ಕಮಲ್ ಹಾಸನ್ ವಿರುದ್ಧ ಬೆಂಗಳೂರು ನ್ಯಾಯಾಲಯ ಏಕಪಕ್ಷೀಯ ಪ್ರತಿಬಂಧಕಾದೇಶ
ತಮಿಳು ನಟ ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆ ಭಾರೀ ಚರ್ಚೆ ಹುಟ್ಟುಹಾಕಿತ್ತು. ಸುಪ್ರೀಂ ಕೋರ್ಟ್‌ವರೆಗೂ ಈ ಪ್ರಕರಣ ಹೋಗುವಂತಾಗಿದೆ. ಈ ಪ್ರಕರಣ ಹಿನ್ನೆಲೆಯಲ್ಲಿ ಇದೀಗ ಕಮಲ್ ಹಾಸನ್‌ಗೆ ಮತ್ತೊಂದು ಶಾಕ್ ಎದುರಾಗಿದೆ. ಇನ್ನು ಮುಂದೆ ಕನ್ನಡ ವಿರೋಧಿ ಹೇಳಿಕೆ ನೀಡದಂತೆ ನಿರ್ಬಂಧ ಹೇರಿ ಬೆಂಗಳೂರು 31ನೇ ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ.
ಚೆನ್ನೈನಲ್ಲಿ ನಡೆದ 'ಥಗ್ ಲೈಫ್' ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಮಾತನಾಡಿ ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದು ಎಂದು ಹೇಳಿದ್ದರು. ಆದರೆ ಕಮಲ್ ಹೇಳಿಕೆಗೆ ಯಾವುದೇ ಆಧಾರವಿಲ್ಲ. ಇದೇ ಕಾರಣಕ್ಕೆ ಕಮಲ್ ವಿರುದ್ಧ ರಾಜ್ಯದಲ್ಲಿ ಭಾರೀ ಆಕ್ರೋಶ ಭುಗಿಲೆದ್ದಿತ್ತು. ಕರ್ನಾಟಕದಲ್ಲಿ ಅವರ ಸಿನಿಮಾಗಳು ಬಿಡುಗಡೆ ಮಾಡಲು ಬಿಡಲ್ಲ ಎಂದು ಕನ್ನಡಪರ ಸಂಘಟನೆಗಳು ಪಟ್ಟು ಹಿಡಿದಿವೆ.

'ಥಗ್ ಲೈಫ್' ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಭದ್ರತೆ ಕೋರಿ ಕಮಲ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಹಿನ್ನಡೆಯಾಗಿತ್ತು. ಬಳಿಕ ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು. ಅಲ್ಲಿ ಗೆಲುವು ಸಿಕ್ಕಿತ್ತು. ವಿವಾದಾತ್ಮಕ ಹೇಳಿಕೆ ಕಾರಣಕ್ಕೆ ಅವರು ನಟಿಸಿದ ಸಿನಿಮಾ ಬಿಡುಗಡೆ ಮಾಡಲು ಬಿಡುವುದಿಲ್ಲ ಎನ್ನುವುದು ತಪ್ಪು. ಸಿನಿಮಾ ಬಿಡುಗಡೆಗೆ ಬಿಡಲ್ಲ ಎಂದು ಎಚ್ಚರಿಕೆ ಕೊಡುತ್ತಿರುವ ಕನ್ನಡಪರ ಸಂಘಟನೆಗಳ ವಿಚಾರದಲ್ಲಿ ಸರ್ಕಾರ ಯಾಕೆ ಸುಮ್ಮನಿದೆ ಎಂದು ಸುಪ್ರೀಂ ಪ್ರಶ್ನಿಸಿತ್ತು. ಬಳಿಕ ಸಿನಿಮಾ ಬಿಡುಗಡೆಗೆ ಅನುವು ಮಾಡಿಕೊಡುವಂತೆ ಸರ್ಕಾರಕ್ಕೆ ಸೂಚಿಸಿತ್ತು.
ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಮಾತನಾಡದಂತೆ ನಿರ್ಬಂಧ ಕೋರಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನಗರದ 31ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಇದೀಗ ಏಕಪಕ್ಷೀಯ ಆದೇಶ ಹೊರಡಿಸಿದೆ. ಭಾಷಾಶಾಸ್ತ್ರಜ್ಞರ ಶ್ರೇಷ್ಠತೆ ಪ್ರತಿಪಾದಿಸುವ ಯಾವುದೇ ಹೇಳಿಕೆಯನ್ನು ಕಮಲ್ ನೀಡಬಾರದು. ಈ ಬಗ್ಗೆ ಪೋಸ್ಟ್ ಮಾಡುವುದಾಗಲಿ ಮಾಡುವಂತಿಲ್ಲ ಎಂದು ತಿಳಿಸಿದೆ.
'ಥಗ್ ಲೈಫ್' ಸಿನಿಮಾ ನಿರ್ಮಿಸಿ ನಟಿಸಿದ್ದ ಕಮಲ್ ಹಾಸನ್‌ಗೆ ಪೆಟ್ಟಿನ ಮೇಲೆ ಪೆಟ್ಟು ಬೀಳುತ್ತಲೇ ಇದೆ. ಮಣಿರತ್ನಂ ನಿರ್ದೇಶನದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ನೆಲ ಕಚ್ಚಿತ್ತು. ಅಂದಾಜು 200 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸಿನಿಮಾ 50 ಕೋಟಿ ರೂ. ಕಲೆಕ್ಷನ್ ಮಾಡಲು ವಿಫಲವಾಗಿದೆ. ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಮಾಡಲೇ ಇಲ್ಲ. ತಿಂಗಳಿಗೂ ಮುನ್ನವೇ ಸಿನಿಮಾ ಓಟಿಟಿಗೆ ಬಂದು ಮತ್ತೆ ಹಿನ್ನಡೆಯಾಗಿದೆ.
ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಗೆ ಸುಪ್ರೀಂ ಕೋರ್ಟ್ ಅನುವು ಮಾಡಿಕೊಟ್ಟಿತ್ತು. ಆದರೆ ವಿತರಕ ವೆಂಕಟೇಶ್ ಇದಕ್ಕೆ ಒಪ್ಪಲಿಲ್ಲ. ಬೇರೆ ಕಡೆಗಳಲ್ಲಿ ಸಿನಿಮಾ ಬಿಡುಗಡೆಯಾಗಿ ಟೀಕೆಗೆ ಗುರಿಯಾಗಿತ್ತು. ಬಹಳ ಕಳಪೆ ಸಿನಿಮಾ ಎಂದು ಟ್ರೋಲ್ ಆಗಿತ್ತು. ಕರ್ನಾಟಕದಲ್ಲಿ ಕೂಡ ನಿರೀಕ್ಷೆ ಇರಲಿಲ್ಲ. ಹಾಗಾಗಿ ರಿಲೀಸ್ ಮಾಡಿ ನಷ್ಟ ಅನುಭವಿಸುವುದಕ್ಕಿಂತ ಸುಮ್ಮನಿರುವುದು ವಾಸಿ ಎಂದು ಕಮಲ್ ಸುಮ್ಮನಾಗಿದ್ದಾರೆ.
ಚಿತ್ರಕ್ಕೆ ಮಣಿರತ್ನಂ ಜೊತೆ ಸೇರಿ ಖುದ್ದು ಕಮಲ್ ಹಾಸನ್ ಚಿತ್ರಕ್ಕೆ ಕಥೆ ಚಿತ್ರಕತೆ ಸಿದ್ಧಪಡಿಸಿದ್ದರು. ಸಿಂಬು, ತ್ರಿಷಾ ರೀತಿಯ ತಾರೆಯರು ನಟಿಸಿದ್ದರು. ಆದಾಗ್ಯೂ 'ಥಗ್ ಲೈಫ್' ಸಿನಿಮಾ ಗೆಲ್ಲದೇ ನಿರಾಸೆ ಮೂಡಿಸಿತ್ತು. ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡ ಸೇರಿ 5 ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಅಲ್ಲಿ ಕೂಡ ನೀರಸ ಪ್ರತಿಕ್ರಿಯೆ ಸಿಗುತ್ತಿದೆ. ಕೆಲವರು ಸಿನಿಮಾ ನೋಡಿ ಟ್ರೋಲ್ ಮಾಡುತ್ತಿದ್ದಾರೆ. ಈ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗದೇ ಇರುವುದೇ ಒಳ್ಳೆದಾಯಿತು ಎನ್ನುತ್ತಿದ್ದಾರೆ.


Click it and Unblock the Notifications











