ಅಜಯ್ ದೇವಗನ್-ಸುದೀಪ್ ಟ್ವಿಟರ್ ವಾರ್‌ಗೆ ಪ್ರತಿಕ್ರಿಯಿಸುತ್ತಾರಾ ರಾಕಿ ಭಾಯ್?
ಕಿಚ್ಚ ಸುದೀಪ್ ಹಾಗೂ ಅಜಯ್ ದೇವಗನ್ ಇಬ್ಬರು ನಟರು ರಾಷ್ಟ್ರೀಯ ಭಾಷೆಯ ವಿಚಾರವಾಗಿ ಟ್ವಿಟರ್‌ನಲ್ಲಿ ಯುದ್ಧಕ್ಕೆ ಬಿದ್ದಿದ್ದರು. ಈ ಮೂಲಕ ಮತ್ತೆ ಹಿಂದಿ ರಾಷ್ಟ್ರೀಯ ಭಾಷೆ ಹೌದೇ ಅಲ್ಲವೇ ಎಂಬುದು ಚರ್ಚೆಗೆ ಬಂದಿದೆ. ಕಿಚ್ಚನ ಹೇಳಿಕೆಗೆ ತಿರುಗೇಟು ನೀಡಲು ಅಜಯ್ ದೇವಗನ್ ಮಾಡಿದ ಟ್ವೀಟ್‌ಗೆ ಸುದೀಪ್ ಕೂಡ ತಿರುಗೇಟು ನೀಡಿದ್ದರು.
ಇಬ್ಬರು ಸ್ಟಾರ್ ನಟರ ನಡುವಿನ ಈ ಟ್ವಿಟರ್ ವಾರ್ ಯಾವ ಮಟ್ಟಕ್ಕೆ ಹೋಗುತ್ತೆ ಅನ್ನೋದು ಆತಂಕ ಸೃಷ್ಟಿಸಿದೆ. ಅಜಯ್ ದೇವಗನ್ ಹಾಗೂ ಕಿಚ್ಚನ ಟ್ವಿಟರ್ ವಾರ್ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ರಾಜಕೀಯ ಮುಖಂಡರು, ಸಿನಿಮಾ ತಾರೆಯರು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಅಷ್ಟಕ್ಕೂ ಸುದೀಪ್ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಮಾತಾಡುವಾಗ 'ಹಿಂದಿ ರಾಷ್ಟ್ರೀಯ ಭಾಷೆಯಾಗಿ ಉಳಿದಿಲ್ಲ' ಅನ್ನುವ ವಿಚಾರ ಪ್ರಸ್ತಾಪಿದ್ದರು. " ಹಿಂದಿ ರಾಷ್ಟ್ರಭಾಷೆಯಾಗಿ ಉಳಿದಿಲ್ಲ. ಬಾಲಿವುಡ್‌ನವರು ನಾವು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದೇವೆ ಎಂದು ಹೇಳಬೇಕು. ಅವರು ತೆಲುಗು, ತಮಿಳು ಭಾಷೆಗಳಿಗೆ ಡಬ್ ಮಾಡುತ್ತಿದ್ದಾರೆ. ಏನೇನೋ ಸಾಹಸ ಮಾಡುತ್ತಿದ್ದು, ಹಿಂದಿಯವರು ಬಹಳ ಕಷ್ಟಪಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಎಂಬುದು ಹಿಂದಿ ಚಿತ್ರರಂಗದವರದ್ದು, ನಮ್ಮದಲ್ಲ. ನಾವು ಕೇವಲ ಸಿನಿಮಾ ಮಾಡುತ್ತಿದ್ದೇವೆ ಅಷ್ಟೇ. ಅದು ವಿಶ್ವದುದ್ದಕ್ಕೂ ರೀಚ್ ಆಗುತ್ತಿದೆ ಎಂದು'' ಸುದೀಪ್ ಹೇಳಿದ್ದರು. ಇದೇ ಮಾತು ಈಗ ವಿವಾದಕ್ಕೆ ಕಾರಣವಾಗಿದೆ.

ದಕ್ಷಿಣ ಚಿತ್ರರಂಗ ಸಮರ್ಥಿಸಿಕೊಳ್ಳುತ್ತಾ?
ಇಷ್ಟು ದಿನ ದಕ್ಷಿಣದ ಹಲವು ಸಿನಿಮಾಗಳು ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಅನ್ನೇ ಇಟ್ಟುಕೊಂಡು ಗೆದ್ದಿವೆ. ಕಮ್ಮಿ ಅಂದರೂ, ಐದು ಭಾಷೆಗಳಿಗೆ ಸಿನಿಮಾವನ್ನು ಡಬ್ ಮಾಡಿ ಬಿಡುಗಡೆ ಮಾಡಲಾಗಿದೆ. 'ಬಾಹುಬಲಿ', 'ಕೆಜಿಎಫ್', 'ಪುಷ್ಪ', 'RRR', ಸಿನಿಮಾಗಳಿಗೆ ದೇಶ ಅಲ್ಲ ವಿಶ್ವದಾದ್ಯಂತ ಸಿನಿಪ್ರಿಯರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾಗಳು ಕೋಟಿ ಕೋಟಿ ಲೂಟಿ ಮಾಡಿವೆ. ಇದರ ಹಿಂದಿನ ಉದ್ದೇಶ ಹಣ ಆಗಿದ್ದರೂ, ದಕ್ಷಿಣ ಭಾರತದ ಸಿನಿಮಾಗಳು ಅವರದ್ದೇ ಭಾಷೆಯ ತಲುಪಬೇಕು ಎಂಬುದಾಗಿತ್ತು. ಈ ಕಾರಣಕ್ಕೆ ಸುದೀಪ್ ಹೇಳಿಕೆಯನ್ನು ದಕ್ಷಿಣ ಭಾರತದ ಚಿತ್ರರಂಗ ಯಾವ ರೀತಿ ಸಮರ್ಥಿಸಿಕೊಳ್ಳುತ್ತೆ? ಕಿಚ್ಚ ಸುದೀಪ್‌ಗೆ ಬೆಂಬಲಕ್ಕೆ ಬರುವವರು ಯಾರು? ಅನ್ನೋದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಇವರಲ್ಲಿ ಕನ್ನಡಿಗರು ಯಶ್ ಏನು ಹೇಳಬಹುದು ಎಂದು ಎದುರು ನೋಡುತ್ತಿದ್ದಾರೆ.

ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್ ಏನಂತಾರೆ?
'ಐ ಯಾಮ್ ಆರ್' ಸಿನಿಮಾ ಟೈಟಲ್ ಲಾಂಚ್ ವೇಳೆ, ಕಿಚ್ಚ ಸುದೀಪ್ 'ಪುಷ್ಪ' ಹಾಗೂ 'ಕೆಜಿಎಫ್ 2' ಬಗ್ಗೆ ಮಾತಾಡಿದ್ದರು. ದಕ್ಷಿಣ ಭಾರತ ಉತ್ತಮ ಸಿನಿಮಾಗಳನ್ನು ನೀಡುತ್ತಿದೆ. ನಮ್ಮ ಭಾಷೆಯ ಸಿನಿಮಾ ಎಲ್ಲಾ ಕಡೆ ತಲುಪುತ್ತಿದೆ ಎಂದು ಹಾಡಿ ಹೊಗಳಿದ್ದರು. ಈ ವೇಳೆ ವಿವಾದ ಸೃಷ್ಟಿಯಾಗಿತ್ತು. ಅಜಯ್ ದೇವಗನ್ ಹಾಗೂ ಕಿಚ್ಚನ ನಡುವಿನ ಟ್ವಿಟರ್ ಯುದ್ಧ ಕನ್ನಡ ಚಿತ್ರರಂಗದ ಒಬ್ಬೊಬ್ಬ ತಾರೆಯರು ಬೆಂಬಲಕ್ಕೆ ನಿಂತಿದ್ದಾರೆ. ನೀನಾಸಂ ಸತೀಶ್, ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲೂ ಕನ್ನಡದ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಯಶ್ ಪ್ರತಿಕ್ರಿಯಿಸುತ್ತಾರಾ? ಯಶ್ ಹೇಳಿಕೆ ಏನಿರಬಹುದು? ಕಿಚ್ಚನ ಬೆಂಬಲಕ್ಕೆ ನೀಲ್ಲುತ್ತಾರಾ? ಅನ್ನೋದನ್ನು ಕನ್ನಡಿಗರು ಎದುರು ನೋಡುತ್ತಿದ್ದಾರೆ.

ಕನ್ನಡ ಹಾಗೂ ಬೇರೆ ಭಾಷೆ ಬಗ್ಗೆ ಯಶ್ ಏನಂದಿದ್ರು?
ಪ್ಯಾನ್ ಇಂಡಿಯಾ ಸಿನಿಮಾ ಮಾಡುವಾಗ ಇಂತಹ ಸಾಕಷ್ಟು ಪ್ರಶ್ನೆಗಳು ಎದುರಾಗುತ್ತವೆ. ಅವರವರ ಭಾಷೆ ಅವರಿಗೆ ಮುಖ್ಯ. ರಾಷ್ಟ್ರೀಯ ಮಾಧ್ಯಮ ಇಂಡಿಯಾ ಟುಡೇಗೆ ಸಂದರ್ಶನ ನೀಡುವಾಗ, ಯಶ್ ಈ ರೀತಿ ಪ್ರತಿಕ್ರಿಯೆ ನೀಡಿದ್ದರು. "ನಾನು ಯಾವಾಗಲೂ ಕನ್ನಡಿಗನೇ.. ಕನ್ನಡ ಸ್ಟಾರೇ.. ಆದರೆ, ಇಡೀ ದೇಶವನ್ನು ನಿಮ್ಮನ್ನು ನೋಡುತ್ತಿದ್ದು, ಅವರು ನಮ್ಮವರು ಎಂದು ಒಪ್ಪಿಕೊಂಡ ಮೇಲೆ ನೀವು ಒಂದು ಪ್ರದೇಶಕ್ಕೆ ಸೀಮಿತವಾಗಿರುವುದಿಲ್ಲ. ನಾನು ಯಾವಾಗಲೂ ಕನ್ನಡ ಸ್ಟಾರ್ ಆಗಿರಲು ಇಷ್ಟ ಪಡುತ್ತೇನೆ. ಇಂಡಿಯನ್ ಸಿನಿಮಾವೊಂದು ಕರ್ನಾಟಕದಿಂದ ಬಂದಿದೆ. ಕನ್ನಡದ ನಟನೊಬ್ಬನನ್ನು ಇಡೀ ದೇಶ ಒಪ್ಪಿಕೊಂಡಿದೆ ಎಂದು ಹೇಳಬಹುದು," ಎಂದು ಯಶ್ ಹೇಳಿದ್ದರು . ಹೀಗಾಗಿ ವಿವಾದಕ್ಕೆಕೊಳ್ಳದ ಕಿಚ್ಚನ ಹೇಳಿಕೆ ಬಗ್ಗೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಿರುವ ನಟ ಯಶ್ ಏನಾದರೂ ಪ್ರತಿಕ್ರಿಯೆ ನೀಡುತ್ತಾರಾ? ಅನ್ನುವ ಪ್ರಶ್ನೆ ಎದುರಾಗಿದೆ.

ಭಾರತೀಯ ಚಿತ್ರರಂಗ ಅಂದರೆ ಬಾಲಿವುಡ್ ಅಲ್ಲ
ಭಾರತೀಯ ಚಿತ್ರರಂಗ ಅಂದರೆ ಬಾಲಿವುಡ್ ಅಷ್ಟೇ ಅಲ್ಲ. ಬೇರೆ ಬೇರೆ ಭಾಷೆಯ ಸಿನಿಮಾಗಳೂ ಇವೆ. ಎಲ್ಲವೂ ಪ್ರಾದೇಶಿಕ ಸಿನಿಮಾಗಳು ಎಂಬುದು ದಕ್ಷಿಣ ಚಿತ್ರರಂಗದ ವಾದ. ಇದೇ ಮಾತನ್ನು ಮೆಗಾ ಚಿರಂಜೀವಿ ಕೂಡ ಇತ್ತೀಚೆಗೆ ದೆಹಲಿಯಲ್ಲಿ ಕಾರ್ಯಕ್ರಮವೊಂದಕ್ಕೆ ಭಾಗವಹಿಸಿದ್ದಾಗ ಹೇಳಿದ್ದರು. " ಕಾರ್ಯಕ್ರಮದಲ್ಲಿ ಹಿಂದಿ ಚಿತ್ರರಂಗವನ್ನು ಭಾರತೀಯ ಸಿನಿಮಾ ಎಂದು ಬಿಂಬಿಸಿದ್ಧರು. ಉಳಿದ ಸಿನಿಮಾಗಳನ್ನು ಪ್ರಾದೇಶಿಕ ಸಿನಿಮಾಗಳು ಎಂದು ವಿಂಗಡಣೆ ಮಾಡಲಾಗಿತ್ತು. ಭಾರತದ ಉಳಿದ ಭಾಷೆಯ ಸಿನೆಮಾಗಳಿಗೆ ಗೌರವವನ್ನು ನೀಡಿರಲಿಲ್ಲ" ಎಂದು ಚಿರಂಜೀವಿ ಬೇಸರ ವ್ಯಕ್ತಪಡಿಸಿದ್ದರು.


Click it and Unblock the Notifications











