ಯಶ್-ರಿಷಬ್‌ಗೆ ಸಲಾಂ ಹೊಡೆದ ಅನಿಲ್ ಕಪೂರ್ ; ಕನ್ನಡ ಚಿತ್ರರಂಗದ ಅಬ್ಬರಕ್ಕೆ ಬೆರಗಾದ ಬಾಲಿವುಡ್ ದಿಗ್ಗಜ
''ಕೆಜಿಎಫ್'' ಚಿತ್ರದ ಮೂಲಕ ಭಾರತದೆಲ್ಲೆಡೆ ತನ್ನ ಹೆಸರಿನ ಧ್ವಜ ಹಾರಿಸಿದ ಯಶ್ ಸದ್ಯ ವಿಶ್ವದ ಮೇಲೆ ಕಣ್ಣಿಟ್ಟಿದ್ದಾರೆ. ಕನ್ನಡ ಚಿತ್ರರಂಗದತ್ತ ಜಗತ್ತೇ ಈ ಬಾರಿ ತಿರುಗಿ ನೋಡಬೇಕೆಂಬ ಆಶಯದೊಂದಿಗೆ ಟಾಕ್ಸಿಕ್ ಚಿತ್ರವನ್ನು ಶುರು ಮಾಡಿದ್ದಾರೆ. ಮುಂಬೈನಲ್ಲಿ ಬಿಡಾರವನ್ನು ಹೂಡಿ ಚಿತ್ರದ ಚಿತ್ರೀಕರಣವನ್ನು ಮಾಡಿದ್ದಾರೆ. ಇನ್ನೇನು ಕೆಲವೇ ದಿನ ''ಟಾಕ್ಸಿಕ್'' ಬೆಳ್ಳಿಪರದೆಯ ಮೇಲೆ ಧಗಧಗಿಸಲಿದೆ. ಈಗಾಗಲೇ ಬಿಡುಗಡೆಯಾಗಿರುವ ಟಾಕ್ಸಿಕ್‌ನ ಕಿಲ್ಲರ್ ಲೇಡಿಗಳ ಲುಕ್ ಹಲವರಿಗೆ ಕಿಕ್ಕೇರಿಸಿದೆ.
ಹೀಗಿರುವಾಗ ಅನಿಲ್ ಕಪೂರ್ ಯಶ್‌ಗೆ ಸಲಾಂ ಹೊಡೆದಿದ್ದಾರೆ. ಕೇವಲ ಯಶ್ ಮಾತ್ರವಲ್ಲ ಪ್ರಶಾಂತ್ ನೀಲ್ ಮತ್ತು ರಿಷಬ್ ಶೆಟ್ಟಿಯ ಕುರಿತು ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇಷ್ಟೇ ಅಲ್ಲ ಕನ್ನಡ ಚಿತ್ರರಂಗವನ್ನು ಕೊಂಡಿದ್ದಾರೆ ಅನಿಲ್ ಕಪೂರ್.

ಹೌದು, ಎಲ್ಲರಿಗೆ ಗೊತ್ತಿರುವಂತೆ ಅನಿಲ್ ಕಪೂರ್ ಅವರ ವೃತ್ತಿ ಬದುಕನ್ನು ಬದಲಿಸಿದ ಚಿತ್ರರಂಗ ಅಂದರೆ ಅದು ಕನ್ನಡ ಚಿತ್ರರಂಗ. ಅನಿಲ್ ಕಪೂರ್ ಸೈಕಲ್ ಹೊಡೆಯುತ್ತಿದ್ದ ಸಮಯದಲ್ಲಿ ಇವರನ್ನು ನಾಯಕನನ್ನಾಗಿಸಿದ್ದ ಮಣಿರತ್ನಂ 1983ರಲ್ಲಿ ''ಪಲ್ಲವಿ ಅನುಪಲ್ಲವಿ'' ಚಿತ್ರವನ್ನು ಮಾಡಿದ್ದರು. ಈ ಮೂಲಕ ಅನಿಲ್ ಕಪೂರ್ ಮಾತ್ರವಲ್ಲದೇ ಮಣಿರತ್ನಂ ಕೂಡ ತಮ್ಮ ವೃತ್ತಿ ಬದುಕಿಗೆ ಕನ್ನಡ ಚಿತ್ರರಂಗದ ಮೂಲಕವೇ ಮುನ್ನುಡಿಯನ್ನು ಬರೆದಿದ್ದರು.
ಬಾಕ್ಸಾಫೀಸ್‌ನಲ್ಲಿ ದೊಡ್ಡದಾಗಿ ಹಿಟ್ ಆಗದಿದ್ದರೂ ''ಪಲ್ಲವಿ ಅನುಪಲ್ಲವಿ'' ಚಿತ್ರದ ಹಾಡುಗಳು ಎವರ್‌ಗ್ರೀನ್ ಹಿಟ್ ಎನಿಸಿಕೊಂಡುಬಿಟ್ಟವು. 'ನಗುವ ನಯನ ಮಧುರ ಮೌನ' ಹಾಗೂ 'ನಗು ಎಂದಿದೆ ಮಂಜಿನ ಬಿಂದು' ಇವತ್ತಿಗೂ ಜನಜನಿತ. ಇಲ್ಲಿಂದಾಚೆ ಮಣಿರತ್ನಂ ಮತ್ತು ಅನಿಲ್ ಕಪೂರ್ ಇಬ್ಬರು ಕನ್ನಡ ಚಿತ್ರರಂಗದ ಪಾಲಿಗೆ ಕೈಗೆಟುಕದ ನಕ್ಷತ್ರಗಳಾದರು. ಮಣಿರತ್ನಂ ದಕ್ಷಿಣ ಭಾರತ ಮಾತ್ರವಲ್ಲದೇ ಭಾರತ ಚಿತ್ರರಂಗದ ಶ್ರೇಷ್ಠ ನಿರ್ದೇಶಕರಾಗಿ ಹೊರ ಹೊಮ್ಮಿದರೆ ಅನಿಲ್ ಕಪೂರ್ ಬಾಲಿವುಡ್‌ನಲ್ಲಿ ಬದುಕು ರೂಪಿಸಿಕೊಂಡರು. ಒಂದಾದ ಮೇಲೊಂದರಂತೆ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕೂಡ ನೀಡಿದರು.
ಹೀಗೆ ಅನಿಲ್ ಕಪೂರ್ ಮತ್ತು ಮಣಿರತ್ನಂ ಜೀವನ ಬದಲಿಸಿದ ''ಪಲ್ಲವಿ ಅನುಪಲ್ಲವಿ'' ಚಿತ್ರಕ್ಕೆ ಇಂದು (ಜನವರಿ 7 ) 43ರ ಹರೆಯ. ಈ ಹಿನ್ನೆಲೆ ಅನಿಲ್ ಕಪೂರ್ ತಾವು ಬೆಳೆದು ಬಂದ ದಾರಿಯನ್ನೊಮ್ಮೆ ಹಿಂದೆ ತಿರುಗಿ ನೋಡಿದ್ದಾರೆ. '' ಪಲ್ಲವಿ ಅನುಪಲ್ಲವಿ'' ಚಿತ್ರಕ್ಕೆ 43 ವಸಂತ ತುಂಬಿದ ಹಿನ್ನೆಲೆ ಸಂಭ್ರಮ ಪಟ್ಟಿದ್ದಾರೆ. ಇದೇ ಸಮಯದಲ್ಲಿ ಕನ್ನಡ ಚಿತ್ರರಂಗದ ಬೆಳವಣಿಗೆಯನ್ನು ಕಂಡು ಅನಿಲ್ ಕಪೂರ್ ಖುಷಿ ವ್ಯಕ್ತಪಡಿಸಿದ್ದಾರೆ. ಯಶ್, ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ ಮತ್ತು ಕೆಜಿಎಫ್ , ಕಾಂತಾರ ತಂಡಕ್ಕೆ ಸಲಾಂ ಹೊಡೆದಿದ್ದಾರೆ.
ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅನಿಲ್ ಕಪೂರ್ ಕನ್ನಡ ಚಿತ್ರರಂಗದಲ್ಲಿನ ನನ್ನ ಮೊದಲ ಹೆಜ್ಜೆಗೆ 43 ವರ್ಷಗಳಾಗಿವೆ. ಅಲ್ಲಿಂದ ಇಲ್ಲಿಯವರೆಗೆ ಕನ್ನಡ ಚಿತ್ರರಂಗ ಭಾರತೀಯ ಚಿತ್ರರಂಗದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಬೆಳೆದಿರುವುದನ್ನು ನೋಡಿದರೆ ಆಶ್ಚರ್ಯ ಆಗುತ್ತೆ ಎಂದು ಹೇಳಿದ್ದಾರೆ. ಕನ್ನಡ ಚಿತ್ರರಂಗವನ್ನು ಮೇಲಕ್ಕೆ ತೆಗೆದುಕೊಂಡ ಹೋದ ಯಶ್, ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ ಹಾಗೂ ಕಾಂತಾರ, ಕೆಜಿಎಫ್ ತಂಡಗಳಿಗೆ ನಾನು ಸೆಲ್ಯೂಟ್ ಹೊಡೆಯುತ್ತೇನೆ ಎಂದಿರುವ ಅನಿಲ್ ಕಪೂರ್ ಈ ಅದ್ಭುತ ಚಿತ್ರರಂಗದ ಜೊತೆ ನನ್ನ ಕೊನೆಯ ಒಡನಾಟ ಇದಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಅನಿಲ್ ಕಪೂರ್ ಬರೆದುಕೊಂಡಿದ್ದಾರೆ.

ಸದ್ಯ ಅನಿಲ್ ಕಪೂರ್ ಅವರ ಈ ಬರಹ ಹಲವರ ಗಮನ ಸೆಳೆದಿದ್ದು ಹಲವರು ''ಪಲ್ಲವಿ ಅನುಪಲ್ಲವಿ'' 43 ವರ್ಷ ಪೂರೈಸಿದ ಹಿನ್ನೆಲೆ ಅನಿಲ್ ಕಪೂರ್ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇನ್ನು ಕೆಲವರು ಏಕಾಏಕಿ ಅನಿಲ್ ಕಪೂರ್ ಅವರಿಗೆ ಕನ್ನಡ ಚಿತ್ರರಂಗದ ಮೇಲೆ ಪ್ರೀತಿ ಮತ್ತು ಅಭಿಮಾನ ಮೂಡಿದ್ದನ್ನು ಕಂಡು ಆಶ್ಚರ್ಯಗೊಂಡಿದ್ದಾರೆ.
ಅಂದ್ಹಾಗೇ ಯಶ್ ''ಟಾಕ್ಸಿಕ್'' ಚಿತ್ರವನ್ನು ಶುರು ಮಾಡಿದ ಕೆಲ ದಿನಗಳ ನಂತರದಿಂದ ''ಟಾಕ್ಸಿಕ್''ನಲ್ಲಿ ಅನಿಲ್ ಕಪೂರ್ ಇದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಲೇ ಇದೆ. ''ಟಾಕ್ಸಿಕ್'' ಮೂಲಕ 43 ವರ್ಷದ ನಂತರ ಅನಿಲ್ ಕಪೂರ್ ಕನ್ನಡಕ್ಕೆ ಮರಳುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಲೇ ಇದೆ. ಈ ಸುದ್ದಿಗಳ ಮೇಲೆ ಅನಿಲ್ ಕಪೂರ್ ಆಗಲಿ ಯಶ್ ಆಗಲಿ ಅಧಿಕೃತ ಮುದ್ರೆಯನ್ನು ಒತ್ತಿಲ್ಲವಾದರೂ ಸದ್ಯ ಅನಿಲ್ ಕಪೂರ್ ಮಾಡಿರುವ ಈ ಟ್ವಿಟ್ ಹರಿದಾಡುತ್ತಿರುವ ಈ ಸುದ್ದಿಯನ್ನು ಪುಷ್ಠಿಕರಿಸುವಂತೆ ಇದೆ. ಹಲವರಲ್ಲಿನ ಅನುಮಾನವನ್ನು ಕೂಡ ಹೆಚ್ಚಿಸಿದೆ. ಯಾರಿಗೆ ಗೊತ್ತು ಸುದ್ದಿ ನಿಜವಾಗಿ ''ಟಾಕ್ಸಿಕ್'' ನಲ್ಲಿ ಅನಿಲ್ ಕಪೂರ್ ಇದ್ದರೂ ಇರಬಹುದು. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಬಾಲಿವುಡ್‌ನ ದಿಗ್ಗಜ ಕಂ ಬ್ಯಾಕ್ ಮಾಡಿದ್ದರು ಮಾಡಿರಬಹುದು.


Click it and Unblock the Notifications











