ಬೆಂಗಳೂರಿನ ಕೆಜಿ ರಸ್ತೆಯಲ್ಲಿ 'ಪುಷ್ಪ 2'ಗೆ 3 ಥಿಯೇಟರ್ ಬ್ಲಾಕ್; ಕನ್ನಡ ಸಿನಿಮಾಗಳಿಗೂ ಸಿಗಲ್ಲ ಇಷ್ಟೊಂದು ಚಿತ್ರಮಂದಿರ
ಬೆಂಗಳೂರು: ಒಂದು ಕಾಲದಲ್ಲಿ ಕನ್ನಡ ಸಿನಿಮಾಗಳಿಗಂತಲೇ ಮೀಸಲಿದ್ದ ಚಿತ್ರಮಂದಿರಗಳು ಇಂದು ಪರಭಾಷೆಯ ಪಾಲಾಗುತ್ತಿವೆ. ಬೆಂಗಳೂರಿನ ಕೆಜಿ ರಸ್ತೆಯಲ್ಲಿ ಸರದಿ ಸಾಲಿನಲ್ಲಿ ಇರುತ್ತಿದ್ದ ಚಿತ್ರಮಂದಿರಗಳು ಈಗ ಒಂದೊಂದಾಗೇ ಕಾಣೆಯಾಗುತ್ತಿದೆ. ಆದರೂ, ಕೆಲವೇ ಚಿತ್ರಮಂದಿರಗಳು ಇನ್ನೂ ಉಳಿದುಕೊಂಡಿವೆ. ಅವುಗಳಲ್ಲಿ ನರ್ತಕಿ, ಸಂತೋಷ್, ತ್ರಿವೇಣಿ ಹಾಗೂ ಅನುಪಮಾ ಪ್ರಮುಖ ಚಿತ್ರಮಂದಿರಗಳು.
ಕನ್ನಡದ ಸ್ಟಾರ್ ನಟರು ಇವುಗಳನ್ನು ಮಾತ್ರ ಪ್ರಮುಖ ಚಿತ್ರಮಂದಿರಗಳನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಸಂತೋಷ್ ಹಾಗೂ ನರ್ತಿಕಿ ಚಿತ್ರಮಂದಿರಗಳು ಕನ್ನಡ ನಟರ ಹಾಗೂ ನಿರ್ಮಾಪಕರ ಮೊದಲ ಆಯ್ಕೆ ಆಗಿರುತ್ತೆ. ಕೆಜೆ ರಸ್ತೆಯಲ್ಲಿರುವ ಪ್ರಮುಖ ಚಿತ್ರಮಂದಿರಗಳಲ್ಲಿ ಕನ್ನಡದ ಸ್ಟಾರ್ ಸಿನಿಮಾ ಅಕ್ಕ ಪಕ್ಕ ಇರುವ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದು ತೀರಾ ವಿರಳ.

ಆದರೆ, ಅಲ್ಲು ಅರ್ಜುನ್ ನಟಿಸಿದ ತೆಲುಗು ಸಿನಿಮಾ 'ಪುಷ್ಪ 2'ಗೆ ಇದೇ ಕೆಜಿ ರಸ್ತೆಯಲ್ಲಿ ಅಕ್ಕ ಪಕ್ಕದಲ್ಲಿರುವ ಮೂರು ಪ್ರಮುಖ ಚಿತ್ರಮಂದಿರಗಳು ಸಿಕ್ಕಿದೆ. ಈಗಾಗಲೇ ಜಾಹೀರಾತು ಕೂಡ ನೀಡಲಾಗಿದೆ. ಕನ್ನಡದ ಚಿತ್ರಗಳೇ ರಾರಾಜಿಸುತ್ತಿದ್ದ ಈ ಚಿತ್ರಮಂದಿರಗಳಲ್ಲಿ ಕನ್ನಡಿಗರೀಗ ಪರಭಾಷೆಯ ಸಿನಿಮಾವನ್ನು ನೋಡಬೇಕಾಗಿದೆ. 'ಪುಷ್ಪ 2' ವಿತರಕರು ಅಕ್ಕ ಪಕ್ಕದ ಚಿತ್ರಮಂದಿರಗಳಲ್ಲೇ ಯಾಕೆ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ? ಇವರ ಲೆಕ್ಕಚಾರವೇನು? ತಿಳಿಯಲು ಮುಂದೆ ಓದಿ.
ಕೆಜಿ ರಸ್ತೆಯ 3 ಥಿಯೇಟರ್‌ಗಳಲ್ಲಿ ರಿಲೀಸ್
ಅಲ್ಲು ಅರ್ಜುನ್ 'ಪುಷ್ಪ 2' ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಮೂರು ಪ್ರಮುಖ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಸಂತೋಷ್, ಅನುಪಮಾ ಹಾಗೂ ತ್ರಿವೇಣೆ. ಈಗಾಗಲೇ ಕರ್ನಾಟಕದ ವಿತರಕರು ಈ ಮೂರು ಚಿತ್ರಮಂದಿರಗಳನ್ನು ಬ್ಲಾಕ್ ಮಾಡಿಕೊಂಡಿದ್ದು, ಜಾಹೀರಾತನ್ನು ನೀಡಿದ್ದಾರೆ. ಹೀಗಾಗಿ ಅಕ್ಕ ಪಕ್ಕದ ಚಿತ್ರಮಂದಿರಗಳಲ್ಲಿ ಒಂದೇ ಸಿನಿಮಾ ಪ್ರದರ್ಶನ ಕಾಣಲಿದೆ.
ಅಕ್ಕ ಪಕ್ಕದಲ್ಲೇ ರಿಲೀಸ್ ಯಾಕೆ?
'ಪುಷ್ಪ 2' ಪ್ಯಾನ್ ಇಂಡಿಯಾ ಸಿನಿಮಾ. ತೆಲುಗು ಜೊತೆಗೆ ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆದಾಗ ಕರ್ನಾಟಕದಲ್ಲಿ ಹೆಚ್ಚಾಗಿ ತೆಲುಗು ಭಾಷೆಯ ಸಿನಿಮಾಗಳಲ್ಲಿ ಬಿಡುಗಡೆಯಾಗಿದ್ದೇ ಹೆಚ್ಚು. ಆದ್ರೀಗ ಮೂರು ಥಿಯೇಟರ್‌ಗಳಲ್ಲಿ ಮೂರು ಭಾಷೆಗಳಲ್ಲಿ ರಿಲೀಸ್ ಮಾಡುವುದಕ್ಕೆ ಪ್ಲ್ಯಾನ್ ನಡೆಯುತ್ತಿದೆ ಎನ್ನಲಾಗಿದೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ 'ಪುಷ್ಪ 2' ಒಂದೊಂದು ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಿದೆ ಅನ್ನೋದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ.

ಥಿಯೇಟರ್ ಸಂಖ್ಯೆ ಹೆಚ್ಚಿಸಿದ್ದೇಕೆ?
ಕರ್ನಾಟಕದ ವಿತರಣೆ ಹಕ್ಕುಗಳನ್ನು ಎನ್ ಸಿನಿಮಾಸ್ ಪಡೆದುಕೊಂಡಿದೆ. ದೊಡ್ಡ ಮೊತ್ತ ಕೊಟ್ಟ 'ಪುಷ್ಪ 2' ಖರೀದಿಸಿದ್ದು, ಕರ್ನಾಟಕದಲ್ಲಿ ದಾಖಲೆ ಕಲೆಕ್ಷನ್ ಮಾಡುವ ಗುರಿಯನ್ನು ಹೊಂದಿದೆ. ಈ ಕಾರಣಕ್ಕೆ ಹೆಚ್ಚು ಸಿನಿಮಾ ಮಂದಿರಗಳಲ್ಲಿ ರಿಲೀಸ್ ಮಾಡುವುದಕ್ಕೆ ನಿರ್ಧರಿಸಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಈಗಾಗಲೇ ಎನ್ ಸಿನಿಮಾಸ್ ಅವರಿಂದ ಬೇರೆ ಬೇರೆ ವಿತರಕರು ದೊಡ್ಡ ಮೊತ್ತ ಕೊಟ್ಟು ಖರೀದಿ ಮಾಡಿದ್ದರಿಂದ ಥಿಯೇಟರ್‌ಗಳ ಸಂಖ್ಯೆಯನ್ನು ಹೆಚ್ಚಾಗಿಸಿದ್ದಾರೆ ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ವರ್ಕ್ಔಟ್ ಆಗುತ್ತಾ?
ಮೊದಲ ದಿನ ಸಿಗುವ ರೆಸ್ಪಾನ್ಸ್ ಮೇಲೆ 'ಪುಷ್ಪ 2' ಈ ಮೂರೂ ಚಿತ್ರಮಂದಿರಗಳಿಂದ ಹಣ ಮಾಡುತ್ತಾ? ಅನ್ನೋದು ಗೊತ್ತಾಗುತ್ತೆ. ಮೊದಲ ಮೂರು ದಿನ ಈ ಮೂರೂ ಚಿತ್ರಮಂದಿರಗಳು ತುಂಬಬಹುದು. ಆದರೆ, ನಾಲ್ಕನೇ ದಿನದಿಂದ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗುಬಹುದು. ಆಗ ಒಂದು ಇಲ್ಲವೇ ಎರಡು ಚಿತ್ರಮಂದಿರಕ್ಕೆ ತಗ್ಗಿಸಬಹುದು ಎಂದು ವಿತರಕರ ವಲಯದಲ್ಲಿ ಆಗುತ್ತಿರುವ ಚರ್ಚೆ.


Click it and Unblock the Notifications











