'ಅಶೋಕ ಬ್ಲೇಡ್' ಸಿನಿಮಾದ ನಿರ್ದೇಶಕ ನೇಣಿಗೆ ಶರಣು; ಚಿತ್ರರಂಗಕ್ಕೆ ಮತ್ತೊಂದು ಆಘಾತ
2024 ಕನ್ನಡ ಚಿತ್ರರಂಗಕ್ಕೆ ಅದೃಷ್ಟ ವರ್ಷವಾಗಿ ಉಳಿದಿಲ್ಲ. ಒಂದರ ಹಿಂದೊಂದು ಕಹಿ ಘಟನೆಗಳು ನಡೆಯುತ್ತಲೇ ಇವೆ. ಈಗ ಸಿನಿಮಾ ಹಾಗೂ ಕಿರುತೆರೆಯಲ್ಲಿ ಜನಪ್ರಿಯರಾಗಿದ್ದ ವಿನೋದ್ ಧೋಂಡಾಳೆ ಆತ್ಯಹತ್ಯೆಗೆ ಶರಣಾಗಿದ್ದಾರೆ. ಈ ವಿಷಯ ಕನ್ನಡ ಚಿತ್ರರಂಗಕ್ಕೆ ಹಾಗೂ ಕಿರುತೆರೆ ಲೋಕಕ್ಕೆ ಆಘಾತ ಉಂಟು ಮಾಡಿದೆ.
ನೀನಾಸಂ ಸತೀಶ್ ನಟಿಸುತ್ತಿದ್ದ 'ಅಶೋಕ ಬ್ಲೇಡ್' ಸಿನಿಮಾವನ್ನು ವಿನೋದ್ ಧೋಂಡಾಳೆ ನಿರ್ದೇಶನ ಮಾಡುತ್ತಿದ್ದರು. ಕಿರುತೆರೆಯಲ್ಲಿ 'ಕರಿಮಣಿ' ಹಾಗೂ 'ಶಾಂತಂ ಪಾಪಂ' ಅಂತ ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದರು. ದಿಢೀರನೇ ಆತ್ಮಹತ್ಯೆಗೆ ಶರಣಾಗಿದ್ದು ಕನ್ನಡ ಚಿತ್ರರಂಗ ಶಾಕ್ ಕೊಟ್ಟಿದೆ. ಸಿನಿಮಾರಂಗ ಗಣ್ಯರು ವಿನೋದ್ ಧೋಂಡಾಳೆ ಅವರ ಅಗಲಿಕೆಗೆ ಸಂತಾಪ ಸೂಚಿಸುತ್ತಿದ್ದಾರೆ.

ವಿನೋದ್ ಧೋಂಡಾಳೆ ಅವರು ನಾಗರಬಾವಿಯ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಎನ್ನಲಾಗಿದೆ. ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿನೋದ್ ಅವರ ಶವ ಪತ್ತೆಯಾಗಿತ್ತು. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ವಿನೋದ್ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.
ವಿನೋದ್ ಧೋಂಡಾಳೆ ಅವರಿಗೆ ಮೂವರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ವಿನೋದ್ ಧೋಂಡಾಳೆ ಅವರು ಆಪ್ತರೊಂದಿಗೆ ಸಾಲ ಪಡೆದಿದ್ದರು ಎನ್ನಲಾಗಿದೆ. ಸಿನಿಮಾ ಹಾಗೂ ಜೀವನ ನಿರ್ವಹಣೆಗಾಗಿ ಮಾಡಿದ್ದ ಸಾಲ ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಶರಣಗಾಗಿರಬಹುದು ಎಂದು ಹೇಳಲಾಗುತ್ತಿದೆ. ಸದ್ಯ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಎರಡು ವರ್ಷಗಳ ಹಿಂದೆ ನೀನಾಸಂ ಸತೀಶ್ ನಟನೆಯ 'ಅಶೋಕ ಬ್ಲೇಡ್' ಸಿನಿಮಾ ಸೆಟ್ಟೇರಿತ್ತು. 'ಬೆಲ್ ಬಾಟಂ' ಖ್ಯಾತಿಯ ದಯಾನಂದ್ ಟಿಕೆ ಈ ಸಿನಿಮಾಗೆ ಸ್ಕ್ರೀನ್ ಪ್ಲೇ ಹಾಗೂ ಡೈಲಾಗ್ ಬರೆದಿದ್ದರು. ವಿನೋದ್ ಧೋಂಡಾಳೆ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರು. ಸದ್ಯ ಈ ಸಿನಿಮಾ ಶೇ.90ರಷ್ಟು ಮುಕ್ತಾಯಗೊಂಡಿದ್ದು, ಇನ್ನೊಂದು ಹಂತದ ಚಿತ್ರೀಕರಣಕ್ಕೆ ತಯಾರಿ ನಡೆಸಿದ್ದರು ಎನ್ನಲಾಗಿದೆ.
ಅಭಿನಯ ತರಂಗದಲ್ಲಿ ತರಬೇತಿ ಪಡೆದಿದ್ದ ವಿನೋದ್ ಧೋಂಡಾಳೆ ಕನ್ನಡ ಜನಪ್ರಿಯ ನಿರ್ದೇಶಕರ ಗರಡಿಯಲ್ಲಿ ಪಳಗಿದ್ದಾರೆ. ಪಿ ಶೇಷಾದ್ರಿ, ಟಿಎನ್ ಸೀತಾರಾಂ ಅಂತಹ ಜನಪ್ರಿಯರ ನಿರ್ದೇಶಕರೊಂದಿಗೂ ಕೆಲಸ ಮಾಡಿದ್ದರು. ಸಿನಿಮಾ ಹಾಗೂ ಕಿರುತೆರೆ ಎರಡರಲ್ಲೂ ಸಕ್ರಿಯರಾಗಿದ್ದ ವಿನೋದ್ ಧೋಂಡಾಳೆ ಆತ್ಮಹತ್ಯೆಗೆ ಶರಣಾಗಿದ್ದ ಸುದ್ದಿ ಸಿನಿಮಾ ಮಂದಿಯನ್ನು ಆಘಾತವನ್ನು ಉಂಟು ಮಾಡಿದೆ.
'ಅಶೋಕ ಬ್ಲೇಡ್' ಸಿನಿಮಾದ ಶೂಟಿಂಗ್ ಬಗ್ಗೆ ಇತ್ತೀಚೆಗೆ ವಿನೋದ್ ಧೋಂಡಾಳೆ ಮಾತುಕಥೆ ನಡೆಸಿದ್ದರು ಎನ್ನಲಾಗಿದೆ. ನಿನ್ನೆ (ಜುಲೈ 19) ಕೂಡ ನೀನಾಸಂ ಸತೀಶ್ ಹಾಗೂ ಚಿತ್ರತಂಡದ ಜೊತೆ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಅಷ್ಟರೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಷಯ ಇಡೀ ಚಿತ್ರರಂಗಕ್ಕೆ ದೊಡ್ಡ ಶಾಕ್ ಕೊಟ್ಟಿದೆ.


Click it and Unblock the Notifications











