Theater Round: ಮಲ್ಟಿಪ್ಲೆಕ್ಸ್‌ಗೆ ಸಿಂಗಲ್ ಸ್ಕ್ರೀನ್ ಟಕ್ಕರ್; ತುಮಕೂರಿನ ಈ ಚಿತ್ರಮಂದಿರದ ನವೀಕರಣದ ವೆಚ್ಚವೆಷ್ಟು ಗೊತ್ತೇ?
ಭಾರತದೆಲ್ಲೆಡೆ ಮಲ್ಟಿಪ್ಲೆಕ್ಸ್ ಹೊಡೆತಕ್ಕೆ ಸಿಂಗಲ್ ಸ್ಕ್ರೀನ್‌ಗಳು ಕಣ್ಮರೆಯಾಗುತ್ತಿದೆ. ಕರ್ನಾಟಕದಲ್ಲೂ ಪರಿಸ್ಥಿತಿ ವಿಭಿನ್ನವಾಗೇನೂ ಇಲ್ಲ. ಐಕಾನಿಕ್ ಥಿಯೇಟರ್‌ಗಳು ಎನಿಸಿಕೊಂಡವೆಲ್ಲ ಇಂದು ಇತಿಹಾಸವಾಗಿ ಉಳಿದು ಬಿಟ್ಟಿವೆ. ಹಾಗಂತ ಮಲ್ಟಿಪ್ಲೆಕ್ಸ್ ಹಾವಳಿ ಅಂತಷ್ಟೇ ಹೇಳುವುದಕ್ಕೆ ಆಗುವುದಿಲ್ಲ. ಓಟಿಟಿ ಕಡೆಗೆ ಜನರು ಹೆಚ್ಚು ಆಸಕ್ತಿ ತೋರಿರುವುದಕೂ ಕೂಡ ಮತ್ತೊಂದು ಕಾರಣ.
ನಾಲ್ಕೈದು ದಶಕಗಳಿಂದ ಸಿನಿಮಾಗಳನ್ನು ಪ್ರದರ್ಶನ ಮಾಡುತ್ತಿದ್ದ ಚಿತ್ರಮಂದಿರಗಳು ಈಗಿಲ್ಲ. ಈ ಐಕಾನಿಕ್ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಇಂದು ನೆಲ ಸಮವಾಗಿವೆ. ಆ ಜಾಗದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ಎದ್ದು ನಿಂತಿವೆ. ಇದು ಸಿನಿಮಾ ಮಂದಿಗೆ ಆತಂಕವನ್ನು ದುಪ್ಪಟ್ಟು ಮಾಡಿದೆ. ಹೀಗೆ ಮುಂದುವರೆದರೆ, ಮುಂದೊಂದು ದಿನ ಸಿಂಗಲ್ ಸ್ಕ್ರೀನ್‌ಗಳು ಸಂಪೂರ್ಣವಾಗಿ ಕಣ್ಮರೆಯಾಗುವ ಸಾಧ್ಯತೆಯಿದೆ.

ಬೆಂಗಳೂರಿನ ಕೆಜಿ ರಸ್ತೆಯಲ್ಲಿ ಕನ್ನಡ ಸಿನಿಮಾಗಳಿಗೆ ಅಂತಾನೇ ಸಿಂಗಲ್ ಸ್ಕ್ರೀನ್‌ಗಳು ಇದ್ದವು. ಅವುಗಳಲ್ಲಿ ಕೆಲವು ನೆಲಸಮವಾಗಿದೆ. ಇಂತಹ ಸಮಯದಲ್ಲಿ ಸಿಂಗಲ್ ಸ್ಕ್ರೀನ್‌ಗಳು ನವೀಕರಣವಾಗುತ್ತಿದೆ ಅನ್ನೋ ಸುದ್ದಿಯೇ ಸಿನಿಮಾ ಮಂದಿಗೆ ಖುಷಿ. ಸದ್ಯ ತುಮಕೂರಿನಲ್ಲಿ ಇರುವ ಐಕಾನಿಕ್ ಮಾರುತಿ ಚಿತ್ರಮಂದಿರ ದುಬಾರಿ ವೆಚ್ಚದಲ್ಲಿ ನವೀಕರಣಗೊಳ್ಳುತ್ತಿದೆ. ಹಾಗಿದ್ರೆ, ಏನೆಲ್ಲ ಬದಲಾವಣೆಯಾಗುತ್ತಿದೆ? ಖರ್ಚು ಎಷ್ಟು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಹೌದು, ತುಮಕೂರಿನ ಜನಪ್ರಿಯ ಚಿತ್ರಮಂದಿರ 'ಮಾರುತಿ' ನವೀಕರಣಗೊಳ್ಳುತ್ತಿದೆ. ಮಲ್ಟಿಪ್ಲೆಕ್ಸ್ ಹೊಡೆತಕ್ಕೆ ಸಿಲುಕಿ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ನೆಲ ಸಮ ಮಾಡುವ ನಿರ್ಧಾರ ಕೈಗೊಳ್ಳುತ್ತಿದ್ದ ಈ ಕಾಲದಲ್ಲಿ ಈ ಥಿಯೇಟರ್ ಅನ್ನು ನವೀಕರಣ ಮಾಡಲಾಗುತ್ತಿದೆ. ಮಲ್ಟಿಪ್ಲೆಕ್ಸ್ ರೇಂಜ್‌ಗೆ ಥಿಯೇಟರ್ ಅನ್ನು ನವೀಕರಣ ಮಾಡುತ್ತಿದ್ದಾರೆ. ಸದ್ಯ ಇನ್ನೂ ನವೀಕರಣದ ಹಂತದಲ್ಲಿ ಇದೆ. ಈ ಬಗ್ಗೆ ಚಿತ್ರಮಂದಿರದ ಮಾಲೀಕರಾದ ಗಣೇಶ್ ಫಿಲ್ಮಿಬೀಟ್ ಕನ್ನಡದೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸುಮಾರು ನಾಲ್ಕೂವರೆ ವರ್ಷಗಳ ಹಿಂದೆ ಆರಂಭಗೊಂಡಿದ್ದ ಮಾರುತಿ ಚಿತ್ರಮಂದಿರದಲ್ಲಿ ಸಾಕಷ್ಟು ಸಿನಿಮಾಗಳು ಯಶಸ್ವಿ ಪ್ರದರ್ಶನ ಕಂಡಿದೆ. "1979ರಲ್ಲಿ ನಮ್ಮ ಥಿಯೇಟರ್ ಓಪನ್ ಆಗಿದ್ದು, ಮೊದಲ ಸಿನಿಮಾ ಇಲ್ಲಿ ಪ್ರಸಾರ ಕಂಡಿದ್ದು ಡಾ.ರಾಜ್‌ಕುಮಾರ್ ನಟಿಸಿದ 'ಹುಲಿಯ ಹಾಲಿನ ಮೇವು'. ಮೊದಲನೇ ಸಿನಿಮಾವೇ ಶತದಿನಗಳ ಕಾಲ ಪ್ರದರ್ಶನ ಕಂಡಿತ್ತು. ಗಣೇಶ್ ನಟಿಸಿದ 'ಮುಂಗಾರು ಮಳೆ' ಸಿನಿಮಾ 25 ದಿನ ಓಡಿತ್ತು. ಇನ್ನು ಬಹುತೇಕ ಸಿನಿಮಾಗಳು 100 ಡೇಸ್ ಓಡಿವೆ. ಚೆಲುವಿನ ಚಿತ್ತಾರ, ಕುರುಕ್ಷೇತ್ರ, ಬುಲ್ ಬುಲ್, ಆಪ್ತಮಿತ್ರ, ಆಪ್ತರಕ್ಷಕ ಸಿನಿಮಾ ಚೆನ್ನಾಗಿ ಓಡಿವೆ." ಎನ್ನುತ್ತಾರೆ ಗಣೇಶ್.

ಇನ್ನು ಮಾರುತಿ ಚಿತ್ರಮಂದಿರದ ಸೀಟಿಂಗ್ ಕ್ಯಾಪಾಸಿಟಿಯನ್ನು ಕಡಿಮೆ ಮಾಡಲಾಗಿದೆ. ಹೊಸ ಪುಶ್‌ಬ್ಯಾಕ್ ಸೀಟ್‌ಗಳನ್ನು ಅಳವಡಿಸಲಾಗುತ್ತಿದೆ. ಒಂದು ಸೀಟ್‌ನ ಬೆಲೆ 7600 ರೂಪಾಯಿ. ಹಾಗೇ ಚಿತ್ರಮಂದಿರ ಇಂಟಿರೀಯರ್ ಕೂಡ ಬದಲಾಗುತ್ತಿದೆ. ಚಿತ್ರಮಂದಿರವನ್ನು ಹೊರ ವಿನ್ಯಾಸ ಕೂಡ ಬದಲಾಗುತ್ತೆ. ಇದಕ್ಕೆಲ್ಲ ತಗಲುವ ವೆಚ್ಚ ಸುಮಾರು 1 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
"ಮೊದಲು ಸೀಟಿಂಗ್ ಕ್ಯಾಪಾಸಿಟಿ 825 ಇತ್ತು. ಈಗ 680 ಸೀಟಿಂಗ್ ಕ್ಯಾಪಾಸಿಟಿ ಮಾಡಿದ್ದೇವೆ. ನಾವು ಹಾಕುತ್ತಿರುವ ಒಂದು ಸೀಟಿನ ಬೆಲೆ 7600 ರೂಪಾಯಿ. ಅದು ಕೆಳಗಡೆಗೆ ಹಾಕುತ್ತಿದ್ದೇವೆ. ಬಾಲ್ಕಾನಿಗೆ 10 ಸಾವಿರ ಸೀಟ್ ಹಾಕಿದರೂ ಜನರು ಬರೋದಿಲ್ಲ. ಮಲ್ಟಿಪ್ಲೆಕ್ಸ್‌ಗೆ ಹೋಗುತ್ತಾರೆ. ಅದಕ್ಕೆ ನಮ್ಮ ಜನರನ್ನು ನಾವು ಇಟ್ಟುಕೊಳ್ಳುತ್ತೇವೆ." ಎನ್ನುತ್ತಾ ಮಾಲೀಕರು.
ಒಟ್ನಲ್ಲಿ ಮಲ್ಟಿಪ್ಲೆಕ್ಸ್‌ಗೆ ಟಕ್ಕರ್ ಕೊಡುವುದಕ್ಕೆ ಮಾರುತಿ ಚಿತ್ರಮಂದಿರ ರೆಡಿಯಾಗುತ್ತಿದೆ. 'ಧುರಂಧರ್ 2', 'ಉಸ್ತಾದ್ ಭಗತ್ ಸಿಂಗ್' ಹಾಗೂ 'ಲವ್ ಮಾಕ್ಟೇಲ್ 3' ಸಿನಿಮಾಗಳು ಕಾಂಪಿಟೇಷನ್‌ಗೆ ಬಿದ್ದಿದ್ದು, ಹೊಸ ವಿನ್ಯಾಸ ಈ ಚಿತ್ರಮಂದಿರದ ಯಾರ ಪಾಲಿಗೆ ಆಗುತ್ತೆ ಅನ್ನೋದು ಕೂತೂಹಲ. ಥಿಯೇಟರ್ ನವೀಕರಣಗೊಳಿಸಿದರೆ, ಸಿನಿಮಾ ಮಂದಿಗೆ ರಿಲೀಸ್‌ಗೆ ಮುಗಿಬೀಳುತ್ತಾರೆ ಅನ್ನೋದು ಇದು ಉದಾಹರಣೆ.


Click it and Unblock the Notifications














