'ಮುಗಿಲ್‌ಪೇಟೆ' ನಿರ್ದೇಶಕನ ಮೇಲೆ ಗುಂಡು ಹಾರಿಸಿದ ನಟ; 'ಜೋಡಿ ಹಕ್ಕಿ' ನಟ ತಾಂಡವ್ ರಾಮ್ ಅರೆಸ್ಟ್
ಸ್ಯಾಂಡಲ್‌ವುಡ್‌ಗೆ ಯಾಕೋ ನವೆಂಬರ್ ತಿಂಗಳು ಚೆನ್ನಾಗಿಲ್ಲ. ಒಂದರ ಹಿಂದೊಂದು ಘಟನೆಗಳು ನಡೆಯುತ್ತಲೇ ಇವೆ. ಒಂದು ಕನ್ನಡ ಚಿತ್ರರಂಗದ ದಿಗ್ಗಜರು ಇಹಲೋಕ ತ್ಯಜಿಸಿ ಶೋಕ ಸಾಗರದಲ್ಲಿ ಮುಳುಗಿಸಿದ್ದಾರೆ. ಇತ್ತ ಕನ್ನಡ ನಟ ತಾಂಡವ್ ರಾಮ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಅರೆಸ್ಟ್ ಆಗಿದ್ದಾರೆ. ಈ ಘಟನೆ ನಿನ್ನೆ (ನವೆಂಬರ್ 18)ರಂದು ನಡೆದಿದೆ.
ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿರುವ ಕನ್ನಡದ ಜನಪ್ರಿಯ ನಟ ತಾಂಡವ್ ರಾಮ್ ಅವರನ್ನು ಕೊಲೆ ಯತ್ನದ ಆರೋಪದ ಮೇಲೆ ಬಂಧಿಸಲಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ನಟಿಸಿದ 'ಮುಗಿಲ್‌ಪೇಟೆ' ಸಿನಿಮಾ ನಿರ್ದೇಶಿಸಿದ್ದ ಭರತ್ ಮೇಲೆ ತಾಂಡವ್ ರಾಮ್ ಗುಂಡು ಹಾರಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ನಿರ್ದೇಶಕ ಭರತ್ ನೀಡಿದ ದೂರಿನ ಆರೋಪದಡಿಯಲ್ಲಿ ಕನ್ನಡದ ನಟ ತಾಂಡವ್ ರಾವ್ ಅವರನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. 'ಮುಗಿಲ್‌ಪೇಟೆ' ನಿರ್ದೇಶಕನ ಸಿನಿಮಾದಲ್ಲಿ ತಾಂಡವ್ ರಾವ್ ನಾಯಕನಾಗಿ ನಟಿಸಿದ್ದರು. ಆದರೆ, ಸಿನಿಮಾದ ಶೂಟಿಂಗ್ ಹಲವು ದಿನಗಳಿಂದ ನಿಲ್ಲಿಸಿದ್ದರು. ಈ ಕಾರಣಕ್ಕೆ ಕೋಪಗೊಂಡು ತಾಂಡವ್ ರಾವ್ ಈ ಯತ್ನಕ್ಕೆ ಮುಂದಾಗಿದ್ದರು ಎನ್ನಲಾಗಿದೆ.
ತಾಂಡವ್ ರಾಮ್ 'ಜೋಡಿ ಹಕ್ಕಿ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದರೊಂದಿಗೆ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 'ಜೋಡಿಹಕ್ಕಿ', 'ಭೂಮಿಗೆ ಬಂದ ಭಗವಂತ' ಸೇರಿದಂತೆ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹಾಗೇ ಕೆ.ಎಂ.ಚೈತನ್ಯ ನಿರ್ದೇಶಿಸಿದ್ದ 'ಅಬ್ಬಬ್ಬ' ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಈಗ ತಾನೇ ಸಿನಿಮಾರಂಗದಲ್ಲಿ ನೆಲೆಯೂರುತ್ತಿದ್ದ ನಟ ನಿರ್ದೇಶಕನ ಮೇಲೆ ಗುಂಡು ಹಾರಿಸಿದ ಆರೋಪದ ಅಡಿಯಲ್ಲಿ ಅರೆಸ್ಟ್ ಆಗಿದ್ದಾರೆ.
ಅಸಲಿಗೆ ಇಬ್ಬರ ನಡುವೆ ನಡೆದ ಘಟನೆಯ ಬಗ್ಗೆ ಖಚಿತ ಮಾಹಿತಿ ಇನ್ನಷ್ಟೇ ಲಭ್ಯ ಆಗಬೇಕಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಭರತ್ ನಾವುಂಡ 'ದೇವನಾಂಪ್ರಿಯ' ಎನ್ನುವ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರು. ಈ ಸಿನಿಮಾ ಕಾರಣಾಂತರಗಳಿಂದ ಅರ್ಧಕ್ಕೆ ನಿಂತಿತ್ತು. ಈ ಹಿನ್ನೆಲೆಯಲ್ಲಿ ತಾಂಡವ್ ರಾಮ್ ಸಿಟ್ಟಾಗಿದ್ದರು ಎಂದು ಹೇಳಲಾಗುತ್ತಿದೆ.
ಚಂದ್ರಾ ಲೇಔಟ್‌ನಲ್ಲಿ ತಾಂಡವ್ ರಾಮ್ ಹಾಗೂ ಭರತ್ ನಾವುಂಡ ಒಂದೆಡೆ ಸೇರಿದ್ದರು. ಈ ವೇಳೆ ಸಿನಿಮಾ ಬಗ್ಗೆ ಮಾತು ಬಂದಿದ್ದು, ಇಬ್ಬರ ನಡುವೆ ಕಿತ್ತಾಟ ಶುರುವಾಗಿದೆ. ಬಳಿಕ ತಾಂಡವ್ ರಾವ್ ನಿರ್ದೇಶಕ ಭರತ್‌ಗೆ ಬಂದೂಕು ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇಷ್ಟೇ ಅಲ್ಲದೆ ಒಂದು ಸುತ್ತು ಗುಂಡನ್ನು ಹಾರಿಸಿ ಕೊಲ್ಲುವ ಯತ್ನಕ್ಕೆ ಮುಂದಾಗಿದ್ದಾರೆ ಅನ್ನೋದ ಮಾತು ಕೇಳಿ ಬಂದಿದೆ.
ಈ ಸಂಬಂಧ ಭರತ್ ಈಗಾಗಲೇ ಪೊಲೀಸ್ ಠಾಣೆಗೆ ದೂರನ್ನು ದಾಖಲು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತಾಂಡವ್ ರಾಮ್ ಅವರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಹಾಗೇ ಪರವಾನಗಿ ಪಡೆದಿದ್ದ ಬಂದೂಕನ್ನೂ ವಶ ಪಡಿಸಿಕೊಂಡು ತಾಂಡವ್ ರಾವ್ ಅವರನ್ನು ವಿಚಾರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಹೊರ ಬೀಳಬೇಕಿದೆ.


Click it and Unblock the Notifications











