ಹುಟ್ಟುಹಬ್ಬದಂದೇ RCB ಫ್ಯಾನ್ಸ್‌ಗೆ ಚಮಕ್ ಕೊಟ್ಟ ಅಶ್ವಿನಿ ಪುನೀತ್ ರಾಜ್‌ಕುಮಾರ್: ನಿಮಗೇನಾದ್ರೂ ಅರ್ಥ ಆಯ್ತಾ?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಬಳಿಕ ಅವರ ಪತ್ನಿ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಸಿನಿಮಾರಂಗದಲ್ಲಿ ಆಕ್ಟಿವ್ ಆಗಿದ್ದಾರೆ. ಅಪ್ಪು ಬಿಟ್ಟು ಹೋದ ಸಿನಿಮಾ ಕೆಲಸಗಳನ್ನು ಕೈಗೆತ್ತಿಕೊಂಡು ಅವರ ಕನಸನ್ನು ಮುಂದುವರೆಸಿದ್ದಾರೆ. ಇವರು ಇಂದು (ಮಾರ್ಚ್ 14) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ದಿನ ಆರ್‌ಸಿಬಿ ಟೀಮ್ ಹೊಸ ವಿಡಿಯೋವೊಂದನ್ನು ರಿಲೀಸ್ ಮಾಡಿದೆ.
ಪುನೀತ್ ರಾಜ್‌ಕುಮಾರ್ ಬರ್ತ್‌ಡೇಗೆ ಇನ್ನೇನು ಮೂರು ದಿನ ಬಾಕಿ ಉಳಿದಿರುವಾಗಲೇ ಆರ್‌ಸಿಬಿ ಪ್ರಮೋಷನ್‌ನಲ್ಲಿ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು ಫ್ಯಾನ್ಸ್‌ಗೆ ಕಿಕ್ ಕೊಟ್ಟಿದೆ. ಅಷ್ಟಕ್ಕೂ ಈ ವಿಡಿಯೋ ಅಶ್ವಿನಿ ಪುನೀತ್ ಕುಮಾರ್ ಬರ್ತ್‌ಡೇಗೂ, ಪುನೀತ್ ಹುಟ್ಟುಹಬ್ಬಕ್ಕೂ ಯಾವುದೇ ಸಂಬಂಧಿವಿಲ್ಲ. ಇದು ಪಕ್ಕಾ ಆರ್‌ಸಿಬಿ ಅಭಿಮಾನಿಗಳಿಗಾಗಿ ಮಾಡಿರುವ ವಿಡಿಯೋ.

ಆರಂಭದ ದಿನಗಳಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಆರ್‌ಸಿಬಿ ತಂಡದ ರಾಯಬಾರಿಯಾಗಿದ್ದರು. ಹೀಗಾಗಿ ಪುನೀತ್ ರಾಜ್‌ಕುಮಾರ್ ಕುಟುಂಬಕ್ಕೂ ಆರ್‌ಸಿಬಿ ತಂಡಕ್ಕೂ ಬಿಡಲಾರದ ನಂಟು ಇದೆ. ಇಷ್ಟೇ ಅಲ್ಲದೇ ಕೆಲವು ವರ್ಷಗಳ ಹಿಂದಷ್ಟೇ ಕನ್ನಡದ ಹೆಸರಾಂತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹಾಗೂ ಆರ್‌ಸಿಬಿ ಟೀಮ್ ಒಡಂಬಡಿಕೆ ಮಾಡಿಕೊಂಡಿದೆ. ಹೀಗಾಗಿ ವಿನೂತನವಾದ ಪ್ರಮೋಷನಲ್ ವಿಡಿಯೋದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ಅದೂ ಹುಟ್ಟುಹಬ್ಬದಂದೇ ವಿಡಿಯೋ ರಿಲೀಸ್ ಆಗಿದ್ದು ವಿಶೇಷ.
ಮಾರ್ಚ್ 22ರಿಂದ ಐಪಿಎಲ್ 17ನೇ ಆವೃತ್ತಿ ಗ್ರ್ಯಾಂಡ್ ಆಗಿ ಆರಂಭ ಆಗುತ್ತಿದೆ. ಈ ಬೆನ್ನಲ್ಲೇ ಆರ್‌ಸಿಬಿ ತಂಡ ತಮ್ಮ ಅಭಿಮಾನಿಗಳಿಗಾಗಿ ಅನ್‌ಬಾಕ್ಸಿಂಗ್ ಇವೆಂಟ್ ಅನ್ನು ಇಟ್ಟುಕೊಂಡಿದೆ. ಮಾರ್ಚ್ 19ರಂದು ಈ ಇವೆಂಟ್ ನಡೆಯಲಿದ್ದು, ಅಂದು ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲಿದೆ. ಅದಕ್ಕೂ ಮುನ್ನ ಪ್ರಮೋಷನಲ್ ವೀಡಿಯೋ ಮೂಲಕ ಫ್ಯಾನ್ಸ್‌ಗೆ ಅರಿವು ಮೂಡಿಸುವುದಕ್ಕೆ ಮುಂದಾಗಿದೆ.

ಈಗಾಗಲೇ ರಿಷಬ್ ಶೆಟ್ಟಿ ಆರ್‌ಸಿಬಿ ಪ್ರಮೋಷನಲ್ ವಿಡಿಯೋದಲ್ಲಿ ಕಾಣಿಸಿಕೊಂಡು ಅರ್ಥ ಆಯ್ತಾ? ಅಂತ ಪ್ರಶ್ನೆ ಮಾಡಿದ್ದರು. ಈಗ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ಪ್ರಮೋಷನಲ್ ವಿಡಿಯೋದಲ್ಲಿ ಕಾಣಿಸಿಕೊಂಡು ಅರ್ಥ ಆಯ್ತಾ? ಅಂತ ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ ಅಂದ್ರೆ? ಅಶ್ವಿನಿ ಪುನೀತ್ ರಾಜ್‌ಕುಮಾರ್ ತಮ್ಮ ಲ್ಯಾಪ್‌ಟಾಪ್‌ನಲ್ಲಿ 'Royal Challengers Bangalore'(ರಾಯಲ್ ಚಾಲೆಂಜರ್ಸ್ ಬ್ಯಾಂಗಲೂರ್) ಎಂದು ಪಾಸ್‌ವರ್ಡ್ ಟೈಪ್ ಮಾಡುತ್ತಾರೆ. ಆ ಪಾಸ್‌ವರ್ಡ್ ಅನ್ನು ಲ್ಯಾಪ್‌ಟಾಪ್ ಒಪ್ಪದೆ ಇರೋದ್ರಿಂದ 'Bangalore' ಅನ್ನುವ ಪದವನ್ನು ಅಳಿಸಿ ಹಾಕುತ್ತಾರೆ. ಬಳಿಕ ಅರ್ಥ ಆಯ್ತಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆ ಮೂಲಕ ಅಭಿಮಾನಿಗಳಲ್ಲಿ ಇವರೂ ಹುಳ ಬಿಟ್ಟಿದ್ದಾರೆ.
'Royal Challengers Bangalore'(RCB)ನಲ್ಲಿ Bangalore (ಬ್ಯಾಂಗಲೂರ್) ಪದವನ್ನು ತೆಗೆದು Bengaluru (ಬೆಂಗಳೂರು) ಬಳಸುವಂತೆ ಒತ್ತಾಯ ಹೆಚ್ಚಿತ್ತು. ಹೀಗಾಗಿ ಐಪಿಎಲ್ 17ನೇ ಸೀಸನ್‌ನಲ್ಲಿ ಆರ್‌ಸಿಬಿ ಟೀಮ್ 'ಬ್ಯಾಂಗಲೂರ್' ತೆಗೆದು 'ಬೆಂಗಳೂರು' ಎಂದು ಮಾಡುತ್ತಿದೆ ಎನ್ನಲಾಗಿದೆ. ಮಾರ್ಚ್ 19ರಂದು ಅನ್‌ಬಾಕ್ಸಿಂಗ್ ವೇಳೆ 'Royal Challengers Bengaluru' ಆಗಲಿದೆ.


Click it and Unblock the Notifications











