ಅಣ್ಣಾವ್ರ ಆಸೆ ಬೇರೆನೇ ಇತ್ತು.. ಕಂಠೀರವ ಸ್ಟುಡಿಯೋದಲ್ಲಿ ಸ್ಮಾರಕ ಆಗಿದ್ದೇಗೆ? ಏಪ್ರಿಲ್ 12ರ ಮಧ್ಯರಾತ್ರಿ ನಡೆದಿದ್ದೇನು?
ಡಾ.ರಾಜ್‌ಕುಮಾರ್ ಅವರ ಸ್ಮಾರಕ ವಿಚಾರವಾಗಿ ಚೇತನ್ ಅಹಿಂಸಾ ತೆಗೆದಿರುವ ಕ್ಯಾತೆ ವಿವಾದಕ್ಕೆ ತಿರುಗಿದೆ. ಕನ್ನಡ ಚಿತ್ರರಂಗದ ಗಣ್ಯರು, ಕನ್ನಡ ಪರ ಸಂಘಟನೆಗಳು ಆಕ್ರೋಶ ಹೊರ ಹಾಕುತ್ತಿದ್ದರು. ಡಾ.ರಾಜ್‌ಕುಮಾರ್ ಸ್ಮಾರಕ ವಿಚಾರವಾಗಿ ಚೇತನ್ ಅಹಿಂಸಾ ಹುಟ್ಟಾಕಿರೋ ವಿವಾದಕ್ಕೆ ಕಿಡಿ ಕಾರುತ್ತಿದ್ದಾರೆ. ಅಣ್ಣಾವ್ರ ಕುಟುಂಬವನ್ನು ಹತ್ತಿರದಿಂದ ನೋಡಿರುವ ಎಸ್.ನಾರಾಯಣ್ ಕೂಡ ಚೇತನ್ ವಿರುದ್ಧ ತಿರುಗಿಬಿದ್ದಿದ್ದಾರೆ.
ಕನ್ನಡದ ಹಿರಿಯ ನಿರ್ದೇಶಕ ಎಸ್.ನಾರಾಯಣ್ ಕೂಡ ಚೇತನ್ ಹೇಳಿಕೆಯನ್ನು ಖಂಡಿಸಿದ್ದಾರೆ. ಇತ್ತೀಚೆಗೆ ಈ ಸಂಜೆಗೆ ನೀಡಿದ ಸಂದರ್ಶನದಲ್ಲಿ ಚೇತನ್‌ಗೆ ಅಣ್ಣಾವ್ರು ಚಿತ್ರರಂಗಕ್ಕೆ ನೀಡಿದ ಕೊಡುಗೆಗಳ ಮನವರಿಕೆ ಮಾಡಿಕೊಟ್ಟಿದ್ದಾರೆ.

ಇದೇ ಸಂದರ್ಶನದಲ್ಲಿ ಅಣ್ಣಾವ್ರ ನಿಧನದ ಬಳಿಕ ಅಂತ್ಯ ಸಂಸ್ಕಾರಕ್ಕೆ ಕಂಠೀರವ ಸ್ಟುಡಿಯೋವನ್ನು ಆಯ್ಕೆ ಮಾಡಿದ್ದು ಹೇಗೆ? ಮಧ್ಯರಾತ್ರಿ ಅಂದಿನ ಮುಖ್ಯಮಂತ್ರಿಯಾಗಿದ್ದ ಎಚ್‌ಡಿ ಕುಮಾರಸ್ವಾಮಿ ತೆಗೆದುಕೊಂಡಿದ್ದ ನಿರ್ಧಾರವೇನು? ವರದಪ್ಪ ಅಗಲಿದ ಬಳಿಕ ಅಣ್ಣಾವ್ರು ತಮ್ಮ ಕುಟುಂಬದವರನ್ನು ಕರೆಸಿ ವ್ಯಕ್ತಪಡಿಸಿದ್ದ ಅವರ ಕೊನೆಯ ಆಸೆಯೇನು? ಅನ್ನೋದನ್ನು ಹೇಳಿದ್ದಾರೆ. ಇದೂವರೆಗೂ ಎಲ್ಲೂ ಹೇಳಿರದ ಸಂಗತಿಯನ್ನು ರಿವೀಲ್ ಮಾಡಿದ್ದಾರೆ.
ರಾಜ್‌ಕುಮಾರ್ ಸತ್ತು ಹೋಗಿಬಿಟ್ಟ ಎಂದಿದ್ದ ಅಣ್ಣಾವ್ರು
ಅಣ್ಣಾವ್ರಿಗೆ ಅವರ ಸಹೋದರ ವರದಪ್ಪ ಅವರೊಂದಿಗೆ ಉತ್ತಮ ಬಾಂಧವ್ಯವಿತ್ತು. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರುತ್ತಿರಲಿಲ್ಲ. ಅಣ್ಣಾವ್ರು ಅಗಲುವ ಒಂದು ತಿಂಗಳು ಮುನ್ನ ವರದಪ್ಪ ಇಹಲೋಕ ತ್ಯಜಿಸಿದ್ದರು. ಆಗ ಅಣ್ಣಾವ್ರು ಹೇಳಿದ ಮಾತನ್ನು ಎಸ್.ನಾರಾಯಣ್ ನೆನಪಿಸಿಕೊಂಡಿದ್ದಾರೆ. "ಎಲ್ಲರಿಗೂ ಗೊತ್ತಿಲ್ಲದೆ ಇರುವ ವಿಚಾರ ಹೇಳುತ್ತೇನೆ. ಮಾರ್ಚ್‌ನಲ್ಲಿ ಅಣ್ಣಾವ್ರ ಸಹೋದರ ವರದಪ್ಪನವರು ಹೋಗುತ್ತಾರೆ. ಅವರು ಹೋದ ದಿನ ರಾಜ್‌ಕುಮಾರ್ ಅವರನ್ನು ಯಾರಾದರೂ ನೋಡಿದ್ದರೆ, ನಿಜಕ್ಕೂ ಕರುಳು ಕಿತ್ತು ಬರೋದು. ನಾನು ಹೋಗಿ ಅವರ ಪಕ್ಕದಲ್ಲಿ ಕೂತುಕೊಂಡೆ. ಅವತ್ತು ಅವರು ಒಂದು ಮಾತು ಹೇಳುತ್ತಾರೆ. ವರದಪ್ಪನವರ ಶವ ಅಲ್ಲಿದೆ. ಅವರು ಅವತ್ತು ಒಂದು ಮಾತು ಹೇಳಿದ್ರು. ಆ ಶವದ ಕಡೆ ಕೈ ತೋರಿಸಿ, ರಾಜ್‌ಕುಮಾರ್ ಸತ್ತು ಹೋಗಿಬಿಟ್ಟ ಅಂತ ಹೇಳಿದ್ರು. ನನಗೆ ಚುರುಕ್ ಅಂದ್ಬಿಡ್ತು." ಎಂದಿದ್ದಾರೆ.
"ಯಾವುದೇ ಘಳಿಗೆಯಲ್ಲಿ ನಾನೂ ಹೋಗ್ಬಹುದು"
ಸಹೋದರನನ್ನು ಕಳೆದುಕೊಂಡ ದು:ಖದಲ್ಲಿ ಅಣ್ಣಾವ್ರು ಕುಟುಂಬದವರನ್ನು ಕರೆಸಿ ತನ್ನ ಕೊನೆಯ ಆಸೆಯನ್ನು ವ್ಯಕ್ತಪಡಿಸಿದ್ದರು. "ವರದಪ್ಪನವರ ಅಂತ್ಯಕ್ರಿಯೆ ಆಗುತ್ತೆ. ಮೈಸೂರು ರಸ್ತೆಯಲ್ಲಿ ಇವರ ತೋಟವಿದೆ. ಅಲ್ಲಿ ಅಂತ್ಯಕ್ರಿಯೆ ಆಗುತ್ತೆ. ಅಲ್ಲಿ ತಾಯಿಯ ಅಂತ್ಯಕ್ರಿಯೆ ಆಗಿದೆ. ಪಕ್ಕದಲ್ಲಿ ವರದಪ್ಪನವರ ಅಂತ್ಯಕ್ರಿಯೆ ಮಾಡ್ತಾರೆ. ಅಲ್ಲಿ ಅವರು ಕುಟುಂಬದ ಸದಸ್ಯರನ್ನು ಕರೆಸಿ ಹೇಳ್ತಾರೆ. ಯಾವುದೇ ಘಳಿಗೆಯಲ್ಲಿ ನಾನು ಹೋಗಬಹುದು. ನನ್ನನ್ನು ಈ ಜಾಗದಲ್ಲಿ ಹೂಳಬೇಕು ಎಂದು ಅಣ್ಣಾವ್ರು ಹೇಳುತ್ತಾರೆ. ಅದು ಅಣ್ಣಾವ್ರ ಆಸೆ ಆಗಿತ್ತು. ಅದಾದ ಒಂದು ತಿಂಗಳಲ್ಲೇ ಅಣ್ಣಾವ್ರು ಹೊರಟು ಹೋಗುತ್ತಾರೆ." ಎಂದು ಎಸ್.ನಾರಾಯಣ್ ಹೇಳಿದ್ದಾರೆ.

ಸ್ಮಾರಕಕ್ಕೆ ಕುಟುಂಬದವರ ಬೇಡಿಕೆ ಇರಲಿಲ್ಲ
"ಅವರ ಕುಟುಂಬದಿಂದ ಯಾವುದೇ ಬೇಡಿಕೆ ಬರಲಿಲ್ಲ. ಅವರೆಲ್ಲರೂ ಅಪ್ಪಾಜಿ ಆಸೆಯನ್ನು ಪೂರೈಸಬೇಕು ಅಂತಲೇ ಇದ್ದಿದ್ದು. ಅಲ್ಲಿ ಏನಾಯ್ತು, ಒಬ್ಬ ದೊಡ್ಡ ವ್ಯಕ್ತಿ ಬಂದು ಕೂತುಕೊಂಡರು. ಒಂದು ಜಾಗದಲ್ಲಿ ಎರಡು ಶವ ಸಂಸ್ಕಾರ ಮಾಡಬೇಕು ಅಷ್ಟೇನೆ. ಮೂರನೆಯದ್ದು ಮಾಡಿದರೆ, ಅದು ಸ್ಮಶಾನ ಆಗುತ್ತೆ. ಮೂರನೆಯದ್ದು ಮಾಡಬೇಡಿ ಅಂದರು. ಏನು ಮಾಡಬಹುದು ಅಂದಾಗ, ಕೆಲವರು ಅವರ ಅಪ್ಪಟ ಅಭಿಮಾನಿಗಳ ಒತ್ತಾಯಕ್ಕೆ ಮುಖ್ಯಮಂತ್ರಿಗಳಿಗೆ ಜಾಗ ಕೊಡಿ ಅಂತ ಮನವಿ ಮಾಡಿದರು." ಎಂದು ಎಸ್.ನಾರಾಯಣ್ ಅಂದಿನ ಸನ್ನಿವೇಶವನ್ನು ಹಂಚಿಕೊಂಡಿದ್ದಾರೆ.
ಕಂಠೀರವ ಸ್ಟುಡಿಯೋ ಸೂಚಿಸಿದ್ದು ಯಾರು?
ಅವತ್ತಿನ ಮುಖ್ಯಮಂತ್ರಿ ಆಗಿದ್ದವರು ಎಚ್‌ಡಿ ಕುಮಾರಸ್ವಾಮಿ. ಅಣ್ಣಾವ್ರ ಅಪ್ಪಟ ಅಭಿಮಾನಿಯಾಗಿದ್ದ ಕುಮಾರಸ್ವಾಮಿಯವರಿಗೆ ತನ್ನ ಅವಧಿಯಲ್ಲಿ ಜಾಗಕೊಡಬೇಕು ಅಂತ ಅನಿಸಿತು. ರಾಜ್‌ಕುಮಾರ್ ಅವರಿಗೆ ಒಳ್ಳೆಯ ಸ್ಮಾರಕ ಮಾಡಬೇಕು, ಇಡೀ ರಾಜ್ಯಕ್ಕಷ್ಟೇ ಅಲ್ಲ. ದೇಶವೇ ತಿರುಗಿ ನೋಡಬೇಕು ಅನ್ನೋ ಆಸೆಯಿತ್ತು. ಹಾಗಂತ ಕೇವಲ ಅಭಿಮಾನಕ್ಕೆ ಅಷ್ಟೇ ಅಲ್ಲ, ಅಣ್ಣಾವ್ರು ಅದಕ್ಕೆ ಅರ್ಹರಾಗಿದ್ದರು. ಇದಕ್ಕೆ ಹತ್ತಾರು ಜಾಗಗಳನ್ನು ಸೂಚಿಸಿದರು. ಆಗ ಅಣ್ಣಾವ್ರ ಆಪ್ತರು, ಕಂಠೀರವ ಸ್ಟುಡಿಯೋದಲ್ಲಿ ಮಾಡಿದರೆ ಸೂಕ್ತ ಎಂದು ಸೂಚಿಸಿದ್ದರು.
"ಹೊರಗಡೆಯಿಂದ ಬರೋ ಅಣ್ಣಾವ್ರ ಅಭಿಮಾನಿಗಳಿಗೆ ಸ್ಮಾರಕ ಇದ್ದರೆ, ಇಲ್ಲಿಗೆ ಬಂದು ಅಶೀರ್ವಾದ ಪಡೆದುಕೊಂಡು ಹೋಗುತ್ತಾರೆ ಎಂದು ಕೇಳಿಕೊಂಡಾಗ ಏನೂ ಮಾತಾಡಿಲ್ಲ. ಹಾಗಿದ್ದರೆ, ಮಾಡಿ ಎಂದು ಹೇಳಿದರು. ಇದು ಮಧ್ಯರಾತ್ರಿ ಎರಡು ಗಂಟೆ ಸಮಯ ಆಗ ಅನೌನ್ಸ್ ಮಾಡುತ್ತಾರೆ. ಎಚ್‌ಡಿ ಕುಮಾರಸ್ವಾಮಿಯವರಿಗೆ ಇವತ್ತು ನಾನು ಧನ್ಯವಾದಗಳನ್ನು ಹೇಳುತ್ತೇನೆ. ಪುಣ್ಯದ ಕೆಲಸ ಮಾಡಿದ್ದಾರೆ." ಎಂದು ಎಚ್‌ಡಿಕೆಗೆ ಧನ್ಯವಾದ ಹೇಳಿದ್ದಾರೆ.
ಚೇತನ್ ನೀನೊಬ್ಬನೇ ಬುದ್ಧಿವಂತನಾ?
"ಎಚ್ ಡಿ ಕುಮಾರಸ್ವಾಮಿಯವರು ದಡ್ಡರೇ? ಅವತ್ತು ಇದ್ದ ಅಧಿಕಾರಿಗಳು ದಡ್ಡರೇ? 20 ವರ್ಷಗಳು ಯಾರೂ ಪ್ರಶ್ನೆ ಮಾಡಿಲ್ಲ. ಅವರು ದಡ್ಡರೇ? ನೀನೊಬ್ಬನೇ ಬುದ್ದಿವಂತನಾ? ಇವತ್ತು ಕೇಳುತ್ತಿದ್ದೀಯಾ ಯಾಕೆ ಕೊಟ್ಟರು ಅಂತ ಹೇಳಿ? ಇಲ್ಲಿ ಇರೋರೆಲ್ಲರೂ ಅವಿವೇಕಿಗಳೇ? ಯಾರಿಗೂ ಬುದ್ದಿ ಇಲ್ವಾ ಹಾಗಿದ್ದರೇ? ಎಲ್ಲರೂ ಒಪ್ಪಿಕೊಂಡಿದ್ದಾರಲ್ಲ?" ಎಂದು ಚೇತನ್ ಅಹಿಂಸಾಗೆ ನಿರ್ದೇಶಕ ಎಸ್.ನಾರಾಯಣ್ ತಿರುಗೇಟು ಕೊಟ್ಟಿದ್ದಾರೆ.


Click it and Unblock the Notifications