'ಟಾಪ್ ನಾಚ್ ಸುಂದ್ರಿ' ಹಿಂದೆ ಬಿದ್ದ ನಿರೂಪಕ; ಆಂಕರ್ ಟು ಪರ್ಫಾರ್ಮರ್ ಯಶವಂತ್ ಜರ್ನಿಯೇ ಅದ್ಬುತ
ಸಿನಿಮಾ ನಟನಾಗಬೇಕು ಅನ್ನೋ ಕನಸು ಹೊತ್ತು ಚಿತ್ರರಂಗಕ್ಕೆ ಬರುವ ಮಂದಿಗೇನು ಕಮ್ಮಿಯಿಲ್ಲ. ಪ್ರತಿ ದಿನ ಒಂದಿಷ್ಟು ಮಂದಿ ಎಂಟ್ರಿ ಕೊಡುತ್ತಲೇ ಇರುತ್ತಾರೆ. ಅವರಲ್ಲಿ ಯಶಸ್ಸು ಕಾಣುವುದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಇಂತಹದ್ದೇ ಒಂದು ಕನಸು ಹೊತ್ತು ಬಂದಿರೋ ನಟ ಯಶವಂತ್. ಬೇರೆ ಬೇರೆ ಮಾಧ್ಯಮಗಳಲ್ಲಿ ನಿರೂಪಕನಾಗಿ ಕೆಲಸ ಮಾಡುತ್ತಿದ್ದ ಇವರು ಪರ್ಫಾರ್ಮರ್ ಆಗಿ ಬಡ್ತಿ ಪಡೆದಿದ್ದಾರೆ.
ಯಶವಂತ್ ನಟನಾಗಬೇಕು ಅಂತ ಕನಸು ಕಂಡ ಯುವಕ. ಕಳೆದ ಕೆಲವು ವರ್ಷಗಳಿಂದ ಈ ಕನಸ್ಸು ನನಸು ಮಾಡಿಕೊಳ್ಳುವುದಕ್ಕೆ ಶತ ಪ್ರಯತ್ನಗಳನ್ನು ಮಾಡುತ್ತಲೇ ಇದ್ದರು. ಕೊನೆಗೂ ಅವರ ಆಸೆಯೀಗ ಈಡೇರಿದೆ. ಕಳೆದ ಏಳೆಂಟು ವರ್ಷಗಳಿಂದ ಬೇರೆ ಬೇರೆ ಮಾಧ್ಯಮಗಳಲ್ಲಿ ನಿರೂಪಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ ನಟನಾಗಬೇಕು ಅನ್ನೋ ಕನಸನ್ನು ಹಾಗೇ ಹಂತ ಹಂತವಾಗಿ ಬೆಳೆಸಿಕೊಂಡು ಬಂದಿದ್ದರು.

ನಮ್ಮ ಫಿಲ್ಮ್ ಬೀಟ್ ಕನ್ನಡದಲ್ಲಿ ಸುಮಾರು ನಾಲ್ಕು ವರ್ಷಗಳಿಂದ ನಿರೂಪಕರಾಗಿ ಕೆಲಸ ಮಾಡಿದ್ದಾರೆ. ಸಿನಿಮಾ ಮಂದಿಯ ಸಂದರ್ಶನವನ್ನು ಮಾಡುತ್ತಿದ್ದರು. ಹೀಗಾಗಿ ಸೆಲೆಬ್ರೆಟಿಗಳು ಯಶವಂತ್‌ಗೆ ವೈಯಕ್ತಿಕವಾಗಿ ಪರಿಚಯವಿದೆ. ಹೀಗಿದ್ದರೂ ಅವರಿಗೆ ತಮ್ಮ ಅಲ್ಬಮ್ ಸಾಂಗ್ ಬಿಡುಗಡೆ ಮಾಡುವುದಕ್ಕೆ ಬರೋಬ್ಬರಿ 8 ವರ್ಷಗಳು ಬೇಕಾಯ್ತು. ಕೊನೆಗೂ ತಮ್ಮ ಚೊಚ್ಚಲ ಪ್ರಾಜೆಕ್ಟ್ 'ಟಾಪ್ ನಾಚ್ ಸುಂದ್ರಿ' ಅಲ್ಬಮ್ ಸಾಂಗ್ ಬಿಡುಗಡೆಯಾಗುತ್ತಿರುವ ಖುಷಿಯಲ್ಲಿದ್ದಾರೆ. ಈ ಯಶವಂತ್ ತಮ್ಮ ಜರ್ನಿ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಖುದ್ದಾಗಿ ಹಂಚಿಕೊಂಡಿದ್ದಾರೆ.
'ಟಾಪ್ ನಾಚ್ ಸುಂದ್ರಿ' ಸಾಂಗ್ ಮೂಲಕ ಯಶವಂತ್ ಪರಿಚಯವಾಗುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ಯಶವಂತ್ ನಟಿಸಿದರೆ, ಇವರೊಂದಿಗೆ ಮಾಡಲ್ ಕೂಡ ಆಗಿರುವ ಪ್ರಕೃತಿ ರಾಜೇಂದ್ರ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ ವಿನೀತ್ ಟ್ಯೂನ್ ಹಾಕಿದ್ದಾರೆ. ಸುದರ್ಶನ್ ಅವರು ನಿರ್ದೇಶನ ಮಾಡಿದ್ದಾರೆ. ಇನ್ನು ಸುಹಾಸ್ ಅಮಿನ್ ಕ್ಯಾಮರಾ ವರ್ಕ್ ಮಾಡಿದ್ದಾರೆ. ರಾಮ ಚರಣ್ ಕೋರಿಯೋಗ್ರಾಫಿ ಇದ್ದರೆ, ದಿನೇಶ್ ಲಕ್ಕಿ ಸಾಹಿತ್ಯ ರಚಿಸಿದ್ದಾರೆ. 'ಟಾಪ್ ನಾಚ್ ಸುಂದ್ರಿ' ಹಾಡನ್ನು ಯಶ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಇಂದು (ಏಪ್ರಿಲ್ 22) ರಿಲೀಸ್ ಆಗುತ್ತಿದೆ.
ತನ್ನ ಚೊಚ್ಚಲ ಅಲ್ಬಮ್ ಸಾಂಗ್ ರಿಲೀಸ್ ಆಗುತ್ತಿರುವ ಖುಷಿಯಲ್ಲಿ ತನ್ನ ಜರ್ನಿಯನ್ನು ಯಶವಂತ್ ಮೆಲುಕು ಹಾಕಿದ್ದಾರೆ. "ಕಳೆದ 8 ವರ್ಷಗಳಿಂದ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದೇನೆ. 2018ರಲ್ಲಿ ನನ್ನ ಜರ್ನಿ ಶುರುವಾಗಿತ್ತು. ವಿಐಪಿ ಎನ್ನುವ ಒಂದು ಸ್ಯಾಟಲೈಟ್ ಚಾನೆಲ್‌ನಲ್ಲಿ ಡೆಸ್ಕ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಅದಾದ್ಮೇಲೆ ಆಂಕರ್ ಆಗಿ ಬಡ್ತಿ ಪಡೆದೆ. ಅಲ್ಲಿಂದ ರಾಜ್ ನ್ಯೂಸ್‌ಗೆ ಸೇರಿಕೊಂಡೆ. ಅಲ್ಲಿ ಎರಡು ವರ್ಷ ಕೆಲಸ ಮಾಡಿದೆ. ಆಮೇಲೆ 2020 ಸೆಪ್ಟೆಂಬರ್‌ನಿಂದ ಡಿಜಿಟಲ್ ಕಡೆಗೆ ಮುಖ ಮಾಡಿದೆ. 2022 ರಿಂದ 2026ರವರೆಗೂ ಫಿಲ್ಮಿಬೀಟ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಕೆಲಸ ಮಾಡಿದ್ದೇನೆ. ಫಿಲ್ಮಿಬೀಟ್ ಕನ್ನಡ ನನಗೆ ಒಳ್ಳೆಯ ವೇದಿಕೆ ಕೊಟ್ಟಿತು. ನನ್ನನ್ನು ನಾನು ಪ್ರೂವ್ ಮಾಡುವುದಕ್ಕೆ ಅವಕಾಶ ಕೊಟ್ಟ ಚಾನೆಲ್. ನನಗೆ ಒಂದಿಷ್ಟು ಗುರುತು ಅನ್ನೋದು ಇಲ್ಲಿಂದಲೇ ಸಿಕ್ಕಿದೆ" ಎಂದು ತನ್ನ ಜರ್ನಿಯನ್ನು ಮೆಲುಗು ಹಾಕಿದ್ದಾರೆ.

ಅಂದ್ಹಾಗೆ ಯಶವಂತ್‌ಗೆ ಸಿನಿಮಾ ನಟನಾಗಬೇಕು ಅನ್ನೋ ಕನಸು ಇತ್ತು. ಮೀಡಿಯಾ ಅವರ ಮೊದಲ ಆಯ್ಕೆ ಆಗಿರಲಿಲ್ಲ. "ಮೀಡಿಯಾಗೆ ಬರಬೇಕು ಅನ್ನೋದು ಇರಲಿಲ್ಲ. ಅಚಾನಕ್ ಆಗಿ ಬಂದಿದ್ದು. ಸಿನಿಮಾ ಮಾಡಬೇಕು ಅನ್ನೋ ಆಸೆಯಿತ್ತು. ಆದರೆ, ಮೀಡಿಯಾಗೆ ಬಂದ್ಮೇಲೆ ಒಂದಷ್ಟು ಅವಕಾಶಗಳು ಸಿಗುತ್ತಾ ಹೋಯ್ತು. ಸಿನಿಮಾ ಮಾಡೋಣ ಅಂತ ಶುರು ಮಾಡಿದಾಗ ಶಾರ್ಟ್ ಫಿಲ್ಮ್ಸ್‌ನಿಂದ ಶುರು ಮಾಡೋಣ ಅಂದುಕೊಂಡೆ. ಕೆಲವರು ಸಾಂಗ್‌ನಿಂದ ಹೋಗೋಣ ಅಂತ ಹೇಳಿದರು. ಮೂರು ವರ್ಷದಿಂದ ಸಾಂಗ್ ಮಾಡೋಣ ಅಂದುಕೊಂಡಿದ್ದೆ. ಪ್ರತಿ ಬಾರಿಯೂ ಏನಾದರೂ ಒಂದು ಎಡವಟ್ಟು ಆಗುತ್ತಿತ್ತು. ಹೊಸಬ ಅನ್ನೋ ಕಾರಣಕ್ಕೆ ಯಾರೂ ಮುಂದೆ ಬರುತ್ತಿರಲಿಲ್ಲ. ಈ ಬಾರಿ ಏನಾದರೂ ಆಗಲಿ ಮಾಡೇಬಿಡಬೇಕು ಅಂತ ಕಳೆದ ಡಿಸೆಂಬರ್ ತಿಂಗಳಲ್ಲಿ ಈ ಪ್ರಾಜೆಕ್ಟ್ ಶುರು ಮಾಡಿದೆ." ಎನ್ನುತ್ತಾರೆ ಯಶವಂತ್.
ಯಶವಂತ್ ಮೊದಲ ಅಲ್ಬಮ್ ಸಾಂಗ್ 'ಟಾಪ್ ನಾಚ್ ಸುಂದ್ರಿ'ಗೆ ಚಿತ್ರರಂಗ ಬೆಂಬಲಕ್ಕೆ ನಿಂತಿದೆ. ಜಯಮಾಲಾ, ಸುಂದರ್‌ರಾಜ್, ಚಂದನ್ ಶೆಟ್ಟಿ ಸಾಥ್ ಕೊಟ್ಟಿದ್ದಾರೆ. "ಆಂಕರ್ ಟು ಪರ್ಫಾರ್ಮರ್ ಅಂತ ಒಂದು ಟ್ಯಾಗ್ ಲೈನ್ ಹಾಕೊಂಡು ಫಸ್ಟ್ ಪೋಸ್ಟರ್ ಬಿಟ್ಟಿದ್ದೆ. ಅದು ತುಂಬಾನೇ ಚೆನ್ನಾಗಿ ಎಲ್ಲಾ ಕಡೆ ರೀಚ್ ಆಯ್ತು. ಚಂದನ್ ಶೆಟ್ಟಿಯವರ ಸಾಂಗ್ ಕೂಡ ರಿಲೀಸ್ ಇದೆ. ಈ ಮಧ್ಯೆ ಚಂದನ್ ಶೆಟ್ಟಿಯವರೇ ಪೋಸ್ಟರ್ ಅನ್ನು ರಿಲೀಸ್ ಮಾಡಿಕೊಟ್ಟಿದ್ದಾರೆ. ಮೊದಲನೆಯದಾಗಿ ಫಿಲ್ಮ್ ಚೇಂಬರ್ ಅಧ್ಯಕ್ಷರು ಡಾ.ಜಯಮಾಲ ಅವರು ಟೈಟಲ್ ಪೋಸ್ಟರ್ ರಿಲೀಸ್ ಮಾಡಿಕೊಟ್ಟಿದ್ದರು" ಎಂದು ನೆನಪಿಸಿಕೊಂಡಿದ್ದಾರೆ.
ಈಗಾಗಲೇ 'ಟಾಪ್ ನಾಚ್ ಸುಂದ್ರಿ' ಹಾಡಿನ ರಿಲೀಸ್ ಪೋಸ್ಟರ್ ಅನ್ನು ತಾರಾ ಅನುರಾಧ ಚಂದನ್ ಶೆಟ್ಟಿ ಹಾಗೂ ರುಶಿಕಾ ಗೋಲ್ಡ್ ಕಂಪನಿಯ ಮಾಲೀಕ ಶಶಿ ಕುಮಾರ್ ರಿಲೀಸ್ ಮಾಡಿದ್ದಾರೆ . ಏಪ್ರಿಲ್ ಬುಧವಾರ 22 ರಂದು YASH MUSICS ಯೂಟ್ಯೂಬ್ ಚಾನೆಲ್ ನಲ್ಲಿ 5.15 ಕ್ಕೆ ಈ ಹಾಡು ರಿಲೀಸ್ ಆಗುತ್ತಿದೆ.


Click it and Unblock the Notifications