"14 ವರ್ಷ ಜೊತೆಗಿದ್ದು ದೂರ ಆಗಿಬಿಟ್ವಾ?.. ಸಂಕಟ ಆಗಿ ಅತ್ತುಬಿಟ್ಟೆ"; ಗಿಚ್ಚಿ ಗಿಲಿಗಿಲಿ ಜಾಹ್ನವಿ
ಕಿರುತೆರೆಯಲ್ಲಿ ಮಿಂಚಿದವರು ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಹೊಸತೇನು ಅಲ್ಲ. ಆದರೆ, ನ್ಯೂಸ್ ಆಂಕರ್ ಆಗಿದ್ದವರು ಇಂದು ಸಿನಿಮಾಗೆ ನಾಯಕಿಯಾದವರು ತುಂಬಾನೇ ವಿರಳ. ಇಂತಹವರಲ್ಲಿ ಜಾಹ್ನವಿ ಕೂಡ ಒಬ್ಬರು. ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿರುವ 'ಅಧಿಪತ್ರ' ಸಿನಿಮಾಗೆ ಜಾಹ್ನವಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರ ಸಿನಿಮಾ ಇದೇ ವಾರ ಬಿಡುಗಡೆಯಾಗುತ್ತಿದೆ.
'ಅಧಿಪತ್ರ' ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿರುವ ನಟಿ ಜಾಹ್ನವಿ ತಮ್ಮ ಬದುಕಿನ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ನಿರೂಪಣೆಯಿಂದ ಸಿನಿಮಾ ಕಡೆ ವಾಲಿದಾಗ ಅವರ ಆಪ್ತರ ಪ್ರತಿಕ್ರಿಯೆ ಹೇಗಿತ್ತು? ವಿಚ್ಛೇದನಕ್ಕೆ ಸಿನಿಮಾ ಹಾಗೂ ರಿಯಾಲಿಟಿ ಶೋ ಕಾರಣನಾ? 14 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ ಬಳಿಕ ಬದುಕು ಹೇಗಿದೆ? ಅನ್ನೋದನ್ನು ಫಿಲ್ಮಿಬೀಟ್ ಕನ್ನಡ ಜೊತೆ ಹಂಚಿಕೊಂಡಿದ್ದಾರೆ.

ಜಾಹ್ನವಿ ಮೊದಲು ನ್ಯೂಸ್ ಚಾನೆಲ್‌ಗಳಲ್ಲಿ ಆಂಕರ್ ಆಗಿ ಕೆಲಸ ಮಾಡಿದವರು. ಬಳಿಕ ರಿಯಾಲಿಟಿ ಶೋಗಳಲ್ಲಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿರೂಪಣೆ ಬಿಟ್ಟು ನಟನೆಗೆ ಇಳಿದಾಗ ಅವರ ಆಪ್ತರು ಏನಂದರು? ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ನಾನು ಆಂಕರಿಂಗ್ ಬಿಟ್ಟು ಸಿನಿಮಾ ಮಾಡುವುದಕ್ಕೆ ಬಂದಾಗ ಎಲ್ಲರೂ ಖುಷಿ ಪಟ್ಟರು. ಯಾಕಂದ್ರೆ, ನಾನು ಅಂತಹ ಸರ್ಕಲ್ ಅನ್ನೇ ಇಟ್ಟುಕೊಳ್ಳುವುದು. ಇನ್ನು ಹೊರಗಡೆಯವರು ಏನೇ ಮಾತಾಡಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಹೊರಗಡೆಯವರಿಂದ ಏನು ಮಾತು ಬಂದಿದೆ ಅನ್ನೋದು ಕೂಡ ನನಗೆ ಗೊತ್ತಿಲ್ಲ. ನನ್ನ ಸುತ್ತಮುತ್ತ, ನಮ್ಮ ಅಮ್ಮ ಅವರಿಗೆಲ್ಲ ತುಂಬಾನೇ ಖುಷಿಯಿದೆ. ಮೊದಲು ಅವರಿಗೆ ಸ್ವಲ್ಪ ಭಯವಿತ್ತು. ಯಾರೂ ನೆಗೆಟಿವ್ ಆಗಿ ಮಾತಾಡಿಲ್ಲ. ಎಲ್ಲರೂ ಪಾಸಿಟಿವ್ ಆಗಿಯೇ ಮಾತಾಡಿದ್ದಾರೆ." ಎನ್ನುತ್ತಾರೆ ಜಾಹ್ನವಿ.
ಇದೇ ಸಂದರ್ಶನದಲ್ಲಿ ವಿಚ್ಚೇದನದ ಬಳಿಕ ಜೀವನ ಹೇಗಿದೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಮುಂಚೆಗಿಂತಲೂ ತುಂಬಾನೇ ಫ್ರೀಯಾಗಿ ಆ ಫ್ರೀಡಂ ಅನ್ನು ಎಂಜಾಯ್ ಮಾಡುತ್ತಿದ್ದೇನೆ. ಅಂದರೆ, ಮನಸ್ಸಿಗೆ ನೆಮ್ಮದಿ ಇದೆ. ಇವತ್ತು ಇಂಟರ್‌ವ್ಯೂ ಇದ್ದರೆ, ನಾಳೆ ನನ್ನದು ಯೂಟ್ಯೂಬ್ ಕೆಲಸ ಮಾಡುತ್ತೇನೆ. ಸವಿರುಚಿ ಶುರುವಾದರೆ ಅಲ್ಲಿ ಕೆಲಸ ಮಾಡುತ್ತೇನೆ. ವೇದಿಕೆ ಮೇಲೆ ನಿರೂಪಣೆ ಮಾಡುವುದಕ್ಕೆ ಸಿಕ್ಕರೆ ಅಲ್ಲಿ ನಿರೂಪಣೆ ಮಾಡುತ್ತೇನೆ. ಎಲ್ಲಾದರೂ ಫಾರಿನ್‌ಗೆ ನಿರೂಪಣೆ ಮಾಡುವುದಕ್ಕೆ ಅವಕಾಶ ಸಿಕ್ಕರೆ ಅಲ್ಲಿಗೆ ಹೋಗುತ್ತೇನೆ. ನನಗೆ ತುಂಬಾ ಕೆಲಸ ಮಾಡಬೇಕು. ಹೆಸರು ಮಾಡಬೇಕು ಅಂತ ಮೊದಲಿನಿಂದಲೂ ಆಸೆ. ಈಗ ಯಾವುದೇ ರಿಸ್ಟ್ರಿಕನ್ ಇಲ್ಲದೆ. ನನ್ನ ಲೈಫ್‌ನ ನಿರ್ಧಾರವನ್ನು ನಾನೇ ತೆಗೆದುಕೊಂಡು ನನ್ನ ಲೈಫ್ ಅನ್ನು ನಾನೇ ರೂಲ್ ಮಾಡುತ್ತಿದ್ದೇನೆ. ಮುಂಚೆ ಬೇರೆಯವರು ಮಾಡುತ್ತಿದ್ದರು." ಎನ್ನುತ್ತಾರೆ.

ವಿಚ್ಛೇದನಕ್ಕೂ ಮುನ್ನ ಒಂದು ಸಿನಿಮಾಗೆ ಆಫರ್ ಬಂದಾಗ ಪತಿಗೂ ಇಷ್ಟ ಆಗಬೇಕಿತ್ತು. ಒಂದು ವೇಳೆ ಅವರು ನೋ ಅಂದರೆ ಆಗುತ್ತಿರಲಿಲ್ಲ. ಇಬ್ಬರೂ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತಿತ್ತು. ಹಣಕಾಸುಗಳ ಲೆಕ್ಕದಲ್ಲಿ ಹಿಂದೆ ಮುಂದೆ ಆಗುತ್ತಿತ್ತು. ಊರಿಗೆ ಹೋಗಬೇಕು ಅಂದರೆ, ಇಬ್ಬರೂ ಸೇರಿಕೊಂಡೇ ನಿರ್ಧಾರ ಮಾಡಬೇಕಾಗಿತ್ತು. ಕೆಲವೊಂದು ತಪ್ಪು ತಿಳುವಳಿಕೆಗಳಿಂದ ಗಲಾಟೆಗಳು ಆಗುತ್ತಿತ್ತು. ಈಗ ಆ ವ್ಯಕ್ತಿಯಿಲ್ಲ. ಹೀಗಾಗಿ ಮಗ, ಭವಿಷ್ಯದ ಯೋಚನೆಗಳು ಇದೆ" ಎಂದು ಜಾಹ್ನವಿ ಫಿಲ್ಮಿಬೀಟ್ ಕನ್ನಡ ಹೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕೆಲವೊಮ್ಮೆ ಅವರ ದಾಂಪತ್ಯ ಜೀವನವನ್ನು ನೆನೆಸಿಕೊಂಡು ದಿಢೀರನೇ ಅಳು ಬಂದುಬಿಡುತ್ತಂತೆ. ಎಲ್ಲಾ ನೆನಪಿಸಿಕೊಂಡಿ ಸಂಕಟ ಆಗುತ್ತೆ ಎಂದಿದ್ದಾರೆ. "ಸುಮ್ಮನೆ ಒಮ್ಮೆ ಮಲಗಿದ್ದಾಗ ತಕ್ಷಣ ಎಚ್ಚರ ಆಗುತ್ತೆ. 14 ವರ್ಷ ಜೊತೆಗಿದ್ದು ದೂರ ಆಗಿಬಿಟ್ವಾ? ಅಂತ ಅನಿಸುತ್ತೆ. ಅದೊಂತರ ಸಂಕಟ ತರ ಫೀಲ್ ಆಗುತ್ತೆ. ಆಮೇಲೆ ನನ್ನನ್ನು ನಾನೇ ಕಂಟ್ರೋಲ್ ಮಾಡಿಕೊಳ್ಳುತ್ತೇನೆ. ನಾವು ಎಷ್ಟೇ ಸ್ಟ್ರಾಂಗ್ ಆಗಿ ಕಾಣಿಸಿಕೊಳ್ಳಬಹುದು. ನಾವು ಮನುಷ್ಯರೇ ಅಲ್ವಾ? 14 ವರ್ಷದ ಜರ್ನಿಯಲ್ಲಿ ಎಷ್ಟೇ ಕೆಟ್ಟದ್ದು ನಡೆದಿದ್ದರೂ ಒಂದಾದರೂ ಒಳ್ಳೆಯದು ಇದ್ದೇ ಇರುತ್ತೆ ಅಲ್ವಾ? ಆದರೆ, ತಕ್ಷಣ ಸರಿ ಹೋಗುತ್ತೇನೆ." ಎಂದಿದ್ದಾರೆ ಜಾಹ್ನವಿ.
ಹಾಗೇ ಸಿನಿಮಾ ಮಾಡುವುದಕ್ಕಾಗಲಿ, ಗಿಚ್ಚಿ ಗಿಲಿಗಿಲಿ ಮಾಡುವುದಕ್ಕಾಗಲಿ ಪರಿಯೊಂದಿಗೆ ವಿಚ್ಛೇದನ ಪಡೆದಿದ್ದಲ್ಲ. ಅದಕ್ಕೆ ಬೇರೆ ಕಾರಣನೇ ಇದೆ. ಇದನ್ನೆಲ್ಲ ಮಾಡುವುದಕ್ಕೆ ಬಿಟ್ಟಿದ್ದರೆ ಜೊತೆಯಲ್ಲಿ ಇರಬಹುದು ಅನ್ನೋ ಆಲೋಚನೆ ಬಂದೇ ಇಲ್ಲ. ಇಬ್ಬರು ಬೇರೆಯಾಗುವುದಕ್ಕೆ ಕಾರಣವೇ ಬೇರೇನೆ ಇದೆ ಎಂದು ಜಾಹ್ನವಿ ಹೇಳಿಕೊಂಡಿದ್ದಾರೆ.


Click it and Unblock the Notifications











