"ನಿಖಿಲ್ ಎಲ್ಲಿದ್ದೀಯಪ್ಪ" ಈ ಡೈಲಾಗ್ ಹಿಂದಿನ ರೂವಾರಿ 'ಪಾಪ ಪಾಂಡು' ಶಾಲಿನಿ: ಇದು ನಿಮಗೆ ಗೊತ್ತೇ?
2019ರ ಲೋಕಸಭೆ ಚುನಾವಣೆ ವೇಳೆ ಮಂಡ್ಯ ಲೋಕಸಭೆ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಏಕಾಏಕಿ ಟ್ರೋಲ್ ಆಗಿದ್ದರು. "ನಿಖಿಲ್ ಎಲ್ಲಿದ್ದೀಯರಪ್ಪ" ಅಂತ ಎಚ್‌ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಇಬ್ಬರನ್ನೂ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ದರು. ಅದು ನಿಮಗೆ ನೆನಪಿರಬಹುದು.
"ನಿಖಿಲ್ ಎಲ್ಲಿದ್ದೀಯರಪ್ಪ" ಅಂತ ಇಂದಿಗೂ ಕೆಲವು ಸಂದರ್ಭಗಳಲ್ಲಿ ಟ್ರೋಲ್ ಆಗುತ್ತಲೇ ಇರುತ್ತೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ವಿರುದ್ಧ ನಿಖಿಲ್ ಸ್ಪರ್ಧೆ ಮಾಡಿದ್ದರು. ಆ ವೇಳೆ ಎಚ್‌ಡಿ ಕುಮಾರಸ್ವಾಮಿ ಹೇಳಿದ ಡೈಲಾಗ್ ಅನ್ನೇ ಇಟ್ಟುಕೊಂಡು ತಂದೆ-ಮಗನ ಕಾಲೆಳೆದಿದ್ದರು.

ಮಂಡ್ಯದಲ್ಲಿ ನಿಖಿಲ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾ 'ಜಾಗ್ವರ್' ಆಡಿಯೋ ಲಾಂಚ್ ಅನ್ನು ಅದ್ಧೂರಿಯಾಗಿ ಮಾಡಲಾಗಿತ್ತು. ಈ ವೇಳೆ ಎಚ್‌ಡಿ ಕುಮಾರಸ್ವಾಮಿ ಜನರ ಮಧ್ಯೆ ಇದ್ದ ತಮ್ಮ ಪುತ್ರನನ್ನು ವೇದಿಕೆ ಮೇಲೆ ಕರೆಯಬೇಕಿತ್ತು. ಆ ವೇಳೆ "ನಿಖಿಲ್ ಎಲ್ಲಿದ್ದೀಯಪ್ಪ..? ಅಂತ ಡೈಲಾಗ್ ಬಿಟ್ಟಿದ್ದರು. ಅದೇ ಡೈಲಾಗ್ 2019ರ ಚುನಾವಣೆಯಲ್ಲಿ ನಿಖಿಲ್ ಟ್ರೋಲ್ ಮಾಡಲು ಬಳಸಿಕೊಳ್ಳಲಾಗಿತ್ತು.
ಅಸಲಿಗೆ ಈ ವರ್ಲ್ಡ್ ಫೇಮಸ್ ಡೈಲಾಗ್ ಹಿಂದಿನ ರೂವಾರಿ ಪಾಪ ಪಾಂಡು ಖ್ಯಾತಿಯ ನಟಿ ಶಾಲಿನಿ ಹಾಗೂ ನಿರೂಪಕಿ ಶಾಲಿನಿ. ಅಸಲಿಗೆ ನಿರೂಪಕಿ ಶಾಲಿನಿ ಹೇಗೆ ಕಾರಣ? ಈ ಪ್ರಶ್ನೆಗೆ ಶಾಲಿನಿ ಸ್ಪೀಡ್ ಪ್ಲಸ್ ಕರ್ನಾಟಕ ಅನ್ನೋ ಯೂಟ್ಯೂಬ್ ಚಾನೆಲ್‌ನಲ್ಲಿ ಕಿರಿಕ್ ಕೀರ್ತಿ ಜೊತೆ ರಿವೀಲ್ ಮಾಡಿದ್ದಾರೆ.
"ಎಲ್ಲಿದ್ದೀಯಪ್ಪ ನಿಖಿಲ್ ಅಂತ ನಾನೇ ಸರ್‌ಗೆ (ಎಚ್ ಡಿ ಕುಮಾರಸ್ವಾಮಿ) ಹೇಳಿಕೊಟ್ಟಿದ್ದು. ನಿಜ ಹೇಳ್ತೀನಿ, ನನಗೆ ಗೊತ್ತೇ ಇಲ್ಲ ಅಷ್ಟು ಫೇಮಸ್ ಆಗಿದೆ ಅಂತ. ನನ್ನ ಫ್ರೆಂಡ್ ರೋಹಿತ್ ಪದಕಿ ವಿಡಿಯೋ ಕಳಿಸಿಬಿಟ್ಟು. ಯೋ ಅಮ್ಮ.. ಇದ್ಯಾವಾಗ ಮಾಡಿದೆ ನೀನು ಕೇಳಿದ್ರು. ಆಗಲೇ ನನಗೆ ಗೊತ್ತಾಗಿದ್ದು." ಎಂದು ಕಿರಿಕ್ ಕೀರ್ತಿ ಶೋನಲ್ಲಿ ಶಾಲಿನಿ ಹೇಳಿಕೊಂಡಿದ್ದಾರೆ.

ಮಂಡ್ಯದಲ್ಲಿ ನಡೆದ 'ಜಾಗ್ವಾರ್' ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಶಾಲಿನಿ ನಿರೂಪಕಿಯಾಗಿದ್ದರು. ಮೊದಲೇ ಸ್ಕ್ರಿಪ್ಟ್ ಮಾಡಿದಂತೆ ಜನರ ಮಧ್ಯೆ ನಿಖಿಲ್ ಇರುತ್ತಾರೆ. ಅವರನ್ನು ವೇದಿಕೆ ಮೇಲೆ ಇರುವ ಎಚ್‌ಡಿ ಕುಮಾರಸ್ವಾಮಿ ಕರೆಯಬೇಕು ಅಂತಿತ್ತು. ಆದರೆ, ಎಚ್‌ಡಿ ಕುಮಾರಸ್ವಾಮಿ ಕ್ಯೂ ಕೊಟ್ಟರೂ ಮಗನನ್ನು ಕರೆಯುತ್ತಲೇ ಇರಲಿಲ್ಲ. ಈ ವೇಳೆ ನಿರೂಪಕಿ ಶಾಲಿನಿ, ಈ ಡೈಲಾಗ್ ಹೇಳಿಕೊಟ್ಟಿದ್ದರು.
"ಅದ್ಯಾಕೆ ಹೇಳಿಕೊಟ್ಟೆ ಅಂತ ನಾನು ಹೇಳ್ತೀನಿ. ಅದು ಪ್ಲ್ಯಾನ್ ಮಾಡಿ ಆಗಿದ್ದಲ್ಲ. ನಿಖಿಲ್ ಅವರು ಜನರ ಮಧ್ಯೆ ಇರುತ್ತಾರೆ. ಅವರ ತಂದೆ ಕರೀಬೇಕು. ಆಗ ಸ್ಟೇಜ್ ಮೇಲೆ ಬರುತ್ತಾರೆ ಅಂತ ಇದ್ದಿದ್ದು. ಸ್ಟೇಜ್ ಮೇಲೆ ಎಷ್ಟು ಜನ ಇದ್ದರು ಅಂದರೆ, ಏನಾಗ್ತಿದೆ ಅಂತ ಗೊಂದಲ ಆಗ್ತಿತ್ತು. ಸರ್ ಹೀಗೆ ಕರೀತಾರೆ. ನಿಖಿಲ್ ಅವರು ಹೇಗೆ ಬರ್ತಾರೆ ಅಂತ ಡಿಸೈನ್ ಮಾಡಿದ್ವಿ. ನಿಖಿಲ್ ಅವರು ಜನರ ಮಧ್ಯದಿಂದ ಬರೋದಕ್ಕೆ ಸರ್ ಸರಿಯಾಗಿ ಕ್ಯೂ ಕೊಡುತ್ತಿಲ್ಲ. ಅದಕ್ಕೆ ನಾನು ಸರ್, ನಿಖಿಲ್ ಎಲ್ಲಿದ್ದೀಯಪ್ಪ ಅಂತ ಹೇಳಿ ಸರ್ ಅಂದೆ.. ಅವರು ಅಂದ್ಬಿಟ್ರು. ಆ ಕಾರ್ಯಕ್ರಮ ಆಗಿ ಏಳೋ ಎಂಟೋ ವರ್ಷ ಆದ್ಮೇಲೆ ವೈರಲ್ ಆಗಿದ್ದು." ಎಂದು ಶಾಲಿನಿ ಹೇಳಿದ್ದಾರೆ.
ಆ ಕಾರ್ಯಕ್ರಮವನ್ನು ಸ್ವತ: ಶಾಲಿನಿಯವರೇ ಮರೆತಿದ್ದರು. "ನಿಖಿಲ್ ಎಲ್ಲಿದ್ದೀಯಪ್ಪ.." ಡೈಲಾಗ್ ಫೇಮಸ್ ಆದ್ಮೇಲೆ ಅವರಿಗೆ ಮತ್ತೆ ಗೊತ್ತಾಗಿದ್ದು. "ನಾನು ಮರೆತೇ ಹೋಗಿದ್ದೆ. ಇದು ನಾಲ್ಕು ಗಂಟೆ ಶೋ ಅದು. ಅದರಲ್ಲಿ ಈ ತುಣುಕನ್ನು ಹುಡುಕಿ ತೆಗೆದಿದ್ದಾರಲ್ಲ. ಅವರನ್ನು ನಾನು ಒಂದು ದಿನ ಭೇಟಿ ಮಾಡಬೇಕು. ಅವರು ನಾನು ಕೇವಲ ನಿರೂಪಣೆ ಮಾಡುತ್ತಿದ್ದೆ. ಆದರೆ, ಈ ಮಟ್ಟಿಗೆ ಆಗುತ್ತೆ ನನಗೆ ಗೊತ್ತಿರಲಿಲ್ಲ. ಟ್ರೋಲ್ ಆಗಿದ್ದಕ್ಕೂ ನನಗೂ ಸಂಬಂಧನೇ ಇಲ್ಲ" ಎಂದು ಕಿರಿಕ್ ಕೀರ್ತಿ ಜೊತೆ ಶಾಲಿನಿ ಹೇಳಿಕೊಂಡಿದ್ದಾರೆ.


Click it and Unblock the Notifications











