ನಟ ಜಗ್ಗೇಶ್ ಸಂಭಾವನೆ ಹೆಚ್ಚಲು ಕಾರಣವಾಗಿದ್ದು ಅಂಬರೀಶ್!
ಚಿತ್ರರಂಗ ಮತ್ತು ರಾಜಕೀಯವಿರಲಿ, ಎಲ್ಲರೊಂದಿಗೂ ಒಂದೇ ರೀತಿ ಇರುತ್ತಿದ್ದವರು ಅಂಬರೀಶ್. ಅದರಲ್ಲಿಯೂ ಆತ್ಮೀಯತೆ ಬೆಸೆದುಕೊಂಡ ಚಿತ್ರರಂಗದ ಸದಸ್ಯರೊಂದಿಗೆ ಅವರೊಂದಿಗೆ ತೀರಾ ಸಲುಗೆಯಿಂದ ಬೆರೆಯುತ್ತಿದ್ದರು. ಚಿತ್ರರಂಗದ ಪ್ರತಿಯೊಬ್ಬರಿಗೂ ಅವರು ಬೇಕಾಗಿದ್ದವರು. ಯಾವ ನಟರೂ ಅವರೊಂದಿಗೆ ತಕರಾರು ಇಟ್ಟುಕೊಂಡವರಲ್ಲ. ಸಣ್ಣಪುಟ್ಟ ಮನಸ್ತಾಪ ಬಂದರೂ ಅಂಬರೀಷ್ ಅದನ್ನು ಮುಂದುವರಿಸಿಕೊಂಡು ಹೋಗುವ ಮನೋಭಾವದವರಾಗಿರಲಿಲ್ಲ.
ನವರಸ ನಾಯಕ ಜಗ್ಗೇಶ್ ಕೂಡ ಅಂಬರೀಷ್ ಅವರ ಆಪ್ತರ ಬಳಗದಲ್ಲಿದ್ದವರು. ಅಂಬರೀಷ್ ಅವರೊಂದಿಗೆ ರಸಮಯ ಕ್ಷಣಗಳನ್ನು ಕಳೆದಿದ್ದರು. ಜಗ್ಗೇಶ್ ಅವರು ಅಂಬರೀಷ್ ಜತೆಗೆ ಇದ್ದ ಫೋಟೊಗಳನ್ನು ಕೆದಕಿರುವ ಅಭಿಮಾನಿಗಳು ಅದರ ಸಂದರ್ಭದ ಕುರಿತು ಮಾಹಿತಿ ಕೇಳಿದ್ದರು. ಅದಕ್ಕೆ ಜಗ್ಗೇಶ್ ಕೆಲವು ನೆನಪಲ್ಲಿ ಉಳಿಯುವ ಪ್ರಸಂಗಗಳನ್ನು ನೆನಪಿಸಿಕೊಂಡಿದ್ದಾರೆ. ಮುಂದೆ ಓದಿ...

ಅಂಬಿ ಸಾರ್ ಜತೆಗೆ ಕಡೆಯ ಊಟ
ನಾನು ಅಂಬಿ ಸಾರ್ ತೆಗೆಸಿಕೊಂಡ ಕಡೆಯ ಚಿತ್ರ. ಹಾಗೂ ಅವರ ಜೊತೆ ಕಡೆಯ ಊಟ. ಅಂದು ತುಂಬ ಸಂತೋಷವಾಗಿ ಒಟ್ಟಿಗೆ ಊಟ ಮಾಡಿದೆವು. ನಂತರ 3 ತಿಂಗಳಿಗೆ ನಮ್ಮನ್ನು ಅಗಲಿ ಹೋದರು. ಈ ದಿನ ಅವರು ಬಂದ ಅಭಿಮಾನಿಗಳಿಗೆ ಹಾಗು ಮಾಧ್ಯಮದ ಮಿತ್ರರಿಗೆ ಸಿಕ್ಕು ಅವರದೆ ಶೈಲಿಯಲ್ಲಿ ಮಾತಾಡುತ್ತಿದ್ದರು ಅನ್ನಿಸುತ್ತದೆ. ಕನ್ನಡದ ಮಾಣಿಕ್ಯನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಜಗ್ಗೇಶ್ ಹೇಳಿದ್ದಾರೆ.

ಸಂಭಾವನೆ ಹೆಚ್ಚಾದ ಖುಷಿ
ರೌಡಿ ಎಂಎಲ್ಎ ಚಿತ್ರಕ್ಕಾಗಿ 1989ರಲ್ಲಿ ತೆಗೆಸಿಕೊಂಡಿದ್ದ ಫೋಟೊವನ್ನು ಹಂಚಿಕೊಂಡಿರುವ ಜಗ್ಗೇಶ್, ಈ ಪಾತ್ರಕ್ಕೆ ನಾನು 50 ಸಾವಿರ ರೂ. ಸಂಭಾವನೆ ಕೇಳಿದ್ದೆ. ಮ್ಯಾನೇಜರ್ ಅಷ್ಟು ಕೊಡಲು ಸಾಧ್ಯವಿಲ್ಲ ಎಂದು ನನ್ನನ್ನು ತಿರಸ್ಕರಿಸಿ ಬೇರೆ ನಟನನ್ನು ಬುಕ್ ಮಾಡಿದ್ದ. ಅಂಬಿ ಸಾರ್ ಅವರಿಗೆ ವಿಷಯ ತಿಳಿದು ಮ್ಯಾನೇಜರ್‌ಗೆ ಬೈದು ಆ ಪಾತ್ರಕ್ಕೆ ಅವನೇ ಸೂಕ್ತ ಎಂದು ನನ್ನನ್ನೆ ಬುಕ್ ಮಾಡಿದರು. ಆಗ ಸಂಭಾವನೆ 75 ಸಾವಿರ ರೂ.ಗೆ ಏರಿತು ಎಂದು ಜಗ್ಗೇಶ್ ತಿಳಿಸಿದ್ದಾರೆ.

ಹೆಣ್ಣು ಧ್ವನಿಯಲ್ಲಿ ತಮಾಷೆ
ಅಂಬರೀಷ್ ಮತ್ತು ತಮ್ಮ ನಡುವಿನ ಸಲುಗೆ ಹಾಗೂ ಪ್ರೀತಿ ವಿವರಿಸಲು ಅಸಾಧ್ಯ ಎಂದು ಜಗ್ಗೇಶ್ ತಿಳಿಸಿದ್ದಾರೆ. ಸಂದೇಶ್ ನಾಗರಾಜ್ ಅವರು ರಾತ್ರಿ 2 ಗಂಟೆಗೆ ಊಟ ಮಾಡುವ ಸಂದರ್ಭದಲ್ಲಿ ಹೆಣ್ಣು ಧ್ವನಿಯಲ್ಲಿ 'ಬಾಗಿಲು ತೆಗೆಯಿರಪ್ಪ. ಐ ವಾಂಟ್ ಯೂ ಎಂದು ಕಿರುಚಿದೆ. ಇಬ್ಬರೂ ಅದುರಿಬಿದ್ದು ಹೊಡೆಯಲು ಹೊರಬಂದು ನಗು ತಡೆಯಲಾಗದೆ ಒದ್ದಾಡಿದರು. ನಾವು ಹೀಗೆಲ್ಲ ಎಂಜಾಯ್ ಮಾಡಿದ್ದೆವು ಎಂದು ತಿಳಿಸಿದ್ದಾರೆ.

ಇಂದು ಯಾರಲ್ಲೂ ಉಳಿದಿಲ್ಲ
ಅಂಬರೀಷ್ ಅವರೊಂದಿಗಿನ ಆಪ್ತ ಸಂಬಂಧವನ್ನು ನೆನಪಿಸಿಕೊಂಡಿರುವ ಜಗ್ಗೇಶ್, ಇಂದು ಯಾರಿಗೂ ಆ ರೀತಿಯ ಆತ್ಮೀಯ ಭಾವವೇ ಇಲ್ಲ ಎಂದು ಬೇಸರ ಪಟ್ಟುಕೊಂಡಿದ್ದಾರೆ. ಕೇವಲ ನಾನು ನಾನು ನಾನು ಎಂದಷ್ಟೇ ಉಳಿದುಕೊಳ್ಳುತ್ತಾರೆ ಎಂಬ ನೋವನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











