ಹಾವೇರಿಯಲ್ಲಿ ಅಪ್ಪು ಟೆಂಪಲ್ ಉದ್ಘಾಟನೆ; ಭಾವುಕರಾದ ಅಶ್ವಿನಿ ಪುನೀತ್ ರಾಜ್‌ಕುಮಾರ್
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವು ಇನ್ನೂ ಕನ್ನಡಿಗರನ್ನು ಕಾಡುತ್ತಲೇ ಇದೆ. ಅದರಲ್ಲೂ ಅಪ್ಪು ಅಭಿಮಾನಿಗಳು ಅವರ ನೆನೆಪಿನಲ್ಲಿಯೇ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ಹೆಸರಿನಲ್ಲಿ ಸಾಮಾಜಿಕ ಕೆಲಸಗಳು ನಡೆಯುತ್ತಿವೆ. ಕೆಲವೆಡೆ ಪುತ್ಥಳಿಗಳನ್ನು ನಿರ್ಮಿಸುತ್ತಿದ್ದಾರೆ. ಇನ್ನು ಹಾವೇರಿಯ ಅಪ್ಪು ಅಭಿಮಾನಿ ಗುಡಿಯನ್ನೇ ಕಟ್ಟಿದ್ದಾನೆ.
ಹಾವೇರಿ ಜಿಲ್ಲೆಯ ಯಲಗಚ್ಚ ಗ್ರಾಮದ ಪ್ರಕಾಶ್ ಎಂಬ ಯುವ ಅಪ್ಪು ಮೇಲಿರುವ ತನ್ನ ಅಭಿಮಾನವನ್ನು ಜಗತ್ತಿಗೆ ತೋರಿಸಿದ್ದಾನೆ. ಕಳೆದ ಕೆಲವು ದಿನಗಳಿಂದ ಪುನೀತ್ ರಾಜ್‌ಕುಮಾರ್ ನೆನಪಿಗಾಗಿ ಗುಡಿಯೊಂದನ್ನು ಕಟ್ಟಿದ್ದಾನೆ. ಇಂದು (ಸೆಪ್ಟೆಂಬರ್ 26) ಪುನೀತ್ ರಾಜ್‌ಕುಮಾರ್ ಅವರ ಗುಡಿ ಉದ್ಘಾಟನೆ ಆಗಿದೆ.

ಅಶ್ವಿನಿ ಪುನೀತ್ ರಾಜ್‌ಕುಮಾರ್ ತಮ್ಮ ಪತಿಯ ಗುಡಿಯನ್ನು ಹಾವೇರಿಯ ಯಲಗಚ್ಚ ಗ್ರಾಮಕ್ಕೆ ತರಳಿ ಉದ್ಘಾಟನೆ ಮಾಡಿ ಬಂದಿದ್ದಾರೆ. ಮೊದಲು ಈ ಗ್ರಾಮದ ಉಡಚ್ಚಮ ದೇವಿಯ ದರ್ಶನ ಪಡೆದು ಅಪ್ಪು ಗುಡಿ ಬಳಿಗೆ ಆಗಮಿಸಿದ್ದರು. ಇವರಿಗೆ ಗ್ರಾಮದ ಜನರು ಹಾಗೂ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಸಿಕ್ಕಿತ್ತು. ಈ ಮೂಲಕ ಅಪ್ಪು ಅಭಿಮಾನಿಯ ಆಸೆಯ ಈಡೇರಿದಂತೆ ಆಗಿದೆ.
ಯಲಗಚ್ಚ ಗ್ರಾಮದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಆರೂವರೆ ಅಡಿ ಎತ್ತರದ ಪುತ್ಥಳಿಯನ್ನು ದೇವಸ್ಥಾನದಲ್ಲಿ ನಿರ್ಮಾಣ ಮಾಡಲಾಗಿದೆ. ಕೆಲವು ದಿನಗಳಿಂದ ಅಪ್ಪು ಅಪ್ಪಟ ಅಭಿಮಾನಿ ಪ್ರಕಾಶ್ ಎಂಬುವವರು ತಮ್ಮ ಸ್ವಂತ ಖರ್ಚಿನಲ್ಲಿ ತಮ್ಮದೇ ಜಾಗದಲ್ಲಿ ಗುಡಿಯನ್ನು ನಿರ್ಮಾಣ ಮಾಡಿದ್ದರು. ಇದೇ ಗುಡಿಯನ್ನು ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಉದ್ಘಾಟನೆ ಮಾಡಿದ್ದರು. ಈ ವೇಳೆ ಪುತ್ಥಳಿಯನ್ನು ನೋಡಿ ಭಾವುಕರಾದರು.
ಪುನೀತ್ ರಾಜ್‌ಕುಮಾರ್ ಗುಡಿಯನ್ನು ಲೋಕಾರ್ಪಣೆ ಮಾಡಿದ ಬಳಿಕ ಅಭಿಮಾನಿ ಪ್ರಕಾಶ್ ಪುತ್ರಿಗೆ ನಾಮಕರಣ ಮಾಡಲಾಗಿತ್ತು. ಈ ವೇಳೆ ಪ್ರಕಾಶ್ ಅಭಿಮಾನಿಗಳಿಗೆ ಅಪೇಕ್ಷಾ ಹೆಸರಿಟ್ಟರು. ಇದೇ ವೇಳೆ ಅಭಿಮಾನಿಯ ಮಗಳನ್ನು ಎತ್ತಿ ಅಶೀರ್ವಾದ ಮಾಡಿದರು. ಈ ವೇಳೆ ಅಭಿಮಾನಿಯ ಅಭಿಮಾನವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೆಚ್ಚಿದ್ದಾರೆ.
"ಇದೇ ಕಾರಣಕ್ಕೆ ನಾವು ಅಭಿಮಾನಿಗಳನ್ನು ದೇವರು ಅಂತ ಹೇಳೋದು. ಇಂತಹ ಅಭಿಮಾನಿಗಳು ನಮಗೆ ಸಿಕ್ಕಿರುವುದೇ ಪುಣ್ಯ. ಸ್ವಂತ ಜಾಗದಲ್ಲಿ ಹೀಗೆ ದೇವಸ್ಥಾನವನ್ನು ಕಟ್ಟಿದ್ದು ನಮ್ಮ ಪುಣ್ಯ" ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಈ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಪುನೀತ್ ರಾಜ್‌ಕುಮಾರ್ ಗುಡಿಯನ್ನು ಸುಮಾರು ಎಂಟು ತಿಂಗಳಿಂದ ಅಭಿಮಾನಿ ಪ್ರಕಾಶ ಕಟ್ಟುತ್ತಿದ್ದರು. ಹೀಗಾಗಿ ಎಂಟೂ ತಿಂಗಳಿನಿಂದಲೂ ಪ್ರಕಾಶ್ ಪಾದರಕ್ಷೆಯನ್ನು ಧರಿಸದೆ ಗುಡಿ ಕಟ್ಟುವ ಕೆಲಸದಲ್ಲಿ ನಿರತನಾಗಿದ್ದರು. ಈ ಬಗ್ಗೆ ಹಾವೇರಿ ಜಿಲ್ಲೆಯ ಯಲಗಚ್ಚ ಗ್ರಾಮದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಗ್ರಾಮದಲ್ಲಿ ಅಪ್ಪಟ ಅಭಿಮಾನಿ ಮಾಡಿದ ಒಳ್ಳೆಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.


Click it and Unblock the Notifications











