Aniruddh Jatkar: ಅನಿರುದ್ಧ್ ಸಾಕ್ಷ್ಯಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂತು.. ರಾಜ್ಯ ಪ್ರಶಸ್ತಿ ರಿಜೆಕ್ಟ್ ಆಗಿದ್ದೇಕೆ?
ಸಾಹಸ ಸಿಂಹ ವಿಷ್ನುವರ್ಧನ್ ಅಳಿಯ ನಟ ಹಾಗೂ ನಿರ್ದೇಶಕ ಅನಿರುದ್ಧ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಇಂದು (ಆಗಸ್ಟ್ 24) ರಾಷ್ಟ್ರ ಪ್ರಶಸ್ತಿ ಘೋಷಣೆಯಾಗಿದ್ದು ಅನಿರುದ್ಧ್‌ಗೆ ರಾಷ್ಟ್ರ ಪ್ರಶಸ್ತಿ ಅನೌನ್ಸ್ ಆಗಿದೆ. ಈ ಸಂಬಂಧ ಅನಿರುದ್ಧ್ ಖುಷಿಯ ಅಲೆಯಲ್ಲಿ ತೇಲಾಡುತ್ತಿದ್ದಾರೆ.
ಅನಿರುದ್ಧ್ ತಮ್ಮ ಅತ್ತೆ ಹಾಗೂ ಕನ್ನಡದ ಬಹುಭಾಷಾ ನಟಿ ಭಾರತಿ ವಿಷ್ಣುವರ್ಧನ್ ಅವರ ಮೇಲೆ ಸಾಕ್ಷ್ಯಚಿತ್ರವನ್ನು ಮಾಡಿದ್ದರು. ಅದುವೇ 'ಬಾಳೆ ಬಂಗಾರ'. ಇದೇ ಸಾಕ್ಷ್ಯಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಇದರಲ್ಲಿ ಪಂಚಭಾಷಾ ನಟಿ ಭಾರತಿ ವಿಷ್ಣುವರ್ಧನ್ ಅವರ ಸಿನಿ ಬದುಕನ್ನು ಸಾಕ್ಷ್ಯಚಿತ್ರದ ಮೂಲಕ ಚಿತ್ರೀಸಲಾಗಿತ್ತು. ಈ ಸಾಕ್ಷ್ಯಚಿತ್ರ ಸುಮಾರು 2 ಗಂಟೆ 31 ನಿಮಿಷಗಳಿವೆ.

ಇದೇ ಖುಷಿಯಲ್ಲಿ ಅನಿರುದ್ಧ್ ತಮ್ಮ ಅಭಿಮಾನಿಗಳಿಗೆ ಹಾಗೂ ಜನತೆಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಹಾಗೇ 'ಬಾಳೆ ಬಂಗಾರ' ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಅದೇ ರಾಜ್ಯ ಪ್ರಶಸ್ತಿ ಅರ್ಜಿ ಸಲ್ಲಿಸಿದಾಗ ಯಾಕೆ ರಿಜೆಕ್ಟ್ ಆಯ್ತು? ಅನ್ನೋದನ್ನು ವಿಡಿಯೋ ಮಾಡಿ ರಿವೀಲ್ ಮಾಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.
"ನಮಸ್ಕಾರ ಎಲ್ಲರಿಗೂ.. ತಮ್ಮೆಲ್ಲರಿಗೂ ಈಗಾಗಲೇ ಗೊತ್ತಿರೋ ಹಾಗೆ ಇವತ್ತು ನಮಗೆ ರಾಷ್ಟ್ರ ಪ್ರಶಸ್ತಿ ಬಂದಿದೆ. ಬಹಳ ಸಂತೋಷ ಆಗುತ್ತಿದೆ. ಇದನ್ನು ಪದಗಳಲ್ಲಿ ವ್ಯಕ್ತಪಡಿಸುವುದಕ್ಕೆ ನನ್ನಿಂದ ಆಗುತ್ತಿಲ್ಲ. ಆದರೆ, ಬಹಳ ಸಂತೋಷ ಆಗುತ್ತಿದೆ. ಬಾಳೆ ಬಂಗಾರ ಈ ಸಾಕ್ಷ ಚಿತ್ರ ಪದ್ಮಶ್ರೀ ಪುರಸ್ಕೃತರಾದ ಡಾ.ಭಾರತಿ ವಿಷ್ಣುವರ್ಧನ್ ಅವರ ಮೇಲೆ ಇರುವಂತಹ ಸಾಕ್ಷಾ ಚಿತ್ರ. ಇದರ ಪರಿಕಲ್ಪನೆ ಇದಕ್ಕೆ ಬೇಕಾಗಿರುವಂತಹ ಸಂಶೋಧನೆ, ಇದರ ಬರವಣಿಗೆ, ಇದರ ನಿರೂಪಣೆ ಹಾಗೂ ಇದರ ನಿರ್ದೇಶನ ನನ್ನದಾಗಿದೆ. ಇದು ಒಬ್ಬ ಕಲಾವಿದೆಯ ಮೇಲೆ ಅತೀ ಹೆಚ್ಚು ಕಾಲ ಆಗಿರುವಂತಹ ಈ ಸಾಕ್ಷಾಚಿತ್ರ." ಎಂದು ಅನಿರುದ್ಧ್ ಮಾಹಿತಿ ನೀಡಿದ್ದಾರೆ.

"ಇವತ್ತು ರಾಷ್ಟ್ರ ಪ್ರಶಸ್ತಿ ನನಗೆ ಬಂದಿದೆ. ಇದಕ್ಕೂ ಮುನ್ನ ನನ್ನ ಹೆಸರಲ್ಲಿ ಈ ಸಾಕ್ಷಾಚಿತ್ರಕ್ಕೆ ಸಂಬಂಧ ಪಟ್ಟಂತೆ ಮೂರು ದಾಖಲೆಗಳಿವೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್, ಕಲಾಂ ಬುಕ್ ಆಫ್ ರೆಕಾರ್ಡ್ಸ್, ಜೀವಂತವಿರುವ ನಟಿಯ ಅತೀ ಉದ್ದ ಸಾಕ್ಷಾಚಿತ್ರ ಇದಾಗಿದೆ."
"ಈ ಸಾಕ್ಷಾ ಚಿತ್ರ ಏನಿದೆ. ಇದೊಂದು ನಾಂದಿ ಆಗಬೇಕು ಅಂತ ಬಯಸುತ್ತೇನೆ. ನಮ್ಮ ಹಿರಿಯರ ಬಗ್ಗೆ ನಮಗೆ ಪರಿಚಯ ಆದಾಗ, ನಮ್ಮ ಬುನಾದಿಯ ಬಗ್ಗೆ, ನಮ್ಮ ಇತಿಹಾಸ ಬಗ್ಗೆ ನಮಗೆ ಪರಿಚಯ ಆದಾಗ, ನಮ್ಮ ನಾಡಿನ ಬಗ್ಗೆ, ದೇಶದ ಬಗ್ಗೆ, ಭಾಷೆಯ ಬಗ್ಗೆ, ಸಂಸ್ಕೃತಿಗಳ ಬಗ್ಗೆ ಮತ್ತಷ್ಟು ಹೆಚ್ಚಾಗುತ್ತೆ. ಆ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನ ಆಗಬೇಕು."
"ರಾಜ್ಯ ಪ್ರಶಸ್ತಿಯಲ್ಲಿ ಅರ್ಜಿ ಸಲ್ಲಿಸುವುದಕ್ಕೆ ನಾನು ಪ್ರಯತ್ನ ಪಟ್ಟೆ ಆದರೆ, ಅಲ್ಲಿ ಅರ್ಜಿಯನ್ನು ತೆಗೆದುಕೊಳ್ಳಲೇ ಇಲ್ಲ. ಯಾಕೆ ಅಂದರೆ, ಅಲ್ಲಿ ಒಂದಿಷ್ಟು ನಿಯಮಗಳು ಇವೆ. ಕಿರುಚಿತ್ರ ಹಾಗೂ ಸಾಕ್ಷ್ಯಚಿತ್ರ ಎರಡನ್ನೂ ಒಂದೇ ವಿಭಾಗದಲ್ಲಿ ಅವರು ಇಟ್ಟಿದ್ದಾರೆ. ಅದರ ಅವಧಿ ಕೇವಲ ಮೂವತ್ತು ನಿಮಿಷ ಅಂತ ಇದೆ. ಒಬ್ಬ ಸಾಧಕರ ಬಗ್ಗೆ ಅಥವಾ ಒಂದು ವಿಷಯದ ಬಗ್ಗೆ ಸಮಗ್ರವಾಗಿ ಹೇಳಬೇಕು ಅನ್ನೋದಾದರೆ, ಕೇವಲ 30 ನಿಮಿಷ ಸಾಕಾಗುವುದಿಲ್ಲ. ಆ ವ್ಯಕ್ತಿಗೆ ಸರಿಯಾದ ರೀತಿಯಲ್ಲಿ ನ್ಯಾಯ ವದಗಿಸುವುದಕ್ಕೆ ಆಗುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಬೇಡಿಕೊಳ್ಳುತ್ತೇನೆ. ಈ ನಿಯಮವನ್ನು ಬದಲಾಯಿಸಿ ಎಂದು ಹೇಳುತ್ತೇನೆ." ಎಂದು ರಾಜ್ಯ ಪ್ರಶಸ್ತಿಗೆ ಯಾಕೆ ಆಯ್ಕೆ ಆಗಿಲ್ಲ ಅನ್ನೋದನ್ನು ರಿವೀಲ್ ಮಾಡಿದ್ದಾರೆ.


Click it and Unblock the Notifications











