ದರ್ಶನ್ ಅಭಿಮಾನಿಗಳಿಂದ ನನ್ನ ಶ್ರವಣ ಶಕ್ತಿ ಕಳೆದುಕೊಂಡೆ: ಗೊ.ರು ಚನ್ನಬಸಪ್ಪ ಬೇಸರ
ಹುಟ್ಟುಹಬ್ಬ ಬಂದರೆ ಸೂಪರ್‌ಸ್ಟಾರ್‌ಗಳ ಮನೆ ಮುಂದೆ ಅಭಿಮಾನಿ ಸಾಗರವೇ ಸೇರುತ್ತೆ. ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಸೇರುವುದು. ಕೇಕ್ ಕಟ್ ಮಾಡುವುದು. ಕೂಗಾಟಾ, ಚೀರಾಟ ಇವೆಲ್ಲವೂ ಕಾಮನ್ ಆಗಿರುತ್ತೆ. ಸ್ಟಾರ್‌ಗಳೂ ಕೂಡ ದೂರದ ಊರಿನಿಂದ ಬರುವ ಅಭಿಮಾನಿಗಳಿಗಾಗಿ ರಾತ್ರಿ ಇಡೀ ಎಚ್ಚರವಿದ್ದು, ಅಭಿಮಾನಿಗಳು ತಂದ ಕೇಕ್ ಅನ್ನು ಕಟ್ ಮಾಡುತ್ತಾರೆ. ಈ ವೇಳೆ ನೂಕು ನುಗ್ಗಲು, ಅಕ್ಕ ಪಕ್ಕದವರಿಗೆ ಸ್ವಲ್ಪ ಕಸಿವಿಸಿ ಆಗುತ್ತೆ.
ದರ್ಶನ್ ಹುಟ್ಟುಹಬ್ಬ ಬಂತು ಅಂದರೆ ಅಷ್ಟೆ. ರಾಜ್ಯದ ಮೂಲೆ ಮೂಲೆಯಿಂದಲೂ ಅಭಿಮಾನಿಗಳು ಬರುತ್ತಾರೆ. ಕೇಕ್ ಕಟ್ ಮಾಡುತ್ತಾರೆ. ದರ್ಶನ್ ಜೊತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಾರೆ. ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಇದೇ ವೇಳೆ ಅಭಿಮಾನಿಗಳು ಸಿಡಿಸಿದ ಪಟಾಕಿಯಿಂದ ನನ್ನ ಕಿವಿಗಳು ಶ್ರವಣ ಶಕ್ತಿಯನ್ನು ಕಳೆದುಕೊಂಡಿದೆ ಎಂದು ಹಿರಿಯ ಸಾಹಿತಿ ಗೊ ರು ಚನ್ನಬಸಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಫ್ಯಾನ್ಸ್ ಪಟಾಕಿ ಸಿಡಿಸಿದ್ದಕ್ಕೆ ಕಿವಿ ಕೇಳಿಸುತ್ತಿಲ್ಲ
ಬೆಂಗಳೂರಿನ ರಮಣಶ್ರೀ ಹೊಟೇಲ್‌ನಲ್ಲಿ ರಮಣಶ್ರೀ ಶರಣರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ರಮಣಶ್ರೀ ಪ್ರತಿಷ್ಠಾನದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಶಿಕ್ಷಣ ತಜ್ಞ ಡಾ. ಗುರುರಾಜ್ ಕರಜಗಿ, ಹಿರಿಯ ಸಾಹಿತಿ ಗೊ ರು ಚನ್ನಬಸಪ್ಪ, ನಿವೃತ್ತ ಐಎಎಸ್ ಅಧಿಕಾರಿ ಮನು ಬಳಿಗಾರ್ ಸೇರಿದಂತೆ ಹಲವರು ಗಣ್ಯರ ಉಪಸ್ಥಿತಿ ಇತ್ತು. ಈ ವೇಳೆ ವೇದಿಕೆ ಮೇಲೆ ಭಾಷಣ ಮಾಡುವಾಗ ಹಿರಿಯ ಸಾಹಿತಿ ಗೊರು ಚನ್ನಬಸಪ್ಪ ಅವರು " ಗಣ್ಯರು ಮಾತನಾಡಿದ್ದು ನನಗೆ ಕೇಳಿಸಲಿಲ್ಲ. ದರ್ಶನ್ ಅಭಿಮಾನಿಗಳು ಸಿಡಿಸಿದ ಪಟಾಕಿಯಿಂದಾಗಿ ನನ್ನ ಕಿವಿಗಳು ಶ್ರವಣ ಶಕ್ತಿಯನ್ನು ಕಳೆದುಕೊಂಡಿವೆ." ಎಂದು ಬೇಸರ ವ್ಯಕ್ತಪಡಿಸಿದ್ದರು.

2 ಸಾಲಿನಲ್ಲಿ ಭಾಷಣಕ್ಕೆ ಬ್ರೇಕ್
ಹಿರಿಯ ಸಾಹಿತಿ ಗೊರು ಚನ್ನಬಸಪ್ಪ ಅವರು ವೇದಿಕೆ ಮೇಲೆ ಕೇವಲ ಎರಡು ಸಾಲುಗಳಲ್ಲಿ ಭಾಷಣ ಮುಗಿಸಿದ್ದರು. " ದರ್ಶನ್ ಅಭಿಮಾನಿಗಳು ಭಾರೀ ದೊಡ್ಡ ಪಟಾಕಿ ಹೊಡೆದು ಮದ್ದುಗಳನ್ನು ಸುಟ್ಟು ಹಾಕಿದ್ದರು. ಆ ಸದ್ದಿನಿಂದ ನನಗೆ ಹೀಗಾಗಿದೆ. ನಮ್ಮ ಮನೆ ಬಳಿ ಭಾರೀ ದೊಡ್ಡ ಪಟಾಕಿ ಹೊಡೆದಿದ್ದರು. ಆ ಗುಂಪಿನಲ್ಲಿ ಯಾರು ಪಟಾಕಿ ಹೊಡೆದರು ಅಂತಾನೇ ಗೊತ್ತಾಗ್ಲಿಲ್ಲ. ಆದ್ದರಿಂದ ನನಗೆ ಈ ಆಘಾತ ಆಯ್ತು." ಎಂದು ಸಾಹಿತಿ ಗೊ ರು ಚನ್ನಬಸಪ್ಪ ಹೇಳಿದ್ದಾರೆ.

ದರ್ಶನ್ ಮನೆ ಬಳಿ ಸಾಹಿತಿ ಮನೆ
ಗೊ ರು ಚನ್ನಬಸಪ್ಪ ಅವರ ಮನೆ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆ ಬಳಿಯೇ ಇದೆ. ಹೀಗಾಗಿ ಹುಟ್ಟುಹಬ್ಬದ ವೇಳೆ ಅಭಿಮಾನಿಗಳು ಸಿಡಿಸಿದ ಪಟಾಕಿಯಿಂದ ಕಿವಿಗಳು ಶ್ರವಣ ಶಕ್ತಿ ಕಳೆದುಕೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ, ಈ ಘಟನೆ ಎರಡು ವರ್ಷಗಳ ಹಿಂದೆ ನಡೆದಿದ್ದು, ರಮಣಶ್ರೀ ಶರಣರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಾಹಿತಿಗಳು ಈ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಹಿರಿಯ ಸಾಹಿತಿಗಳಿಂದ ಸ್ಪಷ್ಟನೆ
ಅಭಿಮಾನಿಗಳು ಪಟಾಕಿ ಹೊಡೆದಿದ್ದರಿಂದ ಶ್ರವಣ ಶಕ್ತಿ ಕಳೆದುಕೊಂಡಿರುವ ಸಾಹಿತಿ ದರ್ಶನ್‌ಗೆ ಪತ್ರ ಬರೆದಿದ್ದರು. "ಮುಂದಿನ ಹುಟ್ಟುಹಬ್ಬಕ್ಕೆ ಹೀಗೆ ಆಗಬಾರದು ಎಂದು ದರ್ಶನ್ ಗೆ ಪತ್ರ ಬರೆದೆ.
ಮುಂದಿನ ಸಲ ಬರ್ತಡೇ ಆಚರಣೆ ಮಾಡುವಾಗ ಅಕ್ಕ ಪಕ್ಕದವರೆಗೆ ತೊಂದರೆಯಾಗಬಾರದು ಅಂತಾ ದೊಡ್ಡ ಬೋರ್ಡ್ ಹಾಕಿದ್ದರು. ಅಲ್ಲಿಂದ ಮತ್ತೆ ತೊಂದರೆ ಆಗಿಲ್ಲ. ಯಾರಿಗೂ ತೊಂದರೆ ಆಗಬಾರದು ಅಂತ ಪೊಲೀಸರು ದೊಡ್ಡ ಬ್ಯಾರಿಕೇಡ್ ಹಾಕಿದ್ದಾರೆ. ಮುಂದಿನ ಸಲ ಯಾವುದೇ ಶಬ್ದ ಆಗಿಲ್ಲ. ಇದು ಆಕಸ್ಮಿಕ ಘಟನೆ, ನನಗೂ ವಯಸ್ಸಾಗಿದೆ. ಸಹಜವಾಗಿ ಶ್ರವಣ ದೋಷವಾಗಿದೆ. ಯಾರನ್ನು ಅಪರಾಧಿ ಅಂತ ದೂರುತ್ತಿಲ್ಲವೆಂದು" ಅಂತ ಸ್ಪಷ್ಟನೆ ನೀಡಿದ್ದಾರೆ.


Click it and Unblock the Notifications











