"ಪಾರ್ವತಮ್ಮ ರಾಜ್‌ಕುಮಾರ್‌ಗೆ ಗಂಡು ಮಗು ಹುಟ್ಟುತ್ತಾನೆ.. ಅವನು ಸ್ಟಾರ್ ಆಗ್ತಾನೆ"; 72ರಲ್ಲಿ ಭವಿಷ್ಯ ಹೇಳಿದ್ದಿದ್ಯಾರು?
ನಿನ್ನೆಯಷ್ಟೇ (ಮಾರ್ಚ್ 17) ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲಿದ್ದ ಅಭಿಮಾನಿಗಳು ಹುಟ್ಟುಹಬ್ಬವನ್ನು ತಮ್ಮದೇ ರೀತಿಯಲ್ಲಿ ಆಚರಿಸಿ ಸಂಭ್ರಮಿಸಿದ್ದಾರೆ. ಅವರ ಅಭಿಮಾನಿಗಳಿಗಾಗಿ ಅಪ್ಪು ನಟಿಸಿದ ಸಿನಿಮಾಗಳನ್ನು ಪ್ರತಿ ವರ್ಷ ಒಂದರಂತೆ ಮರು ಬಿಡುಗಡೆ ಮಾಡಲಾಗುತ್ತಿದೆ. ಈ ಬಾರಿ 'ಅಪ್ಪು' ರಿಲೀಸ್ ಆಗಿದೆ.
ಪುನೀತ್ ರಾಜ್‌ಕುಮಾರ್ ಅಗಲಿ ನಾಲ್ಕು ವರ್ಷಗಳಾಗಿವೆ. ದಿನದಿಂದ ದಿನಕ್ಕೆ ಪುನೀತ್ ರಾಜ್‌ಕುಮಾರ್ ಅವರನ್ನು ಆರಾಧಿಸುವ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆಯೇ ವಿನ: ಕಡಿಮೆ ಅಂತೂ ಆಗಿಲ್ಲ. ಅಪ್ಪು ಆದರ್ಶಗಳನ್ನು ಅವರ ಅಭಿಮಾನಿಗಳು ಕೂಡ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅವರು ಮಾಡಿದ್ದ ಸಮಾಜಮುಖಿ ಕೆಲಸಗಳು ಇಂದಿಗೂ ಅದೆಷ್ಟೋ ಮಂದಿಗೆ ಪ್ರೇರಣೆ.

ಅಪ್ಪು ಬಗ್ಗೆ ಇನ್ನೊಂದು ಇಂಟ್ರೆಸ್ಟಿಂಗ್ ವಿಷಯವೊಂದಿಗೆ. ಅಣ್ಣಾವ್ರ ಸಿನಿಮಾದಲ್ಲಿ ನಟಿಸುತ್ತಿದ್ದ ವ್ಯಕ್ತಿಯೊಬ್ಬ ಪಾರ್ವತಮ್ಮ ರಾಜ್‌ಕುಮಾರ್ ಮತ್ತೊಬ್ಬ ಗಂಡು ಮಗುವಿನ ಜನ್ಮ ನೀಡುತ್ತಾರೆ ಎಂದಿದ್ದರಂತೆ. ಆ ಸೂಪರ್‌ಸ್ಟಾರ್ ಆಗುತ್ತಾನೆ ಅಂತ ಭವಿಷ್ಯ ನುಡಿದಿದ್ದರು. ಆತ ನುಡಿದಂತೆ ನಡೆದಿತ್ತು. ಕನ್ನಡ ಚಿತ್ರರಂಗದ ಇಬ್ಬರು ವ್ಯಕ್ತಿಗಳು ಈ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ. ಅವರು ಏನು ಹೇಳಿದ್ದಾರೆ ಅಂತ ತಿಳಿಯಲು ಮುಂದೆ ಓದಿ.
ಅಪ್ಪು ಅಗಲಿದಾಗ, ಅಣ್ಣಾವ್ರ ಕುಟುಂಬವನ್ನು ಹತ್ತಿರದಿಂದ ಬಲ್ಲವರು ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಪ್ರಸ್ತಾಪ ಮಾಡಿದ್ದರು. ಆ ವೇಳೆ ಒಬ್ಬ ವ್ಯಕ್ತಿ ನುಡಿದ ಭವಿಷ್ಯದಂತೆಯೇ ಅಣ್ಣಾವ್ರ ಮನೆಯಲ್ಲಿ ನಡೆದಿತ್ತು. ಪುನೀತ್ ರಾಜ್‌ಕುಮಾರ್ ಹುಟ್ಟುತ್ತಾನೆ ಅಂತ ಭವಿಷ್ಯ ನುಡಿದಿದ್ದರು. ಹಾಗೇ ಆಯ್ತು. ಸ್ಟಾರ್ ಆಗುತ್ತಾನೆ ಎಂದಿದ್ದರು. ಅದೂ ಕೂಡ ಆತ ನುಡಿದಂತೆ ನಡೆದಿತ್ತು. ಈ ವಿಷಯವನ್ನು ಕನ್ನಡ ಚಿತ್ರರಂಗದ ಹಿರಿಯ ಪ್ರೊಡಕ್ಷನ್ ಮ್ಯಾನೇಜರ್ ರಾಮಣ್ಣ ಸಂದರ್ಶನಗಳಲ್ಲಿ ರಿವೀಲ್ ಮಾಡಿದ್ದರು.

"1972ನಲ್ಲಿ ಜಗಮೆಚ್ಚಿದ ಮಗ ಅಂತ ಒಂದು ಸಿನಿಮಾ ಮಾಡುತ್ತಿದ್ದರು. ಬಂಡೀಪುರದಲ್ಲಿ ಶೂಟಿಂಗ್. ಅಲ್ಲಿಗೆ ಜೂನಿಯರ್ ಆರ್ಟಿಸ್ಟ್‌ಗಳನ್ನು ಕರೆದುಕೊಂಡು ಹೋಗಿದ್ವಿ. ಹುಣಸೂರು ಕೃಷ್ಣಮೂರ್ತಿ ನಿರ್ದೇಶನ ಮಾಡುತ್ತಿದ್ದರು. ಅಲ್ಲಿ ಜೂನಿಯರ್ ಆರ್ಟಿಸ್ಟ್ ಒಬ್ಬ ಇದ್ದ. ಅವನು ಅಣ್ಣಾವ್ರು ಇದ್ದ ರೂಮ್‌ನ ಮುಂದೆ ಓಡಾಡಿದ್ದಾನೆ. ಅದು ಪಾರ್ವತಮ್ಮ ರಾಜ್‌ಕುಮಾರ್ ಅವರಿಗೆ ಡೌಟ್ ಬಂದು ಬಿಟ್ಟಿದೆ. ನನ್ನನ್ನು ಕರೆದರು. ಅವನಿಗೆ ಏನಾದರೂ ಸಮಸ್ಯೆ ಇದೆಯಾ? ಅಂತ ಕೇಳಪ್ಪ ಅಂತ ಹೇಳಿದರು. ತೆಲುಗಿನವನು ಹೈಟ್, ಪರ್ಸನಾಲಿಟಿ ಎಲ್ಲ ಇದ್ದ. ನಾನು ಏನಾದರೂ ಪ್ರಾಬ್ಲಂ ಇದೆಯಾ? ಅಂದೆ. ಅದಕ್ಕೆ ಏನಿಲ್ಲ. ಅಣ್ಣಾವ್ರನ್ನು ನೋಡಬೇಕು ಅಂತಿತ್ತು ನೋಡಿದೆ ಅಂತ ಅಂದ." ಎಂದು ಆ ಘಟನೆಯನ್ನು ರಾಮಣ್ಣ ವಿವರಿಸಿದ್ದರು.
ಇದೇ ವೇಳೆ ಆ ಜೂನಿಯರ್ ಆರ್ಟಿಸ್ಟ್ ಪಾರ್ವತಮ್ಮನವರಿಗೆ ಗಂಡು ಮಗು ಆಗುತ್ತೆ ಅಂತ ಹೇಳಿದ್ದ. "ನಾನು ಸುಮ್ಮನಿರಯ್ಯ. ಅವರು ಸಾಕು ಅಂತಿದ್ದಾರೆ. ನೀನು ಬೇರೆ ಅಂತ ಅಂದೆ. ಆಗ ಇನ್ನೂ ಪುನೀತ್ ಹುಟ್ಟಿರಲಿಲ್ಲ. ಇದು ಆಗಿದ್ದು 1972ನಲ್ಲಿ. ಇಲ್ಲ ಸರ್ ಗಂಡು ಮಗು ಆಗುತ್ತೆ ಸರ್. ಸ್ಟಾರ್ ಆಗುತ್ತಾನೆ. ಅಂತ ಅಂದಿದ್ದ." ಎಂದು ಹಿರಿಯ ಪ್ರೊಡಕ್ಷನ್ ಮ್ಯಾನೇಜರ್ ರಾಮಣ್ಣ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

ಇಷ್ಟೇ ಅಲ್ಲ. ಅಣ್ಣಾವ್ರ ಚೆನ್ನೈನಲ್ಲಿ ಇದ್ದ ಮನೆಯನ್ನು ಮಾರುವುದಕ್ಕೆ ಆಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದನಂತೆ. ಅದು ಕೂಡ ಹಾಗೇ ಆಯ್ತು ಎಂದಿದ್ದಾರೆ. "ಇದೇ ವೇಳೆ ಚೆನ್ನೈನಲ್ಲಿ ಮನೆ ಇದೆಯಲ್ಲ ಅದನ್ನು ಮಾರುವುದಕ್ಕೆ ಆಗಲ್ಲ ಅಂದಿದ್ದ. ಇವರು ಮಾರುವುದಕ್ಕೆ ಸಿಕ್ಕಾಪಟ್ಟೆ ಟ್ರೈ ಮಾಡಿದ್ರು. ಆದರೆ, ಅದು ಸಾಧ್ಯವಾಗಲಿಲ್ಲ. ಅವರ ಮನೆಯ ಬಾಗಿಲಿನ ಗೇಟ್‌ನಲ್ಲಿ ಬಾವಿಯನ್ನು ಮುಚ್ಚಿದ್ದಾರೆ. ಅದು ಇವರಿಗೆ ಗೊತ್ತಿಲ್ಲ. ಆ ಶಾಪದಿಂದ ಯಾರಿಗೂ ಮಾರುವುದಕ್ಕೆ ಆಗುವುದಿಲ್ಲ ಎಂದಿದ್ದ. ಅದನ್ನು ಪಾರ್ವತಮ್ಮ ರಾಜ್‌ಕುಮಾರ್ ಅವರಿಗೆ ಹೇಳಿದ್ದೆ. ಅವನು ಏನೋ ಹೇಳ್ತಾನೆ ಬಿಡು ಅಂದಿದ್ದರು" ಎಂದಿದ್ದಾರೆ.
ಜೂನಿಯರ್ ಆರ್ಟಿಸ್ಟ್ ಭವಿಷ್ಯ ನುಡಿದಂತೆ ಪಾರ್ವತಮ್ಮ ರಾಜ್‌ಕುಮಾರ್ ಅಪ್ಪುಗೆ ಜನ್ಮ ನೀಡಿದ್ದರು. ಆತ ನುಡಿದಂತೆ ನಡೆಯುವುದಕ್ಕೆ ಶುರುವಾಗಿತ್ತು. ಆಗ ಪಾರ್ವತಮ್ಮ ರಾಜ್‌ಕುಮಾರ್ ಶಾಕ್ ಆಗಿದ್ದರು. ಇದೇ ಪ್ರೊಡಕ್ಷನ್ ಮ್ಯಾನೇಜರ್‌ಗೆ ಆ ಜೂನಿಯರ್ ಆರ್ಟಿಸ್ಟ್ ಅನ್ನು ಕರೆಸುವಂತೆ ಪಾರ್ವತಮ್ಮ ಹೇಳಿದ್ದರಂತೆ. ವಿಚಿತ್ರ ಅಂದರೆ, ಆತನೇ ಅಣ್ಣ್ರಾವನ್ನು ಹುಡುಕಿಕೊಂಡು ಮತ್ತೆ ಬಂದಿದ್ದ. ಅಣ್ಣಾವ್ರಿಗೆ ಸಿನಿಮಾ ಮಾಡುತ್ತೇನೆ ಅಂತ ಬಂದಿದ್ದನಂತೆ. ಆದರೆ, ಆತ ಸಿನಿಮಾ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ.
ಇನ್ನು ಪುನೀತ್ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅಪ್ಪು ಸಿನಿಮಾದಲ್ಲಿ ಸ್ನೇಹಿತನಾಗಿ ವಿನಾಯಕ್ ಜೋಷಿ ನಟಿಸಿದ್ದರು. ಇವರ ಪಾತ್ರ ಕೂಡ ಸಿನಿಮಾದಲ್ಲಿ ಹೈಲೈಟ್ ಆಗಿತ್ತು. ಇತ್ತೀಚೆಗೆ ಕ್ರಿಕೆಟ್ ಕಾಮೆಂಟೇಟರ್ ಶ್ರೀನಿವಾಸ್ ಮೂರ್ತಿ ಅವರ ಜಾನಿ ಮೂರ್ತಿ ಯೂಟ್ಯೂಬ್ ಚಾನೆಲ್‌ನ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಆ ವೇಳೆ ಅಪ್ಪು ಸ್ಟಾರ್ ಆಗುತ್ತಾರೆ ಅಂತ ಭವಿಷ್ಯ ನುಡಿದಿದ್ದವರ ಹೆಸರನ್ನು ರಿವೀಲ್ ಮಾಡಿದ್ದಾರೆ.
"ಅವರಿಗೆ ಹೀರೋಯಿಸಂ ಇರಲಿಲ್ಲ. ಹೀರೋ ಆಗಿ ಮಾಡಬೇಕಾದ ಪಾತ್ರಗಳನ್ನು ಮಾಡಿಕೊಂಡು ಬಂದಿದ್ದರು. ಅವರಿಗೆ ಹೀರೊ ಆಗುವಂತ ಎಲ್ಲಾ ಸಾಮರ್ಥ್ಯಗಳು ಇತ್ತು ಅಂತ ಎಲ್ಲರಿಗೂ ಗೊತ್ತು. ಅವರು ಬೆಳೆದ ನಂತರ ಸಿನಿಮಾ ಪ್ರೊಡಕ್ಷನ್, ಸಿರಿಯಲ್ ಪ್ರೊಡಕ್ಷನ್, ಪೂರ್ಣಿಮಾ ಎಂಟರ್‌ಪ್ರೈಸಸ್ ನೋಡಿಕೊಳ್ಳುವುದಾಗಿರಬಹುದು., ಇದರಲ್ಲಿ ಅವರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ನನಗೆ ಗೊತ್ತಿರೋ ಹಾಗೆ ಇವರ ಸ್ಟಾರ್ ತುಂಬಾನೇ ಚೆನ್ನಾಗಿದೆ. ಇವರು ಹುಟ್ಟಿದ್ದೇ ಸ್ಟಾರ್ ಆಗುವುದಕ್ಕೆ ಅಂತ ಅರುಲಾಳನ್ ಅನ್ನುವವರು ಹೇಳಿದ್ದರಂತೆ." ಎಂದು ವಿನಾಯಕ್ ಜೋಷಿ ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ಹಿರಿಯ ಪ್ರೊಡಕ್ಷನ್ ಮ್ಯಾನೇಜರ್ ರಾಮಣ್ಣ ಹಾಗೂ ವಿನಾಯಕ್ ಜೋಷಿ ಹೇಳಿದ ಅರುಲಾಳನ್ ಇಬ್ಬರು ಒಬ್ಬರೇನಾ? ಅಥವಾ ಬೇರೆ ಬೇರೆನಾ? ಬೇರೆ ಬೇರೆ ಸಂದರ್ಶಗಳಲ್ಲಿ ಪುನೀತ್ ರಾಜ್‌ಕುಮಾರ್ ಬಗ್ಗೆ ಭವಿಷ್ಯ ನುಡಿಯಲಾಗಿದ್ದೇ ಅನ್ನೋದು ಕುತೂಹಲವನ್ನು ಕೆರಳಿಸುತ್ತಿದೆ. ಇದೆಲ್ಲದಕ್ಕೂ ಬಹುಶ: ಯುಗಾದಿ ಹಬ್ಬದ ಸಂದರ್ಭದಲ್ಲಿ ಉತ್ತರ ಸಿಗುವ ಸಾಧ್ಯತೆಯಿದೆ.
ಅಪ್ಪು ಅಗಲಿದ ಸಂದರ್ಭದಲ್ಲಿ ಇನ್ನೊಂದು ವಿಷಯ ಕೂಡ ಚರ್ಚೆಯಲ್ಲಿತ್ತು. ಪುನೀತ್ ರಾಜ್‌ಕುಮಾರ್ ಪ್ರಾಣಕ್ಕೆ ಸಂಚಕಾರವಿದೆ. ಹೀಗಾಗಿ ಹೆಸರನ್ನು ಬದಲಾಯಿಸಿ ಎಂದು ಯಾರೋ ಒಬ್ಬರು ಹೇಳಿದ್ದರು ಎಂಬ ಸುದ್ದಿನೂ ಓಡಾಡಿತ್ತು. ಅದಕ್ಕೆ ಲೋಹಿತ್ ಕುಮಾರ್ ಅಂತ ಇದ್ದ ಹೆಸರನ್ನು ಪುನೀತ್ ರಾಜ್‌ಕುಮಾರ್ ಅಂತ ಬದಲಾಯಿಸಲಾಯಿತು ಎಂದು ನಾಲ್ಕು ವರ್ಷಗಳ ಹಿಂದೆ ಚರ್ಚೆಯಾಗಿತ್ತು.
ಇದೆಲ್ಲ ಏನೇ ಚರ್ಚೆಯಾದರೂ, ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗದಲ್ಲಿ ಸೂಪರ್‌ಸ್ಟಾರ್ ಆಗಿದ್ದು ನಿಜ. ಅಷ್ಟೇ ಅಗಲಿದ ಬಳಿಕವೂ ಪುನೀತ್ ರಾಜ್‌ಕುಮಾರ್ ಕರ್ನಾಟಕ ರತ್ನನಾಗಿ ಜನರ ಮನ ಮನೆಯಲ್ಲಿ ನೆಲೆಸಿದ್ದಾರೆ. ಅಪ್ಪು ನಡೆ ನುಡಿಯನ್ನು, ಸರಳತೆಯನ್ನು ಇಂದಿಗೂ ಹಾಡಿಹೊಗಳುವವರಿಗೇನು ಕಮ್ಮಿಯಿಲ್ಲ. ಪವರ್‌ಸ್ಟಾರ್ ಆಗಿ, ಕರ್ನಾಟಕ ರತ್ನನಾಗಿ ಅಪ್ಪು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಅಪ್ಪು ಕಣ್ಮರೆಯಾಗಿ ನಾಲ್ಕು ವರ್ಷಗಳಾಗಿದ್ದರೂ, ಅಭಿಮಾನ ಕಮ್ಮಿಯಾಗಿಲ್ಲ. ಅಣ್ಣಾವ್ರಂತೆಯೇ ಪುನೀತ್ ರಾಜ್‌ಕುಮಾರ್ ಕೂಡ ತಮ್ಮದೇ ಹೆಸರನ್ನು ಉಳಿಸಿ ಹೋಗಿದ್ದಾರೆ. ಅದು ಪ್ರತಿದಿನವೂ ಒಂದಲ್ಲ ಒಂದು ರೂಪದಲ್ಲಿ ಜನರ ಅರಿಗೆ ಬರುತ್ತಿದೆ. ಪವರ್ ಸ್ಟಾರ್ ಎಂದೆಂದಿಗೂ ಕನ್ನಡಿಗರ ಪಾಲಿಗೆ ಪವರ್ ಸ್ಟಾರ್ ಆಗಿಯೇ ಇರುತ್ತಾರೆ.


Click it and Unblock the Notifications











