"ಒಂಟಿಯಾಗಿದ್ದಾಗ ದಿಂಬಿನ ಕೆಳಗೆ ಹುಡುಗಿ ಫೋಟೋ ಇಟ್ಕೊಂಡು ಮಲಗೋರು"; ಹಳೆ ಕಾಲದ ಪ್ರೀತಿ ನೆನೆದ ಅಜಯ್ ರಾವ್
ಪ್ರೇಮಿಗಳ ದಿನ ಬಂತು ಅಂದ್ರೆ, ಸಿನಿಮಾ ಮಂದಿಗೆ ಹಬ್ಬ. ಆ ಟೈಮ್‌ನಲ್ಲಿ ಒಂದಲ್ಲ ಒಂದು ಸಿನಿಮಾ ರಿಲೀಸ್ ಮಾಡೋಕೆ ತುದಿಗಾಲಲ್ಲಿ ನಿಂತಿರುತ್ತಾರೆ. ಒಳ್ಳೆಯ ಲವ್ ಸ್ಟೋರಿಯನ್ನು ಪ್ರೇಕ್ಷಕರಿಗೆ ತೋರಿಸಬೇಕು ಅಂತ ಆಸೆ ಪಟ್ಟಿರುತ್ತಾರೆ. ಇತ್ತ ಯುವ ಪ್ರೇಮಿಗಳು ಕೂಡ ಇಂತಹ ಸಿನಿಮಾಗಳಿಗಾಗಿಯ ಕಾಯುತ್ತಿರುತ್ತಾರೆ. ಈ ವರ್ಷ ಸ್ಯಾಂಡಲ್‌ವುಡ್ ಕೃಷ್ಣ ಅಜಯ್ ರಾವ್ ನಟನೆಯ 'ಸರಳ ಸುಬ್ಬರಾವ್' ಪ್ರೇಮಿಗಳ ದಿನಕ್ಕೂ ಮುನ್ನವೇ ರಿಲೀಸ್ ಆಗುತ್ತಿದೆ.
'ಶ್ರಾವಣಿ ಸುಬ್ರಮಣ್ಯ'ದಂತಹ ಕಾಮಿಡಿ ಲವ್ ಸ್ಟೋರಿಯನ್ನು ನಿರ್ದೇಶಿಸಿದ್ದ ಮಂಜು ಸ್ವರಾಜ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಕಥೆ 1970ರ ದಶಕದಲ್ಲಿ ನಡೆಯುತ್ತೆ. ಇತ್ತೀಚೆಗೆ ಮಂಜು ಸ್ವರಾಜ್ ನೀಡಿರುವ ಸಂದರ್ಶನದಲ್ಲಿ ಇದೊಂದು 70ರ ದಶಕದ ಪ್ಯೂರ್ ಲವ್ ಸ್ಟೋರಿ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಈ ಲವ್ ಸ್ಟೋರಿ ಸಿನಿಮಾ ಪ್ರೇಮಿಗಳಿಗೆ ಹಬ್ಬ ಅಂತಲೇ ಹೇಳಬಹುದು.

ಇದೇ ಸಿನಿಮಾ ಬಗ್ಗೆ ಅಜಯ್ ರಾವ್ ಫಿಲ್ಮಿಬೀಟ್ ಕನ್ನಡಕ್ಕೆ ಸಂದರ್ಶನದಲ್ಲಿಯೂ ಮಾತಾಡಿದ್ದಾರೆ. ಭಗ್ನ ಪ್ರೇಮಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಂಡರೇ ಜನರು ಇಷ್ಟ ಪಡುವುದು ಯಾಕೆ? ಅವರಿಗೆ ಎಂತಹ ಪಾತ್ರಗಳನ್ನು ಮಾಡುವುದಕ್ಕೆ ಇಷ್ಟ? ಹಿಂದಿನ ಕಾಲದ ಪ್ರೀತಿ ಹೇಗಿತ್ತು? ಈಗಿನ ಕಾಲದ ಪ್ರೀತಿ ಹೇಗಿದೆ? ಅನ್ನೋ ಬಗ್ಗೆನೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
'ಸರಳ ಸುಬ್ಬರಾವ್' 70 ದಶಕದಲ್ಲಿ ನಡೆಯುವ ಪ್ರೇಮ ಕಥೆ. ಇದರಲ್ಲಿ ಅಜಯ್ ರಾವ್ ಹಾಗೂ ಮಿಶಾ ನಾರಂಗ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆ ಕಾಲದಲ್ಲಿ ಪ್ರೀತಿ ಹೇಗಿತ್ತು? ಪ್ರೀತಿಯ ಪ್ರಾಮುಖ್ಯತೆ ಹೇಗಿತ್ತು? ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಈ ಸಿನಿಮಾದ ತಿರುಳು ಕೂಡ ಅದೇ ಆಗಿದ್ದರಿಂದ 'ಸರಳ ಸುಬ್ಬರಾವ್' ಈ ಕಾರಣಕ್ಕೆ ಪ್ರೇಮಿಗಳಿಗೆ ಇಷ್ಟ ಆಗಬಹುದು.
ಅದಕ್ಕೆ 70ರ ದಶಕದ ಪ್ರೀತಿ ಹೇಗಿತ್ತು ಅಂತ ಹೇಳಿಕೊಂಡಿದ್ದಾರೆ. "ಯೋಚನೆ ಮಾಡಿ ಆಗ ಒಂದು ಪಾಸ್‌ಪೋರ್ಟ್ ಸೈಜ್ ಫೋಟೋ ಸಿಕ್ಕರೂ ಜೋಪಾನವಾಗಿ ಇಟ್ಟುಕೊಂಡಿರೋರು. ಅವರು ಒಂಟಿಯಾಗಿ ಇದ್ದಾಗ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗೋರು. ತನ್ನ ಹುಡುಗಿ ಹೇಗಿದ್ದಾಳೆ? ಏನು ಮಾಡುತ್ತಿದ್ದಾಳೋ? ಅಂತ ಅವರದ್ದೇ ಕಲ್ಪನೆಯಲ್ಲಿ ಮುಳುಗಿರುತ್ತಿದ್ದರು. ಮತ್ತೆ ಯಾವ ಸಿಗ್ತಾಳೋ? ಅನ್ನೋ ತಳಮಳ ಇರೋದು. ಈಗ ಮೊಬೈಲ್ ಬಂದ್ಮೇಲೆ ಸೆಲ್ಫಿಗಳು ಬಂದು ಮೌಲ್ಯಗಳು ಅನ್ನೋದು ಹೋಗಿದೆ ಅಷ್ಟೆ" ಎಂದು ಅಜಯ್ ರಾವ್ ಹೇಳಿದ್ದಾರೆ.
ಹಾಗೇ ಮಾಡರ್ನ್ ಲವ್ ಬಗ್ಗೆನೂ ಮಾತಾಡಿದ್ದಾರೆ. "ಈಗ ಬೇರೆ ಡೇಟಿಂಗ್ ಆಪ್‌ಗಳು ಬಂದಿದ್ದಾವೆ. ಅಲ್ಲೇ ಡ್ರಾ.. ಅಲ್ಲೇ ಬಹುಮಾನ. ಈ ಸಿನಿಮಾದಲ್ಲಿ ಪ್ರೀತಿ ಅನ್ನೋದು ಎಷ್ಟು ಚೆನ್ನಾಗಿತ್ತು. ಆದರ ಮೌಲ್ಯಗಳನ್ನು ಹೇಳಲಾಗಿದೆ. ಇಡೀ ಸಿನಿಮಾದಲ್ಲಿ ಸರಳರನ್ನು ಅಷ್ಟೇ ಪ್ರೀತಿಸುತ್ತಾನೆ. ಗರ್ಭಿಣಿಯಾಗಿದ್ದಾಗ ಇಡೀ ಬಾಣಂತನವನ್ನು ಮಾಡುತ್ತಾನೆ. ಅಂತಹ ನೆನಪುಗಳನ್ನು ಈ ಸಿನಿಮಾದಿಂದ ತೆಗೆದುಕೊಂಡು ಹೋಗುತ್ತಾರೆ." ಎನ್ನುತ್ತಾರೆ ಅಜಯ್ ರಾವ್.
ಇನ್ನು ಅಜಯ್ ಸಿನಿಮಾಗಳಲ್ಲಿ ಭಗ್ನ ಪ್ರೇಮಿಯಾಗಿ ಕಂಡರೆ ಮಾತ್ರ ಸಿನಿಮಾ ಗೆಲ್ಲುತ್ತೆ ಅನ್ನೋ ಮಾತುಗಳು ಆಗಾಗ ಕೇಳಿಬರುತ್ತವೆ. ಅದಕ್ಕೂ ಪ್ರತಿಕ್ರಿಯಿಸಿದ್ದಾರೆ. "ಹೌದು, ನನ್ನ ಭಗ್ನ ಪ್ರೇಮಿಯಾಗಿ ನೋಡುವವರು ಇನ್ನೂ ಇದ್ದಾರೆ. ಆ ಇಮೇಜ್‌ನಿಂದ ಹೊರ ಬರೋದು ಕಷ್ಟ. ಆದರೆ, ಈಗ ಆಡಿಯನ್ಸ್ ಕೂಡ ಪ್ರಬುದ್ಧರಾಗಿರುತ್ತಾರೆ. ಅವರಲ್ಲೂ ಬದಲಾವಣೆ ಬೇಕು ಅಂತ ಅನಿಸೋರೂ ಇದ್ದಾರೆ. ಆದರೆ, ಒಬ್ಬ ಕಲಾವಿದನಾಗಿ ಇದನ್ನು ಮಾಡಬಲ್ಲ ಅನ್ನೋ ನಂಬಿಕೆ ಹುಟ್ಟಿಸಬಹುದು. ಆದರೆ, ಇಮೇಜ್ ಬದಲಾವಣೆ ಮಾಡೋದು ತಪ್ಪೂ ಆಗುತ್ತೆ.. ಕಷ್ಟನೂ ಆಗುತ್ತೆ." ಎಂದಿದ್ದರೆ.


Click it and Unblock the Notifications











