ಏರ್ ಇಂಡಿಯಾ ವಿಮಾನ ದುರಂತಕ್ಕೆ ಹೃದಯ ಮೀಡಿದ ತಾರೆಯರು; "ಸಂತಾಪಕ್ಕೂ ಮೀರಿದ ದುರಂತ" ಎಂದ ಯಶ್
ಜೂನ್ 12 ಭಾರತಕ್ಕೆ ಮತ್ತೊಂದು ಕರಾಳ ದಿನ. ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಹಾರಾಟ ನಡೆಸಿದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ಭಾರತೀಯರು ಈ ದುರಂತವನ್ನು ಅರಿಗಿಸಿಕೊಳ್ಳುವುದಕ್ಕೆ ಕಷ್ಟ ಪಡುತ್ತಿದ್ದಾರೆ. ಈ ವಿಮಾನದಲ್ಲಿ ಸುಮಾರು 242 ಮಂದಿ ಪ್ರಯಾಣ ಮಾಡುತ್ತಿದ್ದರು. ಇದರಲ್ಲಿ ಭಾರತೀಯರು ಸೇರಿದಂತೆ ವಿದೇಶಿ ಪ್ರಯಾಣಿಕರು ಕೂಡ ಇದ್ದರು. ಈ ದುರಂತ ಜನರನ್ನು ಬೆಚ್ಚಿ ಬೀಳಿಸಿದೆ.
ಏರ್ ಇಂಡಿಯಾ ವಿಮಾನ ದುರಂತದ ವಿಷಯ ಹೊರ ಬೀಳುತ್ತಿದ್ದಂತೆ ವಿಶ್ವದಾದ್ಯಂತ ಜನರು ಸಾವನ್ನಪ್ಪಿದ ಕುಟುಂಬಗಳಿಗೆ ಸಂತಾಪವನ್ನು ಸೂಚಿಸುತ್ತಿದ್ದಾರೆ. ಇದೇ ವೇಳೆ ಸಿನಿಮಾ ತಾರೆಯರು ಕೂಡ ಈ ದುರಂತದ ಬಗ್ಗೆ ಮರುಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಕ್ಷಯ್ ಕುಮಾರ್, ವಿಜಯ್, ಅಲ್ಲು ಅರ್ಜುನ್, ಯಶ್, ರಾಧಿಕಾ ಪಂಡಿತ್, ರಶ್ಮಿಕಾ ಮಂದಣ್ಣ ರಮ್ಯಾ ಸೇರಿದಂತೆ ಹಲವು ಸೆಲೆಬ್ರೆಟಿಗಳು ಸಂತಾಪವನ್ನು ಸೂಚಿಸಿದ್ದಾರೆ. ಯಾರು ಏನೆಲ್ಲ ಹೇಳಿದ್ದಾರೆಂದು ತಿಳಿಯುವುದಕ್ಕೆ ಮುಂದೆ ಓದಿ?

"ಸಂತಾಪಕ್ಕೂ ಮೀರಿದ ದುರಂತ" ಯಶ್
ಯಶ್ ತನ್ನ ಎಕ್ಸ್ ಖಾತೆಯಲ್ಲಿ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಪ್ರಯಾಣಿಕರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
"ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತ ನಿಜಕ್ಕೂ ಭಯಾನಕ. ಈ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಎಲ್ಲಾ ಪ್ರಯಾಣಿಕರು, ಸಿಬ್ಬಂದಿಗಳು ಹಾಗೂ ಮುಗ್ಧ ಜೀವಗಳಿಗಾಗಿ ನನ್ನ ಹೃದಯ ಮಿಡಿಯುತ್ತಿದೆ. ಇದು ಸಂತಾಪ ಹೇಳುವುದನ್ನೂ ಮೀರಿದ ದುರಂತ. ಈ ದುರ್ಘಟನೆಯಿಂದ ನೊಂದಿರುವ ಎಲ್ಲಾ ಕುಟುಂಬಸ್ಥರಿಗೆ ನಾವು ಹೇಳುವ ಸಂತಾಪದ ಮಾತುಗಳು ಅವರ ನೋವನ್ನು ಕಡಿಮೆ ಮಾಡುವುದಿಲ್ಲ. ಹೀಗಿದ್ದರೂ, ನಾವು ನಿಮ್ಮೆ ಜೊತೆ ಇದ್ದೇವೆ. ನಮ್ಮ ಪ್ರಾರ್ಥನೆಗಳ ಮೂಲಕ ಆ ಕುಟುಂಬಗಳಿಗೆ ದು:ಖ ಭರಿಸುವ ಶಕ್ತಿ ನೀಡಲಿ" ಎಂದು ಯಶ್ ಸಂತಾಪ ಸೂಚಿಸಿದ್ದಾರೆ.
ರಾಧಿಕಾ, ರಶ್ಮಿಕಾ, ರಮ್ಯಾ ಹೇಳಿದ್ದೇನು?
"ಅಹಮದಾಬಾದ್‌ನ ವಿಮಾನ ಪತನದ ಸುದ್ದಿ ಕೇಳಿ ನನಗೆ ಶಾಕ್ ಆಗಿದೆ. ಪ್ರಯಾಣಿಕರು ಹಾಗೂ ಅವರ ಕುಟುಂಬಕ್ಕೆ ಪ್ರಾರ್ಥನೆಗಳನ್ನು ಸಲ್ಲಿಸುತ್ತೇನೆ" ಎಂದು ರಮ್ಯಾ ಹೇಳಿದ್ದಾರೆ. ಹಾಗೇ ರಾಧಿಕಾ ಪಂಡಿತ್ " ಏರ್ ಇಂಡಿಯಾ ವಿಮಾನದಲ್ಲಿ ಪ್ರತಿಯೊಬ್ಬ ಪ್ರಯಾಣಿಕರಿಗೂ, ಹಾಸ್ಟೆನಲ್ಲಿ ಸಿಕ್ಕಿಕೊಂಡಿದ್ದ ವಿದ್ಯಾರ್ಥಿಗಳಿಗೂ, ಕುಟುಂಬಗಳಿಗಾಗಿ ಪ್ರಾರ್ಥಿಸುವೆ. ಇಷ್ಟು ದೊಡ್ಡ ಮಟ್ಟದ ದುರಂತದಿಂದ ವಿಚಲಿತನಾಗಿದ್ದೇನೆ" ಎಂದು ರಾಧಿಕಾ ಪಂಡಿತ್ ಹೇಳಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ "ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದ ವಿಷಯವನ್ನು ಕೇಳಿ ಶಾಕ್ ಆಗಿದ್ದೇನೆ. ಪ್ರತಿ ದಿನ ವಿಮಾನದಲ್ಲಿ ಪ್ರಯಾಣ ಮಾಡುವ ನನಗೆ ಇಂತಹ ಘಟನೆಗಳು ಭಯವನ್ನು ಹುಟ್ಟಿಸುತ್ತಿವೆ. ವಿಮಾನದಲ್ಲಿದ್ದ ಪ್ರಯಾಣಿಕರು ಹಾಗೂ ಅವರ ಕುಟುಂಬಗಳಿಗೆ ನನ್ನ ಹೃದಯ ಮಿಡಿಯುತ್ತಿದೆ" ಎಂದಿದ್ದಾರೆ.

ಪ್ರಾರ್ಥನೆಯಷ್ಟೇ ಸಲ್ಲಿಸುತ್ತೇನೆ-ಅಕ್ಷಯ್ ಕುಮಾರ್
"ಏರ್ ಇಂಡಿಯಾ ದುರಂತ ಸುದ್ದಿ ಕೇಳಿ ಶಾಕ್ ಆಗಿದೆ. ನನಗೆ ಮಾತೇ ಬಾರದ ಹಾಗೆ ಆಗಿದೆ. ಈ ಸಮಯದಲ್ಲಿ ಕೇವಲ ಪ್ರಾರ್ಥನೆಯಷ್ಟೇ ಸಲ್ಲಿಸುವುದಕ್ಕೆ ಸಾಧ್ಯ" ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ಹೃದಯ ಚೂರಾಗಿದೆ- ಅಲ್ಲು ಅರ್ಜುನ್
"ಅಹಮದಾಬಾದ್ ಏರ್ ಇಂಡಿಯಾ ದುರಂತದಿಂದ ನನ್ನ ಹೃದಯ ಚೂರಾಗಿದೆ. ಈ ದುರಂತದಲ್ಲಿ ಪ್ರಾಣವನ್ನು ಕಳೆದುಕೊಂಡ ಪ್ರಯಾಣಿಕರ ಕುಟುಂಬಕ್ಕೆ ನನ್ನ ಸಂತಾಪಗಳನ್ನು ಸೂಚಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಇದು ಹೃದಯ ವಿದ್ರಾವಕ" ಎಂದು ಅಲ್ಲು ಅರ್ಜುನ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಅತೀವ ದು:ಖ ಕೊಟ್ಟಿದೆ- ದಳಪತಿ ವಿಜಯ್
"ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ 171 ದುರಂತದಿಂದ ಅತೀವ ದು:ಖ ಆಗಿದೆ. 242 ಪ್ರಯಾಣಿಗಳನ್ನು ಹೊತ್ತು ಸಾಗುತ್ತಿತ್ತು. ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳಿಗೆ ಹೃದಯದಿಂದ ಸಂತಾಪಗಳು. ದುರಂತದಲ್ಲಿ ಗಾಯಗೊಂಡವರು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ" ಎಂದು ದಳಪತಿ ವಿಜಯ್ ಎಕ್ಸ್‌ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.
ಪ್ರಾರ್ಥನೆ ಸಲ್ಲಿಸುತ್ತೇನೆ-ರಾಮ್ ಚರಣ್
"ಅಹಮದಾಬಾದ್‌ನಲ್ಲಿ ಆದ ವಿಮಾನ ದುರಂತ ಅತೀವ ದು:ಖವನ್ನು ತಂದಿದೆ. ಎಲ್ಲ ಪ್ರಯಾಣಿಕರಿಗಾಗಿ ನಾನು ಪ್ರಾರ್ಥನೆಗಳನ್ನು ಸಲ್ಲಿಸುತ್ತೇನೆ. ವಿಮಾನದಲ್ಲಿದ್ದ ಸಿಬ್ಬಂದಿಗಳು, ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪಗಳು" ಎಂದು ರಾಮ್ ಚರಣ್ ಹೇಳಿದ್ದಾರೆ.


Click it and Unblock the Notifications











