"ಚಿರು-ಧ್ರುವ ಸರ್ಜಾ ಇಬ್ಬರೂ ಒಟ್ಟಿಗೆ ನಟಿಸಿದ ಸಿನಿಮಾ ನೋಡುವ ಆಸೆಯಿತ್ತು": ಅರ್ಜುನ್ ಸರ್ಜಾ ವಿಡಿಯೋ ವೈರಲ್
ಸ್ಯಾಂಡಲ್‌ವುಡ್‌ನ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ನಟನೆಯ ಕೊನೆಯ ಸಿನಿಮಾ 'ರಾಜಮಾರ್ತಾಂಡ' ಇದೇ ಅಕ್ಟೋಬರ್ 6 ರಂದು ರಿಲೀಸ್ ಆಗುತ್ತಿದೆ. ಚಿರು ಅಗಲಿದ ಬಳಿಕ ರಿಲೀಸ್ ಆಗುತ್ತಿರುವ ಸಿನಿಮಾ ಆಗಿರುವುದರಿಂದ ಅಭಿಮಾನಿಗಳು ಭಾವುಕರಾಗಿದ್ದಾರೆ. ಕೊನೆಯ ಸಿನಿಮಾವನ್ನು ಕಣ್ತುಂಬಿಕೊಳ್ಳುವುದಕ್ಕೆ ಕಾಯುತ್ತಿದ್ದಾರೆ.
ಚಿರಂಜೀವಿ ಸರ್ಜಾ ಅಗಲುವಾಗ 'ರಾಜಮಾರ್ತಾಂಡ' ಸಿನಿಮಾದ ಶೂಟಿಂಗ್ ಅನ್ನು ಮುಗಿಸಿದ್ದರು. ಆದರೆ, ಡಬ್ಬಿಂಗ್ ಮುಗಿಸಿರಲಿಲ್ಲ. ಅದನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುಗಿಸಿಕೊಟ್ಟಿದ್ದಾರೆ. ಹೀಗಾಗಿ ಅಣ್ಣನ ನಟನೆಗೆ ತಮ್ಮ ಧ್ವನಿ ನೀಡಿರುವ ಸಿನಿಮಾವನ್ನು ನೋಡುವುದಕ್ಕೆ ಸಿನಿ ರಸಿಕರು ತುದಿಗಾಲಲ್ಲಿ ನಿಂತಿದ್ದಾರೆ.

ಚಿರು ಕೊನೆಯ ಸಿನಿಮಾ ರಿಲೀಸ್ ಆಗುತ್ತಿರುವ ಈ ಸಂದರ್ಭದಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿಡಿಯೋ ಮಾಡಿ ರಿಲೀಸ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಚಿರು ಹಾಗೂ ಧ್ರುವ ಸರ್ಜಾ ಒಂದೇ ಸಿನಿಮಾದಲ್ಲಿ ನಟಿಸೋದನ್ನು ನೋಡುವ ಆಸೆಯಿತ್ತು ಎಂದು ಹೇಳಿಕೊಂಡಿದ್ದಾರೆ.
'ರಾಜಮಾರ್ತಾಂಡ' ಆಕ್ಷನ್ ಕಿಂಗ್ ಸಾಥ್
ಚಿರಂಜೀವಿ ಸರ್ಜಾ ಸಿನಿಮಾ 'ರಾಜಮಾರ್ತಾಂಡ' ನಾಳೆ (ಅಕ್ಟೋಬರ್ 6) ಬಿಡುಗಡೆಯಾಗುತ್ತಿದೆ. ಈ ಬೆನ್ನಲ್ಲೇ ಇಡೀ ಚಿತ್ರತಂಡಕ್ಕೆ ಶುಭ ಕೋರಿ ಅರ್ಜುನ್ ಸರ್ಜಾ ವಿಡಿಯೋ ಮಾಡಿದ್ದಾರೆ. ಇದರಲ್ಲಿ ಚಿರಂಜೀವಿ ಸರ್ಜಾ ಬಗ್ಗೆ ತಮ್ಮ ಮನದಾಳದ ಮಾತನ್ನು ಆಡಿದ್ದಾರೆ. ಹಾಗೇ ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಇಬ್ಬರನ್ನೂ ಒಂದೇ ಸಿನಿಮಾ ಒಟ್ಟಿಗೆ ನೋಡುವ ಆಸೆಯಿತ್ತು. ಅದ್ರೀಗ ಕನಸು ಎಂದು ಅರ್ಜುನ್ ಸರ್ಜಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಚಿರು-ಧ್ರುವ ಸಿನಿಮಾ ಈಗ ಕನಸು"
"ಚಿರು ಮತ್ತು ಧ್ರುವ ಇಬ್ಬರೂ ಸೇರಿ ಒಂದು ಚಿತ್ರದಲ್ಲಿ ನಟಿಸಿ, ಅದನ್ನು ನೋಡಬೇಕು ಅಂತ ಆಸೆಯಿತ್ತು. ಈಗ ಆಸೆ ಕನಸು ಅನ್ನೋ ಮಾತು ನಿಜವಾದರೂ, ಎಲ್ಲೋ ಒಂದು ಕಡೆ ಈ ಚಿತ್ರದಲ್ಲಿ ಚಿಕ್ಕದೊಂದು ಪಾಸಿಟಿವ್ ಸ್ಪಾರ್ಕ್ ಕಾಣುತ್ತಿದೆ. ಹೇಗೆ ಅಂತ ಅಂದರೆ, ಅಣ್ಣನಿಗೆ ತಮ್ಮ ಕಂಠದಾನ ಮಾಡಿದ್ದಾನೆ. ಚಿರು ಅಭಿನಯ, ಧ್ರುವನ ಕಂಠ. ಈ ಸಿನಿಮಾ ನೋಡುವಾಗ ಇಬ್ಬರನ್ನೂ ನೋಡಿದ ಫೀಲಿಂಗ್ ಇರುತ್ತೆ. ಹಾಗಾಗಿ ಪ್ರತಿಯೊಬ್ಬರೂ ಈ ಸಿನಿಮಾವನ್ನು ನೋಡಿ. ಪ್ರೀತಿ, ಸಹಕಾರ ಪ್ರತಿಯೊಂದು ಈ ಸಿನಿಮಾ ಮೇಲೆ ಇರಬೇಕು." ಎಂದು ಅರ್ಜುನ್ ಸರ್ಜಾ ಹೇಳಿದ್ದಾರೆ.
"ನಮ್ಮ ಮನೆಯ ರಾಜಕುಮಾರ ಚಿರು"
"ನಮ್ಮ ಮನೆಯ ರಾಜಕುಮಾರ ಮತ್ತು ನಿಮ್ಮೆಲ್ಲರ ಪ್ರೀತಿಯ ಚಿರು ಸರ್ಜ ನಟಿಸಿದ ಚಿತ್ರ ರಾಜಮಾರ್ತಾಂಡ ಈಗ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಅಕ್ಟೋಬರ್ 6ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಈ ಚಿತ್ರದ ನಿರ್ಮಾಪಕರಿಗೂ, ನಿರ್ದೇಶಕರಿಗೂ ಎಲ್ಲಾ ಕಲಾವಿದರಿಗೂ, ತಾಂತ್ರಿಕ ವರ್ಗದವರಿಗೂ ಎಲ್ಲರಿಗೂ ನನ್ನ ಹೃದಯ ಪೂರ್ವಕವಾದ ಅಭಿನಂದನೆಗಳು." ಎಂದು ಇಡೀ ತಂಡಕ್ಕೆ ಶುಭ ಕೋರಿದ್ದಾರೆ.
ಧ್ರುವ ಸರ್ಜಾ ಹುಟ್ಟುಹಬ್ಬದಂದೇ ರಿಲೀಸ್
ನಾಳೆ (ಅಕ್ಟೋಬರ್ 6) ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟುಹಬ್ಬ. ಈ ವಿಶೇಷ ದಿನದಂದೇ ಚಿರಂಜೀವಿ ಸರ್ಜಾ ಕೊನೆಯ ಸಿನಿಮಾವನ್ನು ರಿಲೀಸ್ ಮಾಡುತ್ತಿರುವುದು ವಿಶೇಷ. ತಮ್ಮ ಹುಟ್ಟುಹಬ್ಬವನ್ನು ಅಣ್ಣನ ಸಿನಿಮಾ ರಿಲೀಸ್ ಮಾಡುವ ಮೂಲಕ ಧ್ರುವ ಸರ್ಜಾ ಆಚರಿಸಿಕೊಳ್ಳುತ್ತಿದ್ದಾರೆ. ಚಿರು ಕೊನೆಯ ಸಿನಿಮಾಗೆ ಅಭಿಮಾನಿಗಲ ಪ್ರತಿಕ್ರಿಯೆ ಹೇಗಿರುತ್ತೆ? ಅನ್ನೋ ಕುತೂಹಲವಿದೆ.


Click it and Unblock the Notifications











