"ಸೋನು ನಿಗಂನಿಂದ ಹಾಡು ಹಾಡಿಸಿದರೆ ನೀವೇ ಹೊಣೆ"; ಅರ್ಜುನ್ ಜನ್ಯ, ಹರಿಕೃಷ್ಣ, ಅಜನೀಶ್‌ಗೆ ರೂಪೇಶ್ ರಾಜಣ್ಣ ಎಚ್ಚರಿಕೆ
ಬಾಲಿವುಡ್ ಗಾಯಕ ಸೋನು ನಿಗಂ ಕನ್ನಡದಲ್ಲಿ ಲೆಕ್ಕವಿಲ್ಲದಷ್ಟು ಹಾಡುಗಳನ್ನು ಹಾಡಿದ್ದಾರೆ. ಇವರ ಹಾಡುಗಳಿಗೆ ಕರ್ನಾಟಕದಲ್ಲಿ ಅವರದ್ದೇ ಆದ ಫ್ಯಾನ್ ಬೇಸ್ ಇದೆ. ಕನ್ನಡಿಗರು ಇವರ ಹಾಡುವ ಹಾಡುಗಳಿಗೆ ಭಾವುಕರಾಗಿದ್ದೂ ಇದೆ. ಸೋನು ನಿಗಂ ಕೂಡ ಕನ್ನಡದ ಮೇಲೆ ಅಪಾರ ಪ್ರೀತಿಯನ್ನು ಇಟ್ಟುಕೊಂಡಿದ್ದರು. ಹಲವು ವೇದಿಕೆಗಳ ಮೇಲೆ ಇದೇ ಗಾಯಕ ಕನ್ನಡಿಗರನ್ನು ಹೊಗಳಿದಿದ್ದು ಇದೆ. ಕನ್ನಡಿಗರಿಗಾಗಿ ಹಾಡುಗಳನ್ನು ಹಾಡಿದ್ದು ಇದೆ.
ಆದ್ರೀಗ ವೇದಿಕೆ ಮೇಲೆ ಕನ್ನಡ ಹಾಡು ಕೇಳಿದ ಎಂಬ ಕಾರಣಕ್ಕೆ ಸೋನು ನಿಗಂ ಗರಂ ಆಗಿದ್ದರು. ವೇದಿಕೆ ಮೇಲೆ ನಿಂತು ಕನ್ನಡಿಗ ಮೇಲೆ ಆಕ್ರೋಶ ಹೊರ ಹಾಕಿದ್ದರು. ಕನ್ನಡಿಗರು ಭಯೋತ್ಪಾದಕರು ಎಂಬ ಅರ್ಥದಲ್ಲಿ ಕೋಪವನ್ನು ಹೊರ ಹಾಕಿದ್ದಾರೆ. ಇದು ಕನ್ನಡಿಗರನ್ನು ಕೆರಳಿಸಿದೆ. ಅಲ್ಲದೆ ಕನ್ನಡ ಪರ ಹೋರಾಟಗಾರರು ಕೂಡ ಅಖಾಡಕ್ಕೆ ಇಳಿದಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಹಾಗೂ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಕೂಡ ಆಕ್ರೋಶ ಹೊರ ಹಾಕಿದ್ದು ಅರ್ಜುನ್ ಜನ್ಯ, ಹರಿಕೃಷ್ಣ, ಅಜನೀಶ್ ಲೋಕನಾಥ್, ನಿರ್ಮಾಪಕರು ಹಾಗೂ ವಾಣಿಜ್ಯ ಮಂಡಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

"ಕನ್ನಡದ ಹಾಡುಗಳನ್ನು ಕರ್ನಾಟಕದಲ್ಲಿ ಕೇಳದೆ, ಇನ್ನೆಲ್ಲೋ ಬೇರೆ ಕಡೆಗೆ ಕೇಳುವುದಕ್ಕೆ ಆಗುತ್ತಾ? ಸೋನು ನಿಗಂ ಒಬ್ಬ ಅವಿವೇಕಿ, ದುರಂಕಾರಿ. ಇವತ್ತು ಉತ್ತರ ಭಾರತದಲ್ಲಿ ಆತನನ್ನು ಮೂಸಿ ಕೂಡ ನೋಡುತ್ತಿಲ್ಲ. ಕರ್ನಾಟಕದಲ್ಲಿ ಆತನಿಗೆ ಪ್ರೀತಿ ಕೊಟ್ಟರು. ಅನ್ನ ಕೊಟ್ಟರು. ಅವನ ಬೆಳವಣಿಗೆಗೆ ಒಂದು ದಾರಿಯಾದ ನಮ್ಮ ಕನ್ನಡಿಗರ ವಿರುದ್ಧವೇ ಕನ್ನಡ ಹಾಡು ಕೇಳಿದ್ದಕ್ಕೆ ಪೆಹಲ್ಗಾಮ್ ಘಟನೆಯನ್ನು ಲಿಂಕ್ ಮಾಡಿ ಭಯೋತ್ಪಾದಕರು ಎನ್ನುವ ರೀತಿಯಲ್ಲಿ ಹೇಳಿಕೆಯನ್ನು ಕೊಟ್ಟಿದ್ದಾನೆ. ಈ ಮೂರ್ಖನನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು." ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸೋನು ನಿಗಂರನ್ನು ಬ್ಯಾನ್ ಮಾಡಬೇಕು ಅಂತ ರೂಪೇಶ್ ರಾಜಣ್ಣ ಹಾಗೂ ಅವರ ಸಂಗಡಿಗರು ಫಿಲ್ಮ್‌ಚೇಂಬರ್ ಮೆಟ್ಟಿಲೇರಿ ದೂರನ್ನೂ ನೀಡಿದ್ದಾರೆ. "ಇವತ್ತು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಒಂದು ಪತ್ರವನ್ನು ನೀಡಿದ್ದೇವೆ. ಯಾವುದೇ ಚಲನಚಿತ್ರ ನಿರ್ಮಾಪಕರು ಈತನನ್ನು ಕರೆಸಿ ಹಾಡು ಹೇಳಿಸಿದರೆ, ಆ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ಇನ್ಮುಂದೆ ಕರ್ನಾಟಕಕ್ಕೆ ಬರಲಿ. ನಾವು ಕೊಡುವ ಭಿಕ್ಷೆ ತಿಂದುಕೊಂಡು ಹೋಗಲಿ. ಆದರೆ, ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಅಂತ ಹೇಳಿ ಸಮಸ್ತ ಕರ್ನಾಟಕದ ಪರವಾಗಿ ಯುವ ಕರ್ನಾಟಕ ವೇದಿಕೆಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಕೊಡುತ್ತಿದ್ದೇವೆ." ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಸೋನು ನಿಗಂರನ್ನು ಕರೆಸಿ ಹಾಡಿಸಿದರೆ, ಅದಕ್ಕೆ ನೇರ ಹೊಣೆ ಚಲನ ಚಿತ್ರ ವಾಣಿಜ್ಯ ಮಂಡಳಿ ಆಗುತ್ತೆ ಎಂದು ಹೇಳಿದ್ದಾರೆ. "ನಾಳೆ ದಿನ ಸೋನು ನಿಗಂ ಕನ್ನಡ ಚಲನ ಚಿತ್ರಕ್ಕೆ ಸಂಬಂಧಪಟ್ಟಂತ ಹಾಡುಗಳಲ್ಲೋ, ಇನ್ನೊಂದರಲ್ಲೋ ಭಾಗವಹಿಸಿದರೆ ಅದಕ್ಕೆ ನೇರ ಹೊಣೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಆಗುತ್ತೆ. ಇಲ್ಲಿನ ಅಧ್ಯಕ್ಷರು ಆಗುತ್ತಾರೆ. ಹಾಗಾಗಿ ಇವತ್ತು ನಾವು ಕೊಡುತ್ತಿರುವುದು ಮನವಿ ಅಲ್ಲ ಒತ್ತಾಯ. ಕರ್ನಾಟಕದಲ್ಲಿ ಕನ್ನಡ ಕೇಳದೆ ಇನ್ನೇನು ಕೇಳುತ್ತಾರೆ. ಅವನಿಗೆ ನೇಮು ಫೇಮು ಬಂದಿದ್ದು ನಮ್ಮ ರಾಜ್ಯದಲ್ಲಿ. ಅವನ ರಾಜ್ಯದಲ್ಲಿ ಮೂಸು ಕೂಡ ನೋಡುವುದಿಲ್ಲ." ಎಂದಿದ್ದಾರೆ.

ಇದೇ ವೇಳೆ ಹಾಡುವುದಕ್ಕೆ ಲಕ್ಷ, ಕೋಟಿ ಲೆಕ್ಕದಲ್ಲಿ ಹಣ ಕೊಟ್ಟು ಕರೆಸುವ ಖಾಸಗಿ ಸಂಸ್ಥೆಗಳಿಗೂ ತರಾಟೆ ತೆಗೆದುಕೊಂಡಿದ್ದಾರೆ. "ಖಾಸಗಿ ಸಂಸ್ಥೆಗಳು ಕರೆಸಿ ಕಾರ್ಯಕ್ರಮ ಮಾಡುವವರಿಗೆ ನಾಚಿಕೆ ಆಗಬೇಕು. ನಿಮ್ಮಿಂದ ಇವತ್ತು ನಮಗೆ ಅವಮಾನ ಆಗಿದೆ. ನಮ್ಮಲ್ಲಿ ಎಂತಹ ಕಲಾವಿದರು ಇದ್ದಾರೆ. ನಮ್ಮಲ್ಲೇ ಎಂತಹ ಅದ್ಭುತ ಹಾಡುಗಾರರಿದ್ದಾರೆ. ಅವರಿಗೆ ಅವಕಾಶ ಕೊಡಿ. ಕೋಟ್ಯಾಂತರ ರೂಪಾಯಿ ಕೊಟ್ಟು ನಮ್ಮ ವಿರುದ್ಧ ಬೈಯ್ಯುವುದಕ್ಕೆ ಕರೆಸುತ್ತಿದ್ದೀರ. ಹಾಗಾಗಿ ಕನ್ನಡದ ಯಾವುದೇ ವಿಚಾರದಲ್ಲಿ ಭಾಗಿಯಾಗಬಾರದು. ಅವನು ಕ್ಷಮೆ ಕೇಳಿದರೂ ಅದನ್ನೂ ನಾವು ಸ್ವೀಕರಿಸುವುದಿಲ್ಲ. ಇದು ನಮ್ಮ ಅಂತಿಮವಾದ ಹೋರಾಟ." ಎನ್ನುತ್ತಿದ್ದಾರೆ.
ಕೊನೆಯಲ್ಲಿ ಕನ್ನಡದ ಸಂಗೀತ ನಿರ್ದೇಶಕರಿಗೆ ಎಚ್ಚರಿಕೆ ನೀಡಿದ್ದಾರೆ. ಸೋನು ನಿಗಂರನ್ನು ಕರೆಸಿ ಹಾಡಿಸಿದರೆ, ಮುಂದಿನ ಹೋರಾಟಕ್ಕೆ ನೀವೇ ಕಾರಣರಾಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ. "ಸಂಗೀತ ನಿರ್ದೇಶಕರು ಅರ್ಜುನ್ ಜನ್ಯ ಅವರೇ, ಹರಿಕೃಷ್ಣ ಅವರೇ, ಅಜನೀಶ್ ಲೋಕನಾಥ್ ಅವರೇ, ಯಾರ್‍ಯಾರು ಸಂಗೀತ ನಿರ್ದೇಶಕರು ಇದ್ದೀರಿ ನೀವೇನು ಹಾಡು ಹಾಡಿಸಿದರೇ ನೇರ ಹೊಣೆ ನೀವೇ ಆಗುತ್ತೀರ. ಯಾವುದೇ ನಿರ್ಮಾಪಕರು ಹಾಡಿಸಿದರೂ ಹೊಣೆ ನೀವು ಆಗುತ್ತೀರ. ಕನ್ನಡ ಚಲನ ಚಿತ್ರ ವಾಣಿಜ್ಯ ಮಂಡಳಿ ಹೊಣೆಯಾಗುತ್ತೆ. ನೀವು ಕನ್ನಡಿಗರ ವಿರುದ್ಧ ಇದ್ದೀರಿ ಎಂದು ಹೋರಾಟ ಮಾಡಬೇಕಾಗುತ್ತೆ." ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ.
ಇನ್ನೊಂದು ಕಡೆ ಗಾಯಕ ಸೋನು ನಿಗಂ ವಿರುದ್ಧ ರೊಚ್ಚಿ ಗೆದ್ದಿರುವ ಕನ್ನಡ ಪರ ಸಂಘಟನೆಗಳು ಪ್ರಕರಣವನ್ನು ದಾಖಲು ಮಾಡಿವೆ. ಸೋನು ನಿಗಂ ಹೇಳಿಕೆ ಕನ್ನಡಿಗರ ಹೃದಯವನ್ನು ಚೂರು ಚೂರು ಮಾಡಿವೆ. ಕನ್ನಡ ಹಾಡನ್ನು ಕೇಳಿದ್ದಕ್ಕೆ ಸೋನು ನಿಗಂ ವೇದಿಕೆ ಮೇಲೆ ಗರಂ ಆಗಿದ್ದರು. "ಕನ್ನಡ ಕನ್ನಡ ಅಂತ ನೀವು ಹೀಗೆ ಹೇಳಿದ್ದಕ್ಕೆ ಪಹಲ್ಗಾಮ್‌ನಲ್ಲಿ ದಾಳಿ ಆಗಿದ್ದು" ಎಂದಿದ್ದರು. ಕನ್ನಡಿಗರನ್ನು ಭಯೋತ್ಪಾದಕರು ಎನ್ನುವ ಅರ್ಥದಲ್ಲಿ ಹೇಳಿದ್ದರು ಕನ್ನಡ ಪರ ಸಂಘಟನೆಗಳು ಕಿಡಿಕಾರಿವೆ.
ಸದ್ಯ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಗಾಯಕ ಸೋನು ನಿಗಂ ವಿರುದ್ಧ ಕೇಸ್ ದಾಖಲಿಸಲಾಗಿದೆ. ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆಂದು ಪ್ರಕರಣ ದಾಖಲಿಸಲಾಗಿದೆ. ಈ ದೂರಿನ ಮೇಲೆಗೆ ಬಹುಭಾಷಾ ಗಾಯಕ ಸೋನು ನಿಗಂ ಮೇಲೆ ಎಫ್‌ಐಆರ್ ಕೂಡ ದಾಖಲಾಗಿದೆ. ಸೋನು ನಿಗಂ ಅನ್ನು ಬ್ಯಾನ್ ಮಾಡಬೇಕು ಎನ್ನುವ ಒತ್ತಡದ ನಡುವೆ ಎಫ್‌ಐಆರ್ ದಾಖಲಾಗಿದ್ದು ಸಂಕಷ್ಟಕ್ಕೆ ಸಿಲುಕಿದೆ.
ವಿವಾದ ದೊಡ್ಡದಾಡುತ್ತಿದ್ದಂತೆ ಸೋನು ನಿಗಂ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಕನ್ನಡ ಹಾಡನ್ನು ಹಾಡುವಂತೆ ಮನವಿ ಮಾಡಿಕೊಳ್ಳುವುದು ಬೇರೆ. ಹಾಡಬೇಕು ಅಂತ ಆರ್ಡರ್ ಮಾಡುವುದು ಬೇರೆ. ಅಲ್ಲಿ ನಾಲ್ಕೈದು ಮಂದಿ ಗೂಂಡಾಗಳ ಹಾಗೆ ಕಾಣಿಸುತ್ತಿದ್ದವರು. ಕನ್ನಡ ಕನ್ನಡ ಅಂತ ಕಿರುಚುತ್ತಿದ್ದರು. ಹೀಗಾಗಿ ಅವರು ವಿರುದ್ಧ ಗರಂ ಆಗಿದ್ದೆ. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಗುಂಡು ಹಾರಿಸುವಾಗ ಭಾಷೆಯನ್ನು ಹೇಳಲಿಲ್ಲ ಎಂದು ಹೇಳುವ ಅರ್ಥ ಆಗಿತ್ತು ಎಂದು ಗಾಯಕ ಸೋನು ನಿಗಂ ಹೇಳಿದ್ದರು.
ಏನೇ ಕ್ಲಾರಿಟಿ ಕೊಟ್ಟರೂ ಸೋನು ನಿಗಂ ಬಗ್ಗೆ ಕನ್ನಡ ಪರ ಸಂಘಟನೆಗಳ ಆಕ್ರೋಶವಂತೂ ಕಮ್ಮಿಯಾಗಿಲ್ಲ. ಸದ್ಯಕ್ಕೆ ಈ ಘಟನೆಯೀಗ ಫಿಲ್ಮ್ ಚೇಂಬರ್ ಮೆಟ್ಟಿಲೇರಿದೆ. ಸೋನು ನಿಗಂಗೆ ಕನ್ನಡದಲ್ಲಿ ಅವಕಾಶ ಕೊಡಬಾರದು ಎಂದು ಕನ್ನಡ ಪರ ಸಂಘಟನೆಗಳು ನೀಡಿದ ಎಚ್ಚರಿಕೆಗೆ ಫಿಲ್ಮ್ ಚೇಂಬರ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಸದ್ಯಕ್ಕಂತೂ ಸೋನು ನಿಗಂ ಕ್ಲಾರಿಟಿ ಕೊಟ್ಟರೂ ಆಕ್ರೋ ಮಾತ್ರ ಕಡಿಮೆ ಆಗುವ ಹಾಗೆ ಕಾಣಿಸುತ್ತಿಲ್ಲ. ಫಿಲ್ಮ್ ಚೇಂಬರ್, ಕನ್ನಡದ ಸಂಗೀತ ನಿರ್ದೇಶಕರು ಯಾವ ನಿರ್ಧಾರಕ್ಕೆ ಬರುತ್ತಾರೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











