ಅಪರ್ಣ ವಸ್ತಾರೆ ನಟಿಸಿದ ಕೊನೆಯ ಸಿನಿಮಾ ಯಾವುದು? ಅದರಲ್ಲಿ ಅವರ ಪಾತ್ರವೇನು?
ಇತ್ತೀಚೆಗೆ ಅಪಾರ ಅಭಿಮಾನಿಗಳನ್ನು ಅಗಲಿದ ಅಚ್ಚ ಕನ್ನಡದ ನಿರೂಪಕಿ ಅಪರ್ಣ ವಸ್ತಾರೆ. ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಈ ನಿರೂಪಕಿಯ ಅಗಲಿಗೆ ಅದೆಷ್ಟೋ ಮಂದಿಗೆ ಇನ್ನೂ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಅಪರ್ಣ ಅವರ ಅಚ್ಚ ಕನ್ನಡದ ಮಾತುಗಳು ಆ ಮಟ್ಟಿಗೆ ಕನ್ನಡಿಗರ ಮನಗೆದ್ದಿದ್ದವು. ಈ ನಿರೂಪಕಿ ಅನಾರೋಗ್ಯದ ಮಧ್ಯೆಯೂ ಸಿನಿಮಾದಲ್ಲಿ ನಟಿಸುತ್ತಿದ್ದರು. ಇದು ಬಹುಶ: ಅಪರ್ಣ ನಟನೆಯ ಕೊನೆಯ ಸಿನಿಮಾ.
ಅಪರ್ಣ ಮೊದಲು ವೃತ್ತಿ ಬದುಕು ಆರಂಭ ಮಾಡಿದ್ದು ಸಿನಿಮಾದಿಂದಲೇ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕೊನೆಯ ಸಿನಿಮಾ 'ಮಸಣದ ಹೂವು'ನಲ್ಲಿ ಅಪರ್ಣ ನಟಿಸಿದ್ದರು. ಆ ಬಳಿಕ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ ನಂತರ ನಿರೂಪಣೆ ಕಡೆಗೆ ಮುಖ ಮಾಡಿದ್ದರು. ನಿರೂಪಣೆ ಅಪರ್ಣ ಅವರ ಕೈ ಹಿಡಿದಿತ್ತು. ಹೆಸರು ಹಾಗೂ ಹಣ ಅವರನ್ನು ಹಿಂಬಾಲಿಸಿಕೊಂಡು ಬಂದಿತ್ತು.

ನಿರೂಪಣೆ ಮಾಡುವುದರಲ್ಲಿ ಅದೆಷ್ಟು ಬ್ಯುಸಿಯಾಗಿಬಿಟ್ಟರು ಅಂದರೆ, ಸಿನಿಮಾ ಅನ್ನೋದು ಅವರ ಹತ್ತಿರನೂ ಸುಳಿಯಲೇ ಇಲ್ಲ. ಆದರೆ, ಅಪರ್ಣ ವಸ್ತಾರೆ ಸುಮಾರು ಎರಡು ವರ್ಷಗಳ ಹಿಂದೆನೇ ಕನ್ನಡ ಸಿನಿಮಾವೊಂದರಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಅದುವೇ ವಿನಯ್ ರಾಜ್‌ಕುಮಾರ್ ಅಭಿನಯದ 'ಗ್ರಾಮಾಯಣ'.
ಹೌದು, ಅಪರ್ಣ ವಸ್ತಾರೆ 'ಗ್ರಾಮಾಯಣ' ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದರು. ವಿನಯ್ ರಾಜ್‌ಕುಮಾರ್ ಅವರ ಅಮ್ಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಆದರೆ, ಈ ಸಿನಿಮಾದ ಚಿತ್ರೀಕರಣ ತಡವಾಗುತ್ತಿತ್ತು. ಎರಡೆರಡು ಬಾರಿ 'ಗ್ರಾಮಾಯಣ'ದ ಚಿತ್ರೀಕರಣ ನಿಂತಿತ್ತು. ಮತ್ತೆ ಹೊಸ ನಿರ್ಮಾಪಕರೊಂದಿಗೆ ಸೆಟ್ಟೇರಿತ್ತು. ಆಗಲೂ ಅಪರ್ಣಾ ಅವರು ಈ ಪಾತ್ರದಿಂದ ಹಿಂದೆ ಸರಿದಿರಲಿಲ್ಲ. ಅದಕ್ಕೊಂದು ಬಲವಾದ ಕಾರಣವಿತ್ತು.
ಚಿಕ್ಕಮಗಳೂರು ಕಡೂರು ಭಾಗದ ಕಥೆಯನ್ನು 'ಗ್ರಾಮಾಯಣ' ಸಿನಿಮಾದಲ್ಲಿ ಹೇಳಲಾಗುತ್ತಿದೆ. ಇದೇ ತಾಲೂಕಿನ ಪಂಚನಹಳ್ಳಿಯ ಸಮೀಪ ಅಪರ್ಣ ವಸ್ತಾರೆ ಅವರ ಊರು. ಹೀಗಾಗಿ ಅಪರ್ಣ ವಸ್ತಾರೆ ಈ ಸಿನಿಮಾವನ್ನು ಸೆಂಟಿಮೆಂಟ್ ಆಗಿ ತೆಗೆದುಕೊಂಡಿದ್ದರು. ಎಷ್ಟೇ ಕಷ್ಟ ಆದರೂ ಈ ಸಿನಿಮಾದಲ್ಲಿ ನಟಿಸುವುದಕ್ಕೆ ನಿರ್ಧರಿಸಿದ್ದರು. ಆದರೆ, ಅಗಲುವುದಕ್ಕೂ ಮುನ್ನ ಈ ಸಿನಿಮಾ ಮುಗಿಯೇ ಇಲ್ಲ ಅನ್ನೋದು ದುರಂತ.


Click it and Unblock the Notifications











