ಮಲ್ಟಿಪ್ಲೆಕ್ಸ್ ವಿರುದ್ಧ ಯುದ್ಧ ಸಾರಿದ ಅಜಯ್ ರಾವ್; ವಿಡಿಯೋದಲ್ಲಿ ಹೇಳಿದ್ದೇನು?
ಅಜಯ್ ರಾವ್ ನಟಿಸಿ, ನಿರ್ಮಿಸಿರುವ 'ಯುದ್ಧಕಾಂಡ ಚಾಪ್ಟರ್ 2' ಸಿನಿಮಾ ಎರಡು ವಾರಗಳ ಹಿಂದಷ್ಟೇ ರಿಲೀಸ್ ಆಗಿತ್ತು. ಕನ್ನಡದಲ್ಲಿ ಬಹಳ ದಿನಗಳ ಬಳಿಕ ಕೋರ್ಟ್ ರೂಮ್ ಡ್ರಾಮವನ್ನು ತೆರೆಮೇಲೆ ತಂದಿದ್ದರು. ಅದರಲ್ಲೂ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ವಿರುದ್ಧ ಸಮರ ಸಾರುವ ಧ್ವನಿಯಾಗಿ ಸಿನಿಮಾ ಪ್ರತಿನಿಧಿಸಿತ್ತು.
'ಯುದ್ಧಕಾಂಡ 2' ಸಿನಿಮಾ ಬಿಡುಗಡೆಯಾದ ದಿನದಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಎರಡು ವಾರಗಳಿಂದ ಈ ಸಿನಿಮಾ ಮೌತ್ ಪಬ್ಲಿಸಿಟಿಯಿಂದಲೇ ಜನರು ಬಂದು ಸಿನಿಮಾವನ್ನು ನೋಡುತ್ತಿದ್ದರು. ಆದ್ರೀಗ ಈ ವಾರದಿಂದ ಸಿನಿಮಾವನ್ನು ಮಲ್ಟಿಪ್ಲೆಕ್ಸ್‌ನಿಂದ ಎತ್ತಂಗಡಿ ಮಾಡುವ ಸೂಚನೆ ಸಿಕ್ಕಿದೆ. ಅದಕ್ಕೆ ಕಾರಣ ಹೊಸದಾಗಿ ಬಿಡುಗಡೆಯಾಗುತ್ತಿರುವ ಪರಭಾಷೆಯ ಸಿನಿಮಾಗಳು.

ತಮ್ಮ ಸಿನಿಮಾವನ್ನು ಇದೇ ಗುರುವಾರದಿಂದ ಎತ್ತಂಗಡಿ ಮಾಡುತ್ತಿರುವ ಮಲ್ಟಿಪ್ಲೆಕ್ಸ್ ವಿರುದ್ಧ ಅಜಯ್ ರಾವ್ ಗುಡುಗಿದ್ದಾರೆ. ಈ ಸಂಬಂಧ ವಿಡಿಯೋ ಮಾಡಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಅಷ್ಟಕ್ಕೂ ಅಜಯ್ ರಾವ್ ವಿಡಿಯೋದಲ್ಲಿ ಏನಿದೆ? ಮಲ್ಟಿಪ್ಲೆಕ್ಸ್ ವಿರುದ್ಧ ಮತ್ತೆ ಸಿಡಿದೆದ್ದಿದ್ದೇಕೆ ಸಿನಿಮಾ ಮಂದಿ? 'ಯುದ್ಧಕಾಂಡ ಚಾಪ್ಟರ್ 2' ಕಲೆಕ್ಷನ್ ಹೇಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
'ಯುದ್ಧಕಾಂಡ 2'ಗೆ ರೆಸ್ಪಾನ್ಸ್ ಸಿಗುವುದಕ್ಕೆ ಶುರುವಾಗಿತ್ತು. ಮೌತ್ ಪಬ್ಲಿಸಿಟಿಯಿಂದ ಚಿತ್ರಮಂದಿರದ ಕಡೆಗೆ ಜನರು ಬರುತ್ತಿದ್ದರು. ಹೆಚ್ಚು ಕಡಿಮೆ ಎರಡು ವಾರಗಳಿಂದ ಈ ಸಿನಿಮಾದ ಕಲೆಕ್ಷನ್ ಸ್ಟಡಿಯಾಗಿಯೇ ಇತ್ತು. ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಆಗದೇ ಹೋದರೂ, ಲಕ್ಷಗಳಲ್ಲಿ ಆಗುತ್ತಿತ್ತು. ಒಂದೇ ರೀತಿಯ ಕಲೆಕ್ಷನ್ ಇದ್ದಿದ್ದರಿಂದ ಮುಂದಿನ ದಿನಗಳಲ್ಲಿ ಸಿನಿಮಾಗೆ ಜನರು ಬರಬಹುದು ಎಂಬ ನಂಬಿಕೆಯನ್ನು ಅಜಯ್ ರಾವ್ ಇಟ್ಟುಕೊಂಡಿದ್ದರು. ಆದ್ರೀಗ ಅಜಯ್ ರಾವ್‌ಗೆ ನಿರಾಸೆಯಾಗಿದೆ. ಅಷ್ಟಕ್ಕೂ ವಿಡಿಯೋದಲ್ಲಿ ಏನಿದೆ? ಅಂತ ನೋಡುವುದಾದರೇ..
"ಮೊದಲನೆಯದಾಗಿ ಯುದ್ಧಕಾಂಡ ಸಿನಿಮಾಗೆ ಅದ್ಭುತವಾದ ಪ್ರಶಂಸೆ, ಮೆಚ್ಚುಗೆ, ಅಪ್ಪುಗೆ ಕೊಟ್ಟಿದ್ದಕ್ಕೆ ನಿಮ್ಮೆಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು. ಆದರೆ, ಎಚ್ಚರಿಕೆ ಬಂದಂತಹ ವಿಚಾರದಲ್ಲಿ ಬೇಸರಗೊಂಡು ಈ ವಿಡಿಯೋ ಮಾಡುತ್ತಿದ್ದೇನೆ. ಅದೇನು ಅಂದರೆ, ನಮ್ಮ ಕರ್ನಾಟಕದಲ್ಲಿ, ಅದು ಬೆಂಗಳೂರಿನಲ್ಲಿ ಬಹುತೇಕ ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಸಿನಿಮಾಗಳಿಗೆ ಒಳ್ಳೆಯ ಶೋ ಟೈಮಿಂಗ್ಸ್ ಕೊಡಿ ಅಂತ ಭಿಕ್ಷೆ ಬೇಡುವಂತಹದ್ದು, ಹಾಗೂ ಅದನ್ನು ಕೊಡದೇ ಇರುವಂತಹದ್ದು ಮುಂಚೆಯಿಂದಲೂ ಬಂದಿರುವಂತಹ ಸಂಪ್ರದಾಯ. ಅನಾನುಕೂಲವಾದ ಶೋ ಟೈಮಿಂಗ್ಸ್ ಕೊಟ್ಟರೂ ಸಹ ನೋಡಿ ಯಶಸ್ಸು ಕೊಟ್ಟಿದ್ದಾರೆ" ಎಂದು ಹೇಳಿಕೊಂಡಿದ್ದಾರೆ.
"ಈಗ ವರ್ಡ್ ಆಫ್ ಮೌತ್ ಮೂಲಕ ನಮ್ಮ ಸಿನಿಮಾ ಬಗ್ಗೆ ಸ್ಪ್ರೆಡ್ ಆಗುವ ಸಮಯದಲ್ಲಿ ಮಲ್ಟಿಪ್ಲೆಕ್ಸ್ ಕಡೆಯಿಂದ ಒಂದು ಎಚ್ಚರಿಕೆ ಬಂದಿದೆ. ನಮ್ಮ ಕರ್ನಾಟಕದಲ್ಲಿ ಬಹುಬೇಡಿಕೆಯಲ್ಲಿ ಇರುವಂತಹ ಪರಭಾಷೆಯ ಸಿನಿಮಾಗಳು ಬರುತ್ತಿರುವುದರಿಂದ ಯುದ್ಧಕಾಂಡ ಸಿನಿಮಾದ ಶೋಗಳಿಗೆ ಕಡಿವಾಣ ಹಾಕಬೇಕಾಗುತ್ತೆ. ಹಾಗಾಗಿ ಮಾಡುತ್ತೇವೆ ಎಂದು ಹೇಳುತ್ತಿರೋದು. ಅವರು ಕೊಡುವಂತಹ ಶೋಗಳು, ಶೋ ಟೈಮಿಂಗ್ಸ್ ಅನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸಿಬೇಕಾ? ಇದಕ್ಕೆ ಪರಿಹಾರವೇನು? ಕನ್ನಡಪರ ಹೋರಾಟದ ಸಂಘಟನೆಗಳು ನನ್ನ ಈ ಪ್ರಶ್ನೆಗೆ ಕೈ ಜೋಡಿಸಿ, ಉತ್ತರ ಹಾಗೂ ಪರಿಹಾರ ಸಿಗುವ ನಿಟ್ಟಿನಲ್ಲಿ ವಿಚಾರ ಮಾಡಬೇಕು ಎಂದು ಕಳಕಳಿಯಿಂದ ಬೇಡಿಕೊಳ್ಳುತ್ತೇನೆ" ಎಂದು ಈ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಸ್ಯಾಕ್ನಿಲ್ಕ್ ಪ್ರಕಾರ, ಯುದ್ಧಕಾಂಡ 2 ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಏರಿಕೆಯಾಗಿದೆ. ವೀಕೆಂಡ್‌ನಲ್ಲಿ 85 ಲಕ್ಷ ರೂಪಾಯಿವರೆಗೂ ಕಲೆಕ್ಷನ್ ಆಗಿದೆ. ಶನಿವಾರ ಹಾಗೂ ಭಾನುವಾರ ಈ ಎರಡು ದಿನಗಳಲ್ಲಿ ಕಲೆಕ್ಷನ್ ಏರಿಕೆಯಾಗಿದ್ದರೂ, ಮಲ್ಟಿಪ್ಲೆಕ್ಸ್‌ನಲ್ಲಿ ಈ ಸಿನಿಮಾವನ್ನು ಎತ್ತಂಗಡಿ ಮಾಡಿದ್ದಕ್ಕೆ ನಟ ಹಾಗೂ ನಿರ್ಮಾಪಕ ಅಜಯ್ ರಾವ್ ವಿರೋಧ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ಹೋಗುತ್ತೆ ಅನ್ನೋದನ್ನು ನೋಡಬೇಕಿದೆ.


Click it and Unblock the Notifications











