ಮತ್ತೊಬ್ಬ ಕನ್ನಡದ ನಿರ್ಮಾಪಕನಿಗೆ ಅಪ್ಪು ಪಡೆದಿದ್ದ ಅಡ್ವಾನ್ಸ್ ಹಿಂತಿರುಗಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್
ಪುನೀತ್ ರಾಜ್‌ಕುಮಾರ್ ಅಗಲಿಕೆ ಇಡೀ ಕನ್ನಡ ಚಿತ್ರರಂಗಕ್ಕೆ ದೊಡ್ಡ ಶಾಕ್. ಆ ನೋವಿನಿಂದ ದೊಡ್ಮನೆ ಕುಟುಂಬ ಹೊರ ಬರಲು ಪ್ರಯತ್ನನಿಸುತ್ತಿದೆ. ಇದರ ಹಿಂದೆನೇ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಮಾದಲ್ಲಿ ನಟಿಸುವುದಕ್ಕಾಗಿ ಪಡೆದಿದ್ದ ಮುಂಗಡ ಹಣವನ್ನು ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಬ್ಬೊಬ್ಬರಿಗೆ ಹಿಂತಿರುಗಿಸುತ್ತಿದ್ದಾರೆ.
Recommended Video

ಇದೇ ಕಾರಣಕ್ಕೆ ಕನ್ನಡ ಚಿತ್ರರಂಗ ದೊಡ್ಮನೆ ಕುಟುಂಬದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದೆ. ತಮ್ಮನ್ನು ನಂಬಿ ಬಂದವರನ್ನು ಈ ಎಂದಿಗೂ ಕೈ ಬಿಟ್ಟಿಲ್ಲ. ಚಿತ್ರರಂಗಕ್ಕೆ ಸಂಬಂಧಿಸಿದವರು ಯಾರೇ ಇರಬಹುದು. ಈಗ ಅಪ್ಪು ಜೊತೆ ಸಿನಿಮಾ ಮಾಡಲು ಅಡ್ವಾನ್ಸ್ ಹಣ ನೀಡಿ ಕಾಲ್ ಶೀಟ್ ಪಡೆದಿದ್ದ ಮತ್ತೊಬ್ಬ ನಿರ್ಮಾಪಕನಿಗೆ ಅಷ್ಟೂ ಹಣವನ್ನು ಹಿಂತಿರುಗಿಸಿದ್ದಾರೆ. ಹಾಗಿದ್ದರೆ, ಅಪ್ಪು ಪತ್ನಿ ಹಣ ಹಿಂತಿರುಗಿಸಿದ ಆ ನಿರ್ಮಾಪಕ ಯಾರು? ಯಾವಾಗ ಹಣ ಹಿಂತಿರುಗಿಸಿದರು ಅನ್ನುವ ಮಾಹಿತಿಗೆ ಮುಂದೆ ಓದಿ.

ರಾಬರ್ಟ್ ನಿರ್ಮಾಪಕನಿಗೆ ಅಡ್ವಾನ್ಸ್ ಹಣ ವಾಪಾಸ್
'ರಾಬರ್ಟ್' ಹಾಗೂ 'ಮದಗಜ' ಸಿನಿಮಾಗಳನ್ನು ನಿರ್ಮಿಸಿದ್ದ ನಿರ್ಮಾಪಕ ಉಮಾಪತಿ ಗೌಡ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ಸಿನಿಮಾ ಮಾಡಬೇಕಿತ್ತು. 'ಮದಗಜ' ಶೂಟಿಂಗ್ ಮುಗಿಸಿದ ಕೂಡಲೇ ಪುನೀತ್ ರಾಜ್‌ಕುಮಾರ್‌ಗೆ ಮುಂಗಡ ಹಣವನ್ನು ನೀಡಿ ಕಾಲ್‌ಶೀಟ್ ಪಡೆದುಕೊಂಡಿದ್ದರು. ಅಪ್ಪು ಎರಡು ಸಿನಿಮಾಗಳನ್ನು ಮುಗಿಸಿದ ಬಳಿಕ ನಿರ್ಮಾಪಕ ಉಮಾಪತಿ ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾ ಮಾಡಬೇಕಿತ್ತು. ಅಂದು ಅಪ್ಪು ಪಡೆದಿದ್ದ ಹಣವನ್ನು ಇಂದು(ಡಿಸೆಂಬರ್ 25) ಹಿಂತಿರುಗಿಸಲಾಗಿದೆ.

ಕ್ರಿಸ್‌ಮಸ್ ಹಬ್ಬದಂದು ಅಡ್ವಾನ್ಸ್ ಹಣ ವಾಪಸ್
ನಿರ್ಮಾಪಕ ಉಮಾಪತಿ ಮುಂಗಡ ಹಣವಾಗಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಎಷ್ಟು ಹಣ ನೀಡಿದ್ದರು ಎಂಬುದು ತಿಳಿದು ಬಂದಿಲ್ಲ. ಆದರೆ, ಸ್ವತಃ ಅಶ್ವಿನಿ ಉಮಾಪತಿ ನೀಡಿದ ಮುಂಗಡ ಹಣವನ್ನು ದೊಡ್ಮನೆ ತಂಡದೊಂದಿಗೆ ಕಳುಹಿಸಿಕೊಟ್ಟಿದ್ದರು. ಇಂದು( ಡಿಸೆಂಬರ್ 25) ಅಪ್ಪು ಟೀಮ್ ಅಷ್ಟೂ ಹಣವನ್ನೂ ಮಧ್ಯಾಹ್ನ ಸುಮಾರು 2.30ಕ್ಕೆ ಉಮಾಪತಿಯವರ ಮನೆಗೆ ತೆರಳಿ ಹಿಂತಿರುಗಿಸಿ ಬಂದಿದೆ. ಈ ಮೂಲಕ ಮತ್ತೊಬ್ಬ ನಿರ್ಮಾಪಕ ಕೊಟ್ಟ ಮುಂಗಡ ಹಣವನ್ನು ಹಿಂತಿರುಗಿಸಲಾಗಿದೆ.

'ದ್ವಿತ್ವ' ಬಳಿಕ ಸೆಟ್ಟೇರಬೇಕಿತ್ತು ಸಿನಿಮಾ
ನಿರ್ಮಾಪಕ ಉಮಾಪತಿ ಹಾಗೂ ಪುನೀತ್ ರಾಜ್‌ಕುಮಾರ್ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಹೀಗಾಗಿ ಶ್ರೀಮುರಳಿ 'ಮದಗಜ' ಸಿನಿಮಾದ ಬಳಿಕ ಪವರ್‌ಸ್ಟಾರ್ ಜೊತೆ ಸಿನಿಮಾ ಮಾಡುವುದಾಗಿ ಉಮಾಪತಿ ಘೋಷಿಸಿದ್ದರು. ಅದರಂತೆ ಕೆಲವು ತಿಂಗಳುಗಳ ಹಿಂದೆ ಮುಂಗಡ ಹಣವನ್ನು ಕೊಟ್ಟು ಕಾಲ್ ಶೀಟ್ ಪಡೆದಿದ್ದರು ಎನ್ನಲಾಗಿದೆ. ಆದರೆ, ಅಪ್ಪು ದಿಢೀರ್ ಅಗಲಿಕೆಯಿಂದ ಅಪ್ಪು ಜೊತೆ ಸಿನಿಮಾ ಮಾಡುವ ಕನಸನ್ನು ಕೈ ಬಿಡಬೇಕಾಗಿತ್ತು. ಪುನೀತ್ ಅಡ್ವಾನ್ಸ್ ಪಡೆದ ಹಣದ ಬಗ್ಗೆ ಪುನೀತ್ ಪತ್ನಿ ಅಶ್ವಿನಿಯವರಿಗೆ ತಿಳಿಯುತ್ತಿದ್ದಂತೆ ಅಷ್ಟೂ ಹಣವನ್ನೂ ಅವರ ಮನೆಗೆ ತಲುಪಿಸಿದ್ದಾರೆ.

2.5 ಕೋಟಿ ಹಣ ಹಿಂತಿರುಗಿಸಿದ್ದ ಅಪ್ಪು ಪತ್ನಿ
ಕೆಲವು ದಿನಗಳ ಹಿಂದಷ್ಟೇ ಸ್ವತಃ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೇ ನಿರ್ಮಾಪಕರಿಗೆ ಕರೆ ಮಾಡಿ, ಅವರಿಗೆ ಸೇರಬೇಕಿದ್ದ 2.5 ಕೋಟಿ ಹಣವನ್ನು ತೆಗೆದುಕೊಂಡು ಹೋಗುವಂತೆ ಕರೆ ಮಾಡಿದ್ದರು. ಈ ಮಾತನ್ನು ಹಿರಿಯ ಪತ್ರಕರ್ತ ಶಶಿಧರ ಭಟ್ ತಮ್ಮ ಫೇಸ್‌ಬುಕ್ ಬರೆದುಕೊಂಡಿದ್ದರು. ಆದರೆ, ಆ ನಿರ್ಮಾಪಕ ಯಾರು ಅನ್ನುವುದು ಬಹಿರಂಗಗೊಂಡಿಲ್ಲ. ಈ ಕಾರಣಕ್ಕೆ ದೊಡ್ಮನೆ ಕುಟುಂಬ ಕನ್ನಡ ಚಿತ್ರರಂಗದಲ್ಲಿ ವಿಶೇಷ ಸ್ಥಾನಮಾನವನ್ನು ಪಡೆದುಕೊಂಡಿದೆ.


Click it and Unblock the Notifications











