇವತ್ತು ಆ ದೃಶ್ಯವನ್ನು ನೋಡಿದ್ದೆವು ದೃಶ್ಯ 2. ಅದ್ಬುತವಾದ ಸ್ಕ್ರೀನ್ ಪ್ಲೇ. ವಂಡರ್‌ಫುಲ್ ಮ್ಯೂಸಿಕ್, ಮತ್ತು ವೆರಿ ಶಾಕಿಂಗ್ ಇಂಟರ್‌ವಲ್. ನಿರೀಕ್ಷೆನೇ ಮಾಡದ ಕ್ಲೈಮ್ಯಾಕ್ಸ್" ಎಂದು ಹಂಸಲೇಖ ದೃಶ್ಯ 2 ವನ್ನು ವಿಮರ್ಶೆ ಮಾಡಿದ್ದಾರೆ.

ನಮ್ಮ ಯಜಮಾನರ ಅಭಿನಯದಲ್ಲಿ ತೂಕವಿದೆ
"ಪಿ ವಾಸು ಅವರು ಅದ್ಭುತವಾದ ಕೆಲಸವನ್ನು ಮಾಡಿದ್ದಾರೆ. ನಮ್ಮ ಯಜಮಾನ್ರು ಬಹಳ ತೂಕದಲ್ಲಿ ಅಭಿನಯಿಸಿದ್ದಾರೆ. ಈ ಕಥೆ ಇಂಟರ್‌ವಲ್‌ನಲ್ಲಿ ಶಾಕಿಂಗ್, ಅನಿರೀಕ್ಷಿತ ಕ್ಲೈಮ್ಯಾಕ್ಸ್‌ವನ್ನು ತೆರೆಮೇಲೆ ನೋಡಿ. ಕನ್ನಡ ಚಿತ್ರರಂಗದ ಚಂದನವನದ ಭವಿಷ್ಯ ದೃಶ್ಯ 2 ಯಿಂದ ಪ್ರಾರಂಭವಾಗಿದೆ." ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾ ದೃಶ್ಯ 2 ಅನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ.

' ದೃಶ್ಯ 2' ಬಿಗ್ ಸ್ಟಾರ್‌ಕಾಸ್ಟ್ ಸಿನಿಮಾ
'ದೃಶ್ಯ 2' ಸಿನಿಮಾದಲ್ಲಿ ರವಿಚಂದ್ರನ್ ಜೊತೆ ಮಲಯಾಳಂ ನಟಿ ನವ್ಯ ನಾಯರ್ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಅನಂತ್‌ನಾಗ್ ಕಾಣಿಸಿಕೊಂಡಿರುವುದು ಚಿತ್ರದ ಮತ್ತೊಂದು ಹೈಲೈಟ್. ಪ್ರಮೋದ್ ಶೆಟ್ಟಿ ಸಿನಿಮಾಗೆ ಹೊಸ ಸೇರ್ಪಡೆ. ಅದು ಬಿಟ್ಟರೆ ದೃಶ್ಯದಲ್ಲಿರುವ ಕಲಾವಿದರೇ ಈ ಸಿನಿಮಾದಲ್ಲೂ ಮುಂದುವರೆದಿದ್ದಾರೆ. ಹೀಗಾಗಿ ಇಂದು(ಡಿಸೆಂಬರ್ 10) ಬಿಡುಗಡೆ ಆಗಿರುವ ಸಿನಿಮಾ 'ದೃಶ್ಯ 2' ಪ್ರೇಕ್ಷಕರನ್ನು ಹೇಗೆ ಸೆಳೆಯುತ್ತೆ ಅನ್ನುವ ಕುತೂಹಲವಿದೆ.


Click it and Unblock the Notifications











