ಅಪಘಾತಕ್ಕೀಡಾದ ಗಾಯಾಳುಗಳಿಗೆ ಚಿಕಿತ್ಸೆ ನೀಡಿ ಗಮನ ಸೆಳೆದ ಅಜಯ್ ರಾವ್
ರಸ್ತೆ ಅಪಘಾತಕ್ಕೀಡಾದ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಕನ್ನಡ ನಟ ಅಜಯ್ ರಾವ್ ಮಾನವೀಯತೆ ಮೆರೆದಿದ್ದಾರೆ.
ವಿಜಯನಗರ ಜಿಲ್ಲೆಯ ಕೂಡ್ಗಿಗಿ ತಾಲೂಕಿನ ಕಾನಾಹೊಸಳ್ಳಿ ಗ್ರಾಮದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕಾರು ಅಪಘಾತಕ್ಕೆ ಒಳಪಟ್ಟಿದೆ. ಮೈಸೂರಿನಿಂದ ಹೊಸಪೇಟೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣದ ತಪ್ಪಿದ ಕಾರು ಪಲ್ಟಿಯಾಗಿದೆ.
ಇದೇ ವೇಳೆ ಹೊಸಪೇಟೆಯಿಂದ ಬೆಂಗಳೂರಿನ ಕಡೆ ಹೊರಟಿದ್ದ ನಟ ಅಜಯ್ ರಾವ್, ಈ ಅಪಘಾತವನ್ನು ಗಮನಿಸಿ ಕಾರು ನಿಲ್ಲಿಸಿದ್ದಾರೆ. ಈ ವೇಳೆ ಗಾಯಗೊಂಡವರಿಗೆ ತಮ್ಮ ಕಾರಿನಲ್ಲಿದ್ದ ಪ್ರಥಮ ಚಿಕಿತ್ಸೆಯ ಕಿಟ್ ತೆಗೆದುಕೊಂಡು ಬಂದು ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಅಷ್ಟೊತ್ತಿಗೆ ಸಾರ್ವಜನಿಕರು ಹಾಗೂ ಪಿಎಸ್‌ಐ ಗಾಯಾಳುಗಳ ಸಹಾಯಕ್ಕೆ ಧಾವಿಸಿದ್ದಾರೆ.

ನಟ ಅಜಯ್ ರಾವ್ ಅವರ ಈ ಕೆಲಸಕ್ಕೆ ಸ್ಥಳಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಲವ್ ಯೂ ರಚ್ಚು ಘಟನೆ
ಕಳೆದ ತಿಂಗಳು ಅಜಯ್ ರಾವ್ ಮತ್ತು ರಚಿತಾ ರಾಮ್ ನಟನೆ 'ಲವ್ ಯೂ ರಚ್ಚು' ಸಿನಿಮಾ ಚಿತ್ರೀಕರಣ ವೇಳೆ ಹೈ ಟೆನ್ಷನ್ ವೈರ್ ತಗುಲಿ ಸಾಹಸ ಕಲಾವಿದನೊಬ್ಬ ಮೃತಪಟ್ಟಿದ್ದ. ಈ ವೇಳೆ ಶೂಟಿಂಗ್ ಸ್ಥಳದಲ್ಲೇ ಇದ್ದರೂ ಗಾಯಾಳು ಸಹಾಯಕ್ಕೆ ಅಜಯ್ ರಾವ್ ಬರಲಿಲ್ಲ ಎಂದು ಮತ್ತೊಬ್ಬ ಕಲಾವಿದ ದೂರಿದ್ದರು. ಆದರೆ ಆ ಸಾಹಸ ಕಲಾವಿದನ ಆರೋಪ ನಿರಾಕರಿಸಿದ ಅಜಯ್ ರಾವ್, 'ತೋರ್ಪಡಿಕೆ ಮಾಡುವುದು ನನ್ನ ವ್ಯಕ್ತಿತ್ವವಲ್ಲ, ನಾನು ಏನು ಮಾಡಬೇಕು ಅದು ಮಾಡುತ್ತೇನೆ' ಎಂದಿದ್ದರು. ಈ ಕೇಸ್ ಸಂಬಂಧ ಪೊಲೀಸರ ಮುಂದೆ ಹಾಜರಾಗಿ ವಿಚಾರಣೆ ಸಹ ಎದುರಿಸಿದ್ದರು.
'ಕೃಷ್ಣ ಟಾಕೀಸ್' ಸಿನಿಮಾ ಕೊನೆಯದಾಗಿ ತೆರೆಕಂಡಿತ್ತು. ಸಂಜನಾ ಆನಂದ್ ಮತ್ತು ಅಜಯ್ ರಾವ್ ನಟನೆಯ 'ಶೋಕಿವಾಲ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. 'ಲವ್ ಯೂ ರಚ್ಚು' ಸಿನಿಮಾ ಶೂಟಿಂಗ್ ಹಂತದಲ್ಲಿದೆ.


Click it and Unblock the Notifications











