ಪಿಆರ್‌ಕೆ ನಿರ್ಮಿಸಿದ 'ಆಚಾರ್ & ಕೋ' ಸಿನಿಮಾದಲ್ಲಿ ಮಹಿಳೆಯರದ್ದೇ ಮೇಲುಗೈ: ರಿಲೀಸ್ ಯಾವಾಗ?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಿರ್ಮಾಣ ಸಂಸ್ಥೆ ಪಿಆರ್‌ಕೆ ಪ್ರೊಡಕ್ಷನ್ಸ್ ಯಾವಾಗಲೂ ವಿನೂತನ ಸಿನಿಮಾಗಳನ್ನೇ ನಿರ್ಮಿಸಿದೆ. ಈಗ ಮತ್ತೊಂದು ವಿಭಿನ್ನ ಸಿನಿಮಾವನ್ನು ಪ್ರೇಕ್ಷಕರ ಮುಂದಿಡಲು ಸಿದ್ಧವಾಗಿದೆ. ಅದುವೇ 'ಆಚಾರ್ & ಕೋ'.
'ಆಚಾರ್ & ಕೋ' ಸಿನಿಮಾವನ್ನು ಸಿಂಧು ಶ್ರೀನಿವಾಸಮೂರ್ತಿ ನಿರ್ದೇಶಿಸಿದ್ದಾರೆ. 'ಆಚಾರ್ & ಕೋ' ಈ ನಿರ್ದೇಶಕಿಯ ಮೊದಲ ಸಿನಿಮಾ. ಪಿಆರ್‌ಕೆ ಪ್ರೊಡಕ್ಷನ್‌ನಿಂದ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಿಸಿರೋ ಈ ಸಿನಿಮಾ ಇದೇ ಜುಲೈ 28ಕ್ಕೆ ರಾಜ್ಯಾದ್ಯಂತ ಥಿಯೇಟರ್‌ಗಳಲ್ಲಿ ರಿಲೀಸ್ ಆಗುತ್ತಿದೆ.

ಈ ಸಿನಿಮಾ ಹೆಸರಿನಷ್ಟೇ ವಿಶೇಷವಾಗಿದೆ. ಮಹತ್ವಾಕಾಂಕ್ಷೆಯುಳ್ಳ ಸಹೋದರಿಯರು ಒಂದ್ಕಡೆ ಆಧುನಿಕತೆಯ ಸವಾಲುಗಳನ್ನು ಎದುರಿಸುತ್ತಾ, ಇನ್ನೊಂದು ಕಡೆ ತಮ್ಮ ಆಚಾರ, ವಿಚಾರಗಳನ್ನೂ ಬಿಡದೇ ಹೇಗೆ ಯಶಸ್ವಿಯಾಗುತ್ತಾರೆ ಎಂಬುದೇ 'ಆಚಾರ್ & ಕೋ' ಸಿನಿಮಾದ ಸುಂದರ ಕಥೆ.
ಇಂತಹದ್ದೇ ಹೊಸ ಹೊಸ ಆಲೋಚನೆಗಳನ್ನು ಪಿಆರ್‌ಕೆ ಪ್ರೊಡಕ್ಷನ್ ತೆರೆಮೇಲೆ ತಂದಿದೆ. ಈಗ ಇಂತಹದ್ದೇ ವಿನೂತನ ಕಥೆಯೊಂದಕ್ಕೆ ಜೀವ ನೀಡಿದೆ. ಹೊಸ ಪ್ರತಿಭೆಗಳಿಗೆ ವೇದಿಕೆಯಾಗಿದೆ. 'ಆಚಾರ್ & ಕೋ' ಸಿನಿಮಾ ಮೂಲಕ ಮತ್ತೊಂದು ಮನಮುಟ್ಟುವ ಸ್ಟೋರಿಯನ್ನು ಪ್ರೇಕ್ಷಕರ ಮುಂದಿಡುವುದಕ್ಕೆ ಸಜ್ಜಾಗುತ್ತಿದೆ.
'ಆಚಾರ್ & ಕೋ' 1960 ರ ಕಾಲಘಟ್ಟದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಥೆ. ಕುಟುಂಬವೊಂದು ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳುವ ಹಂತದಲ್ಲಿ ಅದೆಷ್ಟೇ ಸವಾಲುಗಳು ಎದುರಾದರೂ ಸಂಪ್ರದಾಯಗಳನ್ನೂ ಮೀರುವುದಿಲ್ಲ. ಅಲ್ಲದೆ ಆಧುನಿಕ ಜಗತ್ತಿಗೆ ಹೊಂದಿಕೊಂಡು ಹೇಗೆ ಗೆಲ್ಲುತ್ತಾರೆ ಎಂಬುದನ್ನು ಭಾವನಾತ್ಮಕವಾಗಿ ಈ ಸಿನಿಮಾದಲ್ಲಿ ಹೇಳಲಾಗಿದೆ.
60ರ ದಶಕದ ಕಥೆಯಾಗಿರುವುದರಿಂದ ಅಂದಿನ ಬೆಂಗಳೂರನ್ನು ಸೆಟ್ಟುಗಳ ಮೂಲಕ ಮರುಸೃಷ್ಟಿ ಮಾಡಲಾಗಿದೆ. ಈ ಸಿನಿಮಾದ ಜೊತೆ ಪ್ರೇಕ್ಷಕರು ತಮಗೇ ಗೊತ್ತಿಲ್ಲದಂತೆ 60ರ ದಶಕಕ್ಕೆ ಹೋಗುತ್ತಾರೆ. ಆ ಕುಟುಂಬದ ಪಯಣದಲ್ಲಿ ಭಾಗಿಯಾಗುತ್ತಾರೆ ಎನ್ನುತ್ತಿದೆ ಚಿತ್ರತಂಡ.
'ಆಚಾರ್ & ಕೋ' ಸಿನಿಮಾದಲ್ಲಿ ಮತ್ತೊಂದು ವಿಶೇಷತೆಯಿದೆ. ಈ ಸಿನಿಮಾ ಬಹುತೇಕ ಭಾಗಗಳಲ್ಲಿ ಹೆಚ್ಚಾಗಿ ಮಹಿಳೆಯರೇ ಕೆಲಸ ಮಾಡಿದ್ದಾರೆ. ಸಿನಿಮಾದ ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಮುಖ್ಯ ಪಾತ್ರಧಾರಿ, ಸೌಂಡ್ ಇಂಜಿನಿಯರ್, ವಸ್ತ್ರ ವಿನ್ಯಾಸಕರು ಇನ್ನೂ ಹಲವು ವಿಭಾಗಗಳನ್ನು ಮಹಿಳೆಯರೇ ಕೆಲಸ ಮಾಡಿದ್ದಾರೆ.
ಅಷ್ಟೇ ಅಲ್ಲ ಈ ಸಿನಿಮಾದ ನಿರ್ದೇಶಕಿ ಸಿಂಧು ಶ‍್ರೀನಿವಾಸಮೂರ್ತಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಷ್ಟೇ ಅಲ್ಲದೆ ಸಿನಿಮಾದ ಲೇಖಕರು ಹಾಗೂ ನಿರ್ದೇಶಕಿಯೂ ಕೂಡ ಇವರೇ. ಇಂತಹ ಪ್ರತಿಭೆಗೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಒಂದು ವೇದಿಕೆ ನಿರ್ಮಿಸಿಕೊಟ್ಟಿದ್ದಾರೆ.
"ಸಿಂಧು ಅವರ ಕ್ರಿಯೆಟಿವಿಟಿ ಮತ್ತು ಸಿನಿಮಾದ ಬಗ್ಗೆ ಅವರಿಗಿರುವ ಬದ್ಧತೆಯೇ ನಾವು ಅವರೊಂದಿಗೆ ಕೈ ಜೋಡಿಸಲು ಮುಖ್ಯ ಕಾರಣ. ನಿರ್ಮಾಣದ ಪ್ರತೀ ಹಂತದಲ್ಲೂ ಅತ್ಯಂತ ನಾಜೂಕಾಗಿ ಕೆಲಸ ಮಾಡಿರುವ ಸಿಂಧು ಆಲೋಚನೆಗಳು ಅದ್ಭುತವಾಗಿ ಸಿನಿಮಾ ರೂಪ ತಳೆದಿದೆ. ಅದು ಎಲ್ಲಾ ಪ್ರೇಕ್ಷಕರನ್ನೂ ತಲುಪುತ್ತದೆ" ಎಂದು ಅಶ‍್ವಿನಿ ಪುನೀತ್ ರಾಜ್‌ಕುಮಾರ್ ಭರವಸೆ ಮೂಡಿಸಿದ್ದಾರೆ.
'ಆಚಾರ್ & ಕೋ' ಸಿನಿಮಾದ ಹಾಡುಗಳು, ಟ್ರೈಲರ್ ಮುಂಬರುವ ದಿನಗಳಲ್ಲಿ ರಿಲೀಸ್ ಆಗಲಿದೆ. ಪಿ.ಆರ್.ಕೆ ಪ್ರೊಡಕ್ಷನ್ಸ್‌ನ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಲಿದೆ. ಅಂದ್ಹಾಗೆ ಈ ಸಿನಿಮಾಗೆ ಬಿಂಧು ಮಾಲಿನಿ ನಾರಾಯಣಸ್ವಾಮಿ ಸಂಗೀತ ನೀಡಿದ್ದಾರೆ. ಹಾಗೇ ಇಂಚರಾ ಸುರೇಶ್ ವಸ್ತ್ರ ವಿನ್ಯಾಸ, ಸೌಂಡ್ ಇಂಜಿನಿಯರ್ ಆಗಿ ಹೇಮಾ ಸುವರ್ಣ, ವಿಶ್ವಾಸ್ ಕಶ್ಯಪ್ ಆರ್ಟ್ ಡೈರೆಕ್ಷನ್ ಹಾಗೂ ಅಭಿಮನ್ಯು ಸದಾನಂದ್ ಕ್ಯಾಮರಾ ಹಿಡಿದಿದ್ದಾರೆ.


Click it and Unblock the Notifications











