"ಮಗಳು ಕಳ್ಳಿ" ಎಂದ ಅಪ್ಪ; " ಹೆತ್ತ ಮಕ್ಕಳನ್ನ ಸಾಕಲಿಲ್ಲ" ಅಂದ ಚೈತ್ರಾ ಕುಂದಾಪುರ,"ಗಂಡ ಮಾನಸಿಕ" ಎಂದ ಪತ್ನಿ
ಬಿಗ್ ಬಾಸ್ ಕನ್ನಡ 11ರ ಸ್ಪರ್ಧಿ ಚೈತ್ರಾ ಕುಂದಾಪುರ ವಿರುದ್ಧ ಇಂದು (ಮೇ 15) ಅವರ ತಂದೆ ಬಾಲಕೃಷ್ಣ ನಾಯ್ಕ್ ಗಂಭೀರ ಆರೋಪಗಳನ್ನು ಮಾಡಿದ್ದರು. ಮಗಳು ಕಳ್ಳಿ, ಕಳ್ಳರು ಮದುವೆ ಆಗಿದ್ದಾರೆ, ಮಗಳನ್ನು ಯಾರೂ ನಂಬಬೇಡಿ ಎಂದು ಮಾಧ್ಯಮಗಳ ಮುಂದೆ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದರು. ತಂದೆಯ ವಿಡಿಯೋ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಚೈತ್ರಾ ಕುಂದಾಪುರ ಹಾಗೂ ಅವರ ಅಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಚೈತ್ರಾ ಕುಂದಾಪುರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 12 ವರ್ಷಗಳಿಂದ ಪ್ರೀತಿಸಿದ್ದ ಶ್ರೀಕಾಂತ್ ಕಶ್ಯಪ್ ಎಂಬುವವರನ್ನು ವಿವಾಹವಾಗಿದ್ದರು. ಈ ಮದುವೆಗೆ ಅಪ್ಪನನ್ನೇ ಕರೆದಿಲ್ಲ ಎಂದೂ ಬಾಲಕೃಷ್ಣ ನಾಯಕ್ ಆರೋಪ ಮಾಡಿದ್ದರು. ಇದು ದೊಡ್ಡ ಸಂಚಲನವನ್ನು ಹುಟ್ಟಾಕುತ್ತಿದ್ದಂತೆ ಚೈತ್ರಾ ತಂದೆಯ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಅಲ್ಲದೇ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಮ್ಮನ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಹೆಣ್ಣು ಜವಾಬ್ದಾರಿ ತೆಗೆದುಕೊಂಡಿಲ್ಲ
ತಂದೆ ಆರೋಪ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಚೈತ್ರಾ ಕುಂದಾಪುರ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಅಪ್ಪನ ವಿರುದ್ಧ ತಿರುಗಿಬಿದ್ದಿದ್ದರು. ಹೆತ್ತ ಮಕ್ಕಳ ಜವಾಬ್ದಾರಿಯನ್ನೇ ಹೊತ್ತುಕೊಂಡಿಲ್ಲ. ಹೆಂಡತಿಗೆ ಹೊಡೆದು ಚಿತ್ರ ಹಿಂಸೆ ಕೊಟ್ಟಿದ್ದು ಬಿಟ್ಟರೆ ಬೇರೆ ಏನು ಮಾಡಿಲ್ಲ ಎಂದಿದ್ದರು. "ಹೆತ್ತ ಮಕ್ಕಳನ್ನ ಸಾಕಲಿಲ್ಲ, ಫೀಸು ಕಟ್ಟಿ ಓದಿಸಲಿಲ್ಲ, ಹೆಣ್ಣು ಮಕ್ಕಳ ಜವಾಬ್ದಾರಿ ಹೊತ್ತು ಮದುವೆಯೂ ಮಾಡಲಿಲ್ಲ. ಕಟ್ಟಿಕೊಂಡ ಹೆಂಡತಿಗೆ ಹೊಡೆದು ಚಿತ್ರ ಹಿಂಸೆ ಮಾಡಿದ್ದು ಬಿಟ್ರೆ ಬೇರೆ ಏನೂ ಇಲ್ಲಾ. ಎಲ್ಲಾ ಮುಗಿದ ಮೇಲೆ ಅಪವಾದ ಹಾಕೋಕೆ ಮಾತ್ರ ತಂದೆ ಎನ್ನುವ ಹೆಸರು.. ವಾವ್.." ಎಂದು ಚೈತ್ರಾ ಕುಂದಾಪುರ ತಿರುಗೇಟು ಕೊಟ್ಟಿದ್ದಾರೆ.
ಹಾಗೇ ತಂದೆ ಕುಡುಕ. ಅವರು ಚಿತ್ರ ಹಿಂಸೆ ನೀಡುತ್ತಿದ್ದರು. ಇಂತಹ ತಂದೆ ಯಾರಿಗೂ ಸಿಗಬಾರದು ಎಂದೂ ಇನ್‌ಸ್ಟಾ ಸ್ಟೋರಿಯಲ್ಲಿ ಹಾಕಿಕೊಂಡಿದ್ದರು. "ಕುಡುಕ ತಂದೆಯ ಚಿತ್ರ ಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು. ಎಂತಹ ಮಕ್ಕಳಿಗೂ ಕುಡುಕ ತಂದೆ ಸಿಗಬಾರದು. ಎರಡು ಕ್ವಾಟರ್ ನಾನು ಕೊಟ್ರೆ ನನ್ನ ಮಕ್ಕಳು ದೇವರು ಅನ್ನುವವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗುತ್ತಾರೆ..." ಎಂದಿದ್ದಾರೆ.
ಅಮ್ಮನ ಆರೋಪವೇನು?
ಚೈತ್ರಾ ಕುಂದಾಪುರ ಇಷ್ಟಕ್ಕೆ ಸುಮ್ಮನಾಗಿಲ್ಲ. ಅಮ್ಮ ಕಡೆಯಿಂದ ವಿಡಿಯೋ ಕೂಡ ಮಾಡಿಸಿದ್ದಾರೆ. ಪತಿ ಬಾಲಕೃಷ್ಣ ನಾಯ್ಕ್ ಎಷ್ಟು ಕಷ್ಟಗಳನ್ನು ಕೊಡುತ್ತಿದ್ದರು ಎಂಬುವುದು ಆ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಚೈತ್ರಾ ಕುಂದಾಪುರ ತಾಯಿ ಸುದೀರ್ಘ ವಿಡಿಯೋದಲ್ಲಿ ಪತಿಯ ಬಗ್ಗೆ ಹಾಗೂ ಮೊದಲ ಮಗಳ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
"ಟಿವಿಯವರ ಮುಂದೆ ಯಾಕೆ ಹಾಗೆ ಹೇಳಿದರು ಅನ್ನೋದು ನನಗೆ ಗೊತ್ತಿಲ್ಲ. ಮಗಳು ಹೇಳಿ ಕೊಟ್ಟಿದ್ದರಿಂದ ಹೀಗೆ ಹೇಳಿರಬಹುದು. ಮಗಳು ಹಿಂದೇನೆ ಇದ್ದಾಳೆ. ಅದಕ್ಕೆ ಅವರು ಹೇಳಿಕೊಟ್ಟಂತೆ ಹೇಳಿದ್ದಾರೆ ಅಷ್ಟೇ. ಇದೂವರೆಗೂ ಅವರು ಮನೆಯ ಜವಾಬ್ದಾರಿ ಏನನ್ನೂ ತೆಗೆದುಕೊಂಡಿಲ್ಲ. ಎಲ್ಲೋ ಕೆಲಸ ಮಾಡುತ್ತೇನೆ ಅಂತ ಹೋಗೋದು ದುಡಿದ ದುಡ್ಡು ತೆಗೆದುಕೊಂಡು ಅವರ ಮಗಳ ಮನೆಗೆ ಕೊಡೋರು. ಆಸ್ತಿಗೋಸ್ಕರ ಅಪ್ಪನಿಗೆ ಮಗಳೇ ಹೀಗೆ ಹೇಳಿ ಕೊಟ್ಟಿದ್ದಾಳೆ. ನಮ್ಮ ಮನೆ ಮಕ್ಕಳಿಗೆ ಓದುವುದು ಬೇಡ ಕೆಲಸಕ್ಕೆ ಹೋಗಿ ಅಂತ ಹೇಳುತ್ತಿದ್ದರು. ನಮ್ಮ ಮನೆ ಹೆಣ್ಣು ಮಕ್ಕಳಿಗೆ ಓದಿಸಿದವರೂ ಅಲ್ಲ. ಕಲಿಸಿದವರೂ ಅಲ್ಲ. ನಿಜವಾಗಿಯೂ ಅವರಿಗೆ ಮಾತಾಡುವುದಕ್ಕೆ ಬರುವುದಿಲ್ಲ. ಅವರು ಒಂಥರಾ ಮಾನಸಿಕ. ಎಲ್ಲಿಗೆ ಹೋಗಬೇಕು ಬರಬೇಕು ಅನ್ನೋದು ಗೊತ್ತಾಗಲ್ಲ. ರಾತ್ರಿ ಮನೆ ಬಿಟ್ಟು ಹೋಗೋದು, ಮಧ್ಯರಾತ್ರಿ ಮಾತಾಡುವುದು ಮಾಡುತ್ತಾರೆ. ಅವರಿಗೆ ಹೇಳಿಕೊಟ್ಟಿದ್ದರಿಂದ ಈ ರೀತಿ ಮಾತಾಡುತ್ತಿದ್ದಾರೆ." ಎಂದು ಚೈತ್ರಾ ಕುಂದಾಪುರ ತಾಯಿ ಆರೋಪ ಮಾಡಿದ್ದಾರೆ.
ಮಗಳೇ ಹೇಳಿಕೊಟ್ಟಿದ್ದಾಳೆ
ಇಷ್ಟೇ ಅಲ್ಲದೇ ದೊಡ್ಡ ಮಗಳು ಗಾಯತ್ರಿ ಆಸ್ತಿ ಕೇಳಿದ್ದರು. ಈ ಜಾಗದ ಮೇಲೆ ಅವರು 25 ಲಕ್ಷ ರೂಪಾಯಿ ಸಾಲ ತೆಗೆದುಕೊಂಡಿದ್ದಾಳೆ. ಈಗ ಈ ಮನೆಯ ಪತ್ರಗಳು ಅವರ ಬಳಿಯೇ ಇದೆ. ಮನೆಯ ಪತ್ರಗಳಿಗೆ ಸಹಿ ಮಾಡುವುದಕ್ಕೆ ಚೈತ್ರಾ ಅಮ್ಮನಿಗೆ ಒತ್ತಾಡ ಹಾಕಿತ್ತಿದ್ದರು. ಅದನ್ನು ಮಾಡದೇ ಇದ್ದ ಸಿಟ್ಟಿಗೆ ಅಪ್ಪನಿಗೆ ಹೇಳಿಕೊಟ್ಟು ಹೀಗೆ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಹಾಗೇ ಚೈತ್ರಾ ಕುಂದಾಪುರ ಮದುವೆಗೆ ತಂದೆ ಕುಂದಾಪುರದವರೆಗೂ ಬಂದಿದ್ದರು. ಮದುವೆ ಹೋಗುವುದು ಬೇಡವೆಂದು ವಾಪಾಸ್ ಕರೆದುಕೊಂಡು ಹೋಗಿದ್ದಾರೆಂದು ಚೈತ್ರಾ ಅವರ ಅಮ್ಮ ಆರೋಪಿಸಿದ್ದಾರೆ.


Click it and Unblock the Notifications











