'ಜೈಲರ್'ಗೂ ಮುನ್ನ ತಮಿಳಿಗೆ ರಿಮೇಕ್ ಆಗಿದ್ದ ಶಿವಣ್ಣನ ಆ ಎರಡು ಸಿನಿಮಾಗಳ ಬಗ್ಗೆ ನಿಮಗೆ ಗೊತ್ತೇ?
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ 150 ಸಿನಿಮಾಗಳ ಹೊಸ್ತಿಲಲ್ಲಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಶಿವಣ್ಣ ಕ್ರೇಜ್ ಬಗ್ಗೆ ಹೊಸದಾಗಿ ಏನೂ ಹೇಳಬೇಕಿಲ್ಲ. ಒಂದೊಂದು ಸಿನಿಮಾದಲ್ಲಿ ಒಂದೊಂದು ಪಾತ್ರವೂ ಅಭಿಮಾನಿಗಳನ್ನು ಕಾಡಿದ್ದು ಇದೆ. ಕೆಲವು ಸಿನಿಮಾ ಪಾತ್ರಗಳು ಶಿವಣ್ಣನ ವೃತ್ತಿ ಬದುಕಿಗೆ ಹೊಸ ತಿರುವನ್ನೇ ನೀಡಿವೆ.
ಪರಭಾಷೆಯ ಸಿನಿಮಾಗಳ ಕಡೆಗೆ ಹೆಚ್ಚಾಗಿ ಮುಖ ಮಾಡದ ಶಿವಣ್ಣ 'ಜೈಲರ್' ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಮೊದಲ ನೋಟದಲ್ಲೇ ತಮಿಳರ ಹೃದಯಕ್ಕೆ ಲಗ್ಗೆ ಇಟ್ಟು ಬಿಟ್ಟಿದ್ದಾರೆ. ಶಿವಣ್ಣ ರಗಡ್ ಲುಕ್, ಖದರ್‌ಗೆ ತಮಿಳಿಗರೇ ಫಿದಾ ಆಗಿಬಿಟ್ಟಿದ್ದಾರೆ.

ನರಸಿಂಹನಾಗಿ ಸೆಂಚುರಿ ಸ್ಟಾರ್ ಶಿವಣ್ಣ ಮಿಂಚಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷಿಗರಿಗೂ ಶಿವಣ್ಣನ ಖದರ್ ತುಂಬಾನೇ ಇಷ್ಟ ಆಗಿದೆ. ಆದರೆ, ಈ ಹಿಂದೆ ಶಿವಣ್ಣ ನಟಿಸಿದ ಎರಡು ಅತ್ಯದ್ಭುತ ಕನ್ನಡ ಸಿನಿಮಾಗಳು ತಮಿಳಿಗೆ ರಿಮೇಕ್ ಆಗಿವೆ. ಆ ಎರಡು ಸಿನಿಮಾಗಳು ಯಾವುದು ಗೊತ್ತೇ?
ನರಸಿಂಹನ ಅಬ್ಬರ ಇನ್ನೂ ನಿಂತಿಲ್ಲ
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಖದರ್ ಕನ್ನಡಿಗರಿಗೆ ಗೊತ್ತೇ ಇದೆ. ಶಿವಣ್ಣನ ಎನರ್ಜಿ, ಗ್ಯಾಂಗ್‌ಸ್ಟರ್ ಲುಕ್ ಅನ್ನು ಪವರ್ ಕನ್ನಡಿಗರಿಗೆ ಗೊತ್ತಿದೆ. ಈಗ ತಮಿಳರ ಸರದಿ. ಶಿವಣ್ಣ ಖದರ್ ಹೀಗಿರುತ್ತಾ? ಅಂತ ತಲೆ ಕಡಿಸಿಕೊಂಡಿದ್ದಾರೆ. ಶಿವಣ್ಣನ ಸಿನಿಮಾಗಳನ್ನು ನೋಡುತ್ತೇವೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದಾರೆ. 'ಜೈಲರ್'ನ 8 ರಿಂದ 10 ನಿಮಿಷಗಳ ಅತಿಥಿ ಪಾತ್ರ ಆ ಮಟ್ಟಿಗೆ ತಮಿಳರಿಗೆ ಕಿಕ್ ಕೊಟ್ಟಿದೆ. ಆದರೆ, ಇದಕ್ಕೂ ಮುನ್ನ ಶಿವಣ್ಣನ ಎರಡು ಸೂಪರ್ ಹಿಟ್ ಸಿನಿಮಾಗಳು ತಮಿಳಿಗೆ ರಿಮೇಕ್ ಆಗಿದ್ದವು. ಆ ಸಿನಿಮಾಗಳ್ಯಾವುವು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ತಮಿಳಿಗೆ ರಿಮೇಕ್ ಆಗಿದ್ದು ಶಿವಣ್ಣನ 'ಜೋಗಿ'
2005ರಲ್ಲಿ ಪ್ರೇಮ್ ನಿರ್ದೇಶಿಸಿದ ಸಿನಿಮಾ 'ಜೋಗಿ'. ಈ ಸಿನಿಮಾ ಸ್ಯಾಂಡಲ್‌ವುಡ್ ಯಶಸ್ಸು ಕಂಡು ಮೆಗಾ ಸಿನಿಮಾಗಳಲ್ಲೊಂದು. ಶಿವಣ್ಣ ವೃತ್ತಿ ಬದುಕಿನಲ್ಲೇ ಅತೀ ದೊಡ್ಡ ಸಕ್ಸಸ್ ಕೊಟ್ಟ ಸಿನಿಮಾಗಳಲ್ಲೊಂದು. ಸಿನಿಮಾ ರಿಲೀಸ್ ಆದಾಗಲೇ ಸಿಕ್ಕಾಪಟ್ಟೆ ಕ್ರೇಜ್ ಇತ್ತು. 'ಜೋಗಿ'ಯಲ್ಲಿ ಶಿವಣ್ಣನ ಮಾಸ್ ಲುಕ್, ಮುಗ್ಧತೆಗೆ ಸಿನಿಪ್ರಿಯರು ಬಿದ್ದೋಗಿದ್ದರು. ಈ ಸಿನಿಮಾ ತಮಿಳಿಗೆ ರಿಮೇಕ್ ಆಗಿತ್ತು. ಅದುವೇ 'ಪಾರಟ್ಟಿ ಎಂಗಿರ ಅಳಗು ಸುಂದರಂ'. ಶಿವಣ್ಣ ಪಾತ್ರದಲ್ಲಿ ಧನುಷ್ ನಟಿಸಿದ್ದರು. ಗುರುಕಿರಣ್ ಟ್ಯೂನ್ ಹಾಕಿದ್ದರು. ಆದರೆ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ.

ಇತ್ತೀಚೆಗೆ ಶಿವಣ್ಣನ 'ಮಫ್ತಿ' ರೀಮೆಕ್
ಶಿವರಾಜ್‌ಕುಮಾರ್ ಅಭಿನಯದ 'ಮಫ್ತಿ' ಸಿನಿಮಾವನ್ನು ಅಭಿಮಾನಿಗಳು ಎಂದಿಗೂ ಮರೆಯೋದಿಲ್ಲ. ಇಲ್ಲೂ ಶಿವಣ್ಣ ಸೈಲೆಂಟ್ ಆಕ್ಟಿಂಗ್ ಗೆದ್ದಿತ್ತು. ಪ್ರೇಕ್ಷಕರಿಗೆ ಶಿವಣ್ಣ ಕಣ್ಣಲ್ಲೇ ಗದರಿಸೋ ಸೀನ್‌ಗಳು ಇಷ್ಟ ಆಗಿದ್ದವು. ಈ ಸಿನಿಮಾ ಕೂಡ ತಮಿಳಿಗೆ ರಿಮೇಕ್ ಆಗಿದೆ. ಅದೇ ಪಾತು ತಾಲಾ. 2017ರಲ್ಲಿ ತೆರೆಕಂಡಿದ್ದ 'ಮಫ್ತಿ'ಯನ್ನು ತಮಿಳಿನಲ್ಲಿ ನಿರ್ಮಿಸಿ 2023ರಲ್ಲಿ ಬಿಡುಗಡೆ ಮಾಡಲಾಯ್ತು. ಶಿವಣ್ಣನ ಪಾತ್ರದಲ್ಲಿ ಸಿಂಬು ನಟಿಸಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಆಯ್ತು.
'ಜೈಲರ್'ನಿಂದ ಶಿವಣ್ಣಗೆ ಹೊಸ ಫ್ಯಾನ್ಸ್
ಶಿವಣ್ಣನ ಎರಡು ಸಿನಿಮಾ ರಿಮೇಕ್ ಮಾಡಿದ್ದರೂ, ಆ ಕಿಕ್ ಪ್ರೇಕ್ಷಕರಿಗೆ ಸಿಕ್ಕಿಲ್ಲ. 'ಜೈಲರ್' ಬಳಿಕ ಶಿವಣ್ಣ ಹೊಸ ಅಭಿಮಾನಿಗಳು ಬಳಗವೇ ಹುಟ್ಟಿಕೊಂಡಿದ್ದೆ. ಈಗ ಅವರೇನಾದರೂ ಒರಿಜಿನಲ್ 'ಜೋಗಿ' ಹಾಗೂ 'ಮಫ್ತಿ' ನೋಡಿದರೆ ರೆಸ್ಪಾನ್ಸ್ ಹೇಗಿರುತ್ತೆ? ಅನ್ನೋ ಕುತೂಹಲವಿದೆ. ಸದ್ಯ 'ಘೋಸ್ಟ್' ಸಿನಿಮಾ ತಮಿಳಿನಲ್ಲೂ ಬಿಡುಗಡೆಯಾಗಲಿದ್ದು, ತಮಿಳು ಮಂದಿ ರಿಯಾಕ್ಷನ್ ಹೇಗಿರುತ್ತೆ? ಅನ್ನೋದನ್ನು ನೋಡಬೇಕಿದೆ.


Click it and Unblock the Notifications











