ಕ್ಷಮೆ ಕೇಳಿದರೂ ಬಿಡಲಿಲ್ಲ.. ರೀಲ್ಸ್‌ನಲ್ಲಿ ಸ್ಟೋಟಿಸಿದ್ದಕ್ಕೆ ಬಿಗ್ ಬಾಸ್ ರಜತ್ ವಿರುದ್ಧ ದೂರು
ಬಿಗ್ ಬಾಸ್ ಖ್ಯಾತಿಯ ರಜತ್ ಕಿಶನ್‌ರನ್ನು ವಿವಾದಗಳು ಯಾಕೋ ಬಿಟ್ಟು ಹೋಗುತ್ತಿಲ್ಲ. ಒಂದರ ಹಿಂದೊಂದು ವಿವಾದಗಳು ಅವರನ್ನು ಸುತ್ತಿಕೊಳ್ಳುತ್ತಲೇ ಇವೆ. ಒಮ್ಮೆ ರೀಲ್ಸ್ ಮಾಡಿ ವಿವಾದಕ್ಕೆ ಸಿಲುಕಿದ್ದರು. ಅದಾದ ಮೇಲೂ ಮತ್ತೊಮ್ಮೆ ಹೀಗೆ ರೀಲ್ಸ್ ಮಾಡಿ ಪೊಲೀಸರ ಕೆಂಗಣ್ಣೀಗೆ ಗುರಿಯಾಗಿದ್ದಾರೆ. ಈ ಸಂಬಂಧ ರಜತ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಜತ್ ಮಾಸ್ ಅವತಾರದಲ್ಲಿ ರೀಲ್ಸ್ ಮಾಡಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದರು. ಆ ರೀಲ್ಸ್ ಪೋಸ್ಟ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮಾಡಿಫೈಡ್ ಮಾಡಿದ ಬೈಕ್ ಏರಿ ಕ್ಯಾಮರಾಗೆ ರಜತ್ ಪೋಸ್ ಕೊಟ್ಟಿದ್ದರು. ಅಷ್ಟೇ ಆಗಿದ್ದರೆ, ಏನು ಆಗುತ್ತಿರಲಿಲ್ಲ. ಅದರೆ, ಮಾಸ್ ಲುಕ್‌ಗಾಗಿ ಸಿನಿಮಾದಂತೆ ರೀಲ್ಸ್‌ನಲ್ಲಿ ಸ್ಟೋಟ ಮಾಡಲಾಗಿತ್ತು. ಹಾಗೆ ಕೆಲವು ನಿಯಮಗಳನ್ನು ಮುರಿದಿದ್ದರಿಂದ ಪೊಲೀಸರು ರಜತ್ ವಿರುದ್ಧ ದೂರನ್ನು ದಾಖಲಿಸಿಕೊಂಡಿದ್ದಾರೆ.

ರಜತ್ ರೀಲ್ಸ್ ಮಾಡಿ ಪೊಲೀಸ್ ಕೇಸ್ ಹಾಕಿಸಿಕೊಂಡಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಬಿಗ್ ಬಾಸ್ ವಿನಯ್ ಜೊತೆ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಅದು ಕೂಡ ವಿವಾದಕ್ಕೆ ಸಿಲುಕಿತ್ತು. ಇಬ್ಬರ ವಿರುದ್ಧವೂ ಕೇಸ್ ದಾಖಲಾಗಿತ್ತು. ಇದರಿಂದ ಪರಪ್ಪನ ಅಗ್ರಹಾರ ಸೇರಬೇಕಾಗಿ ಬಂದಿತ್ತು. ಮತ್ತೆ ಈಗ ಅದೇ ತಪ್ಪು ಮಾಡಿದ್ದಾರೆ. ಹೀಗಾಗಿ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಲಿದ್ದಾರೆ.
ಅಷ್ಟಕ್ಕೂ ಘಟನೆ ಏನು ಅಂತ ನೋಡುವುದಾರೇ, ಬಿಗ್ ಬಾಸ್ ಖ್ಯಾತಿಯ ರಜತ್ ಹಾಗೂ ಅವರ ತಂಡ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕನಕಪುರ ರಸ್ತೆಯಲ್ಲಿರುವ ವಡೇರಹಳ್ಳಿಯ ಸಾರ್ವಜನಿಕ ರಸ್ತೆಯಲ್ಲಿ ರೀಲ್ಸ್ ಶೂಟ್ ಮಾಡಿದ್ದಾರೆ. ಈ ವೇಳೆ ಮಾಸ್ ಲುಕ್‌ಗಾಗಿ ರಜತ್ ಬೈಕ್‌ನಲ್ಲಿ ಬರುವಾಗ ಹಿಂದಿನಿಂದ ಸ್ಪೋಟ ಮಾಡಿದ್ದಾರೆ. ಅದನ್ನು ನೀಟಾಗಿ ಎಡಿಟ್ ಮಾಡಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಅದೇ ಈಗ ಸಂಕಷ್ಟಕ್ಕೆ ಸಿಲುಕಿದೆ.
ತಾನು ಮಾಡಿದ ರೀಲ್ಸ್ ಎಫೆಕ್ಟ್ ಅನ್ನು ಅರಿತ ಬಿಗ್ ಬಾಸ್ ರಜತ್ ಕೂಡಲೇ ವಿಡಿಯೋ ಮಾಡಿ ಕ್ಷಮೆ ಕೋರಿದ್ದರು. ಜೊತೆಗೆ ರೀಲ್ಸ್‌ನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿರುವ ಬಗ್ಗೆನೂ ಡಿಸ್‌ಕ್ಲೈಮರ್ ಹಾಕಿದ್ದರು. ಹೀಗಿದ್ದರೂ, ಇದ್ಯಾವುದೂ ವರ್ಕ್ ಆಗಲಿಲ್ಲ. ಕಗ್ಗಲಿಪುರ ಪೊಲೀಸರು ರಜತ್‌ಗೆ ನೋಟೀಸ್ ಜಾರಿ ಮಾಡಿದ್ದು, ವಿಚಾರಣೆ ಕರೆಯಲಿದ್ದಾರೆ ಎಂದು ವರದಿಯಾಗಿದೆ.
ಕಗ್ಗಲಿಪುರ ಪೊಲೀಸರು ರಜತ್ ರೀಲ್ಸ್ ಅನ್ನು ಶೂಟ್ ಮಾಡಿದ ಜಾಗಕ್ಕೆ ಭೇಟಿ ನೀಡುವ ಸಾಧ್ಯತೆ ಕೂಡ ಇದೆ. ಈ ಸಂಬಂಧ ಡಿವೈಎಸ್ಪಿ ಶ್ರೀನಿವಾಸ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ಬಿಗ್ ಬಾಸ್ ರಜತ್ ಅವರು ಸಾರ್ವಜನಿಕ ಆಸ್ತಿಗೆ ನಷ್ಟವನ್ನುಂಟು ಮಾಡಿದ್ದಾರೆ. ಜನರ ಶಾಂತಿಗೆ ಭಂಗ ಹಾಗೂ ರಸ್ತೆ ನಿಯಮ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಿಕೊಂಡು, ರಜತ್ ಅವರಿಗೆ ನೋಟೀಸ್ ಕೊಟ್ಟು ವಿಚಾರಣೆ ಮಾಡುತ್ತೇವೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ರಜತ್ ಅಪ್‌ಲೋಡ್ ಮಾಡಿದ ರೀಲ್ಸ್‌ನಲ್ಲಿ ಬ್ಲಾಸ್ ಮಾಡುವಾಗ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾಗಿ ಹೇಳಿದ್ದರು. ಅಷ್ಟೇ ಅಲ್ಲದೆ ಈ ಬ್ಲಾಸ್ಟ್ ಮಾಡುವ ಮುನ್ನ ಸಾರ್ವಜನಿಕರ ಅನುಮತಿ ಪಡೆದಿದ್ದಾಗಿಯೂ ಹೇಳಿದ್ದರು. ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಬೇಡಿ ಎಂದೂ ಹೇಳಿದ್ದರು. ಇದೆಲ್ಲ ಏನೇ ಮಾಡಿದರೂ, ಪೊಲೀಸರ ಕೆಂಗಣ್ಣೀಗೆ ರಜತ್ ಗುರಿಯಾಗಿದ್ದಾರೆ. ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುತ್ತಿರೋದ್ರಿಂದ ಮತ್ತೆ ರಜತ್ ಮತ್ತೆ ಸಂಕಷ್ಟಕ್ಕೆ ಸಿಲುಕಿರೋದಂತೂ ಸತ್ಯ.


Click it and Unblock the Notifications