ಅಪ್ಪು ಅಗಲಿದ ನೋವಿನಲ್ಲಿರುವಾಗಲೇ ತಂದೆ ಕಳೆದುಕೊಂಡ ಅಶ್ವಿನಿ ಪುನೀತ್ ರಾಜ್‌ಕುಮಾರ್
ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಮೂರು ತಿಂಗಳ ಹಿಂದೆ ಪತಿ ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡಿದ್ದ ಆಶ್ವಿನಿ ಇಂದು (ಫೆ.20) ತಂದೆ ರೇವನಾಥ್ ಅವರನ್ನು ಕಳೆದುಕೊಂಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ತಂದೆ ಕೊನೆಯುಸಿರೆಳೆದಿದ್ದಾರೆ. ರೇವನಾಥ್ ಅವರಿಗೆ 78 ವರ್ಷ ವಯಸ್ಸಾಗಿತ್ತು.
ಅಶ್ವಿತ್ ಪುನೀತ್ ರಾಜ್‌ಕುಮಾರ್ ಅವರ ತಂದೆ ಆರೋಗ್ಯವಾಗಿಯೇ ಇದ್ದರು. ಮನೆಯವರು ಹಾಗೂ ಸ್ನೇಹಿತರೊಂದಿಗೆ ಓಡಾಡಿಕೊಂಡಿದ್ದರು. ಆದರೆ, ದಿಢೀರನೇ ಅವರ ಆರೋಗ್ಯದಲ್ಲಿ ಏರು-ಪೇರಾಗಿತ್ತು. ಬಳಿಕ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ರೇವನಾಥ್ ಅವರು ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು. ಹಿರಿಯ ರಾಜಕಾರಣಿ ಡಿ.ಬಿ ಚಂದ್ರೇಗೌಡರ ಹತ್ತಿರದ ಸಂಬಂಧಿ ಕೂಡ ಆಗಿದ್ದ ರೇವನಾಥ್, ಮೂಲತ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಭಾಗಮನೆಯವರು.

2ದಶಕದ ಹಿಂದೆ ಆ್ಯಂಜಿಯೋಪ್ಲಾಸ್ಟಿ
ಪುನೀತ್ ರಾಜ್‌ಕುಮಾರ್ ಮಾವ ಭಾಗಮನೆ ರೇವನಾಥ್ ಎನ್ಹೆಚ್ಎಐ ಮುಖ್ಯ ಇಂಜಿನಿಯರ್ ಆಗಿ ಕೆಲಸ ಮಾಡಿದ್ದರು. ಹಲವು ವರ್ಷಗಳಿಂದ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಯಿತ್ತು. 20 ವರ್ಷಗಳ ಹಿಂದೆಯೇ ಆಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ತಂದೆ ರೇವನಾಥ್ ಅವರಿಗೆ ಆ್ಯಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ಇಂದು (ಫೆ 21)ರಂದು ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಅಪ್ಪು ನಿಧನದಿಂದ ನೊಂದಿದ್ದರು
20 ವರ್ಷಗಳ ಹಿಂದೆ ಆ್ಯಂಜಿಯೋಪ್ಲಾಸ್ಟಿ ಮಾಡಿದ್ದರು. ಆರೋಗ್ಯವಾಗಿಯೇ ಇದ್ದರು. ಮನೆಯಲ್ಲಿ ಹಾಗೂ ಸ್ನೇಹಿತರೊಂದಿಗೆ ಆರಾಮಾಗಿ ಓಡಾಡಿಕೊಂಡಿದ್ದರು ಆದರೆ ಅಳಿಯ ಪುನೀತ್ ರಾಜ್‌ಕುಮಾರ್ ಅವರ ದಿಢೀರ್ ನಿಧನದಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎನ್ನಲಾಗಿದೆ. ಇದೇ ಒತ್ತಡ ಅವರ ಆರೋಗ್ಯದ ಮೇಲೆ ಮತ್ತಷ್ಟು ಪರಿಣಾಮ ಬೀರಿರಬಹುದು ಎಂದು ಹೇಳಲಾಗುತ್ತಿದೆ.

ಅಶ್ವಿನಿಗೆ ಆಘಾತದ ಮೇಲೆ ಆಘಾತ
ಪತಿ ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡ ನೋವು ಆರಿಲ್ಲ. ಆ ಶಾಕ್‌ನಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಅಶ್ವಿನಿಯವರಿಗೆ ಮತ್ತೊಂದು ಅಘಾತ ಎದುರಾಗಿದೆ. ಪತಿಯನ್ನು ಕಳೆದುಕೊಂಡ ಬಳಿಕ ಈಗ ತಂದೆಯನ್ನು ಕಳೆದುಕೊಂಡು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ನಿಧಾನವಾಗಿ ಅಪ್ಪು ಒಂದೊಂದೇ ಕನಸುಗಳನ್ನು ಈಡೇರಿಸುವತ್ತ ಅಶ್ಚಿನಿ ಪುನೀತ್ ರಾಜ್‌ಕುಮಾರ್ ಗಮನ ಹರಿಸಿತ್ತಿದ್ದರು. ಇದೇ ವೇಳೆ ತಂದೆಯ ನಿಧನ ಮತ್ತಷ್ಟು ನೋವನ್ನುಂಟು ಮಾಡಿದೆ.

ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ ರೇವನಾಥ್
ಸೂಪರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಮಾವ ಆಗಿದ್ದರೂ ರೇವನಾಥ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ವರನಟ ಡಾ. ರಾಜ್‌ಕುಮಾರ್ ಪುತ್ರನಿಗೆ ಮಗಳನನ್ನು ಕೊಟ್ಟಿದ್ದರೂ, ಮಾಧ್ಯಮಗಳ ಮುಂದೆ ಬಂದಿದ್ದು ತೀರಾ ವಿರಳ. ಮಗಳೊಂದಿಗೆ ಅಥವಾ ಅಳಿಯನೊಂದಿಗೆ ಕಾಣಿಸಿಕೊಂಡಿದ್ದು ವಿರಳ. ಆದರೆ, ಪುನೀತ್ ಹಾಗೂ ಮಗಳಿಗೆ ಬೆನ್ನುಲುಬಾಗಿ ನಿಂತಿದ್ದರು ಎಂದು ಆಪ್ತ ಮೂಲಗಳು ಹೇಳುತ್ತಿವೆ. ಅಪ್ಪು ನಿಧನದ ಬಳಿಕ ಮಗಳಿಗೆ ಒಂಟಿತನ ಕಾಡಬಾರದೆಂದು ಮಗಳೊಂದಿಗೆ ನೆಲೆಸಿದ್ದರು. ಚಿಕ್ಕಮಗಳೂರಿನವರಾದರೂ ಹಲವು ವರ್ಷಗಳಿಂದ ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಿದ್ದರು.


Click it and Unblock the Notifications











