ತರುಣ್ ಸುಧೀರ್ ಜೊತೆ ಸಪ್ತಪದಿ ತುಳಿದ ಸೋನಾಲ್ ಮಾಂಥೆರೋ; ಹೇಗಿತ್ತು ಸ್ಯಾಂಡಲ್‌ವುಡ್ ಜೋಡಿಯ ಮದುವೆ?
ಸ್ಯಾಂಡಲ್‌ವುಡ್‌ನ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮಾಂಥೆರೋ ಮದುವೆ ಅದ್ಧೂರಿಯಾಗಿ ನಡೆದಿದೆ. ನಿನ್ನೆ (ಆಗಸ್ಟ್ 10) ತರುಣ್ ಸುಧೀರ್ ಹಾಗೂ ಸೋನಾಲ್ ಆರತಕ್ಷತೆ ಸಮಾರಂಭ ನಡೆದಿತ್ತು. ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಈ ಸಮಾರಂಭಕ್ಕೆ ಆಗಮಿಸಿ, ನವ ಜೋಡಿಗೆ ಆಶೀರ್ವಾದ ಮಾಡಿದ್ದರು. ಇಂದು (ಆಗಸ್ಟ್ 11) ಈ ಜೋಡಿ ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಆಗಸ್ಟ್ 11 ಈ ಜೋಡಿಗೆ ವಿಶೇಷ ದಿನ. ಯಾಕಂದ್ರೆ, ನಟಿ ಸೋನಾಲ್ ಮಾಂಥೆರೋಗೆ ಎರಡೆರಡು ಸಂಭ್ರಮ. ಒಂದ್ಕಡೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅದೇ ಇನ್ನೊಂದು ಕಡೆ ಮದುವೆ ದಿನವೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಎರಡೂ ಸಂಭ್ರಮಗಳು ಒಂದೇ ದಿನ ಬಂದಿರುವುದು ಸೋನಾಲ್ ಮಾಂಥೆರೋಗೆ ನಿಜಕ್ಕೂ ಸ್ಪೆಷಲ್.

ತರುಣ್ ಸುಧೀರ್ ಉತ್ತರ ಕರ್ನಾಟಕ ಮೂಲದವರಾಗಿದ್ದರೂ ನೆಲೆಸಿರುವುದು ಬೆಂಗಳೂರಿನಲ್ಲಿ. ಸೋನಾಲ್ ಮಾಂಥೆರೋ ಅಪ್ಪಟ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಮಂಗಳೂರು ಹುಡುಗಿ. ಆದರೂ, ಮೊದಲು ಹಿಂದೂ ಸಂಪ್ರದಾಯದಂತೆ ತರುಣ್ ಸುಧೀರ್ ಹಾಗೂ ಸೋನಾಲ್ ಮಾಂಥೆರೋ ನಡೆದಿದೆ. ಬೆಳಗ್ಗೆ 10.50 ರಿಂದ 11.35ರ ಒಳಗಿನ ತುಲಾ ಲಗ್ನದಲ್ಲಿ ಈ ಮದುವೆ ನಡೆದಿದೆ. ಎರಡೂ ಕಡೆಯ ಕುಟುಂಬಸ್ಥರು ಹಾಗೂ ಆಪ್ತರು ಈ ಸೆಲೆಬ್ರಿಟಿ ಮದುವೆಗೆ ಸಾಕ್ಷಿಯಾಗಿದ್ದಾರೆ.
ಸೋನಾಲ್ ಮಾಂಥೆರೋ ಅವರನ್ನು ಮದುವೆ ಮಂಟಪಕ್ಕೆ ಕರೆದುಕೊಂಡು ಬಂದಿದ್ದು ವಿಶೇಷವಾಗಿತ್ತು. ಮದುವೆ ಮಂಟಪಕ್ಕೆ ಹೂವಿನ ಹಾಸು ಹಾಕಲಾಗಿತ್ತು. ಆ ಹಾಸಿನ ಮೂಲವೇ ಎಂಟ್ರಿ ಕೊಟ್ಟ ಸೋನಾಲ್ ಮಾಂಥೆರೋ ಅವರನ್ನು ಆರತಿ ಬೆಳಗಿ ಬರಮಾಡಿಕೊಳ್ಳಲಾಗಿತ್ತು. ಪಕ್ಕಾ ಟ್ರೆಡಿಷನಲ್ ಲುಕ್‌ನಲ್ಲಿ ಸೀರೆಯುಟ್ಟು ಅಪ್ಪಟ ಹಿಂದೂ ಮಹಿಳೆಯಂತೆ ಸೋನಾಲ್ ಕಾಣಿಸಿಕೊಳ್ಳುತ್ತಿದ್ದರು.

ತರುಣ್ ಸುಧೀರ್ ಕೂಡ ಗೋಲ್ಡನ್ ಕಲರ್ ಥೀಮ್‌ನಲ್ಲಿ ಕಚ್ಚೆ ಪಂಚೆ ಹಾಗೂ ಶರ್ಟ್ ಧರಿಸಿದ್ದರು. ಹಾಗೇ ಕೆಂಪು ಬಣ್ಣದ ಪೇಟವನ್ನು ಧರಿಸಿದ್ದರು. ಇತ್ತ ಸೋನಾಲ್ ಮಾಂಥೆರೋ ಕೂಡ ಗೋಲ್ಡನ್ ಕಲರ್ ಬಣ್ಣದ ಸೀರೆಯುಟ್ಟಿದ್ದರು. ಮುಹೂರ್ತ ಮುಗಿಯುವುದರೊಳಗೆ ನಟಿ ಸೋನಾಲ್ ಮಾಂಥೆರೋಗೆ ಪುರೋಹಿತರು ಹೇಳಿಕೊಟ್ಟಂತೆ ತರುಣ್ ಸುಧೀರ್ ತಾಳಿ ಕಟ್ಟಿದ್ದರು. ಈ ಸಂದರ್ಭದಲ್ಲಿ ಎರಡೂ ಕುಟುಂಬದ ಗಣ್ಯರ ಉಪಸ್ಥತಿ ಇತ್ತು.
ಬೆಂಗಳೂರಿನ ಕೆಂಗೇರಿ ಸಮೀಪವಿರುವ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ತರುಣ್ ಮತ್ತು ಸೋನಲ್ ಮದುವೆ ನಡೆದಿದೆ. ಎರಡೂ ಕಡೆಯ ಕುಟುಂಬಗಳ ಜೊತೆ ಸ್ಯಾಂಡಲ್‌ವುಡ್‌ನ ತಾರೆಯರ ಉಪಸ್ಥಿತಿ ಕೂಡ ಇತ್ತು. ಹಿರಿಯ ನಟಿ ಶ್ರುತಿ ತಾಳಿ ಕಟ್ಟುವ ವೇಳೆ ಮಂಟಪದಲ್ಲಿ ಕಾಣಿಸಿಕೊಂಡಿದ್ದರು. ಮದುವೆಗೆ ತೆಲುಗಿನ ಹಿರಿಯ ನಟ ಜಗಪತಿ ಬಾಬು ಕೂಡ ಆಗಮಿಸಿ ಈ ಮದುವೆಗೆ ಮತ್ತಷ್ಟು ಮೆರುಗು ನೀಡಿದ್ದಾರೆ.
ನಿನ್ನೆ (ಆಗಸ್ಟ್ 10) ನಡೆದ ಆರತಕ್ಷತೆ ಸಮಾರಂಭದಲ್ಲೂ ಕನ್ನಡ ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ಮುಖಂಡರು ಆಗಮಿಸಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನಾದಬ್ರಹ್ಮ ಹಂಸಲೇಖ, ಅನಿರುದ್ಧ್, ರಾಕ್‌ಲೈನ್‌ವೆಂಕಟೇಶ್, ಮಾಲಾಶ್ರೀ, ಕೆ.ಮಂಜು ಸೇರಿದಂತೆ ಹಲವು ಗಣ್ಯರು ಆಗಮಿಸಿ, ಶುಭ ಕೋರಿದ್ದಾರೆ. ಇಂದು (ಆಗಸ್ಟ್ 11) ಕೂಡ ಮದುವೆಗೆ ಅನೇಕ ಗಣ್ಯರು ಬಂದು ಶುಭ ಹಾರೈಸಲಿದ್ದಾರೆ.


Click it and Unblock the Notifications











