ಪುನೀತ್ ರಾಜ್‌ಕುಮಾರ್ ಜೊತೆ ಐಶ್ವರ್ಯಾ ರೈ ನಟಿಸಬೇಕಿತ್ತು: ಯಾವುದು ಆ ಸಿನಿಮಾ?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿದ ದಿನದಿಂದ ಅವರ ಬಗ್ಗೆ ಅವರ ಸಿನಿಮಾಗಳ ಬಗ್ಗೆ ಒಂದಲ್ಲ ಒಂದು ಅಚ್ಚರಿ ಎನಿಸುವ ಸುದ್ದಿಗಳು ಹೊರಬೀಳುತ್ತಲೇ ಇವೆ. ಅಪ್ಪು ನಟಿಸಿದ ಒಂದೊಂದು ಸಿನಿಮಾದ ಹಿಂದೆಯೂ ಒಂದೊಂದು ಕಥೆ ಇದೆ. ಇಂತಹದ್ದೊಂದು ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ. ಪುನೀತ್ ರಾಜ್‌ಕುಮಾರ್ ಜೊತೆ ಐಶ್ವರ್ಯಾ ರೈ ಬಚ್ಚನ್ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ, ಕೊನೆ ಕ್ಷಣದಲ್ಲಿ ಅದು ಕೈ ತಪ್ಪಿ ಹೋಗಿತ್ತು.
ಪುನೀತ್ ರಾಜ್‌ಕುಮಾರ್ ಅಭಿನಯದ 'ಅರಸು' ಸಿನಿಮಾದ ಕ್ಲೈಮ್ಯಾಕ್ಸ್ ಸೀನ್ ಅನ್ನು ಅದ್ಧೂರಿಯಾಗಿ ಚಿತ್ರೀಕರಿಸಲು ನಿರ್ದೇಶಕ ಮಹೇಶ್ ಬಾಬು ಪ್ಲ್ಯಾನ್ ಮಾಡಿದ್ದರು. ಅಪ್ಪು ಜೊತೆ ಎರಡನೇ ಸಿನಿಮಾ ನಿರ್ದೇಶಿಸುತ್ತಿದ್ದ ಮಹೇಶ್ ಬಾಬು ಥ್ರಿಲ್ ಆಗಿದ್ದರು. ಹೀಗಾಗಿ ಐಶ್ವರ್ಯಾ ರೈ ಬಚ್ಚನ್‌ರನ್ನು ಅತಿಥಿಯಾಗಿ ಕರೆದುಕೊಂಡು ಬರಬೇಕು ಯತ್ನಿಸಿದ್ದರು. ಕೊನೆಯ ಕ್ಷಣದಲ್ಲಿ ಕೈ ತಪ್ಪಿದ ಸಂಗತಿಯನ್ನು ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ.

'ಅರಸು' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಐಶ್ವರ್ಯಾ ರೈ
ಪುನೀತ್ ರಾಜ್‌ಕುಮಾರ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್‌ನ ಮೊದಲ ಸಿನಿಮಾ ಆಕಾಶ್ ಸೂಪರ್ ಡೂಪರ್ ಹಿಟ್ ಆಗಿತ್ತು. ಹೀಗಾಗಿ ಎರಡನೇ ಸಿನಿಮಾ 'ಅರಸು' ಇನ್ನೂ ಅದ್ಧೂರಿಯಾಗಿ ಚಿತ್ರೀಕರಿಸಲು ಪ್ಲ್ಯಾನ್ ಮಾಡಿದ್ದರು. ಕ್ಲೈಮ್ಯಾಕ್ ಸೀನ್‌ನಲ್ಲಿ ಐಶ್ವರ್ಯಾ ರೈ ನಟಿಸಬೇಕು ಎಂಬುದು ಚಿತ್ರತಂಡದ ಆಸೆಯಾಗಿತ್ತು. ಹೀಗಾಗಿ ಐಶ್ವರ್ಯಾ ರೈ ಕುಟುಂಬಕ್ಕೆ ಆತ್ಮೀಯರಾಗಿದ್ದ ಚಂದ್ರಶೇಖರ ಸ್ವಾಮಿಜಿ ಅವರಿಂದ ಸಂಪರ್ಕ ಮಾಡಿದ್ದರು. "ಈ ಸಿನಿಮಾಗೆ ಐಶ್ವರ್ಯಾ ರೈ ಅವರನ್ನು ಟ್ರೈ ಮಾಡಿದ್ದೆವು. ಅವರ ಪರಿಚಯದವರು ಚಂದ್ರಶೇಖರ ಸ್ವಾಮಿಜಿ ಅಂತ ಇದ್ದಾರೆ. ಐಶ್ವರ್ಯಾ ರೈ ತಂದೆ-ತಾಯಿಗೆ ಅವರಿಗೆ ತುಂಬಾನೇ ಆತ್ಮೀಯರಾಗಿದ್ದರು. ಅವರ ಕಡೆಯಿಂದ ಐಶ್ವರ್ಯ ರೈ ಅವರನ್ನು ಮಾತಾಡಿಸಿದ್ದೆವು. ಸ್ವಾಮಿಜಿಗಳೇ ನಾನು ಮಾತಾಡುತ್ತೇನೆ ಎಂದು ಫೋನ್ ಮಾಡಿದ್ದರು. " ಎಂದು ಆ ಸಂದರ್ಭವನ್ನು ನಿರ್ದೇಶಕ ಮಹೇಶ್ ಬಾಬು ನೆನಪಿಸಿಕೊಳ್ಳುತ್ತಾರೆ.

ಅಣ್ಣಾವ್ರೇ ಪೋನ್ ಮಾಡಿ ಹೇಳಿದ್ದರು
'ಅರಸು' ಸಿನಿಮಾ ಅತಿಥಿ ಪಾತ್ರಕ್ಕೆ ಐಶ್ವರ್ಯಾ ರೈ ಕರೆದುಕೊಂಡು ಬರುವ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಆಗ ಅಣ್ಣಾವ್ರೇ ಚಂದ್ರಶೇಖರ ಸ್ವಾಮಿಜಿಯವರ ಬಳಿಕ ಮಾತಾಡಿದ್ದರು. "ಅಪ್ಪಾಜಿ ಡಾ.ರಾಜ್‌ಕುಮಾರ್ ಅವರೇ ಚಂದ್ರಶೇಖರ ಸ್ವಾಮಿಜಿಯವರಿಗೆ ಫೋನ್ ಮಾಡಿ, ಐಶ್ವರ್ಯಾ ರೈ ಅವರ ಅರಸು ಸಿನಿಮಾದಲ್ಲಿ ಅತಿಥಿ ಪಾತ್ರಕ್ಕೆ ಬೇಕು ಕೇಳಿ ನೋಡಿ ಎಂದಿದ್ದರು. ಚಂದ್ರಶೇಖರ ಸ್ವಾಮಿಜಿಯವರಿಗೂ ಅಣ್ಣಾವ್ರ ಕುಟುಂಬಕ್ಕೆ ತೀರಾ ಹತ್ತಿರದ ಸಂಬಂಧವಿತ್ತು. ಹೀಗಾಗಿ ಅಣ್ಣಾವ್ರೇ ಸ್ವಾಮಿಜಿಗಳಲ್ಲಿ ಮನವಿ ಮಾಡಿಕೊಂಡಿದ್ದರು." ಅಂತಾರೆ ನಿರ್ದೇಶಕ ಮಹೇಶ್ ಬಾಬು.

'ಪ್ರವೋಕ್ಡ್' ಸಿನಿಮಾ ಬ್ಯುಸಿಯಾಗಿದ್ದ ಐಶ್
'ಅರಸು' ಸಿನಿಮಾಗೆ ಐಶ್ವರ್ಯ ರೈ ಅವರನ್ನು ಅಪ್ರೋಚ್ ಮಾಡಿದಾಗ, ಅವರು ಇಂಗ್ಲಿಶ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. "ಅವರು 'ಪ್ರವೋಕ್ಡ್' ಅನ್ನೋ ಸಿನಿಮಾ ಮಾಡುತ್ತಿದ್ದರು. ಆ ಸಿನಿಮಾದ ಡೇಟ್ ಕ್ಲ್ಯಾಶ್ ಆಗಿ ಸ್ವಲ್ಪ ಸಮಸ್ಯೆ ಆಯಿತು. ಅವರು ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ಶೂಟ್ ಮಾಡುತ್ತಿದ್ದರು. ನಾವು ಅಲ್ಲೇ ಬಂದು ಶೂಟ್ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದೇವು. ಆದರೆ, ಶೂಟ್ ಮಾಡಲು ಸಾಧ್ಯ ಆಗಲಿಲ್ಲ. ಮುಂದೆ ಯಾವುದೇ ಸಿನಿಮಾ ಇದ್ದರೂ ಮಾಡಿಸುತ್ತೇನೆ ಅಂತ ಅವರ ತಂದೆ ಹೇಳಿದ್ದರು." ಎನ್ನುತ್ತಾರೆ ಮಹೇಶ್ ಬಾಬು.

ಐಶ್ವರ್ಯಾ ರೈ ಬದಲು ಶ್ರೇಯಾ ಸರಣ್
ಅದೆಷ್ಟೇ ಪ್ರಯತ್ನ ಪಟ್ಟರೂ ಐಶ್ವರ್ಯಾ ರೈ ಡೇಟ್ ಮ್ಯಾಚ್ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಹೆಚ್ಚು ದಿನ ಅವರಿಗಾಗಿ ಕಾಯಲು ಸಾಧ್ಯವಿರಲಿಲ್ಲ. ಈ ಕಾರಣಕ್ಕೆ ಅಂದು ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿದ್ದ ಶ್ರೇಯಾ ಸರಣ್ ಅವರನ್ನು ಕರೆದುಕೊಂಡು ಬರಲಾಗಿತ್ತು. "ನಾವು ಐಶ್ವರ್ಯಾ ರೈ ಅವರಿಗೆ ಟ್ರೈ ಮಾಡಿದ್ದೆವು. ಆದರೆ, ಡೇಟ್ ಕ್ಲ್ಯಾಶ್ ಆಗುತ್ತಲೇ ಇತ್ತು. ಹೀಗಾಗಿ ಇನ್ನೂ ತಡ ಮಾಡಲು ಸಾಧ್ಯವಿಲ್ಲ ಎಂದಾಗ, ಬೇರೆಯವರನ್ನು ಹುಡುಕಲು ಹೊರಟೆವು. ಆಗ ಶ್ರೇಯಾ ಸರಣ್ ಶಿವಾಜಿ ಸಿನಿಮಾ ಮಾಡುತ್ತಿದ್ದರು. ಅವರು ತಂಬಾ ಪೀಕ್‌ನಲ್ಲಿ ಇದ್ದರು. ಆಗ ಶ್ರೇಯಾ ಸರಣ್ ಅವರನ್ನು ಕ್ಲೈಮ್ಯಾಕ್ಸ್ ಸೀನ್‌ಗೆ ಅತಿಥಿ ಪಾತ್ರಕ್ಕೆ ಪ್ಲ್ಯಾನ್ ಮಾಡಿ, ಕರೆದುಕೊಂಡು ಬಂದೆವು." ಎಂದು ಮಹೇಶ್ ಬಾಬು ಕ್ಲೈಮ್ಯಾಕ್ಸ್ ಸೀನ್ ಸೀಕ್ರೆಟ್ ಬಿಟ್ಟುಕೊಟ್ಟಿದ್ದಾರೆ.

ಕ್ಲೈಮ್ಯಾಕ್ಸ್‌ನಲ್ಲಿ ಅತಿಥಿಗಳ ಸಂಗಮ
'ಅರಸು' ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ತುಂಬಾನೇ ಇಷ್ಟ ಆಗಿತ್ತು. ಕತೆ ಅತಿಥಿಗಳನ್ನು ಡಿಮ್ಯಾಂಡ್ ಮಾಡಿತ್ತು. ಸ್ನೇಹ ಮತ್ತು ಪ್ರೀತಿಯ ಕತೆ ಹೇಳುತ್ತಿದ್ದ ಈ ಸಿನಿಮಾದಲ್ಲಿ ದರ್ಶನ್, ಆದಿತ್ಯ, ಶ್ರೇಯಾ ಸರಣ್ ಅತಿಥಿಗಳಾಗಿ ಬಂದು ನಟಿಸಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು.


Click it and Unblock the Notifications











