'ಜನ ನಾಯಗನ್', 'ಟಾಕ್ಸಿಕ್' ಮುಂದಕ್ಕೆ ಹೋದ್ರೂ; ಈ ವರ್ಷ ಸಾಲು ಸಾಲು ರಿಲೀಸ್
ಕನ್ನಡದ ಶ್ರೀಮಂತ ನಿರ್ಮಾಣ ಸಂಸ್ಥೆಗಳಲ್ಲಿ ಒಂದು ಕೆವಿಎನ್ ಪ್ರೊಡಕ್ಷನ್ಸ್. ಈ ಸಂಸ್ಥೆ ಒಂದರ ಹಿಂದೊಂದು ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ದಳಪತಿ ವಿಜಯ್ ಸಿನಿಮಾ 'ಜನ ನಾಯಗನ್' ಹಾಗೂ ಯಶ್ 'ಟಾಕ್ಸಿಕ್' ಸಿನಿಮಾಗಳು ಈಗಾಗಲೇ ರಿಲೀಸ್ ಆಗಬೇಕಿತ್ತು. ಈ ಎರಡು ಬಿಗ್ ಪ್ರಾಜೆಕ್ಟ್‌ಗಳು ಕೆವಿಎನ್ ನಿರ್ಮಿಸಿದ ಬಿಗ್ ಬಜೆಟ್ ಸಿನಿಮಾಗಳಾಗಿತ್ತು. ಆದರೆ, ಎರಡೂ ಸಿನಿಮಾಗಳ ರಿಲೀಸ್ ಪೋಸ್ಟ್‌ಪೋನ್ ಆಗಿದೆ.
'ಜನ ನಾಯಗನ್','ಟಾಕ್ಸಿಕ್' ಈ ಎರಡೂ ಸಿನಿಮಾಗಳು ಪೋಸ್ಟ್‌ಪೋನ್ ಆಗುತ್ತಿದ್ದಂತೆ ಕನ್ನಡ ಚಿತ್ರರಂಗದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಬಗ್ಗೆ ಅಪಸ್ವರಗಳು ಎದ್ದಿದ್ದವು. ಕೆವಿಎನ್ ನಿರ್ಮಾಣದ ಸಿನಿಮಾಗಳು ರಿಲೀಸ್ ಆಗೋದಿಲ್ಲ ಅಂತ ಕೆಲವರು ಟೀಕೆಗಳನ್ನು ಮಾಡಿದ್ದರು. ಇನ್ನು ಕೆಲವರು ಕೆವಿಎನ್ ನಿರ್ಮಿಸಿದ ಸಿನಿಮಾಗಳು ವಿವಾದಗಳಿಲ್ಲದೆ ರಿಲೀಸ್ ಆಗೋದಿಲ್ಲ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ.

ಜೋಗಿ ಪ್ರೇಮ್ ನಿರ್ದೇಶಿಸಿದ 'ಕೆಡಿ ದಿ ಡೆವಿಲ್' ಏಪ್ರಿಲ್ 30ಕ್ಕೆ ರಿಲೀಸ್ ಆಗುತ್ತಿದೆ. ಆದರೆ, ಅದಕ್ಕೂ ಮುನ್ನ ಹಾಡು ವಿವಾದಕ್ಕೆ ಸಿಲುಕಿತ್ತು. ಸಿನಿಮಾ ಮಂದಿ ಟೀಕೆ ಮಾಡುವುದಕ್ಕೂ, ಅವರು ಟೀಕಿಸಿದಂತೆ ಆಗುವುದಕ್ಕೂ ಸರಿಯಾಗಿದೆ. ಇನ್ನು ಕೆಲವರು ಕೆವಿಎನ್ ಸಂಸ್ಥೆ ಇನ್ನು ಕನ್ನಡ ಸಿನಿಮಾಗಳನ್ನು ಮಾಡುವುದೇ ಅನುಮಾನ ಎಂಬ ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಅಷ್ಟಕ್ಕೂ ಈ ಮೂರು ಸಿನಿಮಾಗಳನ್ನು ಬಿಟ್ಟು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿರುವ ಪ್ರೊಜೆಕ್ಟ್‌ಗಳ್ಯಾವುವು? ಇಲ್ಲಿದೆ ಲಿಸ್ಟ್.
ಕೆವಿಎನ್ ಪ್ರೊಡಕ್ಷನ್ 'ಜನ ನಾಯಗನ್', 'ಟಾಕ್ಸಿಕ್' ಹಾಗೂ 'ಕೆಡಿ'ಗೆ ಸುಮಾರು 600 ರಿಂದ 700 ಕೋಟಿ ರೂಪಾಯಿ ಹೂಡಿಕೆ ಮಾಡಿದೆ ಎಂದು ಹೇಳಾಗುತ್ತಿದೆ. ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಕೆವಿಎನ್ ಪ್ರೊಡಕ್ಷನ್ಸ್‌ಗೆ ಕೊಂಚ ಹಿನ್ನಡೆಯಾಗಿತ್ತು. ಚುನಾವಣೆಗೂ ಮುನ್ನವೇ ಈ ಸಿನಿಮಾವನ್ನು ರಿಲೀಸ್ ಮಾಡಬೇಕು ಅಂತ ಶತಪ್ರಯತ್ನ ಮಾಡಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಹೀಗಾಗಿ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಇಟ್ಟುಕೊಂಡಿದ್ದ ಕೆವಿಎನ್‌ಗೆ ಹಿನ್ನೆಲೆಯಾಗಿದೆ.
ಇದರ ಬೆನ್ನಲ್ಲೇ 'ಟಾಕ್ಸಿಕ್' ಸಿನಿಮಾದ್ದೂ ಅದೇ ಕಥೆ. ಇದೇ ಮಾರ್ಚ್ 19ಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾ ಜೂನ್ 4ಕ್ಕೆ ಮುಂದೂಡಿಕೆಯಾಗಿದೆ. ಹೀಗಾಗಿ ಈ ವರ್ಷದ ಮೊದಲಾರ್ಧದಲ್ಲಿ ರಿಲೀಸ್ ಆಗಬೇಕಿದ್ದ ಈ ಎರಡು ಸಿನಿಮಾಗಳು ಮುಂದೂಡಿಕೆಯಾಗಿದ್ದು ದೊಡ್ಡ ಏಟು ಕೊಟ್ಟಿದೆ. ಈಗ ಫಸ್ಟ್ ಹಾಸ್‌ನಲ್ಲಿ ಜೋಗಿ ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ನಟನೆಯ 'ಕೆಡಿ' ಸಿನಿಮಾವಷ್ಟೇ ರಿಲೀಸ್ ಆಗುತ್ತಿದೆ. ಹಾಗಂತ ಕೆವಿಎನ್ ಪ್ರೊಡಕ್ಷನ್ಸ್ ಏನು ಸುಮ್ಮನೆ ಕೂತಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ.
ಮೂಲಗಳ ಪ್ರಕಾರ, ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಕನ್ನಡ ಸಿನಿಮಾ ನಡೆಯುತ್ತಿದೆ. ಶ್ರೀನಿ ನಿರ್ದೇಶಿಸಿ, ನಟಿಸುತ್ತಿರುವ 'ಬೀರಬಲ್' ಭಾಗ 2 ಹಾಗೂ 3 ಸೈಲೆಂಟ್ ಆಗಿ ಚಿತ್ರೀಕರಣ ಆಗುತ್ತಿದೆ. ಇದರಲ್ಲಿ ಒಂದು ಭಾಗ ಇದೇ ವರ್ಷ ಬಿಡುಗಡೆಯಾಗುತ್ತೆ ಅನ್ನೋ ಮಾತು ಕೇಳಿ ಬರುತ್ತಿದೆ. ಈಗಾಗಲೇ 'ಬೀರಬಲ್' ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದು, ಪಾರ್ಟ್ 2 ಹಾಗೂ 3 ಅನ್ನು ಎದುರು ನೋಡುತ್ತಿದ್ದಾರೆ.

ಇನ್ನೊಂದು ಕಡೆ 2024ರಲ್ಲಿ ರಿಲೀಸ್ ಆಗಿ ಬಾಕ್ಸಾಫೀಸ್‌ನಲ್ಲಿ ಸಂಚಲನ ಸೃಷ್ಟಿಸಿದ್ದ 'ಮಂಜುಮ್ಮಲ್ ಬಾಯ್ಸ್' ಸಿನಿಮಾದ ನಿರ್ದೇಶಕ ಚಿದಂಬರಂ ಎಸ್ ಪೊಡುವಲ್ ಒಂದು ಸಿನಿಮಾ ಮಾಡುತ್ತಿದ್ದಾರೆ. ಕೆವಿಎನ್ ಸಂಸ್ಥೆಯ ಅಡಿಯಲ್ಲಿ ಮತ್ತೊಂದು ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ನಿರ್ಮಾಣ ಹಂತದಲ್ಲಿದೆ.
ಇಷ್ಟೇ ಅಲ್ಲದೆ, ಬಾಲಿವುಡ್‌ನ ಇಬ್ಬರು ಸ್ಟಾರ್ ನಟರಾದ ಅಕ್ಷಯ್ ಕುಮಾರ್ ಹಾಗೂ ಸೈಫ್ ಅಲಿ ಖಾನ್ ದಶಕಗಳ ಬಳಿಕ ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಪ್ರಿಯದರ್ಶನ್ ನಿರ್ದೇಶಿಸುತ್ತಿದ್ದು, ಕೆವಿಎನ್ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾ ಕೂಡ ಇದೇ ವರ್ಷ ಬಿಡುಗಡೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದು ಕಡೆ ಮೆಗಾಸ್ಟಾರ್ ಚಿರಂಜೀವಿಗೂ ಸಿನಿಮಾ ಮಾಡುತ್ತಿದ್ದು, ಪ್ರಾಜೆಕ್ಟ್ ಕೊಂಚ ಮಟ್ಟಿಗೆ ತಡವಾಗಿದೆ ಎನ್ನಲಾಗಿದೆ.


Click it and Unblock the Notifications











