ಬೆಂಗಳೂರು ಮೆಟ್ರೋ ಹಳದಿ ಮಾರ್ಗಕ್ಕೂ ಅಚ್ಚ ಕನ್ನಡದ ನಿರೂಪಕಿ ಅಪರ್ಣಾ ವಸ್ತಾರೆ ಧ್ವನಿ; ಮರುಕಳಿಸಿದ ನೆನಪು!
ಅಚ್ಚ ಕನ್ನಡದಲ್ಲಿ ನಿರೂಪಣೆ ಮಾಡುತ್ತಿದ್ದ ನಿರೂಪಕಿಯರಲ್ಲಿ ಮೊದಲಿಗೆ ನೆನಪಾಗುವುದು ಅಪರ್ಣ ವಸ್ತಾರೆ. ಈಗ ಅವರು ನೆನಪು ಮಾತ್ರ. ಅವರ ಧ್ವನಿಗೆ ಅದೆಷ್ಟೋ ಕನ್ನಡದ ಅಭಿಮಾನಿಗಳಿದ್ದಾರೆ. ವಿಶ್ವದ ಮೂಲೆ ಮೂಲೆಯಲ್ಲಿರುವ ಅಪ್ಪಟ ಕನ್ನಡಿಗರು ಈ ಅಚ್ಚ ಕನ್ನಡದ ನಿರೂಪಕಿಯ ಭಾಷೆಗೆ, ನಿರೂಪಣಾ ಶೈಲಿಗೆ ಮನಸೋತಿದ್ದಾರೆ. ಆದರೆ, ಅಗಲಿದ ಬಳಿಕವೂ ಅವರ ನೆನಪು ಮತ್ತೆ ಮರುಕಳಿಸಿದೆ. ಅವರ ಮಧುರ ಧ್ವನಿಯಿಂದ ಮತ್ತೆ ಅಪರ್ಣಾ ಜೀವಂತವಾಗಿದ್ದಾರೆ.
ಹೌದು, ನಿನ್ನೆಯಷ್ಟೇ (ಆಗಸ್ಟ್ 10) ಬೆಂಗಳೂರಿನ ಜನರು ಬಹು ನಿರೀಕ್ಷೆಯಲಿದ್ದ ಜನರ ಆಸೆಯೊಂದು ಈಡೇರಿದೆ. ಬೆಂಗಳೂರಿನ ಮತ್ತೊಂದು ಮೆಟ್ರೋ ಮಾರ್ಗ ಲೋಕಾರ್ಪಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿ ಮೆಟ್ರೋದ ಹಳದಿ ಮಾರ್ಗವನ್ನು ಉದ್ಘಾಟನೆ ಮಾಡಿದ್ದಾರೆ. ಇದೇ ಖುಷಿಯಲ್ಲಿರುವಾಗಲೇ ಕನ್ನಡಿಗರು ಸಂತಸ ಪಡುವ ಮತ್ತೊಂದು ಸಂಗತಿ ಸಿಕ್ಕಿದೆ. ಅದು ಅಪರ್ಣ ಅವರ ಧ್ವನಿ.

ಹೊಸದಾಗಿ ಕಾರ್ಯಾರಂಭ ಮಾಡಿರುವ ಮೆಟ್ರೋ ಹಳದಿ ಮಾರ್ಗಕ್ಕೆ ನಿರೂಪಕಿ ದಿವಂಗತ ಅಪರ್ಣಾ ವಸ್ತಾರೆಯವರ ಧ್ವನಿಯನ್ನು ಅಳವಡಿಸಲಾಗಿದೆ. ಈ ಧ್ವನಿಯನ್ನು ಕೇಳಿ ಕನ್ನಡಿಗರಂತೂ ದಿಲ್ ಖುಷ್ ಆಗಿದ್ದಾರೆ. ಮತ್ತೆ ಅಪರ್ಣ ಅವರ ಧ್ವನಿಯನ್ನು ಮೆಟ್ರೋದಲ್ಲಿ ಕೇಳಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಹಾಗಿದ್ದರೆ, ಅಪರ್ಣಾ ಅವರು ಅಗಲಿದ ನಂತರ ಧ್ವನಿ ಬಳಸಿಕೊಂಡಿದ್ದೇಗೆ? ಎಲ್ಲಿಂದ ಎಲ್ಲಿವರೆಗೂ ಹಳದಿ ಮಾರ್ಗವಿದೆ? ಎಲ್ಲಿಂದ ಎಲ್ಲಿವರೆಗೂ ಅಪರ್ಣಾ ವಸ್ತಾರೆಯವರ ಧ್ವನಿಯನ್ನು ಕೇಳಬಹುದು? ಎಂಬುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಎಐ ಬಳಸಿದ ಧ್ವನಿಯಲ್ಲ ಓರಿಜಿನಲ್!
ನಿರೂಪಕಿ ಅಪರ್ಣಾ ವಸ್ತಾರೆ ಅಗಲಿ ಹಲವು ತಿಂಗಳುಗಳಾಗಿವೆ. ಈಗ ಉದ್ಘಾಟನೆಯಾಗಿರುವ ಮೆಟ್ರೋ ಮಾರ್ಗದಲ್ಲಿ ಅವರ ಧ್ವನಿಯನ್ನು ಹೇಗೆ ಬಳಸಿಕೊಳ್ಳಲಾಯ್ತು ಅನ್ನೋ ಕುತೂಹಲ ಸಹಜ. ಹಾಗಂತ ಎಐ ತಂತ್ರಜ್ಞಾನದ ಬಳಕೆನೂ ಆಗಿಲ್ಲ. ಅರ್ಪಣಾ ವಸ್ತಾರೆ ಅಗಲುವುದಕ್ಕೂ ಮುನ್ನವೇ ಮೆಟ್ರೋ ಹಳದಿ ಮಾರ್ಗಕ್ಕೆ ತಮ್ಮ ಧ್ವನಿಯನ್ನು ನೀಡಿದ್ದರು ಎಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿವೆ. ಅನಾರೋಗ್ಯದ ಸಮಯದಲ್ಲೂ ಅಪರ್ಣಾ ಅವರು ಮೆಟ್ರೋ ಹಳದಿ ಮಾರ್ಗಕ್ಕೆ ಧ್ವನಿಯನ್ನು ನೀಡಿದ್ದರು ಎನ್ನಲಾಗಿದೆ.

ಅಪರ್ಣಾ ಅವರಿಗೆ ಮೆಟ್ರೋ ಧ್ವನಿಯನ್ನು ಕೊಡುವುದು ಹೊಸದೇನು ಆಗಿರಲಿಲ್ಲ. ಯಾಕಂದ್ರೆ, ಈಗಾಗಲೇ ಬೇರೆ ಮಾರ್ಗಗಳಿಗೂ ಧ್ವನಿಯನ್ನು ನೀಡಿದ್ದರು. ಅಚ್ಚ ಕನ್ನಡದಲ್ಲಿ ಅವರು ಪ್ರಯಾಣಿಕರಿಗೆ ಮಾರ್ಗಗಳ ಬಗ್ಗೆ ಸೂಚನೆ ನೀಡುವುದನ್ನು ಕೇಳುವುದಕ್ಕೆ ಖುಷಿ. ಇಂದಿಗೂ ಮೆಟ್ರೋದಲ್ಲಿ ಅವರ ಧ್ವನಿ ಕೇಳಿದ ಪ್ರತಿಯೊಬ್ಬ ಕನ್ನಡಿಗನೂ ಒಳಗೊಳಗೆ ಆ ಧ್ವನಿಯನ್ನು ಆಸ್ವಾಧಿಸಿದ್ದೂ ಇದೆ. ಈಗ ಹಳದಿ ಮಾರ್ಗದಲ್ಲಿಯೂ ಅವರ ಧ್ವನಿಯನ್ನು ಕೇಳಬಹುದಾಗಿದೆ.
ಎಲ್ಲಿಂದ ಎಲ್ಲಿವರೆಗೆ?
ಹಳದಿ ಮಾರ್ಗ ಉದ್ಘಾಟನೆಗೆ ಬೆಂಗಳೂರಿನ ಜನರು ಕಾಯುತ್ತಿದ್ದರು. ಆರ್‌ವಿ ರಸ್ತೆಯಿಂದ ಆರಂಭ ಆಗುವ ಈ ರೈಲು ಮಾರ್ಗ ಬೊಮ್ಮಸಂದ್ರವರೆಗೂ ಸಾಗುತ್ತೆ. ಈ ಮಾರ್ಗದಲ್ಲಿ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯ ಜನರು ಪ್ರಯಾಣ ಮಾಡುತ್ತಾರೆ. ಕನ್ನಡ ಗೊತ್ತಿಲ್ಲದೆ ಇರದವರೂ ಕೂಡ ಈ ಮಾರ್ಗದಲ್ಲಿ ಪ್ರಯಾಣ ಮಾಡುತ್ತಾರೆ. ಅವರಿಗೆ ಅಪ್ಪಟ ಕನ್ನಡದ ನಿರೂಪಕಿಯ ಧ್ವನಿಯನ್ನು ಸವಿಯುವ ಅವಕಾಶವಿದೆ.
ಅಪರ್ಣಾ ಅವರು ಕಳೆದ ಕೆಲವು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಈ ರೋಗದ ವಿರುದ್ಧ ಹೋರಾಡಿ ಅರ್ಪಣಾ ಕಳೆದ ವರ್ಷ ಜುಲೈ ತಿಂಗಳಲ್ಲಿ ಕೊನೆಯುಸಿರೆಳೆದಿದ್ದರು. ಅವರು ಅಗಲುವುದಕ್ಕೂ ಮುನ್ನ ಮೆಟ್ರೋ ಹಳದಿ ಮಾರ್ಗಕ್ಕೆ ಧ್ವನಿಯನ್ನು ನೀಡಿದ್ದರು ಎನ್ನಲಾಗಿದ್ದು. ಮಾರ್ಗದ ಹೆಸರು, ಮುಂದಿನ ನಿಲ್ದಾಣ, ಎಚ್ಚರಿಕೆಯ ಸಂದೇಶಕ್ಕೆ ಧ್ವನಿಯನ್ನು ನೀಡಿದ್ದಾರೆ. 16 ಮೆಟ್ರೋ ನಿಲ್ದಾಣಗಳಲ್ಲಿ ಅಪರ್ಣಾ ಅವರ ಧ್ವನಿಯನ್ನು ಕೇಳಬಹುದಾಗಿದೆ.


Click it and Unblock the Notifications











