Toxic Vs Dhurandhar 2: 'ಟಾಕ್ಸಿಕ್'-'ಧುರಂಧರ್ 2' ಎರಡರ ಟೀಸರ್ ರಿಲೀಸ್ ಆಯ್ತು.. ಯಾವ ಸಿನಿಮಾಗಿದೆ ಕ್ರೇಜ್?
ಬಾಲಿವುಡ್ ಸಿನಿಮಾ 'ಧುರಂಧರ್' ಬಾಕ್ಸಾಫೀಸ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡುತ್ತಿದ್ದಂತೆ ಸದಾ ಸುದ್ದಿಯಲ್ಲಿದೆ. ಅದರಲ್ಲೂ ಇತ್ತೀಚೆಗೆ 'ಧುರಂಧರ್ 2' ಟೀಸರ್ ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾಗಳಲ್ಲಿ 'ಟಾಕ್ಸಿಕ್' ಹಾಗೂ 'ಧುರಂಧರ್ 2' ಇವೆರಡರಲ್ಲಿ ಯಾವ ಸಿನಿಮಾ ಗೆಲ್ಲಬಹುದು ಅನ್ನೋ ಲೆಕ್ಕಾಚಾರ ಹಾಕುವುದಕ್ಕೆ ಶುರು ಮಾಡಿದ್ದಾರೆ.
'ಟಾಕ್ಸಿಕ್' ಟೀಸರ್ ರಿಲೀಸ್ ಆಗುತ್ತಿದ್ದಂತೆ ಸಿನಿಮಂದಿಯ ಕಣ್ಣು ಅರಳಿಸಿತ್ತು. ಬೋಲ್ಡ್ ಟೀಸರ್ ಅನ್ನು ಎಕ್ಸ್‌ಪೆಕ್ಟ್ ಮಾಡದೇ ಇದ್ದ ಸಿನಿಪ್ರಿಯರಿಗಂತೂ ಶಾಕ್ ಆಗಿತ್ತು. ಕೆಲವು ಟೀಸರ್ ಬಗ್ಗೆ ಮೆಚ್ಚಿಕೊಂಡಿದ್ದರು. ಇನ್ನು ಕೆಲವರು ಟೀಕೆ ಮಾಡಿದ್ದರು. ಒಂದಿಷ್ಟು ಮಂದಿ ವಿವಾದಕ್ಕೆ ಕಾರಣವಾದರು. ಇವೆಲ್ಲ ಏನೇ ಆದರೂ 'ಟಾಕ್ಸಿಕ್' ಟೀಸರ್ ಇಂದಿಗೂ ಚರ್ಚೆಯಾಗುತ್ತಲೇ ಇದೆ. ಹೀಗಿರುವಾಗ 'ಧುರಂಧರ್ 2' ಮೇಲೆ ಎಲ್ಲರ ಕಣ್ಣು ಇತ್ತು.

'ಧುರಂಧರ್ 2' ಟೀಸರ್ 'ಟಾಕ್ಸಿಕ್'ಗೆ ಸರಿಯಾಗಿಯೇ ಟಕ್ಕರ್ ಕೊಡುತ್ತೆ ಎಂಬ ನಿರೀಕ್ಷೆಯಿತ್ತು. 'ಕೆಜಿಎಫ್ 2' ಬಾಕ್ಸಾಫೀಸ್ ದಾಖಲೆಯನ್ನು ಮುರಿಯುತ್ತಿದ್ದಂತೆ 'ಟಾಕ್ಸಿಕ್' Vs 'ಧುರಂಧರ್ 2' ಹೈಪ್ ಕ್ರಿಯೇಟ್ ಆಗಿತ್ತು. ಆದ್ರೀಗ 'ಧುರಂಧರ್ 2' ಟೀಸರ್ ನಿರಾಸೆಯನ್ನು ಹುಟ್ಟಿಸಿದೆ. ಸೋಶಿಯಲ್ ಮೀಡಿಯಾದಲ್ಲಿ 'ಧುರಂಧರ್ 2' ಟೀಸರ್ ಬಗ್ಗೆ ನೆಗೆಟಿವ್ ಕಮೆಂಟ್‌ಗಳು ಹರಿದಾಡುತ್ತಿವೆ. ಯಾಕೆ ಹೀಗಾಯ್ತು? ತೆರೆ ಮರೆಯಲ್ಲಿ ಏನು ನಡೀತಿದೆ? ತಿಳಿಯುವುದಕ್ಕೆ ಮುಂದೆ ಓದಿ.
ಸೋತು ಸೋತು ಸುಣ್ಣವಾಗಿದ್ದ ರಣ್‌ವೀರ್ ಸಿಂಗ್‌ಗೆ 'ಧುರಂಧರ್' ಎರಡನೇ ಇನ್ನಿಂಗ್ಸ್ ಎಂದು ನಿಸ್ಸಂದೇಹವಾಗಿ ಹೇಳಬಹುದು. ಈ ಮಟ್ಟಿಗೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಬಹುದೆಂದು ಸ್ವತ: ರಣ್‌ವೀರ್ ಸಿಂಗ್‌ಗೆ ಗೊತ್ತಿರಲಿಕ್ಕಿಲ್ಲ. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲುತ್ತಿದ್ದಂತೆ ಪಾರ್ಟ್ 2 ಅನ್ನು ಅನೌನ್ಸ್ ಮಾಡಿದರು. ಅದರಲ್ಲೂ 'ಟಾಕ್ಸಿಕ್' ಅನ್ನು ಗುರಿಯಾಗಿಟ್ಟುಕೊಂಡು ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದರು. ಇಲ್ಲಿಂದ ಎರಡು ಸಿನಿಮಾಗಳು ಪರಸ್ಪರ ಪೈಪೋಟಿಗೆ ಬಿದ್ದಿವೆ.

'ಟಾಕ್ಸಿಕ್'ಗೆ 'ಧುರಂಧರ್ 2' ಟಕ್ಕರ್ ಕೊಡಬಲ್ಲದೇ ಈ ಪ್ರಶ್ನೆಗೆ ಟೀಸರ್ ಉತ್ತರ ಕೊಡಬೇಕಿತ್ತು. ಆದರೆ, ಅದು ಆಗಿಲ್ಲ. 'ಧುರಂಧರ್ 2' ಟೀಸರ್‌ಗಾಗಿ ಕಾದು ಕೂತಿದ್ದವರಿಗೆ ನಿರಾಸೆಯಾಗಿದೆ. ಯಾಕಂದ್ರೆ, ಈ ಟೀಸರ್‌ನಲ್ಲಿ ಹೊಸದೇನು ಇರಲಿಲ್ಲ. 'ಧುರಂಧರ್' ಪಾರ್ಟ್ 1ರ ಕೊನೆಯಲ್ಲಿ ಬರುವ ತುಣುಕುಗಳಿಗೆ ಒಂದೆರಡು ದೃಶ್ಯ ಸೇರಿಸಿ ಟೀಸರ್ ಅಂತ ರಿಲೀಸ್ ಮಾಡಿದ್ದಾರೆ. ಹೀಗಾಗಿ ಇದು ಖಾಲಿ ಹೈಫ್ ಅಷ್ಟೇನಾ? ಇಲ್ಲ ಸಿನಿಮಾದಲ್ಲಿ ಏನಾದರೂ ಇದೆಯಾ? ಅನುಮಾನವನ್ನು ಹುಟ್ಟಾಕಿದೆ.
ರಣ್‌ವೀರ್ ಸಿಂಗ್ ಅಭಿಮಾನಿಗಳು 'ಧುರಂಧರ್ 2' ಟೀಸರ್ ನೋಡಿದ ಬಳಿಕ ಕಿಡಿಕಾರುತ್ತಿದ್ದಾರೆ. " ಈ ಟೀಸರ್‌ನಲ್ಲಿ ಹೊಸದೇನೂ ಇಲ್ಲ." ಎಂದು ಬಹುತೇಕ ಮಂದಿ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅದೇ ಇನ್ನೊಂದು ಕಡೆ " ಜನರನ್ನು ಸುಮ್ಮನೆ ಹೈಪ್ ಕ್ರಿಯೇಟ್ ಮಾಡಿ, ಮೋಸ ಮಾಡಲಾಗುತ್ತಿದೆ" ಎಂದು ಮತ್ತೆ ಇನ್ನೊಂದಿಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ. ಹೀಗಾಗಿ 'ಧುರಂಧರ್ 2' ಟೀಸರ್ ಸಿನಿಮಾಗೆ ಪಾಸಿಟಿವ್ ಆಗುವ ಬದಲು ನೆಗೆಟಿವ್ ಆಗುವುದಕ್ಕೆ ಶುರುವಾಗಿದೆ.
ಇನ್ನು 'ಟಾಕ್ಸಿಕ್' ಹಾಗೂ 'ಧುರಂಧರ್ 2' ಸಿನಿಮಾ ಜಿದ್ದಿಗೆ ಬಿದ್ದಿರುವುದಕ್ಕೆ ಮಾರ್ಚ್ 19ಕ್ಕೆ ಥಿಯೇಟರ್‌ಗೆ ಲಗ್ಗೆ ಇಡುವುದಕ್ಕೆ ಹೊರಟಿದ್ದ 'ಡಕಾಯಿತ್' ಫೋಸ್ಟ್‌ಪೋನ್ ಆಗಿದೆ. ಹಾಗೇ ಒಂದು ವಾರದ ಬಳಿಕ ರಿಲೀಸ್ ಆಗಬೇಕಿದ್ದ ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾ ಕೂಡ ಮುಂದಕ್ಕೆ ಹೋಗಿದೆ. ಹೀಗಾಗಿ ಸದ್ಯ ಅಖಾಡದಲ್ಲಿ ಈ ಎರಡು ಸಿನಿಮಾಗಳಿವೆ. ಎರಡೂ ಸಿನಿಮಾಗಳು ಹಿಂದೆ ಸರಿಯೋ ಮಾತಾಡುತ್ತಿಲ್ಲ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಈ ಎರಡು ಸಿನಿಮಾಗಳು ಸೆಣೆಸಾಡೋದು ಪಕ್ಕಾ. ಇನ್ನು ಗೆಲ್ಲೋದ್ಯಾರು ಅನ್ನೋದು ಮಾರ್ಚ್ 19ಕ್ಕೆ ಗೊತ್ತಾಗಲಿದೆ.


Click it and Unblock the Notifications











